
ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿ 210ರನ್ ಕಲೆಹಾಕಿದ್ರೂ ಸಹ ಪಂದ್ಯವನ್ನ ಗೆಲ್ಲಲು ಚೆನ್ನೈ ಸೂಪರ್ ಕಿಂಗ್ಸ್ ವಿಫಲಗೊಂಡಿದೆ. ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಗರಿಷ್ಠ ರನ್ ಚೇಸ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್‌ನಲ್ಲಿ ತನ್ನ ಮೊಟ್ಟ ಮೊದಲ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ 210 ಕಲೆಹಾಕಿ, 211ರನ್‌ಗಳ ದೊಡ್ಡ ಟಾರ್ಗೆಟ್ ನೀಡಿತು. ರಾಬಿನ್ ಉತ್ತಪ್ಪ ಭರ್ಜರಿ ಬ್ಯಾಟಿಂಗ್ ನೆರವಿನಿಂದ ದೊಡ್ಡ ಮೊತ್ತಕ್ಕೆ ಅಡಿಪಾಯ ಹಾಕಿತು. ರಾಬಿನ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಮಿಂಚಿನ ಆಟವಾಡಿದ್ರು. ರಾಬಿನ್ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 1 ಅಮೋಘ ಸಿಕ್ಸರ್ ಒಳಗೊಂಡಿತ್ತು.
ಆಲ್‌ರೌಂಡರ್ ಮೊಯಿನ್ ಅಲಿ 22 ಎಸೆತಗಳಲ್ಲಿ 35 ರನ್ ಸಿಡಿಸುವ ಮೂಲಕ ಅವೇಶ್ ಖಾನ್ ಬೌಲಿಂಗ್‌ನಲ್ಲಿ ಬೌಲ್ಡ್ ಆದ್ರು. ಮೊಯಿನ್ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು ಹಾಗೂ ಶಿವಂ ದುಬೆ ಸಿಎಸ್‌ಕೆ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ್ರು. ರಾಯುಡು 20 ಎಸೆತಗಳಲ್ಲಿ 27 ರನ್ ಸಿಡಿಸಿ ಔಟಾದ್ರೆ, ಶಿವಂ ದುಬೆ 30 ಎಸೆತಗಳಲ್ಲಿ 49ರನ್ ಕಲೆಹಾಕಿ ಕೇವಲ 1 ರನ್‌ಗಳಿಂದ ಅರ್ಧಶತಕ ಮಿಸ್ ಮಾಡಿಕೊಂಡ್ರು. ಇವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿತ್ತು.
ಕೊನೆಯಲ್ಲಿ ನಾಯಕ ರವೀಂದ್ರ ಜಡೇಜಾ 17, ಎಂಎಸ್ ಧೋನಿ ಅಜೇಯ 16ರನ್‌ಗಳ ಕೊಡುಗೆಯಿಂದ ತಂಡದ ಮೊತ್ತ 200ರ ಗಡಿದಾಟಿತು. ಅಂತಿಮವಾಗಿ ಸಿಎಸ್‌ಕೆ 7 ವಿಕೆಟ್ ನಷ್ಟಕ್ಕೆ 210 ಕಲೆಹಾಕಿದ್ದು, 211ರನ್‌ಗಳ ದೊಡ್ಡ ಟಾರ್ಗೆಟ್ ನೀಡಿತು.
ಈ ಗುರಿ ಬೆನ್ನತ್ತಿದ ಲಕ್ನೋ ತಂಡ ಎದುರಾಳಿ ಮಾಡಿದ ಯಡವಟ್ಟುಗಳಿಗೆ ಪೆಟ್ಟು ನೀಡುವಂತೆ ಬ್ಯಾಟ್ ಬೀಸಿತು. ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡವು ಅದ್ಭುತ ಆರಂಭ ಪಡೆಯವಲ್ಲಿ ಯಶಸ್ವಿಯಾಯಿತು. ಎದುರಾಳಿ ತಂಡದ ಕ್ಯಾಚ್ ಡ್ರಾಪ್ ಜೊತೆಗೆ ಅಬ್ಬರದ ಬ್ಯಾಟಿಂಗ್ ನಡೆಸಿದ ಕೆ.ಎಲ್ ರಾಹುಲ್ 26 ಎಸೆತಗಳಲ್ಲಿ 40 ರನ್ ಸಿಡಿಸಿದ್ರೆ, ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ 45 ಎಸೆತಗಳಲ್ಲಿ 61 ರನ್ ಸಿಡಿಸಿ ಮಿಂಚಿದ್ದಾರೆ.

ಇದರ ನಡುವೆ ಮನೀಶ್ ಪಾಂಡೆ ಕೇವಲ 5 ರನ್‌ಗಳಿಸಿ ತುಶಾರ್ ದೇಶಪಾಂಡೆಗೆ ವಿಕೆಟ್ ಒಪ್ಪಿಸಿದ್ರು . ದೀಪಕ್ ಹೂಡ ಆಟ 13ರನ್‌ಗೆ ಮುಕ್ತಾಯಗೊಂಡಿತು. ಆದ್ರೆ ಅಬ್ಬರದ ಬ್ಯಾಟಿಂಗ್ ನಡೆಸಿದ ಎವಿನ್ ಲೂಯಿಸ್ ಕೇವಲ 23 ಎಸೆತಗಳಲ್ಲಿ 50 ರನ್ ಸಿಡಿಸಿ ಮಿಂಚಿದ್ರು. ಅಜೇಯ 55 ರನ್ ಕಲೆಹಾಕಿದ ಎವಿನ್ ಲೂಯಿಸ್ ಆರು ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್ ಸಿಡಿಸಿದ್ರು.
ಇನ್ನು ಲಕ್ನೋ ಪರ ಕಳೆದ ಪಂದ್ಯದಲ್ಲೂ ಮಿಂಚಿದ್ದ ಯುವ ಬ್ಯಾಟ್ಸ್‌ಮನ್ ಆಯುಷ್ ಬದೋನಿ 9 ಎಸೆತಗಳಲ್ಲಿ ಎರಡು ಅಮೋಘ ಸಿಕ್ಸರ್‌ಗಳ ನೆರವಿನಿಂದ ಅಜೇಯ 19 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ ಲಕ್ನೋ ಸೂಪರ್ ಜೈಂಟ್ಸ್ ಬೃಹತ್ ಮೊತ್ತವನ್ನ ಬೆನ್ನತ್ತಿ ಐಪಿಎಲ್‌ನಲ್ಲಿ ತನ್ನ ಮೊಟ್ಟ ಮೊದಲ ಗೆಲುವು ದಾಖಲಿಸಿದೆ. ಆದ್ರೆ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿಯೇ ಸೀಸನ್‌ನ ಆರಂಭಿಕ ಎರಡು ಪಂದ್ಯದಲ್ಲಿ ಮುಗ್ಗರಿಸಿದೆ.