ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ 4ನೇ ಕ್ರಮಾಂಕಕ್ಕೆ ಯಾರು ಸೂಕ್ತ ಅನ್ನುವ ವಿಚಾರ ಇನ್ನೂ ಚರ್ಚೆಯಲ್ಲಿದೆ. ಏಕೆಂದರೆ, ಗಾಯಾಳುಗಳಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಚೇತರಿಕೆಯ ಹಂತದಲ್ಲಿದ್ದಾರೆ.
ಈಗಾಗಲೇ ವೆಸ್ಟ್ ಇಂಡೀಸ್ ಪ್ರವಾಸಿದಲ್ಲಿ ಕೆಲವು ಆಟಗಾರರನ್ನು ಪ್ರಯೋಗಿಸಿದ್ದರೂ, 4ನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಬೇಕು ಎಂದು ಭಾರತದ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರ ಅನುಭವ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಪ್ರದರ್ಶನವನ್ನು ಉಲ್ಲೇಖಿಸಿ, ತವರಿನಲ್ಲಿ ಆಡುವ ಅನುಕೂಲದ ಜೊತೆಗೆ ಅನುಭವ ಮತ್ತು ಯುವ ಆಟಗಾರನ ಸರಿಯಾದ ಸಮತೋಲನನವು ಪಂದ್ಯಾವಳಿಯಲ್ಲಿ ಭಾರತ ತಂಡದ ಪ್ರಬಲ ಅವಕಾಶಗಳನ್ನು ಶಿಖರ್ ಧವನ್ ಗಮನ ಸೆಳೆದರು.
ಇನ್ನು 4ನೇ ಕ್ರಮಾಂಕದಲ್ಲಿ ಆಧಾರಸ್ತಂಭವಾಗಿದ್ದ ಶ್ರೇಯಸ್ ಅಯ್ಯರ್ ಅವರ ಫಿಟ್‌ನೆಸ್ ಬಗ್ಗೆ ಅನುಮಾನವಿದ್ದು, ವಿಶ್ವಕಪ್‌ಗೆ ಮುನ್ನ ಭಾರತ ಏಕದಿನ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಆ ಸ್ಥಾನವನ್ನು ಪಡೆದುಕೊಳ್ಳುವ ಮುಂಚೂಣಿಯಲ್ಲಿದ್ದಾರೆ.

ಆದರೆ, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಹೊಸ ಹಾಗೂ ಯುವ ಬ್ಯಾಟರ್ ತಿಲಕ್ ವರ್ಮಾ ನಾಲ್ಕನೇ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಬಹುದು ಎಂದು ತಿಳಿಸಿದ್ದಾರೆ.
"ಸೂರ್ಯಕುಮಾರ್ ಯಾದವ್ ಅನುಭವಿ ಆಟಗಾರ ಮತ್ತು ಸ್ವಲ್ಪ ಸಮಯದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವುದರಿಂದ ನಾನು ಅವರನ್ನು 4ನೇ ಕ್ರಮಾಂಕಕ್ಕೆ ಆಯ್ಕೆ ಮಾಡುತ್ತೇನೆ," ಎಂದು ಶಿಖರ್ ಧವನ್ ಪಿಟಿಐಗೆ ತಿಳಿಸಿದ್ದಾರೆ.
"ಅಲ್ಲದೆ, 2023ರ ಏಕದಿನ ವಿಶ್ವಕಪ್‌ನಲ್ಲಿ ಶುಭ್ಮನ್ ಗಿಲ್ ಎಂತಹ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ನೋಡಲು ನಿಜವಾಗಿಯೂ ಎದುರು ನೋಡುತ್ತಿದ್ದೇವೆ. ರೋಹಿತ್ ಶರ್ಮಾ ಅವರು ಕಳೆದ 2019ರ ವಿಶ್ವಕಪ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದರಿಂದ, ಈ ಬಾರಿಯೂ ಅಂತಹ ಪ್ರದರ್ಶನ ನೀಡುವ ನಿರೀಕ್ಷೆ ಇದೆ," ಎಂದು ಎಡಗೈ ಆರಂಭಿಕ ಶಿಖರ್ ಧವನ್ ಹೇಳಿದರು.
ಇನ್ನು 2023ರ ಏಕದಿನ ವಿಶ್ವಕಪ್‌ನಲ್ಲಿ ಟ್ರೋಫಿ ಗೆಲ್ಲುವ ಭಾರತದ ಅವಕಾಶಗಳ ಕುರಿತು ಮಾತನಾಡಿದ ಧವನ್, "ನಮಗೆ ಅನುಭವ ಮತ್ತು ಯುವ ಆಟಗಾರರ ಸರಿಯಾದ ಮಿಶ್ರಣವನ್ನು ಹೊಂದಿರುವ ಉತ್ತಮ ತಂಡವಿದೆ. ನಮಗೆ ತವರಿನ ಅನುಕೂಲವಿದೆ. ನಮಗೆ ಮೈದಾನಗಳು ಮತ್ತು ಪಿಚ್‌ಗಳು ತಿಳಿದಿದೆ," ಎಂದು ತಿಳಿಸಿದರು.
ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಭಾಗವಾಗಿರದ ಕಾರಣ ಶಿಖರ್ ಧವನ್ ಇದೀಗ ಹೆಚ್ಚಿನ ಸಮಯ ಹೊಂದಿದ್ದಾರೆ. ತನ್ನ ಕ್ರಿಕೆಟ್ ಮತ್ತು ಫಿಟ್‌ನೆಸ್‌ನಲ್ಲಿ ಕೆಲಸ ಮಾಡುವುದರ ಹೊರತಾಗಿ, ಡಾ ಒನ್ ಗ್ರೂಪ್ ಛತ್ರಿ ಅಡಿಯಲ್ಲಿ ಬರುವ ತನ್ನ ವಿವಿಧ ವಾಣಿಜ್ಯ ಉದ್ಯಮಗಳಿಗೆ ಗಮನಾರ್ಹ ಸಮಯವನ್ನು ವಿನಿಯೋಗಿಸುತ್ತಿದ್ದಾರೆ.
"ಉತ್ಪಾದಕರಾಗಿರುವುದು ಮುಖ್ಯ. ನಾವು ಸಾಕಷ್ಟು ಉನ್ನತ-ಮಟ್ಟದ ಜೀವನವನ್ನು ನಡೆಸುತ್ತೇವೆ. ವಿಶೇಷವಾಗಿ ಒಂದು ಹಂತದಲ್ಲಿ ನಾವು ಎಲ್ಲಾ ಸ್ವರೂಪದ ಕ್ರಿಕೆಟ್ ಆಡುತ್ತಿರುವಾಗ. ಈಗ ನನಗೆ ಸಾಕಷ್ಟು ಸಮಯವಿದೆ, ಆದ್ದರಿಂದ ನಾನು ನನ್ನ ವ್ಯಾಪಾರ ಆಸಕ್ತಿಗಳೊಂದಿಗೆ ತೊಡಗಿಸಿಕೊಂಡಿದ್ದೇನೆ," ಎಂದು ಶಿಖರ್ ಧವನ್ ಹೇಳಿದರು.