
ಕೋವಿಡ್ ಕೇಸ್ ಹೆಚ್ಚಾದ ಹಿನ್ನಲೆಯಲ್ಲಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ನಡುವಿನ ಏಕದಿನ ಕ್ರಿಕೆಟ್ ಸರಣಿಯನ್ನು ಮುಂದೂಡಲಾಗಿದೆ. ಆತಿಥೇಯ ವೆಸ್ಟ್ ಇಂಡೀಸ್ ಆಟಗಾರರಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಾದ ಪರಿಣಾಮ ಇದೇ ತಿಂಗಳು ನಡೆಯಬೇಕಿದ್ದ ಏಕದಿನ ಸರಣಿಯನ್ನು ಜೂನ್ 2022ಕ್ಕೆ ಮುಂದೂಡಲಾಗಿದೆ.
ಸದ್ಯ ಟಿ20 ಸರಣಿಯಲ್ಲಿ ಉಭಯ ತಂಡಗಳು ಪ್ರವೃತ್ತರಾಗಿದ್ದು, ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಮೂರನೇ ಟಿ20 ಪಂದ್ಯ ನಡೆಯುತ್ತಿದೆ. ಆದ್ರೆ ಈ ಸರಣಿ ಮುಗಿದ ಬಳಿಕ ನಡೆಯಬೇಕಿದ್ದ ಏಕದಿನ ಸರಣಿಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಏಕದಿನ ಅಂತರಾಷ್ಟ್ರೀಯ ಸರಣಿಯು ಡಿಸೆಂಬರ್ 18ರ ಶನಿವಾರ, ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಸೋಮವಾರ, ಡಿಸೆಂಬರ್ 20 ರಂದು ಮತ್ತು ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಡಿಸೆಂಬರ್ 22 ರಂದು ಆಯೋಜಿಸಲಾಗಿತ್ತು.
ಗುರುವಾರ ಕರಾಚಿಯಲ್ಲಿನ ವೆಸ್ಟ್ ಇಂಡೀಸ್ ಪಾಳಯದಲ್ಲಿ ಐದು ಕೋವಿಡ್-19 ಪಾಸಿಟಿವ್ ಪ್ರಕರಣಗಳ ನಂತರ, ನಡೆಯುತ್ತಿರುವ ಟಿ20 ಸರಣಿ ಬಳಿಕ ಮೂರು ಪಂದ್ಯಗಳ ಒಡಿಐ ಸರಣಿಯನ್ನು ಮುಂದಿನ ವರ್ಷ ಜೂನ್‌ಗೆ ಮುಂದೂಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಜಂಟಿಯಾಗಿ ಹೇಳಿಕೆಯಲ್ಲಿ ತಿಳಿಸಿವೆ.
ಪಿಸಿಬಿ ಕೋವಿಡ್-19 ಪ್ರೋಟೋಕಾಲ್‌ಗಳ ಭಾಗವಾಗಿ, ಉಳಿದ 15 ವೆಸ್ಟ್ ಇಂಡೀಸ್ ಆಟಗಾರರು ಮತ್ತು ಆರು ಆಟಗಾರರ ಬೆಂಬಲ ಸಿಬ್ಬಂದಿಯ ಮೇಲೆ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಯಿತು. ಎಲ್ಲಾ 21 ಪರೀಕ್ಷೆಗಳು ನೆಗೆಟಿವ್ ಬಂದಿದ್ದು, ಮೂರನೇ ಟಿ20 ಪಂದ್ಯ ನಡೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ವೆಸ್ಟ್ ಇಂಡೀಸ್ ಪಾಳಯದಲ್ಲಿ ಸ್ಟಾಫ್‌ಗಳ ಕೊರತೆಯ ಹಿನ್ನಲೆಯಲ್ಲಿ ಶನಿವಾರದಿಂದ ಪ್ರಾರಂಭವಾಗಲಿರುವ ಏಕದಿನ ಸರಣಿಯನ್ನು ಮುಂದೂಡಲು ಕಾರಣವಾಗಿದೆ.
ಪಾಕಿಸ್ತಾನದ ತಂಡದ ಎಲ್ಲಾ ಸದಸ್ಯರು ಸಹ ನೆಗೆಟಿವ್ ಪರೀಕ್ಷೆಗಳೊಂದಿಗೆ ಹಿಂದಿರುಗಿದ್ದಾರೆ.