ಭಾರತ ಟಿ20 ತಂಡದ ಉಪನಾಯಕ ಸೂರ್ಯಕುಮಾರ್ ಯಾದವ್ ಕೊನೆಗೂ ಅದ್ಭುತ ಬ್ಯಾಟಿಂಗ್ ಫಾರ್ಮ್‌ಗೆ ಮರಳಿದರು. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 49 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 10 ಬೌಂಡರಿಗಳ ಸಹಿತ 83 ರನ್ ಬಾರಿಸಿದರು.
ಮಂಗಳವಾರ, ಆಗಸ್ಟ್ 8ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕಾದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಎರಡು ಪಂದ್ಯಗಳಿಗಾಗಿ ಈ ವಾರಾಂತ್ಯದಲ್ಲಿ ಯುಎಸ್‌ಎಗೆ ತೆರಳುವ ಮುನ್ನ ವೆಸ್ಟ್ ಇಂಡೀಸ್ ತಂಡ ಈಗಲೂ 2-1 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಇದು ವೆಸ್ಟ್ ಇಂಡೀಸ್‌ನ ಲೆಜೆಂಡ್ ಕ್ರಿಸ್ ಗೇಲ್ ಜೊತೆಗೆ ಜಂಟಿ-ಎರಡನೇ ವೇಗದ ದಾಖಲೆಯಾಗಿದೆ. 48 ಇನ್ನಿಂಗ್ಸ್‌ಗಳಲ್ಲಿ 100 ಸಿಕ್ಸರ್‌ಗಳನ್ನು ಸಿಡಿಸಿದ ಎವಿನ್ ಲೂಯಿಸ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇದೇ ವೇಳೆ ಸೂರ್ಯಕುಮಾರ್ ಯಾದವ್ ತನ್ನ 12ನೇ "ಪ್ಲೇಯರ್ ಆಫ್ ದಿ ಮ್ಯಾಚ್' (ಪಂದ್ಯಶ್ರೇಷ್ಠ) ಪ್ರಶಸ್ತಿಯನ್ನು ಪಡೆಯುವ ಮೂಲಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಜಂಟಿ ಎರಡನೇ ಸ್ಥಾನ ಪಡೆದಿದ್ದಾರೆ ಮತ್ತು ವಿರಾಟ್ ಕೊಹ್ಲಿ 15 ಪಂದ್ಯಶ್ರೇಷ್ಠ ಪ್ರಶಸ್ತಿಗಳ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

ಇನ್ನು ಸೂರ್ಯಕುಮಾರ್ ಯಾದವ್ ಅವರು ಟಿ20 ಪಂದ್ಯಗಳಲ್ಲಿ 1780 ರನ್‌ಗಳನ್ನು ಬಾರಿಸಿದರು. ಶಿಖರ್ ಧವನ್ ಅವರ 1759 ರನ್‌ಗಳ ಮೊತ್ತವನ್ನು ಹಿಂದಿಕ್ಕುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ನಾಲ್ಕನೇ ಭಾರತೀಯ ಎನಿಸಿದರು.
ವಿರಾಟ್ ಕೊಹ್ಲಿ (4,008 ರನ್), ರೋಹಿತ್ ಶರ್ಮಾ (3,853 ರನ್) ಮತ್ತು ಕೆಎಲ್ ರಾಹುಲ್ (2,265 ರನ್) ಅವರು ಸೂರ್ಯಕುಮಾರ್ ಅವರಿಗಿಂತ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಆಗಿದ್ದಾರೆ.
"ನಾನು ಪವರ್‌ಪ್ಲೇನಲ್ಲಿ ಬ್ಯಾಟಿಂಗ್‌ಗೆ ಹೋದಾಗ ನಾನೇ ಆಡುವುದು ನಿಜವಾಗಿಯೂ ಮುಖ್ಯವಾಗಿತ್ತು. ಅದು ತಂಡದ ಮ್ಯಾನೇಜ್‌ಮೆಂಟ್ ಕೂಡ ಬಯಸಿತ್ತು. ನಾನು ರಾಂಪ್ ಮತ್ತು ಸ್ಕೂಪ್ ಸ್ಟ್ರೋಕ್‌ಗಳನ್ನು ಸಾಕಷ್ಟು ಅಭ್ಯಾಸ ಮಾಡಿದ್ದೇನೆ ಮತ್ತು ಅದನ್ನು ಮಾಡಲು ನಾನು ಇಷ್ಟಪಡುತ್ತೇನೆ," ಎಂದು ಸೂರ್ಯಕುಮಾರ್ ಯಾದವ್ ಮೂರನೇ ಟಿ20 ಪಂದ್ಯದ ನಂತರ ಹೇಳಿದರು.
ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮೂರನೇ ವಿಕೆಟ್‌ಗೆ 87 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಹತ್ತಿರ ತೆಗೆದುಕೊಂಡು ಹೋದರು. ತಿಲಕ್ ವರ್ಮಾ 37 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿ ಸಮೇತ 49 ರನ್ ಗಳಿಸಿ ಅಜೇಯರಾಗುಳಿದರು.
ತಿಲಕ್ ವರ್ಮಾ ಅವರು ತಮ್ಮ ಮೊದಲ ಮೂರು ಟಿ20 ಇನ್ನಿಂಗ್ಸ್‌ಗಳ ನಂತರ 139 ರನ್‌ಗಳೊಂದಿಗೆ ಭಾರತೀಯ ಬ್ಯಾಟರ್‌ಗಳಲ್ಲಿ ಸೂರ್ಯಕುಮಾರ್ ಯಾದವ್ ಜೊತೆಗೆ ಜಂಟಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. ದೀಪಕ್ ಹೂಡಾ 172 ರನ್ ಗಳಿಸುವ ಮೂಲಕ ಭಾರತೀಯರ ಪರ ಅಗ್ರ ದಾಖಲೆ ಹೊಂದಿದ್ದಾರೆ.
"ನಾನು ಮತ್ತು ತಿಲಕ್ ದೀರ್ಘಕಾಲ ಒಟ್ಟಿಗೆ ಬ್ಯಾಟ್ ಮಾಡಿದ್ದೇವೆ. ನಾವಿಬ್ಬರೂ ಒಬ್ಬರಿಗೊಬ್ಬರು ಹೇಗೆ ಬ್ಯಾಟ್ ಮಾಡಬೇಕು ಎನ್ನುವುದನ್ನು ತಿಳಿದುಕೊಂಡಿದ್ದೇವೆ. ಅವನು ಬ್ಯಾಟ್ ಮಾಡಿದ ರೀತಿ ನನಗೆ ತುಂಬಾ ಆತ್ಮವಿಶ್ವಾಸವನ್ನು ನೀಡಿತು. ಇನ್ನೊಂದು ತುದಿಯಲ್ಲಿ ತಿಲಕ್ ಅವರಿಂದ ಇದು ಉತ್ತಮ ಬೆಂಬಲ ದೊರೆಯಿತು," ಎಂದು ಸೂರ್ಯಕುಮಾರ್ ತಿಳಿಸಿದರು.
"ಭಾರತವು ಸತತವಾಗಿ ಮೂರು ಟಿ20 ಪಂದ್ಯಗಳನ್ನು ಎಂದಿಗೂ ಕಳೆದುಕೊಂಡಿಲ್ಲ, ಇದು ನನ್ನ ಮನಸ್ಸಿನಲ್ಲಿ ಓಡುತ್ತಿತ್ತು. ನಾವು ತಂಡದ ಸಭೆಯಲ್ಲಿ ಮಾತನಾಡಿದ್ದೆವು, ನಮ್ಮ ನಾಯಕ ಈ ನಾವು ಪಂದ್ಯವನ್ನು ಗೆಲ್ಲಬೇಕು ಎಂದು ಹೇಳಿದರು. ನನಗೆ ಅದನ್ನು ಮಾಡಲು ಸಾಧ್ಯವಾಯಿತು," ಎಂದು ಪಂದ್ಯದ ನಂತರ ಸೂರ್ಯಕುಮಾರ್ ಯಾದವ್ ಹೇಳಿದರು.