
ಐಪಿಎಲ್ 15ನೇ ಆವೃತ್ತಿಯನ್ನು ವಿರೋಚಿತ ಸೋಲಿನಿಂದಿಗೆ ಆರಂಭಿಸಿದರೂ ಎರಡನೇ ಪಂದ್ಯದಲ್ಲಿ ಅದ್ಭುತ ರೀತಿಯಲ್ಲಿ ಗೆಲ್ಲುವ ಮೂಲಕ ಆರ್‌ಸಿಬಿ ಉತ್ತಮ ಆರಂಭವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ಫಾಪ್ ಡು ಪ್ಲೆಸಿಸ್ ಬಳಗ ಗೆಲುವಿನ ಲಯವನ್ನು ಮುಂದುವರಿಸುವ ಉತ್ಸಾಹದಲ್ಲಿದೆ. ಆದರೆ ಈ ಬಾರಿ ಆರ್‌ಸಿಬಿ ತಂಡಕ್ಕೆ ಎದುರಾಗಿರುವುದು ಟೂರ್ನಿಯಲ್ಲಿ ಅಮೋಘ ಆರಂಭ ಪಡೆದಿರುವ ರಾಜಸ್ಥಾನ್ ರಾಯಲ್ಸ್ ತಂಡ. ಸತತ ಎರಡು ವಿಜಯ ಸಾಧಿಸಿರುವ ಸಂಜು ಸ್ಯಾಮ್ಸನ್ ಬಳಗದ ವಿರುದ್ಧ ಆರ್‌ಸಿಬಿ ಕಠಿಣ ಪೈಪೋಟಿಯನ್ನು ಎದುರಿಸುವುದರಲ್ಲಿ ಅನುಮಾನವಿಲ್ಲ.
ಸಂಜು ಸ್ಯಾಮ್ಸನ್ ಬಳಗ ಈ ಬಾರಿಯ ಆವೃತ್ತಿಯ ಆರಂಭದ ಎರಡು ಪಂದ್ಯಗಳಲ್ಲಿಯೂ ಸಂಜು ಸ್ಯಾಮ್ಸನ್ ಬಳಗ ಸರ್ವಾಂಗೀಣ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲ ಪಂದ್ಯದಲ್ಲಿ ಮಣಿಸಿದ ಆರ್‌ಆರ್ ತಂಡ ಮತ್ತೊಂದು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ. ಈ ಎರಡೂ ಪಂದ್ಯದಲ್ಲಿಯೂ ಆರ್‌ಆರ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಮಿಂಚಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ.
ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಎರಡೂ ತಂಡಗಳ ಕೆಲ ಆಟಗಾರರು ಕೆಲ ಪ್ರಮುಖ ಮೈಲಿಗಲ್ಲು ಹಾಗೂ ದಾಖಲೆ ಬರೆಯಲಿದ್ದಾರೆ.

*ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಈ ಬಾರಿಯ ಆವೃತ್ತಿಯಲ್ಲಿಯೂ ಉತ್ತಮ ಆರಂಭವನ್ನು ಪಡೆದುಕೊಂಡಿದ್ದಾರೆ. ಇಂದು ನಡೆಯಲಿರುವ ಆರ್‌ಸಿಬಿ ವಿರುದ್ಧದ ಪಮದ್ಯದಲ್ಲಿ ಸಂಜು 81 ರನ್‌ಗಳಿಸಿದರೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಅವರು 5000 ರನ್‌ಗಳ ಮೈಲಿಗಲ್ಲನ್ನು ಪೂರ್ಣಗೊಳಿಸಿದಂತಾಗುತ್ತದೆ.
*ಆರ್‌ಸಿಬಿ ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಇಂದಿನ ಪಂದ್ಯದಲ್ಲಿ ಕೇವಲ ಎರಡು ಬಲಿ ಪಡೆದರೆ ಐಪಿಎಲ್‌ನಲ್ಲಿ 150 ಬಲಿ ಪಡೆದ ಸಾಧನೆ ಮಾಡಿದಂತಾಗುತ್ತದೆ. ಐಪಿಎಲ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ದಿನೇಶ್ ಕಾರ್ತಿಕ್ ಈ ಸಾಧನೆಯನ್ನು ಪೂರೈಸಿದ ಎರಡನೇ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರೆ. ಎಂಎಸ್ ಧೋನಿ ಮಾತ್ರವೇ ಈವರೆಗೆ ಈ ಮೈಲಿಗಲ್ಲು ದಾಟಿದ್ದಾರೆ.
* ಇನ್ನು ದಿನೇಶ್ ಕಾರ್ತಿಕ್‌ಗೆ ಮತ್ತೊಂದು ಪ್ರಮುಖ ಮೈಲಿಗಲ್ಲು ನೆಡುವ ಅವಕಾಶವಿದೆ. ಇಂದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 3 ಸಿಕ್ಸರ್ ಸಿಡಿಸಿದರೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದಂತಾಗುತ್ತದೆ.
ರೋಹಿತ್ ಶರ್ಮಾ ಮುಂಬೈಗೂ ಮೊದಲೇ ಡೆಕ್ಕನ್ ಚಾರ್ಜಸ್ ಕ್ಯಾಪ್ಟನ್ ಆಗ್ಬೇಕಿತ್ತು: ಪ್ರಗ್ಯಾನ್ ಓಜಾ
*ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅದ್ಭುತ ಫಾರ್ಮ್‌ನಲ್ಲಿದ್ದು ಈ ಪಂದ್ಯದಲ್ಲಿ ಎರಡು ಸಿಕ್ಸರ್ ಸಿಡಿಸಿದರೆ ಐಪಿಎಲ್‌ನಲ್ಲಿ 100 ಸಿಕ್ಸರ್ ಸಿಡಿಸಿದಂತಾಗುತ್ತದೆ.
*ರಾಜಸ್ಥಾನ್ ರಾಯಲ್ಸ್ ತಂಡದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಇಂದಿನ ಪಂದ್ಯದಲ್ಲಿ 4 ವಿಕೆಟ್ ಪಡೆದರೆ ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಸಾಧನೆ ಮಾಡಿದಂತಾಗುತ್ತದೆ. ಅಲ್ಲದೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ 5ನೇ ಸ್ಥಾನಕ್ಕೇರಲಿದ್ದಾರೆ.
*ಸಿದ್ಧಾರ್ಥ್ ಕೌಲ್ ಆರ್‌ಸಿಬಿ ತಂಡದಲ್ಲಿದ್ದರೂ ಮೊದಲ ಎರಡು ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಆರ್‌ಆರ್ ವಿರುದ್ಧಧ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿ 3 ವಿಕೆಟ್ ಪಡೆದರೆ ಟಿ20 ಕ್ರಿಕೆಟ್‌ನಲ್ಲಿ ಒಟ್ಟಾರೆ 150 ವಿಕೆಟ್ ಕಬಳಿಸಿದಂತಾಗುತ್ತದೆ.