
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ದಿಢೀರನೆ ರಾಜೇನಾಮೆ ನೀಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ನೂತನ ನಾಯಕನಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ ಆಯ್ಕೆಯಾಗಿದ್ದು, ಈ ಕುರಿತು ಜಡ್ಡು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ವರು ಆಟಗಾರರನ್ನ ರೀಟೈನ್ ಮಾಡಿಕೊಂಡಿತ್ತು. ಎಲ್ಲರಿಗೂ ತುಂಬಾ ಆಶ್ಚರ್ಯ ಮೂಡಿಸಿರುವ ಆಯ್ಕೆಯಾಗಿ ರವೀಂದ್ರ ಜಡೇಜಾ ರೀಟೈನ್ ಆದ ಮೊದಲ ಪ್ಲೇಯರ್ ಆಗಿ ಹೊರಹೊಮ್ಮಿದ್ದರು. ರವೀಂದ್ರ ಜಡೇಜಾ 16 ಕೋಟಿ ರೂಪಾಯಿಗೆ ರೀಟೈನ್ ಆದರು.
ಅದ್ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರು ತಲಾ ಮಹೇಂದ್ರ ಸಿಂಗ್ ಧೋನಿ ರೀಟೈನ್ ಆದ ಎರಡನೇ ಆಟಗಾರನಾಗಿದ್ದು, 12 ಕೋಟಿ ರೂಪಾಯಿಗೆ ಧೋನಿ ರೀಟೈನ್ ಆಗಿದ್ದು ಚೆನ್ನೈ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿತ್ತು. ಆದ್ರೆ ಯಾಕೆ ಈ ಆಯ್ಕೆ ಎಂಬುದಕ್ಕೆ ಇಂದು ಉತ್ತರ ಸಿಕ್ಕಿದೆ. ಧೋನಿ ಐಪಿಎಲ್ ಸೀಸನ್ 15ರ ಆರಂಭಕ್ಕೂ ಮೊದಲೇ ನಾಯಕತ್ವದಿಂದ ಕೆಳಗಿಳಿದಿದ್ದು, ಜಡ್ಡುಗೆ ಪಟ್ಟ ಕಟ್ಟಿದ್ದಾರೆ.
ಸಿಎಸ್‌ಕೆ ನಾಯಕನಾದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಜಡೇಜಾ ವೀಡಿಯೋವನ್ನ ಸಿಎಸ್‌ಕೆ ಅಧಿಕೃತ ಟ್ವಿಟ್ಟರ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದೆ.
'' ತುಂಬಾ ಖುಷಿಯಾಗುತ್ತಿದೆ, ಅದೇ ರೀತಿಯಲ್ಲಿ ದೊಡ್ಡ ಜವಾಬ್ದಾರಿ ಇದೆ. ಏಕೆಂದರೆ ಮಾಹಿ ಭಾಯ್ ದೊಡ್ಡ ಪರಂಪರೆಯನ್ನ ಬೆಳೆಸಿದ್ದಾರೆ, ನಾನು ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಆದ್ರೆ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಮಾಹಿ ಭಾಯ್ ಯಾವಾಗಲೂ ನನ್ನ ಪ್ರಶ್ನೆಗಳಿಗೆ ಉತ್ತರ ನೀಡುವವರಾಗಿದ್ದು, ಏನೇ ಇದ್ದರೂ ಮೊದಲು ಅವರ ಬಳಿಗೆ ತೆರಳುವೆ. ನಿಮ್ಮ ಪ್ರೀತಿ ಮತ್ತು ಹಾರೈಕೆ, ಶುಭಾಶಯಗಳಿಗೆ ಧನ್ಯವಾದಗಳು '' ಎಂದು ಸಿಎಸ್‌ಕೆ ನೂತನ ನಾಯಕ ರವೀಂದ್ರ ಜಡೇಜಾ ಹೇಳಿದ್ದಾರೆ.
ಧೋನಿ ಸಿಎಸ್‌ಕೆ ನಾಯಕತ್ವದ ದಾಖಲೆ
ಮಹೇಂದ್ರ ಸಿಂಗ್ ಧೋನಿ 204 ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ವಹಿಸಿದ್ದಾರೆ. ಇದರಲ್ಲಿ ಚೆನ್ನೈ 121 ಪಂದ್ಯಗಳನ್ನ ಗೆದ್ದಿದ್ದು, 82 ಪಂದ್ಯಗಳನ್ನಷ್ಟೇ ಸೋತಿದೆ. 1 ಪಂದ್ಯ ಯಾವುದೇ ಫಲಿತಾಂಶ ಬಂದಿಲ್ಲ. ಸಿಎಸ್‌ಕೆ ಗೆಲುವಿನ ಸರಾಸರಿ ಶೇಕಡಾ 59.60 ರಷ್ಟಿದೆ.
ಇಷ್ಟಲ್ಲದೆ ಧೋನಿ ನಾಲ್ಕು ಬಾರಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದು, ಎರಡು ಬಾರಿ ಚಾಂಪಿಯನ್ಸ್ ಲೀಗ್‌ನಲ್ಲಿ ಸಿಎಸ್‌ಕೆಗೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ.