ಭಾರತ-ವೆಸ್ಟ್ ಇಂಡೀಸ್ ಏಕದಿನ ಕದನ: ಪಂದ್ಯ ಎಲ್ಲಿ, ಯಾವಾಗ?
ಗುವಾಹಟಿ, ಅಕ್ಟೋಬರ್ 20: ಭಾರತ-ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿ ಭಾನುವಾರ (ಅಕ್ಟೋಬರ್ 21) ಆರಂಭವಾಗಲಿದೆ.
ಮುಂಬರುವ ವಿಶ್ವಕಪ್ ಟೂರ್ನಿಗೆ ಅಭ್ಯಾಸ ನಡೆಸುವ ನಿಟ್ಟಿನಲ್ಲಿ ಭಾರತಕ್ಕೆ ಈ ಸರಣಿ ಗೆಲುವು ಮಹತ್ವದ್ದಾಗಿದೆ. ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಸುಲಭದ ತುತ್ತಾಗಿತ್ತು. ಇದೇ ಹುಮ್ಮಸ್ಸಿನಲ್ಲಿ ಕೊಹ್ಲಿ ಬಳಗ ತೇಲುತ್ತಿದೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ವೆಸ್ಟ್ ಇಂಡೀಸ್ ಟೆಸ್ಟ್ ತಂಡಕ್ಕೂ ಏಕದಿನ ತಂಡಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿಂಡೀಸ್ ಟೆಸ್ಟ್ ಪಂದ್ಯಗಳಿಗಿಂತ ಉತ್ತಮ ಪ್ರದರ್ಶನ ನೀಡುತ್ತಿದೆ.
ಆಕ್ರಮಣಕಾರಿ ಆಟದ ಮನೋಭಾವ ಹೊಂದಿರುವ ವಿಂಡೀಸ್ ತಂಡ, ಟೆಸ್ಟ್ ಕ್ರಿಕೆಟ್ ಬೇಡುವ ತಾಳ್ಮೆ ಹೊಂದಿಲ್ಲ. ಹೀಗಾಗಿ ಟೆಸ್ಟ್‌ನಲ್ಲಿ ಪದೇ ಪದೇ ಎಡವುತ್ತಿದೆ. ಇದೇ ಪರಿಸ್ಥಿತಿ ಏಕದಿನ ಮತ್ತು ಟಿ 20ಯಲ್ಲಿಲ್ಲ. ಸಹಜ ಆಕ್ರಮಣಕಾರಿ ಆಟದಿಂದ ವಿಂಡೀಸ್, ಎದುರಾಳಿಗಳನ್ನು ಮಣಿಸುವ ತಾಕತ್ತು ಹೊಂದಿದೆ.
ಹೀಗಾಗಿ ಟೆಸ್ಟ್‌ನಂತೆ ಏಕದಿನದಲ್ಲಿ ಕೆರೆಬಿಯನ್ನರು ಭಾರತಕ್ಕೆ ಸುಲಭದ ತುತ್ತಾಗುವುದಿಲ್ಲ. ಅದರ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಭಾರತ ತಂತ್ರ ಹೆಣೆಯಲೇಬೇಕು.

ಪಂತ್‌ಗೆ ಅವಕಾಶ?
ಏಷ್ಯಾ ಕಪ್‌ನಲ್ಲಿದ್ದ ತಂಡದಿಂದ ದಿನೇಶ್ ಕಾರ್ತಿಕ್ ಅವರನ್ನು ಕೈಬಿಟ್ಟು ಎಡಗೈ ಬ್ಯಾಟ್ಸ್‌ಮನ್-ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಎಂ.ಎಸ್. ಧೋನಿ ಅವರೇ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಹೀಗಾಗಿ ರಿಷಬ್ ಪಂತ್ ಮಧ್ಯಮ ಕ್ರಮಾಂಕದ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ. ಪಂತ್‌ಗೆ ಅವಕಾಶ ಸಿಗದೆ ಇದ್ದರೆ, ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಆಡಬಹುದು.
ಏಕದಿನ ಸರಣಿ: ಕಪಿಲ್ ದಾಖಲೆ ಮುರಿಯಲು ಜಡೇಜ ಸಜ್ಜು

ರಾಹುಲ್‌ಗೆ ಅವಕಾಶವಿಲ್ಲ?
ಟೆಸ್ಟ್ ಸರಣಿಯಲ್ಲಿ ವಿಫಲತೆ ಅನುಭವಿಸಿರುವ ಕೆ.ಎಲ್. ರಾಹುಲ್, ಏಕದಿನದ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ಆರಂಭಿಕರಾಗಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಜೋಡಿ ಆಡಲು ಸಿದ್ಧವಿದೆ. ರಾಹುಲ್ ಅವರನ್ನು ಆಡಿಸಿದರೆ, ಅವರು ಮೂರನೇ ಕ್ರಮಾಂಕದಲ್ಲಿ ಆಡಬೇಕು. ಇದಕ್ಕಾಗಿ ವಿರಾಟ್ ಕೊಹ್ಲಿ ತ್ಯಾಗ ಮಾಡಬೇಕಾಗಲಿದೆ. ಹೀಗಾಗಿ ರಾಹುಲ್ ಹೊರಕ್ಕೆ ಉಳಿಯಬೇಕಾಗಲಿದೆ. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಅವರನ್ನು ಆಡಿಸುವ ಪ್ರಯೋಗಕ್ಕೂ ಕೊಹ್ಲಿ ಮುಂದಾದರೆ ಅಚ್ಚರಿಯಿಲ್ಲ.
ಮ್ಯಾಚ್ ಫಿಕ್ಸಿಂಗ್ ಆರೋಪ ಒಪ್ಪಿಕೊಂಡ ಪಾಕಿಸ್ತಾನಿ ಸ್ಪಿನ್ನರ್

ಬೌಲಿಂಗ್‌ನಲ್ಲಿ ಬದಲಾವಣೆ
ಏಷ್ಯಾ ಕಪ್‌ನಲ್ಲಿ ಗಮನ ಸೆಳೆದಿದ್ದ ಖಲೀಲ್ ಅಹ್ಮದ್ ತಂಡದಲ್ಲಿ ಇದ್ದರೂ ಆಡುವ ಅವಕಾಶ ಸಿಗಲಿದೆಯೇ ಎಂದು ಕಾದು ನೋಡಬೇಕು. ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಮುಖ್ಯವಾಗಿದ್ದಾರೆ. ಗಾಯಾಳು ಶಾರ್ದೂಲ್ ಠಾಕೂರ್ ಅವರ ಸ್ಥಾನಕ್ಕೆ ಆಯ್ಕೆಯಾಗಿರುವ ಉಮೇಶ್ ಯಾದವ್ ಶಮಿ ಜತೆ ವೇಗದ ಸಾರಥ್ಯ ಹಂಚಿಕೊಳ್ಳಬಹುದು. ಕೊನೆಯ ಟೆಸ್ಟ್‌ನಲ್ಲಿ ಹತ್ತು ವಿಕೆಟ್ ಕಿತ್ತು ವಿಂಡೀಸ್ ತಂಡವನ್ನು ಯಾದವ್ ದೂಳೀಪಟ ಮಾಡಿದ್ದರು. ಇನ್ನು ಸ್ಪಿನ್ ವಿಭಾಗದಲ್ಲಿ ಯಜುರ್ವೇಂದ್ರ ಚಾಹಲ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಬಲ ಇದೆ.

ಅನನುಭವಿ ವಿಂಡೀಸ್
ವೆಸ್ಟ್ ಇಂಡೀಸ್ ತಂಡದಲ್ಲಿ ಅನನುಭವಿಗಳೇ ಹೆಚ್ಚಿದ್ದಾರೆ. ಅನುಭವಿ ಮರ್ಲನ್ ಸ್ಯಾಮುಯೆಲ್ಸ್ ಮತ್ತು ವೇಗಿ ಕೆಮರ್ ರೋಚ್ ಅವರ ಸೇರ್ಪಡೆಯಿಂದ ತಂಡಕ್ಕೆ ತುಸು ಭರವಸೆ ಹೆಚ್ಚಿದೆ. ನಾಯಕ ಜೇಸನ್ ಹೋಲ್ಡರ್ ಅವರ ಆಲ್‌ರೌಂಡಿಂಗ್ ಸಾಮರ್ಥ್ಯವೇ ತಂಡಕ್ಕೆ ದೊಡ್ಡ ಆಸರೆ. ಜತೆಗೆ ಚಂದ್ರಪಾಲ್ ಹೇಮರಾಜ್, ಆಲ್‌ರೌಂಡರ್ ಫಾಬಿಯಾನ್ ಅಲೆನ್ ಮತ್ತು ವೇಗಿ ಒಶಾನ್ ಥಾಮಸ್ ಎಂಬ ಮೂವರು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ವಿಂಡೀಸ್ ತಂಡ ಹೊರನೋಟಕ್ಕೆ ದುರ್ಬಲವಾಗಿ ಕಂಡರೂ ಏಕದಿನದಲ್ಲಿ ಅದರ ಸಾಮರ್ಥ್ಯವನ್ನು ಕಡೆಗಣಿಸಲು ಸಾಧ್ಯವಿಲ್ಲ.

ಉಭಯ ತಂಡಗಳ ಮುಖಾಮುಖಿ
ಎರಡೂ ತಂಡಗಳು ಇದುವರೆಗೂ 121 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅಂಕಿ ಸಂಖ್ಯೆಗಳ ವಿಚಾರದಲ್ಲಿ ವೆಸ್ಟ್ ಇಂಡೀಸ್ ತಂಡವೇ ಮೇಲುಗೈ ಸಾಧಿಸಿದೆ. 61ರಲ್ಲಿ ವೆಸ್ಟ್ ಇಂಡೀಸ್ ಗೆದ್ದಿದ್ದರೆ 56 ಪಂದ್ಯಗಳಲ್ಲಿ ಭಾರತ ಜಯಭೇರಿ ಸಾಧಿಸಿದೆ. ಮೂರು ಪಂದ್ಯಗಳು ರದ್ದುಗೊಂಡಿದ್ದರೆ, ಒಂದು ಪಂದ್ಯ ಟೈ ಆಗಿತ್ತು.
ಕಳೆದ ಐದು ಪಂದ್ಯಗಳಲ್ಲಿ ಭಾರತ ಮೂರರಲ್ಲಿ ಗೆದ್ದಿದ್ದರೆ, ವೆಸ್ಟ್ ಇಂಡೀಸ್ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಒಂದು ಪಂದ್ಯ ರದ್ದುಗೊಂಡಿತ್ತು.

ಸಂಭಾವ್ಯ ತಂಡಗಳು
ಭಾರತ: ರೋಹಿತ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಂಬಟಿ ರಾಯುಡು, ರಿಷಬ್ ಪಂತ್, ಎಂ.ಎಸ್. ಧೋನಿ, ರವೀಂದ್ರ ಜಡೇಜಾ, ಯಜುರ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್.
ವೆಸ್ಟ್ ಇಂಡೀಸ್: ಕೀರನ್ ಪೊವೆಲ್, ಚಂದ್ರಪಾಲ್ ಹೇಮರಾಜ್, ಮರ್ಲನ್ ಸ್ಯಾಮುಯೆಲ್, ಶಿಮ್ರೋನ್ ಹೆಟ್ಮೇರ್, ಸುನೀಲ್ ಆಂಬ್ರಿಸ್, ಶಾಯ್ ಹೋಪ್, ಫಾಬಿಯಾನ್ ಅಲೆನ್, ಜೇಸನ್ ಹೋಲ್ಡರ್, ಕೆಮೆರ್ ರೋಚ್, ಆಶ್ಲೆ ನರ್ಸ್, ದೇವೇಂದ್ರ ಬಿಶೂ.

ಪಂದ್ಯ ಯಾವಾಗ, ಎಲ್ಲಿ?
ಸ್ಥಳ: ಬರ್ಸಾಪುರ ಕ್ರಿಕೆಟ್ ಮೈದಾನ, ಗುವಾಹಟಿ, ಅಸ್ಸಾಂ
ಸಮಯ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಸ್ಟ್, ಹಾಟ್ ಸ್ಟಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications