ಐಪಿಎಲ್ ಹರಾಜು: ಬಂಪರ್ ಹೊಡೆದ 'ಮಿಸ್ಟರಿ ಸ್ಪಿನ್ನರ್' ಚಕ್ರವರ್ತಿ ಯಾರು?

ಜೈಪುರ, ಡಿಸೆಂಬರ್ 18: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸದೆಯೂ ಅತಿ ಹೆಚ್ಚು ಗಮನ ಸೆಳೆದಿದ್ದ ಆಟಗಾರರಲ್ಲಿ ಒಬ್ಬರಾದ ತಮಿಳುನಾಡಿನ 'ಮಿಸ್ಟರಿ ಸ್ಪಿನ್ನರ್' ವರುಣ್ ಚಕ್ರವರ್ತಿ ಭಾರಿ ಮೊತ್ತಕ್ಕೆ ಖರೀದಿಯಾಗಿ ಅಚ್ಚರಿ ಮೂಡಿಸಿದ್ದಾರೆ.
ಕೇವಲ 20 ಲಕ್ಷ ಮೂಲಬೆಲೆ ಹೊಂದಿದ್ದ ವರುಣ್ ಚಕ್ರವರ್ತಿ ಬಹುಶಃ ತಮಗೆ ಇಷ್ಟೊಂದು ಬೇಡಿಕೆ ಬರುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲವೇನೋ. ತಮ್ಮ ಮೂಲ ಬೆಲೆಗಿಂತ ಬರೋಬ್ಬರಿ 42 ಪಟ್ಟು ಅಧಿಕ ಬೆಲೆಗೆ ವರುಣ್ ಮಾರಾಟವಾಗಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ 8.4 ಕೋಟಿ ರೂ ನೀಡಿ ವರುಣ್ ಚಕ್ರವರ್ತಿ ಅವರನ್ನು ಖರೀದಿ ಮಾಡಿದೆ.
ದೇಶ-ವಿದೇಶದ ಘಟಾನುಘಟಿ ಆಟಗಾರರಲ್ಲಿ ಅನೇಕರು ಖರೀದಿಯಾಗದೆ ಉಳಿದಿರುವಾಗ ತಮಿಳುನಾಡಿನ ಈ ಬೌಲರ್, ಇಷ್ಟು ದೊಡ್ಡ ಮಟ್ಟಕ್ಕೆ ಮಾರಾಟವಾಗಿದ್ದಕ್ಕೆ ಕಾರಣವೇನು? ಯಾರು ಈ ವರುಣ್ ಚಕ್ರವರ್ತಿ?

ಬಾಲ್ಯದಲ್ಲಿ ಕ್ರಿಕೆಟಿಗ
ವರುಣ್ ಚಕ್ರವರ್ತಿ ವಿಸ್ಮಯಕಾರಿ ಬೌಲಿಂಗ್ ದಾಳಿಗೆ ಹೆಸರಾದವರು. ಶ್ರೀಲಂಕಾದ ಅಜಂತಾ ಮೆಂಡಿಸ್ ಅವರಂತೆ ವಿಶಿಷ್ಟ ಶೈಲಿ ಹೊಂದಿರುವ ಆಫ್ ಸ್ಪಿನ್ನರ್. ವರುಣ್ ಕ್ರಿಕೆಟ್ ಆಡಲು ಆರಂಭಿಸಿದ್ದು 13ನೇ ವಯಸ್ಸಿನಲ್ಲಿ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್ ಆಗಿ. ಶಾಲಾ ತಂಡಕ್ಕೆ ಆಡುತ್ತಿದ್ದ ವರುಣ್, ಕಾಲೇಜು ಸೇರಿದ ಬಳಿಕ ಕ್ರಿಕೆಟ್ ಆಟವನ್ನೇ ತ್ಯಜಿಸಿದ್ದರು. ಚೆನ್ನೈನ ಎಸ್ ಆರ್ಎಂ ವಿಶ್ವವಿದ್ಯಾಲಯದಲ್ಲಿ ಆರ್ಕಿಟೆಕ್ಟ್ ಪದವಿ ಪಡೆದರು.
ಐಪಿಎಲ್ 12 : ಬಿಕರಿಯಾಗದೆ ಉಳಿದ ಟೆಸ್ಟ್ ಸ್ಟಾರ್ ಪೂಜಾರಾ
ಕೆಲಸ ಬಿಟ್ಟು ಮೈದಾನದತ್ತ
ಪದವಿ ಪೂರೈಸಿದ ಬಳಿಕ ಆರ್ಕಿಟೆಕ್ಟ್ ಕಂಪೆನಿಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದರು. ಆದರೆ, ಅಲ್ಲಿಯೇ ಮುಂದುವರಿಯಲು ಅವರಿಗೆ ಮನಸ್ಸಾಗಲಿಲ್ಲ. ಮತ್ತೆ ಚೆಂಡು ಹಿಡಿದು ಮೈದಾನಕ್ಕೆ ಇಳಿದರು. ಈ ಬಾರಿ ಅವರು ಆಟ ಆರಂಭಿಸಿದ್ದು, ವೇಗದ ಬೌಲರ್ ಆಗಿ.
ಕೆಲವು ಕ್ಲಬ್ ತಂಡಗಳಿಗೆ ಆಡಿದ ಅವರ ಮೊಣಕಾಲು ಗಾಯ ಕ್ರಿಕೆಟ್‌ನ ಹುಮ್ಮಸ್ಸಿಗೆ ಅಡ್ಡಿಪಡಿಸಿತು. ಆದರೆ, ಅವರು ಓಡಲು ಆಗುವುದಿಲ್ಲ ಎಂದು ವಿಶ್ರಾಂತಿಯ ವೇಳೆಯಲ್ಲಿ ಸುಮ್ಮನೆ ಕೂರಲಿಲ್ಲ. ಸ್ಪಿನ್ ಬೌಲಿಂಗ್ ಆರಂಭಿಸಿದರು.
ಮುಂಬೈ ಇಂಡಿಯನ್ಸ್ ತಂಡದ ನಿರ್ದೇಶಕರಾಗಿ ಜಹೀರ್ ಖಾನ್ ನೇಮಕ
ಟೆನ್ನಿಸ್ ಬಾಲ್ ಪ್ರಯೋಗ
'ಗಲ್ಲಿ ಕ್ರಿಕೆಟ್ ಆಡುವಾಗ ಟೆನ್ನಿಸ್ ಬಾಲ್‌ನಲ್ಲಿ ಸಾಕಷ್ಟು ಪ್ರಯೋಗಗಳನ್ನು ನಡೆಸುತ್ತಿದ್ದೆ. ಅದನ್ನೇ ಲೆದರ್ ಬಾಲ್‌ನಲ್ಲಿಯೂ ನಡೆಸಲು ಪ್ರಯತ್ನಿಸಿದೆ. ಅಲ್ಲಿಂದ ವೈವಿಧ್ಯಮಯವಾಗಿ ಬೌಲಿಂಗ್ ಆರಂಭಿಸಿದೆ. ಗಾಯದ ಬಳಿಕ ಮತ್ತೆ ವೇಗದ ಬೌಲರ್ ಆಗಲು ಇಷ್ಟಪಟ್ಟಿರಲಿಲ್ಲ. ಹೀಗಾಗಿ ಸ್ಪಿನ್ನರ್ ಆಗಿ ಬದಲಾದೆ' ಎಂದು ವರುಣ್ ಹೇಳುತ್ತಾರೆ.
ಐಪಿಎಲ್ ನೆಟ್ ಬೌಲಿಂಗ್
ಅಲ್ಲಿಂದ ನಡೆದಿದ್ದೆಲ್ಲ ಮ್ಯಾಜಿಕ್. ಏಳು ರೀತಿಯಲ್ಲಿ ಚೆಂಡು ಎಸೆಯುವ ಸಾಮರ್ಥ್ಯದಿಂದ ಕ್ಲಬ್ ಮಟ್ಟದ ಬ್ಯಾಟ್ಸ್‌ಮನ್‌ಗಳನ್ನು ಅವರು ಕಾಡತೊಡಗಿದರು. ಸಿಎಸ್ ಕೆ ಮತ್ತು ಕೆಕೆಆರ್ ಆಟಗಾರರಿಗೆ ನೆಟ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಲಭಿಸಿತು. ಅವರಿಗೆ ಬೌಲ್ ಮಾಡುವ ಅವಕಾಶದಿಂದಾಗಿ ಪ್ರಮುಖ ಆಟಗಾರರ ಮನಸ್ಥಿತಿ ಹೇಗಿರುತ್ತದೆ ಎಂಬುದರ ಅರಿವಾಯಿತು.
ವಿಜಯ್ ಹಜಾರೆಯಲ್ಲಿ ಸಾಧನೆ
ಐಪಿಎಲ್ ನೆಟ್ ಬೌಲಿಂಗ್ ಅನುಭವ 2018ರ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಮದುರೈ ಪ್ಯಾಂಥರ್ಸ್ ತಂಡದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಲು ನೆರವಾಯಿತು. ಅದರ ಬೆನ್ನಲ್ಲೇ ತಮಿಳುನಾಡು ತಂಡದಲ್ಲಿ ಆಡಿದ ವರುಣ್, ವಿಜಯ್ ಹಜಾರೆ ಟ್ರೋಫಿಯ ಗ್ರೂಪ್ ಹಂತದಲ್ಲಿ 22 ವಿಕೆಟ್ ಪಡೆದು ಅತ್ಯಧಿಕ ವಿಕೆಟ್ ಗಳಿಕೆ ಸಾಧನೆ ಮಾಡಿದರು.
ಕೆಲವೇ ವರ್ಷಗಳ ಹಿಂದೆಯಷ್ಟೇ ಕ್ರಿಕೆಟ್ ಅನ್ನು ಹವ್ಯಾಸವಾಗಿ ಆರಂಭಿಸಿದ ಆಟಗಾರ ಈಗ ಅನೇಕ ವೃತ್ತಿಪರ, ಅನುಭವಿ ಮತ್ತು ಶ್ರೇಷ್ಠ ಆಟಗಾರರನ್ನು ಹಿಂದಿಕ್ಕಿ ಭಾರಿ ಮೊತ್ತಕ್ಕೆ ಖರೀದಿಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications