
ಚೆನ್ನೈ, ಎ. 26: ಬಲು ಕುತೂಹಲ ಕೆರಳಿಸಿದ್ದ ಬುಧವಾರದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಚೆನ್ನೈ ರೋಮಾಂಚಕಾರಿ ಗೆಲುವು ದಾಖಲಿಸಿ ಸದ್ದು ಮಾಡಿತ್ತು. ಚೆನ್ನೈ ತಂಡವು ಆರ್‌ಸಿಬಿ ನೀಡಿದ್ದ 205 ಭಾರೀ ರನ್ ಗಳ ಗುರಿ ಬೆನ್ನತ್ತಿತಲ್ಲದೆ, 5 ವಿಕೆಟ್ ರೋಚಕ ಗೆಲುವನ್ನೂ ದಾಖಲಿಸಿತು (19.4 ಓವರ್ ಗಳಲ್ಲಿ 207ರನ್). ಈ ರೋಮಾಂಚನಕಾರಿ ಪಂದ್ಯದ ಬೆನ್ನಲ್ಲೇ ಚೇಸಿಂಗ್ ವಿಚಾರದಲ್ಲಿ ಚೆನ್ನೈ ಚಾಂಪಿಯನ್ ಅನ್ನೋ ಸಾಲುಗಳು ಈಗ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿವೆ. ಟ್ವಿಟರ್ ನಲ್ಲಂತೂ ಬೆಸ್ಟ್ ಫಿನಿಷರ್ ಧೋನಿ 'ಕಿಂಗ್' ಅನ್ನಿಸಿಬಿಟ್ಟಿದ್ದಾರೆ!
ಪಂದ್ಯದ ಸ್ಕೋರ್ ಕಾರ್ಡ್ | ಪಂದ್ಯದ ವರದಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿದ ಬೆಂಗಳೂರು ಕ್ವಿಂಟನ್ ಡಿ ಕಾಕ್ (53), ಎಬಿ ಡಿ' ವಿಲಿಯರ್ಸ್ (68), ಮನ್‌ದೀಪ್ ಸಿಂಗ್ (32) ಅವರ ರನ್ ನೆರವಿನಿಂದ ಒಟ್ಟು 205 ರನ್ ಪೇರಿಸಿ ಚೆನ್ನೈಗೆ 206 ರನ್‌ಗಳ ದೊಡ್ಡ ಮೊತ್ತದ ಗುರಿ ನೀಡಿತ್ತು. ನಂತರ ಚೇಸಿಂಗಿಳಿದ ಚೆನ್ನೈ ಮೊದಲ ಓವರ್‌ನಲ್ಲೇ ಶೇನ್ ವಾಟ್ಸನ್ (7) ವಿಕೆಟ್ ಕಳೆದುಕೊಂಡಿತು. ಮುಂದೆ 10 ಓವರ್ ಮುಗಿಯುವುದರ ಒಳಗೆ ಸುರೇಶ್ ರೈನ (11), ಸ್ಯಾಮ್ ಬಿಲ್ಲಿಂಗ್ಸ್ (9), ರವೀಂದ್ರ ಜಡೇಜಾ (3) ಅವರ ವಿಕೆಟ್‌ಗಳನ್ನೂ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿತ್ತು. ಸಿಎಸ್ಕೆ ತಂಡದ ನಾಲ್ಕನೇ ವಿಕೆಟ್ ಉರುಳುವಾಗ ತಂಡದ ಮೊತ್ತ ಬರೀ 74ರನ್ ಗಳು ಮಾತ್ರ. ಆದರೆ ಆರಂಭಿಕ ಆಟಗಾರ ಅಂಬಾಟಿ ರಾಯುಡು ತಂಡದ ಕೈ ಹಿಡಿದಿದ್ದರು. 17.5O ಓವರ್‌ಗಳವರೆಗೂ ನಿಂತು ತಂಡದ ಪರ ಬ್ಯಾಟ್ ಬೀಸಿದ ರಾಯುಡು ಬ್ಯಾಟ್ ಗೆ 82(53) ರನ್‌ಗಳು ಉದುರಿದ್ದವು. ಇದರೊಂದಿಗೆ ಧೋನಿ-ರಾಯುಡು ಜೋಡಿ ಸೋಲಿನಂಚಿನಲ್ಲಿದ್ದ ಚೆನ್ನೈ ತಂಡವನ್ನು ಗೆಲುವಿನಂತಿಗೆ ಎಳೆದು ತಂದಿತು. ಅಂತಿಮ ಓವರ್‌ನಲ್ಲೂ ಪಂದ್ಯ ಕುತೂಹಲಕ್ಕೆ ಕಾರಣವಾಗಿತ್ತಾದರೂ ಡ್ವೇನ್ ಬ್ರಾವೋ(14)-ಧೋನಿ(70) ಜೋಡಿ ಅಜೇಯರಾಗಿ ತಂದ್ಯ ಗೆಲ್ಲಿಸಿ ಅಚ್ಚರಿ ಮೂಡಿಸಿದರಲ್ಲದೆ ಬೆಂಗಳೂರು ಅಭಿಮಾನಿಗಳಿಗೆ ಊಹಿಸಿರದ ಅಘಾತವಿಕ್ಕಿದರು.
ಚೆನ್ನೈ ತಂಡದ ಈ ರೋಮಾಂಚನಕಾರಿ ಆಟ ಮತ್ತು ಧೋನಿಯ ಸ್ಪೋಟಕ ಬ್ಯಾಟಿಂಗ್ ಪಂದ್ಯದ ವೇಳೆ ಹೆಚ್ಚು ಗಮನ ಸೆಳೆದಿದ್ದು ಸುಳ್ಳಲ್ಲ. ಪಂದ್ಯ ಮುಗಿಯುತ್ತಲೇ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂನಲ್ಲಿ ಚೆನ್ನೈ ತಂಡ ಮತ್ತು ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ಮೆಚ್ಚುಗೆಯ ಮಳೆಯೇ ಸುರಿಯತೊಡಗಿತು. ಟ್ವಿಟರ್ ನಲ್ಲಂತೂ ಸಾಲು ಸಾಲು ಟ್ವೀಟ್ ಗಳು ಚೆನ್ನೈ ಸೂಪರ್ ಕಿಂಗ್ಸ್, ಮಹೇಂದ್ರ ಸಿಂಗ್ ಧೋನಿಯನ್ನು ಕೊಂಡಾಡಿವೆ.
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ರಾಜಕಾರಣಿ ರಾಜೀವ್ ಶುಕ್ಲ, ಭಾರತದ ಜಾಂಟಿರೋಟ್ಸ್ ಖ್ಯಾತಿಯ ಮೊಹಮ್ಮದ್ ಕೈಫ್, ಸೌತಾಫ್ರಿಕಾ ಆಟಗಾರ ಅಲ್ಬಿ ಮಾರ್ಕೆಲ್ ನಂತ ನೂರಾರು ಸೆಲೆಬ್ರಿಟಿಗಳು, ಸಾವಿರಾರು ಅಭಿಮಾನಿಗಳು ಟ್ವಿಟರ್ ಮೂಲಕ ಚೆನ್ನೈ ತಂಡದ ರೋಮಾಂಚಕಾರಿ ಚೇಸಿಂಗನ್ನು ಶ್ಲಾಘಿಸಿದ್ದಾರೆ. ಅಲ್ಲಿ ಮೆಚ್ಚಿ ಬಂದ ಸಹಸ್ರಾರು ಟ್ವೀಟ್ ಗಳ ಎಡೆಯಿಂದ ಹೆಕ್ಕಿದ ಕೆಲ ಸ್ವೀಟ್ ಟ್ವೀಟ್ ಗಳು ಕೆಳಗಿವೆ.