
ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2022ರ 17ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ವನಿತೆಯರು 4 ರನ್‌ಗಳ ರೋಚಕ ಗೆಲುವು ಸಾಧಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದಿದ್ದ ವೆಸ್ಟ್ ಇಂಡೀಸ್, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 140ರನ್‌ಗಳನ್ನ ಕಲೆಹಾಕಿತ್ತು. 141 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಮಹಿಳಾ ತಂಡವು ಸಂಪೂರ್ಣ ಬ್ಯಾಟಿಂಗ್ ವೈಫಲ್ಯದಿಂದ ಸುಲಭ ಗುರಿಯನ್ನ ಬೆನ್ನತ್ತಲಾಗದೆ 136 ರನ್‌ಗಳಿಗೆ ಆಲೌಟ್ ಆಗಿದೆ.
ಕೊನೆಯ ಓವರ್‌ನಲ್ಲಿ ಬಾಂಗ್ಲಾದೇಶ ತಂಡಕ್ಕೆ 8 ರನ್‌ಗಳ ಅವಶ್ಯಕತೆಯಿತ್ತು. ವಿಂಡೀಸ್ ಗೆಲುವಿಗೆ 1 ವಿಕೆಟ್ ಅಷ್ಟೇ ಬೇಕಾಗಿತ್ತು. ಮೊದಲ ಎಸೆತದಲ್ಲಿ ನಹೀದಾ ಅಕ್ತರ್ ಎರಡು ರನ್ ಕಲೆಹಾಕಿದ್ರು. ಎರಡನೇ ಎಸೆತದಲ್ಲಿ ಸಿಂಗಲ್ಸ್ ತೆಗೆದುಕೊಂಡರು. ಇನ್ನುಳಿದ ನಾಲ್ಕು ಎಸೆತಗಳಲ್ಲಿ ಐದು ರನ್‌ಗಳ ಅವಶ್ಯಕತೆಯಿತ್ತು. ಈ ಸಂದರ್ಭದಲ್ಲಿ ಸ್ಟ್ರೈಕ್‌ಗೆ ಬಂದ ಫರಿಹಾ ತ್ರಿಶಾ ಟೇಲರ್ ಬೌಲಿಂಗ್ ಅರಿಯದೆ ಕ್ಲೀನ್ ಬೌಲ್ಡ್ ಆಗಿಬಿಟ್ರು.
ಒಂದೆಡೆ ಬಾಂಗ್ಲಾದೇಶ ವನಿತೆಯರಿಗೆ ಗೆಲುವಿನ ಸಮೀಪದಲ್ಲಿ ಮುಗ್ಗಿರಿಸಿ ಬೇಸರವಾದ್ರೆ, ವೆಸ್ಟ್ ಇಂಡೀಸ್ ಪಂದ್ಯ ಸೋತವೆನ್ನುವಷ್ಟರಲ್ಲಿ ಗೆಲುವಿನ ನಗಾರಿ ಬಾರಿಸಿದೆ. ಬಾಂಗ್ಲಾದೇಶ ಪರ ಶಮಿನ್ ಅಕ್ತರ್ 17, ಫರ್ಗಾನ ಹಕ್ವಿ 23, ನಿಗರ್ ಸುಲ್ತಾನ 25 ರನ್, ಸಲ್ಮಾ ಕತೂನ್ 23, ನಹಿದ ಅಕ್ತರ್ 25 ರನ್ ಸಿಡಿಸಿದ್ದೇ ಹೆಚ್ಚು.
ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ಪರ ವಿಕೆಟ್ ಕೀಪರ್ ಬ್ಯಾಟರ್ ಶೆಮೈನ್ ಕ್ಯಾಂಪ್‌ಬೆಲ್ಲೆ 53ರನ್‌ಗಳ ಕೊಡುಗೆಯಿಂದ ಬ್ಯಾಟಿಂಗ್ ಕುಸಿತಕ್ಕೆ ಕಡಿವಾಣ ಹಾಕಿದ್ದರು. ವಿಂಡೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಬೌಲರ್ ಹೈಲೆ ಮ್ಯಾಥ್ಯೂಸ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಲಭಿಸಿತು. ಮ್ಯಾಥ್ಯೂಸ್ 10 ಓವರ್‌ಗಳಲ್ಲಿ 1 ಮೇಡನ್ ಸೇರಿದಂತೆ ಕೇವಲ 15 ರನ್ ನೀಡಿ 4 ವಿಕೆಟ್ ಕಬಳಿಸಿದ್ರು.
ವೆಸ್ಟ್ ಇಂಡೀಸ್ ವನಿತೆಯರ ಪ್ಲೇಯಿಂಗ್ 11
ಡಿಯಾಂಡ್ರಾ ಡಾಟಿನ್, ಹೇಯ್ಲಿ ಮ್ಯಾಥ್ಯೂಸ್, ರಶಾದಾ ವಿಲಿಯಮ್ಸ್, ಸ್ಟಾಫನಿ ಟೇಲರ್ (ನಾಯಕಿ), ಶೆಮೈನ್ ಕ್ಯಾಂಪ್‌ಬೆಲ್ಲೆ (ವಿಕೆಟ್ ಕೀಪರ್), ಚೆಡಿಯನ್ ನೇಷನ್, ಚಿನೆಲ್ಲೆ ಹೆನ್ರಿ, ಆಲಿಯಾ ಅಲೀನ್, ಅಫಿ ಫ್ಲೆಚರ್, ಕರಿಷ್ಮಾ ರಾಮ್‌ಹರಾಕ್, ಶಾಮಿಲಿಯಾ ಕಾನ್ನೆಲ್
ಬಾಂಗ್ಲಾದೇಶ ವನಿತೆಯರ ಪ್ಲೇಯಿಂಗ್ 11
ಶಮೀಮಾ ಸುಲ್ತಾನಾ (ವಿಕೆಟ್ ಕೀಪರ್), ಶರ್ಮಿನ್ ಅಖ್ತರ್, ಫರ್ಗಾನಾ ಹೊಕ್, ನಿಗರ್ ಸುಲ್ತಾನಾ (ನಾಯಕಿ), ರುಮಾನಾ ಅಹ್ಮದ್, ರಿತು ಮೋನಿ, ಫಾಹಿಮಾ ಖಾತುನ್, ಸಲ್ಮಾ ಖಾತುನ್, ನಹಿದಾ ಅಕ್ಟರ್, ಜಹಾನಾರಾ ಆಲಂ, ಫರಿಹಾ ತ್ರಿಸ್ನಾ