
ಇತ್ತೀಚಿಗಷ್ಟೇ ಯುಎಇಯಲ್ಲಿ ಮುಕ್ತಾಯಗೊಂಡ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಹಂತ ಪ್ರವೇಶಿಸುವಲ್ಲಿ ಎಡವಿ ಸೆಮಿಫೈನಲ್ ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ ಟೂರ್ನಿ ಮುಗಿದ ಬೆನ್ನಲ್ಲೇ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡು 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಾಟವನ್ನು ನಡೆಸಿತ್ತು. ಹೀಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆದಿದ್ದ ಈ ಸರಣಿಗಳಲ್ಲಿ ಪಾಕಿಸ್ತಾನ ಭರ್ಜರಿ ಜಯ ಸಾಧಿಸುವುದರ ಮೂಲಕ ಎರಡೂ ಸರಣಿಗಳಲ್ಲಿಯೂ ಬಾಂಗ್ಲಾದೇಶಕ್ಕೆ ವೈಟ್ ವಾಷ್ ಬಳಿದಿತ್ತು.
ಹೀಗೆ ಬಾಂಗ್ಲಾದೇಶದ ವಿರುದ್ಧ ವೈಟ್ ವಾಷ್ ಸಾಧನೆ ಮಾಡಿದ ನಂತರ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಪಾಕಿಸ್ತಾನ ಸೆಣಸಾಟ ನಡೆಸುತ್ತಿದೆ. ಹೌದು, ಸದ್ಯ ಪಾಕಿಸ್ತಾನದಲ್ಲಿ ಪಾಕ್ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲಿಗೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಿದ್ದು, ಇತ್ತಂಡಗಳ ನಡುವಿನ ಚೊಚ್ಚಲ ಟಿ ಟ್ವೆಂಟಿ ಪಂದ್ಯ ಇಂದು (ಡಿಸೆಂಬರ್ 13) ಕರಾಚಿಯ ನ್ಯಾಶನಲ್ ಕ್ರೀಡಾಂಗಣದಲ್ಲಿ ನಡೆದಿದೆ.
ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದ ಚೊಚ್ಚಲ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದರ ಮೂಲಕ ಎದುರಾಳಿ ಪಾಕಿಸ್ತಾನ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನವನ್ನು ನೀಡಿತು. ಅತ್ತ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 200 ರನ್ ಕಲೆ ಹಾಕುವುದರ ಮೂಲಕ ಕೆರಿಬಿಯನ್ನರಿಗೆ 201 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಇನ್ನು ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನದ ಪರ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿದರು. ತಂಡದ ನಾಯಕ ಬಾಬರ್ ಅಜಮ್ ರನ್ ಖಾತೆ ತೆರೆಯದೇ ಶೂನ್ಯಕ್ಕೆ ಔಟ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರೆ, ಮೊಹಮ್ಮದ್ ರಿಜ್ವಾನ್ 78 ರನ್ ಕಲೆಹಾಕಿದರು.
ಹೀಗೆ ಪಾಕ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಮೊಹಮ್ಮದ್ ರಿಜ್ವಾನ್ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಫಖರ್ ಜಮಾನ್ 10 ರನ್ ಗಳಿಸಿ ಔಟ್ ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಬಂದ ಹೈದರ್ ಅಲಿ 39 ಎಸೆತಗಳಿಗೆ 68 ರನ್ ಚಚ್ಚಿದರು. ಇನ್ನುಳಿದಂತೆ ಆಸಿಫ್ ಅಲಿ 1, ಇಫ್ತಿಕರ್ ಅಹ್ಮದ್ 7 ರನ್ ಕಲೆಹಾಕಿ ವಿಕೆಟ್ ಕಳೆದುಕೊಂಡರೆ, ಅಂತಿಮ ಹಂತದಲ್ಲಿ ಅಬ್ಬರಿಸಿದ ಮೊಹಮ್ಮದ್ ನವಾಜ್ 10 ಎಸೆತಗಳಲ್ಲಿ 30 ರನ್ ಬಾರಿಸಿ ಅಜೇಯರಾಗಿ ಉಳಿದರು ಹಾಗೂ ಶದಾಬ್ ಖಾನ್ ಬ್ಯಾಟಿಂಗ್ ಸಿಗದೇ ಶೂನ್ಯದೊಂದಿಗೆ ಅಜೇಯರಾಗಿ ಉಳಿದರು. ಅತ್ತ ವೆಸ್ಟ್ ಇಂಡೀಸ್ ತಂಡದ ಪರ ರೊಮಾರಿಯೊ ಶೆಫರ್ಡ್ 2 ವಿಕೆಟ್ ಹಾಗೂ ಅಕೀಲ್ ಹುಸೈನ್, ಒಶಾನೆ ಥಾಮಸ್, ಡೊಮಿನಿಕ್ ಡ್ರೇಕ್ಸ್ ಮತ್ತು ಓಡಿಯನ್ ಸ್ಮಿತ್ ತಲಾ 1 ವಿಕೆಟ್ ಪಡೆದರು.
ಹೀಗೆ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟಿ ಟ್ವೆಂಟಿ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಅಬ್ಬರಿಸಿದ ಪಾಕಿಸ್ತಾನ ಬೌಲಿಂಗ್ ವಿಭಾಗದಲ್ಲಿಯೂ ಕೂಡ ಉತ್ತಮ ಪ್ರದರ್ಶನವನ್ನು ನೀಡಿದೆ. ಎದುರಾಳಿ ವೆಸ್ಟ್ ಇಂಡೀಸ್ ತಂಡವನ್ನು 19 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲ್ ಔಟ್ ಮಾಡಿದ ಪಾಕಿಸ್ತಾನ 63 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿದೆ. ವೆಸ್ಟ್ ಇಂಡೀಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಶೈ ಹೋಪ್ 31 ರನ್ ಗಳಿಸಿದ್ದು ಬಿಟ್ಟರೆ ತಂಡದ ಬೇರೆ ಯಾವುದೇ ಆಟಗಾರ ಕೂಡ 30 ರನ್ ಗಡಿ ದಾಟಲೇ ಇಲ್ಲ. ವೆಸ್ಟ್ ಇಂಡೀಸ್ ತಂಡದ ಇತರೆ ಆಟಗಾರರಾದ ರೋವ್‌ಮ್ಯಾನ್ ಪೊವೆಲ್ 23, ರೊಮಾರಿಯೊ ಶೆಫರ್ಡ್ 21, ಓಡಿಯನ್ ಸ್ಮಿತ್ 24 ಮತ್ತು ನಾಯಕ ನಿಕೋಲಸ್ ಪೂರನ್ 18 ಗಳಿಸಿದ್ದನ್ನು ಹೊರತುಪಡಿಸಿದರೆ ತಂಡದ ಇನ್ಯಾವುದೇ ಆಟಗಾರ ಕೂಡ ಎರಡಂಕಿ ಮುಟ್ಟುವ ಸಾಹಸಕ್ಕೆ ಕೈ ಹಾಕಲಿಲ್ಲ. ಈ ಮೂಲಕ 19 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡ ವೆಸ್ಟ್ ಇಂಡೀಸ್ 137 ರನ್ ಕಲೆಹಾಕಿ 63 ರನ್‌ಗಳ ಅಂತರದಲ್ಲಿ ಹೀನಾಯವಾಗಿ ಸೋತಿದೆ. ಈ ಮೂಲಕ ಪಾಕಿಸ್ತಾನ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ಪಾಕಿಸ್ತಾನದ ಪರ ಮೊಹಮ್ಮದ್ ವಾಸಿಂ 4 ವಿಕೆಟ್, ಶದಾಬ್ ಖಾನ್ 3 ವಿಕೆಟ್ ಹಾಗೂ ಶಾಹೀನ್ ಅಫ್ರಿದಿ, ಮೊಹಮ್ಮದ್ ನವಾಜ್ ಹಾಗೂ ಹ್ಯಾರಿಸ್ ರೌಫ್ ತಲಾ 1 ವಿಕೆಟ್ ಪಡೆದರು.
ಪಾಕಿಸ್ತಾನ ತಂಡದ ಪರ 39 ಎಸೆತಗಳಲ್ಲಿ 68 ರನ್ ಚಚ್ಚಿದ ಹೈದರ್ ಅಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹೈದರ್ ಅಲಿಯ ಈ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಕೂಡ ಸಿಡಿದವು.