ಮಂಗಳವಾರ, ಆಗಸ್ಟ್ 8ರಂದು ಗಯಾನಾದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಪ್ರವಾಸಿ ಭಾರತ ತಂಡ ಗೆಲುವಿನ ಹಳಿಗೆ ಮರಳಿದೆ. ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ ಇನ್ನೂ 2-1 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ಸಾಹಸದಿಂದ ಸರಣಿ ಜೀವಂತವಾಗಿರಿಸಿಕೊಳ್ಳಲು ಸಹಾಯವಾಯಿತು. ಆದರೆ, ಬೌಲಿಂಗ್‌ನಲ್ಲಿ ಎಡಗೈ ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ ಅವರ 3 ವಿಕೆಟ್ ಗಳಿಕೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಮೇಲೆ ದೊಡ್ಡ ಪ್ರಭಾವ ಬೀರಿದೆ.
ವಾಸ್ತವವಾಗಿ, ಕುಲದೀಪ್ ಯಾದವ್ ಭಾರತ ತಂಡದ ನಿಜವಾದ ಪಂದ್ಯ-ವಿಜೇತ ಆಟಗಾರ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ 44 ಎಸೆತಗಳಲ್ಲಿ ಸ್ಫೋಟಕ 83 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿತು.

ಹಲವು ಕಳಪೆ ಪ್ರದರ್ಶನಗಳ ನಂತರ, ಸೂರ್ಯಕುಮಾರ್ ಯಾದವ್ ಅಂತಿಮವಾಗಿ ಸ್ಫೋಟಕ ಬ್ಯಾಟಿಂಗ್ ಮೂಲಕ, ಭಾರತ ತಂಡವನ್ನು ನಿರ್ಣಾಯಕ 7 ವಿಕೆಟ್ ಗೆಲುವಿಗೆ ಮುನ್ನುಡಿ ಬರೆದರು.
ಆದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಮುನ್ನಡೆ ತಂದುಕೊಟ್ಟಿದ್ದು ಸ್ಪಿನ್ನರ್ ಕುಲದೀಪ್ ಯಾದವ್. ಅವರು ನಿರ್ಣಾಯಕ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ವೆಸ್ಟ್ ಇಂಡೀಸ್ ತಂಡವು 160 ರನ್‌ಗಳ ಗಡಿ ದಾಟದಂತೆ ತಡೆದರು.
"ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಅದ್ಭುತ ನೀಡಿದರು. ಆದರೆ ಕುಲದೀಪ್ ಯಾದವ್ ನನಗೆ ನಿಜವಾದ ಮ್ಯಾಚ್ ವಿನ್ನರ್ ಎನಿಸಿದರು. ನಿಕೋಲಸ್ ಪೂರನ್ ಸೇರಿದಂತೆ ಅಗ್ರ ಕ್ರಮಾಂಕದ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು 159 ರನ್‌ಗಳಿಗೆ ನಿಯಂತ್ರಿಸಿದರು, ವೆಲ್ ಡನ್ ಕುಲದೀಪ್," ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
"ನಾನು ಪವರ್‌ಪ್ಲೇನಲ್ಲಿ ಬ್ಯಾಟಿಂಗ್‌ಗೆ ಹೋದಾಗ ನಾನೇ ಆಡುವುದು ನಿಜವಾಗಿಯೂ ಮುಖ್ಯವಾಗಿತ್ತು. ಅದು ತಂಡದ ಮ್ಯಾನೇಜ್‌ಮೆಂಟ್ ಕೂಡ ಬಯಸಿತ್ತು. ನಾನು ರಾಂಪ್ ಮತ್ತು ಸ್ಕೂಪ್ ಸ್ಟ್ರೋಕ್‌ಗಳನ್ನು ಸಾಕಷ್ಟು ಅಭ್ಯಾಸ ಮಾಡಿದ್ದೇನೆ ಮತ್ತು ಅದನ್ನು ಮಾಡಲು ನಾನು ಇಷ್ಟಪಡುತ್ತೇನೆ," ಎಂದು ಸೂರ್ಯಕುಮಾರ್ ಯಾದವ್ ಮೂರನೇ ಟಿ20 ಪಂದ್ಯದ ನಂತರ ಮಾತನಾಡಿದರು.
"ನಾನು ಮತ್ತು ತಿಲಕ್ ದೀರ್ಘಕಾಲ ಒಟ್ಟಿಗೆ ಬ್ಯಾಟ್ ಮಾಡಿದ್ದೇವೆ. ನಾವಿಬ್ಬರೂ ಒಬ್ಬರಿಗೊಬ್ಬರು ಹೇಗೆ ಬ್ಯಾಟ್ ಮಾಡಬೇಕು ಎನ್ನುವುದನ್ನು ತಿಳಿದುಕೊಂಡಿದ್ದೇವೆ. ಅವನು ಬ್ಯಾಟ್ ಮಾಡಿದ ರೀತಿ ನನಗೆ ತುಂಬಾ ಆತ್ಮವಿಶ್ವಾಸವನ್ನು ನೀಡಿತು. ಇನ್ನೊಂದು ತುದಿಯಲ್ಲಿ ತಿಲಕ್ ಅವರಿಂದ ಇದು ಉತ್ತಮ ಬೆಂಬಲ ದೊರೆಯಿತು," ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದರು.
"ಭಾರತವು ಸತತವಾಗಿ ಮೂರು ಟಿ20 ಪಂದ್ಯಗಳನ್ನು ಎಂದಿಗೂ ಕಳೆದುಕೊಂಡಿಲ್ಲ, ಇದು ನನ್ನ ಮನಸ್ಸಿನಲ್ಲಿ ಓಡುತ್ತಿತ್ತು. ನಾವು ತಂಡದ ಸಭೆಯಲ್ಲಿ ಮಾತನಾಡಿದ್ದೆವು, ನಮ್ಮ ನಾಯಕ ಈ ನಾವು ಪಂದ್ಯವನ್ನು ಗೆಲ್ಲಬೇಕು ಎಂದು ಹೇಳಿದರು. ನನಗೆ ಅದನ್ನು ಮಾಡಲು ಸಾಧ್ಯವಾಯಿತು," ಎಂದು ಪಂದ್ಯದ ನಂತರ ಸೂರ್ಯಕುಮಾರ್ ಯಾದವ್ ಹೇಳಿದರು.
ಪ್ರವಾಸಿ ಭಾರತ ತಂಡವು ಟಿ20 ಸರಣಿಯ ಉಳಿದ 2 ಪಂದ್ಯಗಳನ್ನು ಗೆಲ್ಲಲು ಎದುರು ನೋಡುತ್ತಿದ್ದು, ಭಾರತಕ್ಕೆ ಸೂರ್ಯಕುಮಾರ್ ಯಾದವ್ ಮತ್ತು ಕುಲದೀಪ್ ಅವರಿಂದ ಮತ್ತೊಮ್ಮೆ ದೊಡ್ಡ ಪ್ರದರ್ಶನದ ಅಗತ್ಯವಿದೆ.