PAK Vs ENG 2nd Test: ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್, ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಸರಣಿ ಜಯ

ಪಾಕಿಸ್ತಾನ ನೆಲದಲ್ಲಿ 17 ವರ್ಷಗಳ ನಂತರ ಟೆಸ್ಟ್ ಸರಣಿಯನ್ನು ಆಡುತ್ತಿರುವ ಇಂಗ್ಲೆಂಡ್ ಇತಿಹಾಸ ನಿರ್ಮಿಸಿದೆ. ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಸಾಧಿಸಿದ್ದ ಆಂಗ್ಲರು ಮುಲ್ತಾನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೂಡ 26 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದುಕೊಂಡಿದ್ದಾರೆ. ಈ ಸೋಲಿನ ಮೂಲಕ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರೇಸ್‌ನಿಂದ ಹೊರಬಿದ್ದಿದೆ.
3 ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿದ್ದ ಪಾಕಿಸ್ತಾನ 4ನೇ ಉತ್ತಮವಾಗಿ ಮುಂದುವರೆಸುವ ವಿಶ್ವಾಸದಲ್ಲಿತ್ತು. ಆದರೆ 4ನೇ ದಿನ 12 ರನ್ ಗಳಿಸುವಷ್ಟರಲ್ಲಿ ಫಹೀಮ್ ಅಶ್ರಫ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ನಂತರ ಬಂದ ಮೊಹಮ್ಮದ್ ನವಾಜ್ 62 ಎಸೆತಗಳಲ್ಲಿ 45 ರನ್ ಗಳಿಸುವ ಮೂಲಕ ಪಾಕಿಸ್ತಾನಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ನವಾಜ್ ಮತ್ತು ಸೌದ್ ಶಕೀಲ್ 80 ರನ್‌ಗಳ ಜೊತೆಯಾಟ ಆಡುವ ಮೂಲಕ ಇಂಗ್ಲೆಂಡ್ ಮೇಲೆ ಒತ್ತಡ ಹೇರಿದರು. ಆದರೆ ಮಾರ್ಕ್ ವುಡ್ ಈ ಜೋಡಿಯನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಇಂಗ್ಲೆಂಡ್ ತಂಡದ ಸೋಲಿನ ಭಯವನ್ನು ದೂರವಾಗಿಸಿದರು.

ಹೋರಾಟ ನೀಡಿ ಸೋಲೊಪ್ಪಿಕೊಂಡ ಪಾಕಿಸ್ತಾನ
ನವಾಜ್ ಮತ್ತು ಸೌದ್ ಶಕೀಲ್ ವಿಕೆಟ್ ಪತನವಾಗುತ್ತಿದ್ದಂತೆ ಪಾಕಿಸ್ತಾನದ ಸೋಲು ಖಚಿತವಾಗಿತ್ತು. ಅಘಾ ಅಸ್ಲಾಮ್ ಮತ್ತು ಅಬ್ರಾರ್ ಅಹ್ಮದ್ ಮಿನಿ ಕ್ಯಾಮಿಯೋ ಆಡಿದರು ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ಪಾಕಿಸ್ತಾನ ಎರಡನೇ ಇನ್ನಿಂಗ್ಸ್‌ನಲ್ಲಿ 328 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 26 ರನ್‌ಗಳ ಸೋಲೊಪ್ಪಿಕೊಂಡಿತು. ಮಾರ್ಕ್‌ವುಡ್ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಸೋಲಿಗೆ ಪ್ರಮುಖ ಕಾರಣವಾದರು.
AUS vs SA 1st Test: ಮೊದಲ ಟೆಸ್ಟ್‌ನಿಂದ ಆಸೀಸ್ ಸ್ಟಾರ್ ಬೌಲರ್ ಔಟ್; ಪ್ಯಾಟ್ ಕಮ್ಮಿನ್ಸ್ ವಾಪಸಾತಿ?

22 ವರ್ಷಗಳ ನಂತರ ಇತಿಹಾಸ ನಿರ್ಮಾಣ
ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ ಸರಣಿ ಜಯ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ. 2000 ಇಸವಿಯಲ್ಲಿ ನಾಸರ್ ಹುಸೇನ್ ಅವರ ನಾಯಕತ್ವದಲ್ಲಿ ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ ಪಾಕಿಸ್ತಾನ ನೆಲದಲ್ಲಿ ಸರಣಿ ಗೆಲುವು ಸಾಧಸಿತ್ತು.
2005ರಲ್ಲಿ ಇಂಗ್ಲೆಂಡ್ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿ ಆಡಿದ್ದರೂ, ಸರಣಿಯಲ್ಲಿ 0-2 ಅಂತರದಲ್ಲಿ ಸೋಲನುಭವಿಸಿತ್ತು. ಈಗ ಆ ಸೋಲಿಗೆ ಸೇಡು ತೀರಿಸಿಕೊಂಡಿದೆ. ಇದು ಜೋ ರೂಟ್ ಅವರ 50ನೇ ಟೆಸ್ಟ್ ಪಂದ್ಯವಾಗಿತ್ತು, ರೂಟ್‌ಗೆ ಸರಣಿ ಮತ್ತು ಪಂದ್ಯದ ಗೆಲುವಿನ ಉಡುಗೊರೆ ನೀಡಿದೆ ಇಂಗ್ಲೆಂಡ್ ತಂಡ.

ಹ್ಯಾರಿ ಬ್ರೂಕ್ ಪಂದ್ಯದ ಆಟಗಾರ
ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಮುಲ್ತಾನ್ ಟೆಸ್ಟ್‌ನ ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 9 ರನ್ ಗಳಿಸಿದ್ದ ಬ್ರೂಕ್, ಎರಡನೇ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ದಾಖಲಿಸಿದರು.
ತಂಡ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದಾಗ ಅಮೋಘ ಪ್ರದರ್ಶನ ನೀಡಿದ್ದ ಬ್ರೂಕ್, 149 ಎಸೆತಗಳಲ್ಲಿ 109 ರನ್ ಗಳಿಸಿ ಮಿಂಚಿದ್ದರು. ಅವರ ಈ ಅಮೋಘ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಒಂದು ಸಿಕ್ಸರ್ ಸೇರಿತ್ತು. ಒತ್ತಡದಲ್ಲಿ ಶತಕ ಗಳಿಸಿದ್ದ ಹ್ಯಾರಿ ಬ್ರೂಕ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ಇಂಗ್ಲೆಂಡ್ ಪಡೆಯಿಂದ ಉತ್ತಮ ಬೌಲಿಂಗ್ ದಾಳಿ
ಪಾಕಿಸ್ತಾನ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 202 ರನ್‌ಗಳಿಗೆ ಆಲೌಟ್ ಮಾಡಿದ್ದ ಇಂಗ್ಲೆಂಡ್ ಬೌಲಿಂಗ್ ಪಡೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಜ್ಯಾಕ್ ಲೀಚ್ 4 ವಿಕೆಟ್ ಪಡೆದು ಮಿಂಚಿದರೆ, ಮಾರ್ಕ್‌ವುಡ್ ಮತ್ತು ಜೋ ರೂಟ್ ಎರಡು ವಿಕೆಟ್ ಗಳಿಸಿದ್ದರು.
2ನೇ ಇನ್ನಿಂಗ್ಸ್‌ನಲ್ಲಿ ಮಾರ್ಕ್ ವುಡ್ 4 ವಿಕೆಟ್ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಓಲೀ ರಾಬಿನ್‌ಸನ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಜೋ ರೂಟ್ ಮತ್ತು ಜ್ಯಾಕ್ ಲೀಚ್ ತಲ ಒಂದು ವಿಕೆಟ್ ಪಡೆದುಕೊಂಡರು.
ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಇಂಗ್ಲೆಂಡ್ ಸರಣಿಯನ್ನು ವಶಪಡಿಸಿಕೊಂಡಿದ್ದು, ಸರಣಿಯ ಕೊನೆಯ ಪಂದ್ಯ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣ ಮೂರನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications