
ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟಿ20 ಅಂತರಾಷ್ಟ್ರೀಯ ಪಂದ್ಯ ಹಿನ್ನಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಒಡಿಶಾದ ಸುಂದರ ನಗರಿ ಕಟಕ್‌ಗೆ ಆಗಮಿಸಿದ್ದಾರೆ. ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಒಡಿಶಾದ ಕಟಕ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಭಯ ತಂಡಗಳ ಆಟಗಾರರು ನೇರವಾಗಿ ಹೋಟೆಲ್‌ಗೆ ತೆರಳಿದ್ದು, ಹೋಟೆಲ್ ಸಿಬ್ಬಂದಿ ಭರ್ಜರಿ ಸ್ವಾಗತ ಕೋರಿದ್ದಾರೆ.
ಒಂದೇ ವಿಮಾನದಲ್ಲಿ ಕಟಕ್‌ಗೆ ಬಂದಿಳಿದ ಉಭಯ ತಂಡದ ಆಟಗಾರರು ವಿಭಿನ್ನ ಗುಂಪುಗಳಾಗಿ ಕಾಣಿಸಿಕೊಳ್ಳದೆ ಒಟ್ಟಾಗಿ ಮಿಶ್ರಣಗೊಂಡಿದ್ದನ್ನ ಬಿಸಿಸಿಐ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಕಾಣಬಹುದು. ಐಪಿಎಲ್ 2022ರ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಒಟ್ಟಾಗಿ ಆಡಿದ ಹಾರ್ದಿಕ್ ಪಾಂಡ್ಯ ಮತ್ತು ಡೇವಿಡ್ ಮಿಲ್ಲರ್ ಒಟ್ಟಾಗಿ ಆಗಮಿಸುತ್ತಿರುವ, ಮತ್ತು ಮಾತನಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.
ಜೊತೆಗೆ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್, ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಜೊತೆಗಿನ ಸಂಭಾಷಣೆ ಸೇರಿದಂತೆ ಉಭಯ ತಂಡಗಳ ಸ್ನೇಹ ಮತ್ತು ಕ್ರೀಡಾಸ್ಫೂರ್ತಿ ವೀಡಿಯೋದಲ್ಲಿ ಎದ್ದು ಕಾಣುವಂತಿತ್ತು. ಬಿಸಿಸಿಐನ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್ @indiancricketteam ನಲ್ಲಿ ಈ ಕುರಿತಾಗಿ ವೀಡಿಯೋನವನ್ನು ಹರಿಬಿಟ್ಟಿದ್ದು, ಲಕ್ಷಾಂತರ ವೀಕ್ಷಣೆ ಜೊತೆಗೆ ಲೈಕ್ಸ್ ಬಂದಿದೆ.
ಎರಡನೇ ಟಿ20 ಪಂದ್ಯವು ಕಟಕ್‌ನ ಬಾರಾಮತಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈಗಾಗಲೇ ಮೊದಲ ಟಿ20 ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಟೀಂ ಇಂಡಿಯಾ 212ರನ್ ಟಾರ್ಗೆಟ್ ನೀಡಿದ್ರೂ ಸಹ ಡಿಫೆಂಡ್ ಮಾಡಿಕೊಳ್ಳಲಾಗದೆ ಪಂದ್ಯ ಸೋತಿದೆ. ಐದು ಎಸೆತಗಳು ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾ ಗೆಲುವಿನ ಗೆರೆ ದಾಟಿತು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಪ್ರವಾಸಿ ತಂಡವು 1-0 ಮುನ್ನಡೆ ಸಾಧಿಸಿದೆ.