
ಶನಿವಾರ, ಮಾರ್ಚ್ 11ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ 284 ರನ್‌ಗಳ ಬೃಹತ್ ಗೆಲುವು ಸಾಧಿಸಿ, ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವೈಟ್‌ವಾಶ್ ಮಾಡಿತು.
1993ರಿಂದ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ವಿಂಡೀಸ್ ವಿರುದ್ಧ ಅಜೇಯ ದಾಖಲೆಯನ್ನು ಉಳಿಸಿಕೊಂಡಿರುವುದರಿಂದ ಹರಿಣಗಳ ಪಡೆಗೆ ಇದು ಸತತ ಒಂಬತ್ತನೇ ಸರಣಿ ಗೆಲುವಾಗಿದೆ.
ದಕ್ಷಿಣ ಆಫ್ರಿಕಾ ತಂಡದ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ, ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ತನ್ನದೇ ಸ್ವಯಂಕೃತ ಅಪರಾಧದಿಂದ ವಿಲಕ್ಷಣವಾದ ಗಾಯವುಕ್ಕೆ ತುತ್ತಾಗಿದ್ದು 4ನೇ ದಿನದಂದು ಹೈಲೈಟ್ಸ್‌ಗಳಲ್ಲಿ ಒಂದಾಯಿತು.
ಕೇಶವ್ ಮಹಾರಾಜ್ ಅವರು ವೆಸ್ಟ್ ಇಂಡೀಸ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ರೋಸ್ಟನ್ ಚೇಸ್ ಮತ್ತು ಕೈಲ್ ಮೇಯರ್ಸ್ ಅವರನ್ನು ಔಟ್ ಮಾಡುವ ಮೂಲಕ ಎರಡು ವಿಕೆಟ್ ಪಡೆದರು.

ಮೊದಲ ಸೆಷನ್‌ನ ಕೊನೆಯ ಓವರ್‌ನಲ್ಲಿ ಕೇಶವ್ ಮಹಾರಾಜ್ ಕೈಲ್ ಮೇಯರ್ಸ್‌ನನ್ನು ಎಲ್‌ಬಿಡಬ್ಲ್ಯೂ ಮೂಲಕ ವಿಕೆಟ್ ಪಡೆದ ಸಂಭ್ರಮಾಚರಣೆ ವೇಳೆ ಕುಸಿದು ಬಿದ್ದರು. ನಂತರ, ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಫಾಕ್ಸ್ ಸ್ಪೋರ್ಟ್ಸ್ ಪ್ರಕಾರ, ಎಡಗೈ ಸ್ಪಿನ್ನರ್ ಎಡ ಪಾದದ ಗಾಯಕ್ಕೆ ತುತ್ತಾದರು.
ಇನ್ನು ಪಂದ್ಯದ ಕುರಿತು ಹೇಳುವುದಾದರೆ, ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 320 ರನ್ ಗಳಿಸಿ ಆಲೌಟ್ ಆಗಿತ್ತು. ಪ್ರತ್ಯುತ್ತರವಾಗಿ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 251 ರನ್‌ಗಳಿಗೆ ಗಂಟುಮೂಟೆ ಕಟ್ಟಿತು. ಆಗ ದಕ್ಷಿಣ ಆಫ್ರಿಕಾ ತಂಡ 69 ರನ್‌ಗಳ ಮುನ್ನಡೆ ಪಡೆಯಿತು.
ಎರಡನೇ ಇನ್ನಿಂಗ್ಸ್ ಮುಂದುವರೆಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಅವರ ಅದ್ಭುತ ಶತಕದ (172 ರನ್) ನೆರವಿನಿಂದ 321 ರನ್ ಕಲೆಹಾಕಿತು. ಇದು ಏಳು ವರ್ಷಗಳ ನಂತರ ಅವರ ಮೊದಲ ಶತಕವಾಗಿದೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಕೇಪ್ ಟೌನ್‌ನಲ್ಲಿ ಅವರು ಕೊನೆಯ ಬಾರಿಗೆ ಶತಕ ಬಾರಿಸಿದ್ದರು.
ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್‌ಗೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 391 ರನ್‌ಗಳ ಗುರಿ ನೀಡಿತು. ಕಗಿಸೊ ರಬಾಡ, ಸೈಮನ್ ಹಾರ್ಮರ್ ಮತ್ತು ಕೇಶವ್ ಮಹಾರಾಜ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ಪ್ರವಾಸಿ ತಂಡವನ್ನು 106 ರನ್‌ಗಳಿಗೆ ಆಲೌಟ್ ಮಾಡಿದರು.
ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ತಮ್ಮ ಅದ್ಭುತ ಶತಕಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಏಡೆನ್ ಮಾರ್ಕ್ರಾಮ್ ಅವರು ಸರಣಿಯಲ್ಲಿ 276 ರನ್ ಗಳಿಸುವ ಮೂಲಕ ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.