ವೆಸ್ಟ್ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಭಾರತ ನಿರಾಯಾಸವಾಗಿ ಗೆದ್ದುಕೊಂಡಿದೆ. ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ನೀಡಿದ ಅಮೋಘ ಪ್ರದರ್ಶನದಿಂದಾಗಿ 5 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿ ಸರಣಿಯಲ್ಲಿ ನಿರೀಕ್ಷಿತ ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ ನಿಜ. ಆದರೆ ಈ ಪಂದ್ಯದಲ್ಲಿಯೂ ಟೀಮ್ ಇಂಡಿಯಾದ ಆಟಗಾರರ ಕೆಲ ಪ್ರದರ್ಶನ ಹಾಗೂ ಆತ್ಮವಿಶ್ವಾಸ ಕಳವಳ ಮೂಡಿಸುವಂತಿದೆ ಎಂಬುದು ಕೂಡ ನಿಜ. ವಿಶ್ವಕಪ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ಭಾರತ ಈ ವಿಚಾರವಾಗಿ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಬಹಳ ಇದೆ. ಹಾಗಾದರೆ ಟೀಮ್ ಇಂಡಿಯಾದ ಕಳವಳಕ್ಕೆ ಕಾರಣವಾದ ಆ ಮೂರು ಅಂಶಗಳು ಯಾವುದು? ಮುಂದೆ ಓದಿ..

ಬ್ರಿಡ್ಜ್ ಟೌನ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣ ಮೊದಲ ಪಂದ್ಯದಲ್ಲಿ ಸ್ಪಿನ್ನರ್‌ಗಳಿಗೆ ಅದ್ಭುತವಾಗಿ ನೆರವು ನೀಡಿತ್ತು. ಭಾರತೀಯ ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಈ ಪಿಚ್‌ನಲ್ಲಿ ಎದುರಾಳಿಗಳಿ ದಾಂಡಿಗರನ್ನು ಸುಲಭವಾಗಿ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ನಂತರ ವೆಸ್ಟ್ ಇಂಡೀಸ್ ಸ್ಪಿನ್ನರ್‌ಗಳು ಕೂಡ ಈ ಪಿಚ್‌ನಲ್ಲಿ ಉತ್ತಮವಾದ ಪ್ರದರ್ಶನ ನೀಡಿ ಒಂದು ಹಂತಕ್ಕೆ ಟೀಮ್ ಇಂಡಿಯಾ ದಾಂಡಿಗರ ವಿರುದ್ಧ ಮೇಲುಗೈ ಸಾಧಿಸಲು ಸಫಲವಾಗಿದ್ದರು.
ಸಾಂಪ್ರದಾಯಿಕವಾಗಿ ಭಾರತೀಯ ಬ್ಯಾಟರ್‌ಗಳು ಸ್ಪಿನ್ನರ್‌ಗಳನ್ನು ನಿರಾಯಾಸವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದಾಗುತ್ತಿಲ್ಲ. ಭಾರತೀಯ ದಾಂಡಿಗರು ಸ್ಪಿನ್ನರ್‌ಗಳನ್ನು ಎದುರಿಸಲು ಪರದಾಡುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗುರುವಾರ ನಡೆದ ಪಂದ್ಯದಲ್ಲಿಯೂ ಅದು ಬಹಳ ಸ್ಪಷ್ಟವಾಗಿ ಕಂಡಿತ್ತು. ಭಾರತದಲ್ಲಿಯೇ ಈ ಬಾರಿಯ ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಕಾರಣ ಈ ಅಂಶದತ್ತ ಭಾರತ ಗಂಭೀರವಾಗಿ ಯೋಚಿಸಬೇಕಿದೆ
ಇನ್ನು ಟಿ20 ಮಾದರಿಯ ನಂಬರ್ 1 ಬ್ಯಾಟರ್ ಎಬಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಏಕದಿನ ಮಾದರಿಯಲ್ಲಿ ರನ್‌ಗಳಿಸಲು ಪರದಾಡುವುದು ಮುಂದುವರಿದಿದೆ. ಟಿ20 ಕ್ರಿಕೆಟ್‌ನಲ್ಲಿ ರನ್ ಮಳೆ ಹರಿಸಿದರೂ ಏಕದಿನ ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನ ತೀರಾ ಸಾಮಾನ್ಯ ಮಟ್ಟದಲ್ಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಸೂರ್ಯಕುಮಾರ್‌ಗೆ ಏಕದಿನ ಮಾದರಿಯಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸು ದೊರೆತ ಅದ್ಭುತ ಅವಕಾಶ ಎನ್ನಲಾಗುತ್ತಿದೆ. ಆದರೆ ಮೊದಲ ಪಂದ್ಯದಲ್ಲಿ ವಿಫಲವಾಗಿರುವುದು ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಸಹಜವಾಗಿಯೇ ಬೇಸರ ಮೂಡಿಸಿದೆ.
ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿತಯ ಸನಿಹದಲ್ಲಿದ್ದಾಗಲೂ ಪ್ರಯೋಗಕ್ಕೆ ಒಳಗಾಗುವುದನ್ನು ಈ ಹಂತದಲ್ಲಿಯೂ ಮುಂದುವರಿಸಿದೆ. ಕೆಲ ಸ್ಥಾನಗಳಿಗೆ ಸೂಕ್ತವಾದ ಆಟಗಾರನ್ನು ಕಂಡುಕೊಳ್ಳುವ ಬದಲಿಗೆ ಅತಿಯಾದ ಆತ್ಮವಿಶ್ವಾಸದಲ್ಲಿ ಅರ್ಥವಿಲ್ಲದ ಪ್ರಯೋಗಕ್ಕೆ ಮುಂದಾಗುತ್ತಿರುವುದು ದುರದೃಷ್ಟಕರ. ವಿಶ್ವಕಪ್ ಟೂರ್ನಿಗೆ ಮುನ್ನ ಭಾರತ ಇನ್ನು 11 ಏಕದಿನ ಪಂದ್ಯಗಳನ್ನು ಮಾತ್ರವೇ ಆಡುವ ಕಾರಣ ಈ ಹಂತದಲ್ಲಿ ಆಟಗಾರರಿಗೆ ಸೂಕ್ತವಾದ ಕ್ರಮಾಂಕವನ್ನು ನೀಡಿ ಆ ಕ್ರಮಾಂಕದಲ್ಲಿ ಆಯಾ ಆಟಗಾರರು ಆತ್ಮವಿಶ್ವಾಸ ಗಳಿಸಿಕೊಳ್ಳುವತ್ತ ಚಿತ್ತ ನೆಡಬೇಕಿದೆ. ಈ ಹಂತದಲ್ಲಿ ಪ್ರಯೋಗಗಳನ್ನು ನಡೆಸಿದರೆ ಅದು ಈಗಿರುವ ಗೊಂದಲವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ವಿಂಡೀಸ್ ಸರಣಿಯನ್ನು ಟೀಮ್ ಇಂಡಿಯಾ ಹಗುರವಾಗಿ ಪರಿಗಣಿಸದೆ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ.