ಅವಕಾಶ ಪಡೆಯದ ಕ್ರಿಸ್ ಗೇಲ್: ಸ್ಫೋಟಕ ಆಟಗಾರನ ಯುಗಾಂತ್ಯ?
ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಮೂರರಲ್ಲಿ ಸೋಲು ಕಂಡಿರುವ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತೀವ್ರ ಟೀಕೆಗೆ ಒಳಗಾಗಿದೆ. ಮುಖ್ಯವಾಗಿ ತಂಡದ ಆಡುವ ಹನ್ನೊಂದರ ಬಳಗದ ಆಯ್ಕೆಯಲ್ಲಿ ಕೆಎಲ್ ರಾಹುಲ್ ಎಡವುತ್ತಿದ್ದಾರೆ. ಪ್ರಮುಖ ಅಟಗಾರರ ವೈಫಲ್ಯ ತಂಡವನ್ನು ಕಾಡುತ್ತಿದೆ. ಇನ್ನೊಂದೆಡೆ ತಮ್ಮ ಭರ್ಜರಿ ಹೊಡೆತಗಳಿಂದ ಹೆಸರಾಗಿರುವ ಕ್ರಿಸ್ ಗೇಲ್ ತಂಡದಲ್ಲಿದ್ದರೂ ಅವರನ್ನು ಇದುವರೆಗೂ ಬಳಸಿಕೊಂಡಿಲ್ಲ.
ಟಿ20ಯ ದೈತ್ಯ ಕ್ರಿಸ್ ಗೇಲ್ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಕಾದಿದ್ದಾರೆ. ಪ್ರತಿ ಬಾರಿಯ ಐಪಿಎಲ್‌ನಲ್ಲಿಯೂ ಮೋಡಿ ಮಾಡುತ್ತಿದ್ದ ಅವರಿಗೆ ಆಡುವ ಅವಕಾಶ ಸಿಗುತ್ತಿಲ್ಲ. ಈಗ ಸತತ ಸೋಲುಗಳು ಕ್ರಿಸ್ ಗೇಲ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ತೋರಿಸಿದೆ. ಆದರೆ ಈ ತಂಡಕ್ಕೆ ಮುಖ್ಯವಾಗಿ ಕಾಡುತ್ತಿರುವುದು ಸಮರ್ಥ ಆಲ್‌ರೌಂಡರ್ ಕೊರತೆ. ಅದರಲ್ಲಿಯೂ ಡೆತ್ ಓವರ್‌ಗಳನ್ನು ಎಸೆಯಬಲ್ಲ ಬೌಲರ್ ಅನುಪಸ್ಥಿತಿ. ಇಲ್ಲಿ ಕ್ರಿಸ್ ಗೇಲ್ ಇದ್ದರೂ ಅವರ ಅನುಪಸ್ಥಿತಿ ಅಷ್ಟಾಗಿ ಬಾಧಿಸಿಲ್ಲ. ಅಪಾರ ಅಭಿಮಾನಿಗಳನ್ನು ಹೊಂದಿರುವ ಕ್ರಿಸ್ ಗೇಲ್ ಆಟ ನೀಡುವ ಗಮ್ಮತ್ತೇ ಬೇರೆ. ಆದರೆ ಈಗಿನ ಸನ್ನಿವೇಶದಲ್ಲಿ ಅವರಿಗೆ ಅವಕಾಶ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂದೆ ಓದಿ...

ಆರಂಭಿಕ ಜಾಗ ಖಾಲಿ ಇಲ್ಲ
ಐಪಿಎಲ್ ಟೂರ್ನಿಗಳಲ್ಲಿ ಕ್ರಿಸ್ ಗೇಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ. ಕೆಲವು ಪಂದ್ಯಗಳಲ್ಲಿ ಮೂರು ಹಾಗೂ ಮಧ್ಯಮ ಕ್ರಮಾಂಕದಲ್ಲಿಯೂ ಆಡಿದ್ದಾರೆ. ಆದರೆ ತಂಡಕ್ಕೆ ಅವರ ಕೊಡುಗೆ ಸಿಗಬೇಕೆಂದರೆ ಅವರು ಆರಂಭಿಕರಾಗಿ ಬಂದಾಗ ಮಾತ್ರ ಸಾಧ್ಯ. ಕಿಂಗ್ಸ್ ಇಲೆವೆನ್ ತಂಡದಲ್ಲಿ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರವಾಲ್ ಬ್ಯಾಟಿಂಗ್ ಆರಂಭಿಸುತ್ತಿದ್ದಾರೆ. ಈ ಜೋಡಿ ಅತ್ಯಂತ ಯಶಸ್ವಿ ಎನಿಸಿದೆ. ಇಬ್ಬರೂ ತಲಾ ಒಂದೊಂದು ಶತಕ, ಅರ್ಧಶತಕಗಳನ್ನು ಬಾರಿಸಿದ್ದಾರೆ. ಹೀಗಿರುವಾಗ ಆರಂಭಿಕ ಸ್ಥಾನಕ್ಕೆ ಕ್ರಿಸ್ ಗೇಲ್ ಅವರನ್ನು ತರುವುದು ಕಷ್ಟ.
ಐಪಿಎಲ್ 2020: ಗಮನ ಸೆಳೆದ ಭಾರತದ 5 ಯುವ ಪ್ರತಿಭೆಗಳು

ಕ್ರಮಾಂಕದ ಗೊಂದಲ
ಒಂದು ವೇಳೆ ಕ್ರಿಸ್ ಗೇಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದರೆ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಬೇಕು. ಆರಂಭಿಕರಾಗಿ ಆಡಿಸಬೇಕೆಂದರೆ ಕೆಎಲ್ ರಾಹುಲ್ ಅಥವಾ ಮಯಾಂಕ್ ಅಗರವಾಲ್ ತ್ಯಾಗ ಮಾಡಬೇಕಾಗುತ್ತದೆ. ಐಪಿಎಲ್ ಟೂರ್ನಿಯ ಆರೇಂಜ್ ಕ್ಯಾಪ್ ರಾಹುಲ್ ಮತ್ತು ಮಯಾಂಕ್ ನಡುವೆಯೇ ಓಡಾಡುತ್ತಿದೆ. ಈಗಾಗಲೇ ಸಾಕಷ್ಟು ಯಶಸ್ಸು ಕಂಡಿರುವ ಈ ಜೋಡಿಯಲ್ಲಿ ಬದಲಾವಣೆ ಮಾಡಿದರೆ ತಂಡದ ಸಮತೋಲನ ಮತ್ತಷ್ಟು ತಪ್ಪುತ್ತದೆ.

ಮ್ಯಾಕ್ಸ್ ವೆಲ್ ಜಾಗವೇ ಆಯ್ಕೆ
ಸತತ ವೈಫಲ್ಯ ಕಾಣುತ್ತಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಜಾಗಕ್ಕೆ ಕ್ರಿಸ್ ಗೇಲ್ ಅವರನ್ನು ಕರೆತರುವ ಆಯ್ಕೆ ಮಾತ್ರ ಉಳಿದಿದೆ. ಹೊಸ ಚೆಂಡನ್ನು ಎದುರಿಸುವಲ್ಲಿ ಸಮರ್ಥರಾದ ಗೇಲ್, ಮ್ಯಾಕ್ಸ್ ವೆಲ್ ಅವರಂತೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ನಿರೀಕ್ಷಿತ ಪ್ರದರ್ಶನ ನೀಡುತ್ತಾರೆಯೇ ಎಂಬ ಅನುಮಾನ ಮೂಡಿದೆ. ಅಲ್ಲದೆ, ಕಿಂಗ್ಸ್ ಇಲೆವೆನ್ ಈ ಬಾರಿ ಫೀಲ್ಡಿಂಗ್‌ನಲ್ಲಿ ಹೆಚ್ಚು ಗಮನ ಸೆಳೆದಿದೆ. 41 ವರ್ಷದ ಗೇಲ್ ಫೀಲ್ಡಿಂಗ್‌ನಲ್ಲಿ ಆ ಚುರುಕುತನ ಪ್ರದರ್ಶಿಸಲಾರರು.
ಅವಕಾಶ ಕೊಟ್ಟು ಸಾಕಾಯ್ತು, ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನ ತಂಡದಿಂದ ಕೈ ಬಿಡುವ ಸಮಯ ಬಂದಾಯ್ತು!

ಸೂಚನೆ ನೀಡುತ್ತಿರುವ ಗೇಲ್
'ಕ್ರಿಸ್ ಗೇಲ್ ಆಡುವಾಗ ಅಥವಾ ನಮಗೆ ಮಾರ್ಗದರ್ಶನ ನೀಡುವಲ್ಲಿ ಇರಬಹುದು, ಅವರು ಕಿಂಗ್ಸ್ ಇಲೆವೆನ್ ತಂಡದ ಅವಿಭಾಜ್ಯ ಅಂಗವಾಗಿರುತ್ತಾರೆ. ಅವರು ನಮ್ಮೆಲ್ಲರ ಜತೆ ಮಾತನಾಡುತ್ತಿರುತ್ತಾರೆ. ಬ್ಯಾಟ್ಸ್‌ಮನ್‌ಗಳ ಸಭೆಯಲ್ಲಿ ಸಾಕಷ್ಟು ಸಲಹೆಗಳನ್ನು ನೀಡುತ್ತಾರೆ' ಎಂದು ಮಯಾಂಕ್ ಅಗರವಾಲ್ ಹೇಳಿದ್ದರು. ಇದು ಕ್ರಿಸ್ ಗೇಲ್ ಮೈದಾನದ ಹಿಂದಿನ ಚಟುವಟಿಕೆಗಳಿಗೆ ಅವರು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಸುಳಿವು ನೀಡಿದೆ.

ತಂಡಕ್ಕೆ ಬರಲಿದ್ದಾರಾ ಗೇಲ್?
ಕ್ರಿಸ್ ಗೇಲ್ ಜಗತ್ತಿನ ಎಂತಹ ಬೌಲರ್‌ಅನ್ನೂ ಚೆಂಡಾಡಬಲ್ಲರು. ಅವರಂತಹ ಆಟಗಾರ ನಮ್ಮ ತಂಡದಲ್ಲಿರುವುದು ನಮ್ಮ ಅದೃಷ್ಟ. ಅವರಿಂದ ಸಾಕಷ್ಟು ಕಲಿಯುತ್ತಿದ್ದೇನೆ ಎಂದು ಕೆಎಲ್ ರಾಹುಲ್ ಹೇಳಿದ್ದರು. ಕ್ರಿಸ್ ಗೇಲ್ ಸೂಕ್ತ ಸಮಯದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ಪ್ರಶ್ನೆ, ಬೆಂಬಲಕ್ಕೆ ನಿಂತ ಯುವರಾಜ್

ಗೇಲ್ ಯುಗಾಂತ್ಯ?
ಈ ನಾಲ್ಕು ಪಂದ್ಯಗಳ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಗೇಲ್ ಅವರನ್ನು ಸೇರ್ಪಡೆ ಮಾಡಿಕೊಂಡರೆ ಅವರ ಕ್ರಿಕೆಟ್ ವೃತ್ತಿ ಬದುಕಿನ ಕುರಿತಾದ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಅದನ್ನು ಸಾಬೀತುಪಡಿಸಿಕೊಳ್ಳಬೇಕಾದ ಜವಾಬ್ದಾರಿ ಗೇಲ್ ಅವರ ಮೇಲಿದೆ. ಒಂದು ವೇಳೆ ಈ ಎರಡೂ ನಡೆಯದೆ ಹೋದರೆ, ಕ್ರಿಕೆಟ್ ಕಂಡ ಸ್ಫೋಟಕ ಆಟಗಾರನೊಬ್ಬನ ಯುಗದ ಅಂತ್ಯ ಎಂದೇ ಹೇಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications