ಬಟ್ಲರ್ 'ರನೌಟ್'ಅನ್ನು ಸಮರ್ಥಿಸಿಕೊಂಡ ರವಿಚಂದ್ರನ್ ಅಶ್ವಿನ್

ನವದೆಹಲಿ, ಮಾರ್ಚ್ 26 : ಬೌಲಿಂಗ್ ಮಾಡುವ ಮೊದಲೇ ನಾನ್ ಸ್ಟ್ರೈಕರ್ ತುದಿಯಲ್ಲಿ ಇದ್ದ ಬ್ಯಾಟ್ಸ್ ಮನ್ ರನ್ ಕದಿಯಲು ಯತ್ನಿಸಿದಾಗ, ಆತನನ್ನು ರನೌಟ್ ಮಾಡುವುದು ಸರಿಯಾ, ತಪ್ಪಾ? ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವಾದುದು ಇತ್ಯಾದಿ ಚರ್ಚೆಗಳು ಆರಂಭವಾಗಿವೆ.
ಜೈಪುರದಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಪಂದ್ಯ ನಡೆಯುತ್ತಿದ್ದಾಗ, ರನ್ ಕದಿಯಲೆಂದು ಕ್ರೀಸ್ ಬಿಟ್ಟು ಹೊರಗಿದ್ದ ಜೋಸ್ ಬಟ್ಲರ್ ನನ್ನು ಪಂಜಾಬ್ ಕ್ಯಾಪ್ಟನ್ ರವಿಚಂದ್ರನ್ ಅಶ್ವಿನ್ ಅವರು ಬೇಲ್ಸ್ ಎಗರಿಸಿ ರನೌಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಆದರೆ, ಹೀಗೆ ಔಟ್ ಮಾಡಿದ್ದಕ್ಕೆ ನನಗಾವುದೇ ವಿಷಾದವಿಲ್ಲ. ಇಂಥ ಘಟನೆಗಳು ಪಂದ್ಯದ ದಿಕ್ಕನ್ನೇ ಬದಲಿಸಿಬಿಡುತ್ತವೆ. ಬ್ಯಾಟ್ಸ್ ಮನ್ ಗಳೇ ಈ ರೀತಿ, ಬೌಲ್ ಮಾಡುವ ಮೊದಲೇ ಕ್ರೀಸ್ ಬಿಡದಂತೆ ಎಚ್ಚರ ವಹಿಸಬೇಕು ಎಂದು ರವಿಚಂದ್ರನ್ ಅಶ್ವಿನ್ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ರೀತಿ ಔಟ್ ಮಾಡಿದ್ದು 11 ವರ್ಷಗಳ ಇಂಡಿಯನ್ ಪ್ರೀಮಿಯರ್ ಲೀಗ್ ನ ಇತಿಹಾಸದಲ್ಲೇ ಮೊದಲನೇ ಬಾರಿ. 43 ಚೆಂಡುಗಳಲ್ಲಿ 69 ರನ್ ಬಾರಿಸಿ ಭರ್ಜರಿಯಾಗಿ ಆಟವಾಡುತ್ತಿದ್ದ ಜೋಸ್ ಬಟ್ಲರ್ ಅವರನ್ನು ಅಶ್ವಿನ್ ಔಟ್ ಮಾಡಿದ್ದರು. ಔಟ್ ಮಾಡುತ್ತಿದ್ದಂತೆ ಆಟಗಾರರಲ್ಲೇ ಮಾತಿನ ಚಕಮಕಿ ಕೂಡ ಶುರುವಾಗಿತ್ತು.

ಕ್ರೀಡಾಸ್ಫೂರ್ತಿಗೆ ಚ್ಯುತಿ ತಂದಿಲ್ಲ
ಕ್ರೀಸ್ ಬಿಟ್ಟು ಹೋಗದಂತೆ ರವಿಚಂದ್ರನ್ ಅಶ್ವಿನ್ ಅವರು ಜೋಸ್ ಬಟ್ಲರ್ ಅವರಿಗೆ ಎಚ್ಚರಿಕೆ ನೀಡಬಹುದಾಗಿತ್ತು ಎಂಬ ವಾದ ಆರಂಭವಾಗಿದೆ. ಆದರೆ, ರವಿಚಂದ್ರನ್ ಅಶ್ವಿನ್ ಅವರು, ಆಟದ ನಿಯಮಕ್ಕೆ ಬದ್ಧವಾಗಿಯೇ ಔಟ್ ಮಾಡಿದ್ದು, ಕ್ರೀಡಾಸ್ಫೂರ್ತಿಗೆ ಚ್ಯುತಿಯನ್ನೇನೂ ತಂದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಬಟ್ಲರ್ ಅವರನ್ನು ಔಟ್ ಮಾಡಿದ್ದು, ಪಂದ್ಯದ ಗತಿಯನ್ನೂ ಬದಲಿಸಿದ್ದು ಸುಳ್ಳಲ್ಲ. ರಾಜಸ್ಥಾನ ರಾಯಲ್ಸ್ ತಂಡವನ್ನು ಪಂಜಾಬ್ 14 ರನ್ ಗಳಿಂದ ಸೋಲಿಸಿತು.

ಪಂದ್ಯದ ದಿಕ್ಕನ್ನೇ ಬದಲಿಸಿಬಿಡುತ್ತವೆ
ಇದರ ಬಗ್ಗೆ ಹೆಚ್ಚಿನ ಚರ್ಚೆಯೇ ಬೇಡ, ಆ ಕ್ಷಣದಲ್ಲಿ ಏನು ಮಾಡಬೇಕಿತ್ತೋ ಅದನ್ನೇ ಮಾಡಿದ್ದೇನೆ. ನನ್ನ ಬೌಲಿಂಗ್ ಆಕ್ಷನ್ ಕೂಡ ಮುಗಿದಿರಲಿಲ್ಲ, ಅಷ್ಟರಲ್ಲಾಗಲೇ ಬಟ್ಲರ್ ಕ್ರೀಸ್ ಬಿಟ್ಟು ಹೊರಹೋಗಿದ್ದರು. ಇಂತಹ ಘಟನೆಗಳು ಪಂದ್ಯದ ದಿಕ್ಕನ್ನೇ ಬದಲಿಸಿಬಿಡುತ್ತವೆ. ಬ್ಯಾಟ್ಸ್ ಮನ್ ಗಳೇ ಎಚ್ಚರದಿಂದ ಇರಬೇಕು ಎಂದು ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ರವಿಚಂದ್ರನ್ ಅಶ್ವಿನ್ ಅವರು ಹೇಳಿದ್ದಾರೆ. ಅಶ್ವಿನ್ ಅವರು ಹೀಗೆ ಮಾಡಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಕ್ಕೆ ತಂಡದ ಆಟಗಾರರು ಅವರನ್ನು ಶ್ಲಾಘಿಸಿದ್ದಾರೆ.
ಐಪಿಎಲ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಯುನಿವರ್ಸ್ ಬಾಸ್ ಗೇಲ್!

ಕಾಮೆಂಟ್ ಮಾಡಲು ರಹಾನೆ ನಿರಾಕರಣೆ
ಈ ವಿವಾದದ ಬಗ್ಗೆ ಕಾಮೆಂಟ್ ಮಾಡಲು ಸೋತ ತಂಡದ ನಾಯಕ ಅಜಿಂಕ್ಯಾ ರಹಾನೆ ಅವರು ನಿರಾಕರಿಸಿದ್ದು, ಈ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಪಂದ್ಯದ ರೆಫ್ರಿ ಅವರಿಗೇ ಬಿಟ್ಟಿದ್ದಾರೆ. ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡುವುದು ಸಮಂಜಸವಲ್ಲ. ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾವು ಅದನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸುತ್ತೇವೆ ಎಂದು ರಹಾನೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಸಮಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ ಕಿಂಗ್ಸ್ ಎಲೆವನ್ ಪಂಜಾಬ್ ಬೌಲರ್ ಗಳನ್ನೂ ರಹಾನೆ ಶ್ಲಾಘಿಸಿದ್ದಾರೆ.

1987ರಲ್ಲಿ ಕ್ರೀಡಾಸ್ಫೂರ್ತಿ ಮೆರೆದಿದ್ದ ವಾಲ್ಶ್
ಇತಿಹಾಸದ ಪುಟಗಳಿಗೆ ಜಾರಿದರೆ, ಇಂಥದೇ ಘಟನೆ 1987ರಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದಿತ್ತು. ಪಾಕಿಸ್ತಾನಕ್ಕೆ ಕಡೆಯ ಓವರ್ ನಲ್ಲಿ 14 ರನ್ ಬೇಕಿದ್ದವು. ಕೋರ್ಟ್ನಿ ವಾಲ್ಶ್ ಅವರು ಬೌಲಿಂಗ್ ಮಾಡುತ್ತಿದ್ದರು. ಅಬ್ದುಲ್ ಖಾದರ್ ಮತ್ತು ಸಲೀಂ ಜಾಫರ್ ಅವರು ಬ್ಯಾಟಿಂಗ್ ಮಾಡುತ್ತಿದ್ದರು. ಇಬ್ಬರೂ ಎರಡು ಚೆಂಡಿನಲ್ಲಿ ಒಂದೊಂದು ರನ್ ತೆಗೆದಿದ್ದರು. ಕಡೆಯ 4 ಚೆಂಡಿನಲ್ಲಿ ಬೇಕಿದ್ದು 12 ರನ್ ಗಳು. ಖಾದರ್ ಅವರು ಎರಡು ರನ್ ತೆಗೆದು, ನಾಲ್ಕನೇ ಚೆಂಡಿನಲ್ಲಿ ಭರ್ಜರಿ ಸಿಕ್ಸರ್ ಎತ್ತಿದ್ದರು. ಕಡೆಯ ಚೆಂಡಿನಲ್ಲಿ ಬೇಕಿದ್ದು 2 ರನ್ ಮಾತ್ರ. ವಾಲ್ಶ್ ಬೌಲಿಂಗ್ ಮಾಡಲು ಓಡಿ ಕ್ರೀಸ್ ಬಳಿ ಬರುತ್ತಿರುವಾಗಲೇ ಜಾಫರ್ ಅರ್ಧ ಪಿಚ್ ಓಡಿಬಿಟ್ಟಿದ್ದರು. ವಾಲ್ಶ್ ರನೌಟ್ ಮಾಡಿದ್ದರೆ ವೆಸ್ಟ್ ಇಂಡೀಸ್ ಫೈನಲ್ ತಲುಪುತ್ತಿತ್ತು. ಆದರೆ, ವಾಲ್ಶ್ ಹಾಗೆ ಮಾಡಲಿಲ್ಲ. ಕ್ರೀಡಾಸ್ಫೂರ್ತಿ ಮೆರೆದು ಎಲ್ಲರಿಂದ ಶ್ಲಾಘನೆಗೊಳಗಾಗಿದ್ದರು. ವೆಸ್ಟ್ ಇಂಡೀಸ್ ಸೋತಿದ್ದರೂ ವಾಲ್ಶ್ ಗೆದ್ದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications