
ವೈಝಾಗ್, ಮೇ 10: ಸೆಮಿಫೈನಲ್ಸ್ ಮಹತ್ವ ಪಡೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಇಂಡಿಯನ್ ಪ್ರೀಮಿಯರ್ ಲೀಗ್ 2019ರ 2ನೇ ಕ್ವಾಲಿಫೈಯರ್ ಪಂದ್ಯ ವೀಕ್ಷಣೆಗೆ ಎಲ್ಲರೂ ಕಾದು ಕುಳಿತಿದ್ದಾರೆ.
ಇದೇ ವೇಳೆ ಚೆನ್ನೈ ಸೂಪರ್ ಸೂಪರ್ ಕಿಂಗ್ಸ್ ತಂಡಕ್ಕೆ ಫೈನಲ್ ತಲುಪಲು ಏನು ಮಾಡಬೇಕೆಂಬುದಕ್ಕೆ ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಸರ್ ವಿವಿಯನ್ ರಿಚರ್ಡ್ಸ್ ಉಪಯುಕ್ತ ಸಲಹೆ ಮೂಲಕ ಗೆಲುವಿನ ಫಾರ್ಮುಲಾವನ್ನು ಹೇಳಿಕೊಟ್ಟಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಹುತೇಕ ಯುವ ಆಟಗಾರರಿಂದ ಕೂಡಿದ್ದು 2012ರ ಬಳಿಕ ಇದೇ ಮೊದಲ ಬಾರಿ ಐಪಿಎಲ್ ಪ್ಲೇ ಆಫ್ಸ್‌ಗೆ ಪ್ರವೇಶ ಪಡೆದಿದೆ. ಇದೀಗ ಚೊಚ್ಚಲ ಪ್ರಶಸ್ತಿ ಗೆಲುವಿಗಾಗಿ ಫೈನಲ್‌ಗೆ ಅರ್ಹತೆ ಪಡೆಯಲು ಕಳೆದ ಬಾರಿಯ ಚಾಂಪಿಯನ್ಸ್ ಮತ್ತು ಮೂರು ಬಾರಿ ಟ್ರೋಫಿ ಎತ್ತಿ ಹಿಡಿದಿರುವ ಸೂಪರ್ ಕಿಂಗ್ಸ್ ಎದುರು ಇಲ್ಲಿನ ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ಕಣಕ್ಕಿಳಿಯಲಿದೆ.
"ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಹೊಸ ಹುರುಪಿನೊಂದಿಗೆ ಕಾಣಿಸಿಕೊಂಡ ತಂಡವಾಗಿದೆ. ಹೀಗಾಗಿ ಫೈನಲ್ಸ್ ಅರ್ಹತೆಗಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೆಣಸುತ್ತಿರುವುದು ಕಣ್ಣಿಗೆ ಹಬ್ಬವೇ ಸರಿ,'' ಎಂದು ರಿಚರ್ಡ್ಸ್ ಮಾಧ್ಯಮ ವೊಂದಕ್ಕೆ ಬರೆದಿರುವ ತಮ್ಮ ಲೇಖನವೊಂದರಲ್ಲಿ ಹೇಳಿದ್ದಾರೆ.
ಕ್ರಿಕೆಟ್: ಕೊಹ್ಲಿ ಮತ್ತು ಧೋನಿ ಬಗ್ಗೆ ಕಪಿಲ್ ದೇವ್ ಹೇಳಿದ್ದೇನು?
"ಸಿಎಸ್‌ಕೆ ತಂಡವು ಡ್ವೇನ್ ಬ್ರಾವೋ ಅವರನ್ನು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವಂತೆ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ತಮ್ಮ ಸಾಮರ್ಥ್ಯವನ್ನು ಮಿಂಚಿನ ಸಂಚಲನದಂತೆ ಸಹ ಆಟಗಾರರಿಗೂ ತುಂಬಬಲ್ಲ ಆಟಗಾರ ಅವರು. ಇದರಿಂದ ಇಡೀ ತಂಡಕ್ಕೆ ಇನ್ನಿಲ್ಲದ ಶಕ್ತಿ ಬಂದಂತಾಗುತ್ತದೆ,'' ಎಂದು ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವಿನ ಫಾರ್ಮುಲಾ ಹೇಳಿಕೊಟ್ಟಿದ್ದಾರೆ.
ಇನ್ನು ಇತ್ತಂಡಗಳ ಬಲಾಬಲವನ್ನು ಹೋಲಿಕೆ ಮಾಡಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊಂಚ ಬಲಿಷ್ಠವಾಗಿದೆ ಎಂಬುದು ಎರಡು ಬಾರಿಯ ವಿಶ್ವ ಚಾಂಪಿಯನ್ ನಾಯಕನ ಅಭಿಪ್ರಾಯವಾಗಿದೆ.
"ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಪಂದ್ಯವನ್ನು ಗೆಲ್ಲುವ ಫೇವರಿಟ್ ಆಗಿದೆ. ಟೂರ್ನಿಯ ಅಂತ್ಯದ ಹೊತ್ತಿನಲ್ಲೂ ತಂಡ ಉತ್ತಮ ಚೈತನ್ಯದಿಂದ ಕೂಡಿರುವುದೇ ಇದಕ್ಕೆ ಕಾರಣ. ಇದು ಡೆಲ್ಲಿ ತಂಡದ ಯುವ ಪ್ರತಿಭೆಗಳು ಮತ್ತು ಸೂಪರ್ ಕಿಂಗ್ಸ್‌ನ ಅನುಭವಿ ಆಟಗಾರರ ನಡುವಣ ಪೈಪೋಟಿ ಎಂದೇ ಹೇಳಬಹುದು. ಯುವ ಪಡೆಯಲ್ಲಿನ ಚೈತನ್ಯ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ,'' ಎಂದು ರಿಚರ್ಡ್ಸ್ ಅಭಿಪ್ರಾಯ ಪಟ್ಟಿದ್ದಾರೆ.
ನಿನಗೆ ಚಿಕಿತ್ಸೆ ಅಗತ್ಯವಿದೆ, ಪಾಕಿಸ್ತಾನಕ್ಕೆ ಬಾ: ಗಂಭೀರ್‌ಗೆ ಅಫ್ರಿದಿ ಮತ್ತೆ ಟಾಂಗ್
ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿ ಕ್ವಾಲಿಫೈಯರ್ 1 ಪಂದ್ಯದಕ್ಕೆ ಅರ್ಹತೆ ಪಡೆದಿತ್ತು. ಆದರೆ, ಮುಂಬಯಿ ಇಂಡಿಯನ್ಸ್ ಎದುರು ಸೋಲನುಭವಿಸಿದ ಪರಿಣಾಮ ಕ್ವಾಲಿಫೈಯರ್ 2 ಪಂದ್ಯದಲ್ಲಿ ಫೈನಲ್ ತಲುಪುವ ಟಿಕೆಟ್‌ಗಾಗಿ ಡೆಲ್ಲಿ ಎದುರು ಪೈಪೋಟಿ ನಡೆಸಲಿದೆ. ಮತ್ತೊಂದೆಡೆ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಎಲಿಮಿನೇಟರ್ ಪಂದ್ಯಕ್ಕೆ ಅರ್ಹತೆ ಪಡೆದು, ಅಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 2 ವಿಕೆಟ್‌ಗಳ ಜಯ ದಾಖಲಿಸಿ ಸೆಮಿಫೈನಲ್ ಮಹತ್ವದ ಕ್ವಾಲಿಫೈಯರ್ 2 ಪಂದ್ಯಕ್ಕೆ ಮುನ್ನಡೆದಿದೆ.