
ಮೆಲ್ಬರ್ನ್‌ನ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. 2019ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆದ್ದಿದ್ದ ಇಂಗ್ಲೆಂಡ್, 2022ರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಒಂದೇ ಸಮಯದಲ್ಲಿ ಎರಡು ವಿಶ್ವಕಪ್ ಜಯಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ.
ಪಾಕಿಸ್ತಾನ ನೀಡಿದ್ದಂತಹ 138 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಲಿಲ್ಲವಾದ್ರೂ, ಬೆನ್ ಸ್ಟೋಕ್ಸ್ ಅಜೇಯ ಅರ್ಧಶತಕ ಹಾಗೂ ಮೊಯಿನ್ ಅಲಿ 19 ರನ್‌ಗಳ ಕೊಡುಗೆಯಿಂದಾಗಿ ಇಂಗ್ಲೆಂಡ್ 19 ಓವರ್‌ಗಳಲ್ಲಿಯೇ ಗೆಲುವಿನ ಗುರಿ ತಲುಪುವ ಮೂಲಕ ಎರಡನೇ ಬಾರಿಗೆ ಟಿ20 ವಿಶ್ವಕಪ್ ಅನ್ನು ಗೆದ್ದು ಬೀಗಿದೆ.
2010ರಲ್ಲಿ ಪೌಲ್ ಕಾಲಿಂಗ್‌ವುಡ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ನೀಡಿದ್ದಂತಹ 148 ರನ್‌ಗಳ ಗುರಿಯನ್ನು 3 ಓವರ್‌ಗಳು ಬಾಕಿ ಇರುವಂತೆಯೇ ಬೆನ್ನತ್ತುವ ಮೂಲಕ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇದೀಗ ಇಂಗ್ಲೆಂಡ್ ಜಾಸ್ ಬಟ್ಲರ್ ನಾಯಕತ್ವದಲ್ಲಿ ಮತ್ತೊಂದು ಟ್ರೋಫಿ ಜಯಿಸಿದೆ.
ಎರಡನೇ ಟಿ20 ವಿಶ್ವಕಪ್ ಜಯಿಸುವ ಮೂಲಕ ಇಂಗ್ಲೆಂಡ್ ಈ ಸಾಧನೆ ಮಾಡಿದ ವಿಶ್ವದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡವು 2012ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಲ್ಲದೆ 2016ರಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಆದ್ರೆ ಪ್ರಸ್ತುತ ವಿಶ್ವಕಪ್‌ನಲ್ಲಿ ಸೂಪರ್ 12 ಹಂತವನ್ನೂ ತಲುಪಲಾಗದೆ ಭಾರೀ ಮುಖಭಂಗ ಅನುಭವಿಸಿತು.
ಇಂಗ್ಲೆಂಡ್ ಈ ಗೆಲುವಿನ ಮೂಲಕ ವೆಸ್ಟ್ ಇಂಡೀಸ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಲ್ಲದೆ 11 ವರ್ಷಗಳ ಬಳಿಕ ಚುಟುಕು ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದೆ.
ಪಾಕಿಸ್ತಾನ ತಂಡವು 13 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲ್ಲಬೇಕೆಂಬ ಕನಸು ನುಚ್ಚು ನೂರಾಗಿದೆ.