ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ರೋಹಿತ್ ಶರ್ಮ ಸಜ್ಜು

ಲಂಡನ್, ಜುಲೈ 08: ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ಭರ್ಜರಿ ಲಯದಲ್ಲಿರುವ 'ಹಿಟ್ ಮ್ಯಾನ್' ರೋಹಿತ್ ಶರ್ಮ ಪಂದ್ಯದಿಂದ ಪಂದ್ಯಕ್ಕೆ ದಾಖಲೆಗಳನ್ನು ಧ್ವಂಸ ಮಾಡುತ್ತಾ ಸಾಗುತ್ತಿದ್ದಾರೆ. ಲೀಗ್ ಹಂತದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿರುವ ರೋಹಿತ್ ಶರ್ಮ ಅವರು ಈಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.
ಟೀಂ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮ ಅವರು ವಿಶ್ವಕಪ್ ನ ಮೊದಲ ಸೆಮಿಫೈನಲ್ನಲ್ಲಿ ದಾಖಲೆಗಳನ್ನು ಬರೆಯಲು ಮುಂದಾಗಿದ್ದಾರೆ. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಜುಲೈ 09ರಂದು ಟೀಂ ಇಂಡಿಯಾ ಸೆಣಸಲಿದೆ. ಸದ್ಯ ಲೀಗ್ ಹಂತದ ಎಲ್ಲಾ ಪಂದ್ಯಗಳಲ್ಲಿ ಆಡಿರುವ ರೋಹಿತ್, 8 ಪಂದ್ಯಗಳಲ್ಲಿ 647 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರೋಹಿತ್ ಮುರಿಯುವ ಸಾಧ್ಯತೆಯಿದೆ.
ಲೀಗ್ ಹಂತದ ಎಲ್ಲಾ ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ರೋಹಿತ್ ಅವರು 8 ಇನಿಂಗ್ಸ್ ನಲ್ಲಿ 5 ಶತಕ ಹಾಗೂ ಒಂದು ಅರ್ಧಶತಕದ ನೆರವಿನಿಂದ 92.43 ರನ್ ಸರಾಸರಿಯಂತೆ 647 ರನ್ದಾಖಲಿಸಿದ್ದಾರೆ. ರೋಹಿತ್ 98.77 ಸ್ಟ್ರೈಕ್ರೇಟ್ ಹೊಂದಿದ್ದಾರೆ.

ಸಚಿನ್ ದಾಖಲೆ ಮುರಿಯಲು ರೋಹಿತ್ ಸಿದ್ಧ
ವಿಶ್ವಕಪ್ 2019ರಲ್ಲಿ 647ರನ್ ಗಳಿಸಿರುವ ರೋಹಿತ್ ಅವರು ಇನ್ನು 27ರನ್ ಗಳಿಸಿದರೆ ಒಂದು ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಲಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 2003ರ ವಿಶ್ವಕಪ್ ನಲ್ಲಿ 11 ಇನಿಂಗ್ಸ್ಗಳಿಂದ 673 ರನ್ ಗಳಿಸಿದ್ದರು. ಸಚಿನ್ ಅವರ ಈ ದಾಖಲೆ ಮುರಿಯುವ ಸಾಧ್ಯತೆ ಹೆಚ್ಚಿದೆ.

ಅತಿ ಹೆಚ್ಚು ಶತಕ ಗಳಿಕೆ ಸಾಧನೆ
2019ರ ಐಸಿಸಿ ವಿಶ್ವಕಪ್ ನಲ್ಲಿ ರೋಹಿತ್ಶರ್ಮ ಅವರು 5 ಶತಕ ಗಳಿಸಿದ್ದಾರೆ. ಒಟ್ಟಾರೆ, ಈ ಹಿಂದಿನ ವಿಶ್ವಕಪ್ ಶತಕ ಸೇರಿಸಿ 6 ವಿಶ್ವಕಪ್ ಶತಕ ಗಳಿಸಿ, ಸಚಿನ್ ದಾಖಲೆ ಸಮಕ್ಕೆ ನಿಂತಿದ್ದಾರೆ.
ಇನ್ನೊಂದು ಶತಕ ಗಳಿಸಿದರೆ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತ್ಯಧಿಕ ಶತಕ ಗಳಿಸಿದ ಮೊದಲ ಆಟಗಾರ ಎಂಬ ಸಾಧನೆ ಮಾಡಲಿದ್ದಾರೆ. ಈ ಮೂಲಕ ಒಟ್ಟಾರೆ ವಿಶ್ವಕಪ್ ಗಳಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಸಚಿನ್ ದಾಖಲೆಯನ್ನು ಮುರಿಯಲಿದ್ದಾರೆ. ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 103ರನ್ ಗಳಿಸಿದ್ದರು.
ವಿಶ್ವಕಪ್ 2019: ಯಶಸ್ಸಿನ ಉತ್ತಂಗದ ಕಾಲಘಟ್ಟದಲ್ಲಿ ರೋಹಿತ್ ಶರ್ಮಾ

1000 ಕ್ಕೂ ಹೆಚ್ಚು ರನ್ಗಳಿಕೆ
ಆರಂಭಿಕ ಆಟಗಾರ ರೋಹಿತ್ಶರ್ಮ ಅವರು 23 ರನ್ಗಳಿಸಿದರೆ ವಿಶ್ವಕಪ್ನಲ್ಲಿ 1000 ಕ್ಕೂ ಹೆಚ್ಚು ರನ್ಗಳಿಸಿದ ಆಟಗಾರರ ಸಾಲಿಗೆ ಸೇರಲಿದ್ದಾರೆ. ರೋಹಿತ್ ಗೂ ಮುನ್ನ ಸಚಿನ್ ತೆಂಡೂಲ್ಕರ್, ಸೌರವ್ಗಂಗೂಲಿ ಮತ್ತು ವಿರಾಟ್ ಕೊಹ್ಲಿ ವಿಶ್ವಕಪ್ನಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಇನ್ನಷ್ಟು ದಾಖಲೆಗಳನ್ನು ಮುರಿಯಲಿರುವ ರೋಹಿತ್
2017ರಿಂದ ಇಲ್ಲಿ ತನಕ ರೋಹಿತ್ ಶರ್ಮ 17 ಏಕದಿನ ಶತಕ ಗಳಿಸಿದ್ದು, ನಾಯಕ ಕೊಹ್ಲಿಯನ್ನು ಮೀರಿಸಿದ್ದಾರೆ. ಕೊಹ್ಲಿ ಈ ಅವಧಿಯಲ್ಲಿ 15 ಶತಕ ಗಳಿಸಿದ್ದಾರೆ. ಈ ವಿಶ್ವಕಪ್ ನಲ್ಲಿ ಸತತ ಅರ್ಧಶತಕ ಗಳಿಸಿರುವ ಕೊಹ್ಲಿ ಇನ್ನೂ ನೂರರ ಗಡಿ ದಾಟಿಲ್ಲ. ಮುಂದಿನ ಎರಡು ಪಂದ್ಯಗಳಲ್ಲಿ ರೋಹಿತ್ ಶತಕ ಗಳಿಸಿ, ಪಂದ್ಯ ಗೆಲ್ಲಿಸಲಿ ಎಂದು ಬಯಸುತ್ತೇನೆ, ಈ ಸಂದರ್ಭಕ್ಕೆ ವಿಶ್ವದ ಶ್ರೇಷ್ಠ ಏಕದಿನ ಕ್ರಿಕೆಟ್ ಆಟಗಾರ ಎಂದು ರೋಹಿತ್ ಬಗ್ಗೆ ಕೊಹ್ಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications