
ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿದ್ದು, ಭಾರತದ ಗೆಲುವಿಗೆ 160 ರನ್‌ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಮೊದಲ 4 ಓವರ್‌ಗಳಲ್ಲಿ ಇಬ್ಬರು ಓಪನರ್‌ಗಳನ್ನ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಪಂದ್ಯದ ಎರಡನೇ ಓವರ್‌ನಲ್ಲಿ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಅರ್ಷ್‌ದೀಪ್ ಸಿಂಗ್ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಶೂನ್ಯಕ್ಕೆ ಔಟ್ ಮಾಡುವಲ್ಲಿ ಯಶಸ್ವಿಯಾದ್ರು.
ಬಾಬರ್ ಬೆನ್ನಲ್ಲೇ ಮೊಹಮ್ಮದ್ ರಿಜ್ವಾನ್ ಭಾರತದ ಯುವ ವೇಗಿ ಅರ್ಷ್‌ದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸುವ ಮೂಲಕ ತಂಡವು ಆರಂಭಿಕ ಆಘಾತಕ್ಕೊಳಗಾಯಿತು. ಬಾಬರ್ ಅಜಮ್ ಶೂನ್ಯಕ್ಕೆ ಗೋಲ್ಡನ್ ಡಕೌಟ್ ಆದ್ರೆ, ಮೊಹಮ್ಮದ್ ರಿಜ್ವಾನ್ 12 ಎಸೆತಗಳಲ್ಲಿ ಕೇವಲ 4 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.
ಎರಡು ವಿಕೆಟ್ ಕಳೆದುಕೊಂಡ ಪಾಕಿಸ್ತಾನ ತಂಡಕ್ಕೆ ಶಾನ್ ಮಸೂದ್ ಹಾಗೂ ಇಫ್ತಿಕರ್ ಅಹಮದ್ ಆಧಾರವಾದ್ರು. ಭಾರತದ ಬೌಲಿಂಗ್ ದಾಳಿಯನ್ನು ಸ್ವಲ್ಪ ಮಟ್ಟಿಗೆ ಹಿಮ್ಮೆಟ್ಟಿಸಿದ ಈ ಇಬ್ಬರು ಬ್ಯಾಟರ್‌ಗಳು ತಲಾ ಅರ್ಧಶತಕ ದಾಖಲಿಸುವ ಮೂಲಕ ಪಾಕ್‌ಗೆ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ನೆರವಾದರು.
ಇಫ್ತಿಕರ್ ಅಹಮದ್ 34 ಎಸೆತಗಳಲ್ಲಿ 51ರನ್ ಕಲೆಹಾಕಿ ಡೇಂಜರಸ್ ಆಗಿ ಗುರುತಿಸಿಕೊಂಡರು. 2 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದ ಇಫ್ತಿಕರ್‌ಗೆ ಬ್ರೇಕ್ ಹಾಕಿದ್ದು ಮೊಹಮ್ಮದ್ ಶಮಿ. ಅಕ್ಷರ್ ಪಟೇಲ್ ಸ್ಪಿನ್ ದಾಳಿಯಲ್ಲಿ ಎರಡು ಭರ್ಜರಿ ಸಿಕ್ಸರ್ ಸಿಡಿಸಿದ್ದ ಈ ಬ್ಯಾಟರ್ ಅನ್ನು ಮೊಹಮ್ಮದ್ ಶಮಿ ಎಲ್‌ಬಿಬ್ಲ್ಯೂ ಬಲೆಗೆ ಕೆಡವಿದ್ರು.
ಈ ವಿಕೆಟ್ ಉರುಳಿದ ಬಳಿಕ ಪಾಕ್‌ನ ಕೆಳಕ್ರಮಾಂಕದ ಬ್ಯಾಟರ್‌ಗಳು ಜವಾಬ್ದಾರಿ ಅರಿಯದೆ ಬ್ಯಾಟ್ ಬೀಸಿ ವಿಕೆಟ್ ಒಪ್ಪಿಸಿದರು. ಶದಾಬ್ ಖಾನ್ 5, ಹೈದರ್ ಅಲಿ 2ರನ್‌ಗಳಿಸಿ 14ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದ್ರು. ಮತ್ತೆ ಬೌಲಿಂಗ್ ದಾಳಿಗಿಳಿದ ಹಾರ್ದಿಕ್ ಪಂದ್ಯದ 16ನೇ ಓವರ್‌ನಲ್ಲಿ ಮೊಹಮ್ಮದ್ ನವಾಜ್(9) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು.
ಆಸಿಫ್ ಅಲಿ 2ರನ್‌ಗಳಿಸಿ ಔಟಾದ್ರೆ, ಶಾಹಿನ್ ಅಫ್ರಿದಿ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ 16ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ 10ರನ್ ನೀಡಿ 1 ವಿಕೆಟ್ ಕಬಳಿಸಿದ್ರು. ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿದ್ದು ಭಾರತಕ್ಕೆ 160ರನ್ ಗುರಿ ನೀಡಿದೆ.
ಭಾರತದ ಪರ ಬೊಂಬಾಟ್ ಬೌಲಿಂಗ್ ಮಾಡಿದ ಅರ್ಷ್‌ದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಪಡೆದ್ರೆ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು. ಅಶ್ವಿನ್ ವಿಕೆಟ್ ಇಲ್ಲದೆ ನಿರಾಸೆಗೊಂಡ್ರೆ, 1 ಓವರ್ ಬೌಲಿಂಗ್ ಮಾಡಿ 21ರನ್ ನೀಡಿದ ಅಕ್ಷರ್ ಪಟೇಲ್ ಪ್ರದರ್ಶನ ನಿರಾಸೆ ಮೂಡಿಸಿತು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಟೀಂ ಇಂಡಿಯಾ: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್
ಬೆಂಚ್: ಯುಜವೇಂದ್ರ ಚಹಾಲ್, ದೀಪಕ್ ಹೂಡಾ, ಹರ್ಷಲ್ ಪಟೇಲ್, ರಿಷಭ್ ಪಂತ್
ಪಾಕಿಸ್ತಾನ: ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಶಾನ್ ಮಸೂದ್, ಹೈದರ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ
ಬೆಂಚ್: ಖುಷ್ದಿಲ್ ಷಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ವಾಸಿಂ ಜ್ಯೂನಿಯರ್, ಫಖಾರ್ ಜಮಾನ್