
ಕರಾಚಿ, ಮೇ 20: ಪಾಕಿಸ್ತಾನ ಕ್ರಿಕೆಟ್ ತಂಡ ಏಕದಿನ ಕ್ರಿಕೆಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ನೀಡಿಲ್ಲ. ಆದರೆ, ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಸೋಮವಾರ ತನ್ನ ಅಂತಿಮ 15 ಆಟಗಾರರ ಪಟ್ಟಿಯನ್ನು ಬುಡುಗಡೆ ಮಾಡಿದ್ದು, ಇಬ್ಬರು ಅನುಭವಿ ಹಾಗೂ ಜಬರ್ದಸ್ತ್ ವೇಗದ ಬೌಲರ್‌ಗಳನ್ನು ಮರಳಿ ಕರೆತಂದಿದೆ.
ಪಾಕಿಸ್ತಾನ ತಂಡ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು 0-4 ಅಂತರದಲ್ಲಿ ಸೋತಿತ್ತು. ಇನ್ನು ಈ ಸರಣಿಗೂ ಮುನ್ನ ಪ್ರಕಟಿಸಲಾಗಿದ್ದ ತನ್ ವಿಶ್ವಕಪ್ ಪ್ರಾಥಮಿಕ 15 ಆಟಗಾರರ ಪಟ್ಟಿಯಲ್ಲಿ ಕೆಲ ಅನುಭವಿಗಳನ್ನು ಕೈಬಿಟ್ಟು ಅಚ್ಚರಿ ಮೂಡಿಸಿತ್ತು. ಇದೀಗ ಮರಳಿ ಅನುಭವಕ್ಕೆ ಮಣೆ ಹಾಕಿರುವ ಪಾಕ್ ತಂಡ ತನ್ನ ಬೌಲಿಂಗ್ ವಿಭಾಗಕ್ಕೆ ಹಳೆಯ ಅಸ್ತ್ರಗಳನ್ನು ಸೇರ್ಪಡೆ ಮಾಡಿದೆ.
ಪಾಕ್ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಸೋಮವಾರ ವಿಶ್ವಕಪ್ ಸಲುವಾಗಿ ಬಿಡುಗಡೆ ಮಾಡಿದ 15 ಆಟಗಾರರ ಪಟ್ಟಿಯಲ್ಲಿ ಅನುಭವಿ ಎಡಗೈ ಬೌಲರ್‌ಗಳಾದ ವಹಾಬ್ ರಿಯಾಝ್ ಮತ್ತು ಮೊಹಮ್ಮದ್ ಆಮಿರ್‌ಗೆ ಮರಳಿ ಸ್ಥಾನ ನೀಡಿದ್ದಾರೆ. ಇನ್ನು ಕಳೆಗುಂದಿರುವ ತಂಡದ ಮಧ್ಯಮ ಕ್ರಮಾಖಕ್ಕೆ ಜೀವ ತುಂಬಲು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಸಿಫ್ ಅಲಿ ಅವರನ್ನು ಸೇರ್ಪಡೆ ಮಾಡಿದ್ದಾರೆ.
ಪಾಕಿಸ್ತಾನ ತಂಡ ಕೋಚ್ ಮಿಕಿ ಆರ್ಥರ್ ವೇಗಿ ಮೊಹಮ್ಮದ್ ರಿಯಾಝ್ ಅವರ ವೃತ್ತಿ ಬದುಕನ್ನು ಬಹುತೇಕ ಅಂತ್ಯಗೊಳ್ಳುವಂತೆ ಮಾಡಿದ್ದರು. ಹೀಗಾಗಿ ಕಳೆದ ಎರಡು ವರ್ಷಗಳಿಂದ ರಿಯಾಝ್ ಪಾಕ್ ಪರ ಏಕದಿನ ಕ್ರಿಕೆಟ್‌ನಲ್ಲಿ ಆಡಿಲ್ಲ. ಇದೀಗ ರಿಯಾಝ್‌ಗೆ ಮರಳಿ ಅವಕಾಶ ಸಿಕ್ಕಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
"ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಬಲ್ಲ ಸಾಮರ್ಥ್ಯ ವಹಾಬ್ ಅವರಲ್ಲಿದೆ ಹೀಗಾಗಿಯೇ ತಂಡಕ್ಕೆ ಅವರನ್ನು ಮರಳಿ ಕರೆತರಲಾಗಿದೆ. ಇಂಗ್ಲೆಂಡ್‌ನ ಪಿಚ್‌ಗಳು ಬ್ಯಾಟ್ಸ್‌ಮನ್‌ಗಳಿಗೆ ಇಷ್ಟು ಸ್ನೇಹಿಯಾಗಿರುತ್ತವೆ ಎಂದು ನಾವು ಅಂದಾಜಿಸಿರಲಿಲ್ಲ. ಹೀಗಾಗಿ ಆರಂಭದಲ್ಲಿ ಪ್ರಕಟಿಸಲಾದ ತಂಡದಲ್ಲಿ ಬದಲಾವಣೆ ತರಬೇಕಾಯಿತು,'' ಎಂದು ಮುಖ್ಯ ಆಯ್ಕೆದಾರ ಇಂಜಮಾಮ್ ಹೇಳಿದ್ದಾರೆ.
ವಿಶ್ವಕಪ್‌ಗೆ ಪಾಕಿಸ್ತಾನ ಪ್ರಕಟಿಸಿದ ಅಂತಿಮ 15 ಆಟಗಾರರು
ಅರ್ಫರಾಝ್ ಅಹ್ಮದ್ (ವಿಕೆಟ್‌ಕೀಪರ್ ಮತ್ತು ನಾಯಕ), ಫಖರ್ ಝಮಾನ್, ಇಮಾಮ್ ಉಲ್ ಹಕ್, ಬಾಬರ್ ಅಝಾಮ್, ಹ್ಯಾರಿಸ್ ಸೊಹೇಲ್, ಆಸಿಫ್ ಅಲಿ, ಶೊಯೇಬ್ ಮಲಿಕ್, ಮೊಹಮ್ಮದ್ ಹಫೀಜ್ ಇಮಾದ್ ವಾಸಿಮ್, ಶದಾಬ್ ಖಾನ್, ಹಸನ್ ಅಲಿ, ಶಹೀನ್ ಶಾ ಅಫ್ರಿದಿ, ಮೊಹಮ್ಮದ್ ಆಮಿರ್, ವಹಾಬ್ ರಿಯಾಝ್, ಮೊಹಮ್ಮದ್ ಹಸನಾಯ್.