For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಗಮನ ಸೆಳೆದ ಭಾರತದ 5 ಯುವ ಪ್ರತಿಭೆಗಳು

IPL 2020: Five Young Indian Batsmen Impressed With Performance

ಪ್ರಸಕ್ತ ಸಾಲಿನ ಐಪಿಎಲ್ ವಿವಿಧ ಕಾರಣಗಳಿಂದ ಗಮನ ಸೆಳೆಯುತ್ತಿದೆ. ಅದರಲ್ಲಿ ಮುಖ್ಯವಾಗಿರುವುದು ಭಾರತೀಯ ಆಟಗಾರರ ಪ್ರದರ್ಶನ. ಇದುವರೆಗಿನ ಪಂದ್ಯಗಳನ್ನು ನೋಡಿದಾಗ ಪ್ರತಿತಂಡದಲ್ಲಿಯೂ ಗಮನ ಸೆಳೆಯುವ ಪ್ರದರ್ಶನ ನೀಡಿರುವುದು ಭಾರತೀಯ ಆಟಗಾರರು. ವಿದೇಶಿ ಆಟಗಾರರಲ್ಲಿ ಕೆಲವರು ಮಾತ್ರ ಮಿಂಚಿದ್ದಾರೆ. ಆದರೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಭಾರತೀಯರೇ ಮುಂದು. ಅದರಲ್ಲಿಯೂ ಜಗತ್ತಿನ ಅತ್ಯುತ್ತಮ ಬೌಲರ್‌ಗಳ ಸಾಲಿನಲ್ಲಿರುವ ಬೌಲರ್‌ಗಳನ್ನು ಭಾರತದ ಯುವ ಬ್ಯಾಟ್ಸ್‌ಮನ್‌ಗಳು ಲೀಲಾಜಾಲವಾಗಿ ಎದುರಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಕೆ.ಎಲ್. ರಾಹುಲ್, ಮಯಾಂಕ್ ಅಗರವಾಲ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶಿವಮ್ ಮಾವಿ, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್ ಸೇರಿದಂತೆ ಭಾರತದ ಅನೇಕ ಕ್ರಿಕೆಟಿಗರು ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ. ಆದರೆ ಅವರ ನಡುವೆ ಭಾರತದ ಐವರು ಯುವ ಪ್ರತಿಭೆಗಳು ಬ್ಯಾಟಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಬಿರುಸಿನ ಬ್ಯಾಟಿಂಗ್ ಜತೆಗೆ, ಈ ಪ್ರತಿಭೆಗಳ ಬ್ಯಾಟಿಂಗ್ ಶೈಲಿ, ತಾಳ್ಮೆ, ಸಂಯಮ ಹಾಗೂ ಕೌಶಲ ಮೆಚ್ಚುಗೆಗೆ ವ್ಯಕ್ತವಾಗಿದೆ. ಹೆಚ್ಚು ನಿರೀಕ್ಷೆ ಇರಿಸಿಕೊಂಡಿದ್ದ ಅನೇಕ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿಲ್ಲ. ಇನ್ನೂ ಅನೇಕ ಪಂದ್ಯಗಳು ಬಾಕಿ ಇರುವುದರಿಂದ ಮತ್ತಷ್ಟು ಹೊಸ ಪ್ರತಿಭೆಗಳು ಬೆಳಕಿಗೆ ಬರಬಹುದು. ಮುಂದೆ ಓದಿ...

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್

25 ವರ್ಷದ ಸಂಜು ಸ್ಯಾಮ್ಸನ್, ಈ ಹಿಂದೆಯೂ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿಸಿ, ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗಿದ್ದರು. ಆದರೆ ಅವರಿಗೆ ಸ್ಥಿರ ಪ್ರದರ್ಶನ ನೀಡಲು ಸರಿಯಾದ ಅವಕಾಶವೇ ಸಿಗಲಿಲ್ಲ. ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿರುವ ಅವರು ಮೂರು ಪಂದ್ಯಗಳಿಂದ 167 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 200ರಷ್ಟಿದೆ. ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಅದೂ ಒತ್ತಡದ ಸನ್ನಿವೇಶದಲ್ಲಿ ಅವರು ಯಾವುದೇ ಉದ್ವೇಗಕ್ಕೆ ಒಳಗಾಗದೆ ಆಡಿದ ರೀತಿ ಮೆಚ್ಚುಗೆಗೆ ಒಳಗಾಗಿದೆ.

ಐಪಿಎಲ್ 2020: ಕನ್ನಡಿಗರೇ ತುಂಬಿರುವ ಕಿಂಗ್ಸ್ ‍XI ಪಂಜಾಬ್ ತಂಡಕ್ಕೆ ಕಾಡುತ್ತಿದೆ 'ಆರ್‌ಸಿಬಿ'ಯ ಸಮಸ್ಯೆ!

ರಾಹುಲ್ ತೆವಾಟಿಯಾ

ರಾಹುಲ್ ತೆವಾಟಿಯಾ

ಈ ಬಾರಿಯ ಟೂರ್ನಿಯಲ್ಲಿ ಅಚ್ಚರಿ ಮೂಡಿಸಿದ ಆಟಗಾರನೆಂದರೆ ರಾಜಸ್ಥಾನ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ. ಮೂರು ಪಂದ್ಯಗಳಿಂದ ಒಟ್ಟು 77 ರನ್ ಗಳಿಸಿದ್ದಾರೆ. ರಾಹುಲ್ ತೆವಾಟಿಯಾ ಅವರನ್ನು ತಂಡಕ್ಕೆ ತೆಗೆದುಕೊಂಡಿದ್ದು ಲೆಗ್ ಸ್ಪಿನ್ನರ್ ಆಗಿ. ಆದರೆ ಅವರು ನೆಟ್‌ನಲ್ಲಿ ಚೆಂಡನ್ನು ಎದುರಿಸುತ್ತಿದ್ದ ರೀತಿ ನೋಡಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬಡ್ತಿ ನೀಡಿ ಕಳುಹಿಸಲಾಗಿತ್ತು. ಆರಂಭದಲ್ಲಿ ತೀರಾ ತಿಣುಕಾಡಿದ್ದ ರಾಹುಲ್, ಕೊನೆಗೆ ಶೆಲ್ಡನ್ ಕಾಟ್ರಲ್ ಅವರಂತಹ ವಿಶ್ವ ದರ್ಜೆಯ ಬೌಲರ್‌ನ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸಿ ರಾತ್ರೋ ರಾತ್ರಿ ಹೀರೋ ಆಗಿಬಿಟ್ಟರು. ಸದ್ಯಕ್ಕೆ ಈ ಆವೃತ್ತಿಯಲ್ಲಿ ಬೆರುಗು ಮೂಡಿಸಿರುವ ಆಟಗಾರ ಅವರು.

ಇಶಾನ್ ಕಿಶನ್

ಇಶಾನ್ ಕಿಶನ್

ಅಂಡರ್ 19 ಟೂರ್ನಿಗಳ ಸಮಯದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಮುಂಬೈನ ಇಶಾನ್ ಕಿಶನ್, ಭಾರತ ಕಡೆಗಣಿಸಿರುವ ಪ್ರತಿಭೆಗಳಲ್ಲಿ ಒಬ್ಬರು. ಈ ಎಡಗೈ ಬ್ಯಾಟ್ಸ್‌ಮನ್‌ಗೆ ಮೊದಲ ಪಂದ್ಯದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹಾಗೆಯೇ ಆರ್‌ಸಿಬಿ ವಿರುದ್ಧ ಸಿಕ್ಕ ಅವಕಾಶದಲ್ಲಿ ತಾವೊಬ್ಬ ಅದ್ಭುತ ಆಟಗಾರ ಎಂಬುದನ್ನು ಸಾಬೀತುಪಡಿಸಿಕೊಂಡರು. ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮುಂಬೈ ಇಂಡಿಯನ್ಸ್ ಸೋಲುವುದು ಖಚಿತ ಎಂದೇ ಎಲ್ಲರೂ ಭಾವಿಸಿದ್ದ ಪಂದ್ಯವನ್ನು ಗೆಲುವಿನ ಅಂಚಿಕೆ ಕೊಂಡೊಯ್ದರು. 99 ರನ್ ಗಳಿಸಿದ್ದಾಗ ಸೆಂಚುರಿಗಿಂತಲೂ ತಂಡವನ್ನು ಗೆಲ್ಲಿಸಬೇಕೆಣಬ ಛಲದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದ್ದರು. ಎರಡು ಇನ್ನಿಂಗ್ಸ್‌ಗಳಿಂದ 140 ಸ್ಟ್ರೈಕ್‌ರೇಟ್‌ನಲ್ಲಿ ಅವರು 127 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಅವರ ಪಡೆಯಲ್ಲಿ ಕಿಶನ್ ಅವರಿಂದ ಮತ್ತಷ್ಟು ಅಮೋಘ ಇನ್ನಿಂಗ್ಸ್‌ಗಳನ್ನು ನಿರೀಕ್ಷಿಸಬಹುದು.

ಐಪಿಎಲ್ ಇತಿಹಾಸದಲ್ಲೇ ಕೆಟ್ಟ ದಾಖಲೆಗೆ ಸಾಕ್ಷಿಯಾದ ಸಿಎಸ್ಕೆ ನಾಯಕ ಧೋನಿ

ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್

ಭಾರತಕ್ಕೆ ಮತ್ತೊಬ್ಬ ಯುವರಾಜ್ ಸಿಂಗ್ ಸಿಕ್ಕಿದ್ದಾನೆ ಎಂದು ಅನೇಕರು ಹೇಳಿದ್ದು ಕೇರಳದಿಂದ ಕರ್ನಾಟಕಕ್ಕೆ ಬಂದು ಕನ್ನಡಿಗರೇ ಆಗಿರುವ ದೇವದತ್ ಪಡಿಕ್ಕಲ್ ಅವರ ಬ್ಯಾಟಿಂಗ್ ಕೌಶಲ ಕಂಡು. 20 ವರ್ಷದ ಪಡಿಕ್ಕಲ್, ಪ್ರಸಕ್ತ ವರ್ಷ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿಯೇ ಅರ್ಧ ಶತಕ ಗಳಿಸಿದರು. ಮೂರು ಪಂದ್ಯಗಳಿಂದ ಎರಡು ಅರ್ಧ ಶತಕಗಳೊಂದಿಗೆ 111 ರನ್ ಗಳಿಸಿರುವ ಪಡಿಕ್ಕಲ್, ಮುಂದಿನ ದಿನಗಳಲ್ಲಿ ಭಾರತಕ್ಕೆ ಆರಂಭಿಕ ಆಟಗಾರನಾಗಿ ಆಯ್ಕೆಯಾದರೂ ಅಚ್ಚರಿಪಡಬೇಕಿಲ್ಲ. ಐಪಿಎಲ್ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ತೋರಿಸಿರುವ ಪ್ರದರ್ಶನ ಸಾಮಾನ್ಯದ್ದಲ್ಲ.

ಶುಬ್‌ಮನ್ ಗಿಲ್

ಶುಬ್‌ಮನ್ ಗಿಲ್

ಕಫಲ್ಕತಾ ನೈಟ್ ರೈಡರ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಇಯಾನ್ ಮಾರ್ಗನ್, ಆಂಡ್ರೆ ರಸೆಲ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ ಅವರೊಂದಿಗೆ ಪರಿಗಣಿಸಬೇಕಾದ ಮತ್ತೊಬ್ಬ ಆಟಗಾರ 21 ವರ್ಷದ ಶುಬ್‌ಮನ್ ಗಿಲ್. ಮೂರು ಇನ್ನಿಂಗ್ಸ್‌ಗಳಲ್ಲಿ ಗಿಲ್ 115 ಸ್ಟ್ರೈಕ್ ರೇಟ್‌ನಲ್ಲಿ 124 ರನ್ ಗಳಿಸಿದ್ದಾರೆ. ಇದರಲ್ಲಿ ಅಜೇಯ 70 ರನ್ ಸೇರಿದೆ. ಶುಬ್ ಮನ್ ಗಿಲ್ ಅಬ್ಬರದಾಟ ಆಡುವ ಆಟಗಾರನಲ್ಲ. ಟಿ20ಯ ಇತರೆ ಆಟಗಾರರಂತೆ ಬೌಂಡರಿ ಸಿಕ್ಸರ್ ಮಳೆ ಸುರಿಸುವುದಿಲ್ಲ. ಆದರೆ ತಂಡಕ್ಕೆ ಅಗತ್ಯವಾದ ಬುನಾದಿಯನ್ನು ಹಾಕಿಕೊಡಬಲ್ಲರು. ಕೆಕೆಆರ್‌ನ ಎರಡು ಗೆಲುವುಗಳಲ್ಲಿ ಅವರ ಪಾತ್ರ ಇದ್ದೇ ಇದೆ. ಮುಖ್ಯವಾಗಿ ಅವರು ಚೆಂಡನ್ನು ಅತ್ಯಂತ ನಿಖರವಾಗಿ ಎದುರಿಸಬಲ್ಲರು. ಕ್ಲಾಸ್, ತಾಳ್ಮೆ, ಒತ್ತಡವನ್ನು ನಿಭಾಯಿಸುವ ಶಕ್ತಿ ಅವರಿಗಿದೆ.

ಅವಕಾಶ ಕೊಟ್ಟು ಸಾಕಾಯ್ತು, ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನ ತಂಡದಿಂದ ಕೈ ಬಿಡುವ ಸಮಯ ಬಂದಾಯ್ತು!

Story first published: Saturday, October 3, 2020, 9:26 [IST]
Other articles published on Oct 3, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+