ಶನಿವಾರ, ಜುಲೈ 29ರಂದು ಬಾರ್ಬಡೋಸ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ 6 ವಿಕೆಟ್‌ಗಳ ಹೀನಾಯ ಸೋಲು ಕಂಡಿತು. ಇದೇ ವೇಳೆ ಮೂರು ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲಗೊಂಡಿತು.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಉತ್ತಮ ಆರಂಭವನ್ನು ಪಡೆದರೂ, ಅದನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.

ಮೊದಲ ಪಂದ್ಯದಲ್ಲಿ 19 ರನ್ ಗಳಿಸಿದ್ದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್, ಎರಡನೇ ಪಂದ್ಯದಲ್ಲಿ 25 ಎಸೆತಗಳಲ್ಲಿ 24 ರನ್ ಗಳಿಸಿ ಗುಡಕೇಶ್ ಮೋಟಿ ಬೌಲಿಂಗ್‌ನಲ್ಲಿ ಮತ್ತೊಮ್ಮೆ ವಿಕೆಟ್ ಒಪ್ಪಿಸಿದರು.
ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು 2023ರ ಐಸಿಸಿ ವಿಶ್ವಕಪ್ ಪಂದ್ಯಾವಳಿ ಮುಂಚಿತವಾಗಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಅವರ ಮುಂದೆ ಕಠಿಣ ಹಾದಿಯಿದೆ.
3ನೇ ಏಕದಿನ ಪಂದ್ಯವು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಸೂರ್ಯಕುಮಾರ್ ಯಾದವ್‌ಗೆ ಅಂತಿಮ ಅವಕಾಶವಾಗಿದೆ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಾಸಿಂ ಜಾಫರ್ ತಿಳಿಸಿದ್ದಾರೆ.
"ಸೂರ್ಯಕುಮಾರ್ ಯಾದವ್ ಬಹುಶಃ ಮೂರನೇ ಏಕದಿನ ಪಂದ್ಯದಲ್ಲಿ ಇನ್ನೂ ಒಂದು ಅವಕಾಶವನ್ನು ಪಡೆಯುತ್ತಾರೆ ಮತ್ತು ವಿಶ್ವಕಪ್ ವೇಳೆಗೆ ನಾಲ್ಕನೇ ಸ್ಥಾನಕ್ಕೆ ಬಹುಶಃ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಹಿಂತಿರುಗುತ್ತಾರೆ. ನಂತರ ಸೂರ್ಯಕುಮಾರ್ ತಂಡಕ್ಕೆ ಬರಲು ಕಷ್ಟವಾಗುತ್ತದೆ," ಎಂದು ವಾಸಿಂ ಜಾಫರ್ ಹೇಳಿದರು.
"ಸೂರ್ಯಕುಮಾರ್ ಬ್ಯಾಟಿಂಗ್ ಮಾಡುವ ವಿಧಾನ ಹೆಚ್ಚಿನ ಅಪಾಯದ ಆಯ್ಕೆಗಳನ್ನು ತೆಗೆದುಕೊಳ್ಳುತ್ತದೆ. ಆತ ಬೌಂಡರಿಗಳನ್ನು ಹೊಡೆಯಲು ನೋಡುತ್ತಾನೆ, ಅದು ಆತನ ವಿಕೆಟ್ ಕಳೆದುಕೊಳ್ಳುವಂತೆ ಮಾಡುತ್ತದೆ. ಅಪಾಯಕಾರಿ ಆಯ್ಕೆಗಳನ್ನು ತೆಗೆದುಕೊಳ್ಳುವುದು ಅವರ ಸ್ವಭಾವವಾಗಿದೆ ಮತ್ತು ಅವರು ಅದನ್ನು ವಿಶೇಷವಾಗಿ ಏಕದಿನ ಸ್ವರೂಪದಲ್ಲಿ ಬದಲಾಯಿಸಬೇಕಾಗಿದೆ," ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟರು.
ರೊಮಾರಿಯೊ ಶೆಫರ್ಡ್ ಮತ್ತು ಗುಡಾಕೇಶ್ ಮೋಟಿ ಅವರ ಅಮೋಘ ಬೌಲಿಂಗ್ ಪ್ರದರ್ಶನದ ಸಹಾಯದಿಂದ ವೆಸ್ಟ್ ಇಂಡೀಸ್ ಆರು ವಿಕೆಟ್‌ಗಳ ಗೆಲುವು ದಾಖಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸಮಬಲಗೊಳಿಸಿದರು.
ಭಾರತದ 2023ರ ವಿಶ್ವಕಪ್ ಆಕಾಂಕ್ಷಿಗಳ ಬ್ಯಾಟಿಂಗ್ ಪ್ರದರ್ಶಣ ಬೌನ್ಸಿ ಟ್ರ್ಯಾಕ್‌ನಲ್ಲಿ ಯೋಜನೆಯ ಪ್ರಕಾರ ನಡೆಯಲಿಲ್ಲ ಎಂಬುದಂತೂ ಸತ್ಯ. ವೆಸ್ಟ್ ಇಂಡೀಸ್‌ನಂತಹ ದುರ್ಬಲ ತಂಡದೆದುರು ಭಾರತದ ಬ್ಯಾಟಿಂಗ್ ಪ್ರದರ್ಶನ ಕಳವಳಕ್ಕೀಡು ಮಾಡಿದೆ.
ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಕೆಟ್ಟ ನಿರ್ಧಾರವು ಹಿನ್ನಡೆ ಉಂಟು ಮಾಡಿತು. ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಯಾವುದೇ ವೇಗ, ಬೌನ್ಸ್ ಮತ್ತು ಟರ್ನ್‌ಗಳಿಗೆ ಪ್ರತಿರೋಧ ನೀಡಲು ಸಾಧ್ಯವಾಗಲಿಲ್ಲ.
ಮಳೆ-ಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 40.5 ಓವರ್‌ಗಳಲ್ಲಿ ಕೇವಲ 181 ರನ್‌ಗಳಿಗೆ ಆಲೌಟ್ ಆಯಿತು. ಪ್ರತ್ಯುತ್ತರವಾಗಿ, ವೆಸ್ಟ್ ಇಂಡೀಸ್ ತಂಡ 4 ವಿಕೆಟ್ ಕಲೆದುಕೊಂಡು 36.4 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದಿತು ಮತ್ತು ಭಾರತ ವಿರುದ್ಧ ಡಿಸೆಂಬರ್, 2019ರಿಂದ ಸತತ ಒಂಬತ್ತು ದ್ವಿಪಕ್ಷೀಯ ಸೋಲುಗಳ ಸರಪಳಿಯನ್ನು ಮುರಿದರು.
ಭಾರತದ ಪರ ಶಾರ್ದೂಲ್ ಠಾಕೂರ್ 8 ಓವರ್‌ಗಳಲ್ಲಿ42 ರನ್ ನೀಡಿ 3 ವಿಕೆಟ್ ಪಡೆದರು. ಕೆರಿಬಿಯನ್ ಪಡೆ ನಾಯಕ ಶಾಯ್ ಹೋಪ್ 80 ಎಸೆತಗಳಲ್ಲಿ ಅಜೇಯ 63 ರನ್ ಮತ್ತು ಯುವ ಬ್ಯಾಟರ್ ಕೀಸಿ ಕಾರ್ಟಿ 65 ಎಸೆತಗಳಲ್ಲಿ 48 ರನ್ ಗಳಿಸಿ ಮುರಿಯದ 5ನೇ ವಿಕೆಟ್‌ಗೆ 91 ರನ್‌ಗಳ ಜೊತೆಯಾಟ ನೀಡಿದರು.
ಇದಕ್ಕೂ ಮುನ್ನ ಭಾರತದ ಆರಂಭಿಕರಾದ ಇಶಾನ್ ಕಿಶನ್ 55 ಎಸೆತಗಳಲ್ಲಿ 55 ರನ್ ಮತ್ತು ಶುಭ್ಮನ್ ಗಿಲ್ 49 ಎಸೆತಗಳಲ್ಲಿ 34 ರನ್ ಗಳಿಸಿ ಮೊದಲ ವಿಕೆಟ್‌ಗೆ 90 ರನ್‌ಗಳ ಆರಂಭಿಕ ಜೊತೆಯಾಟ ನೀಡಿದರು.
ನಂತರದ 7.2 ಓವರ್‌ಗಳಲ್ಲಿ ಕೇವಲ 23 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಬೌಲಿಂಗ್ ಆಯ್ಕೆಯನ್ನು ಬೌಲರ್‌ಗಳು ಸಮರ್ಥಿಸಿಕೊಂಡರು.