
ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಿದ್ದು, ಪಾಕಿಸ್ತಾನ ನೀಡಿರುವ 160ರನ್‌ಗಳ ಗುರಿಯನ್ನ ಭಾರತ ಬೆನ್ನತ್ತಿದೆ. ಆರಂಭದಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳನ್ನ ಕಳೆದುಕೊಂಡ ಟೀಂ ಇಂಡಿಯಾ 10 ಓವರ್ ಮುಕ್ತಾಯಕ್ಕೆ 4 ವಿಕೆಟ್ ಕಳೆದುಕೊಂಡು 45ರನ್ ಕಲೆಹಾಕಿತು.
ರೋಹಿತ್ ಶರ್ಮಾ(4), ಕೆ.ಎಲ್ ರಾಹುಲ್(4), ಸೂರ್ಯಕುಮಾರ್ ಯಾದವ್ (15) ಹಾಗೂ ಅಕ್ಷರ್ ಪಟೇಲ್(2) ಬಹುಬೇಗನೆ ವಿಕೆಟ್ ಒಪ್ಪಿಸಿದ ಪರಿಣಾಮ ಟೀಂ ಇಂಡಿಯಾ ಗೆಲುವಿನ ಹೊರೆಯು ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಮೇಲೆರಿದೆ.
ಪಂದ್ಯಕ್ಕೂ ಮುನ್ನ ವಿಶೇಷ ದಾಖಲೆ ಮಾಡಲು ಹಾರ್ದಿಕ್ ಪಾಂಡ್ಯಗೆ ಕೇವಲ 11ರನ್‌ಗಳು ಬೇಕಾಗಿದ್ದು, ಹಾರ್ದಿಕ್ ಅಂತೂ ಆ ಸಾಧನೆಯ ಮೈಲಿಗಲ್ಲನ್ನು ತಲುಪುವ ಮೂಲಕ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000 ರನ್ ಹಾಗೂ 50 ವಿಕೆಟ್ ಪಡೆದ ಭಾರತದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
ಪಾಕಿಸ್ತಾನ ವಿರುದ್ಧದ ಸೂಪರ್ 12 ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ 4 ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದರು. ಶದಾಬ್ ಖಾನ್ 5, ಹೈದರ್ ಅಲಿ 2ರನ್‌ಗಳಿಸಿ 14ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದ್ರು. ಮತ್ತೆ ಬೌಲಿಂಗ್ ದಾಳಿಗಿಳಿದ ಹಾರ್ದಿಕ್ ಪಂದ್ಯದ 16ನೇ ಓವರ್‌ನಲ್ಲಿ ಮೊಹಮ್ಮದ್ ನವಾಜ್(9) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ಈ ಮೂಲಕ ಭಾರತವು ಪಾಕ್ ತಂಡವನ್ನು 160ರನ್‌ಗಳೊಳಗೆ ಕಟ್ಟಿಹಾಕಿತು.
ಹೀಗೆ ಇಂದು 3 ಪ್ರಮುಖ ವಿಕೆಟ್ ಪಡೆದ ಹಾರ್ದಿಕ್ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 57 ವಿಕೆಟ್‌ಗಳ ಜೊತೆಗೆ 1000ಕ್ಕೂ ಅಧಿಕ ಟಿ20 ರನ್ ಕಲೆಹಾಕಿ ಪರ್ಫೆಕ್ಟ್ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.