
ಇತ್ತೀಚೆಗಷ್ಟೇ ಯುಎಇಯಲ್ಲಿ ಮುಕ್ತಾಯಗೊಂಡ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತದಲ್ಲಿ ಸೋಲುವುದರ ಮೂಲಕ ಟೂರ್ನಿಯಿಂದ ಹೊರ ಬಿದ್ದಿದ್ದ ಪಾಕಿಸ್ತಾನ ಟೂರ್ನಿ ಮುಗಿದ ಬೆನ್ನಲ್ಲೇ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡು 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಾಟವನ್ನು ನಡೆಸಿತ್ತು. ಹೀಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆದಿದ್ದ ಈ ಸರಣಿಗಳಲ್ಲಿ ಪಾಕಿಸ್ತಾನ ಭರ್ಜರಿ ಜಯ ಸಾಧಿಸುವುದರ ಮೂಲಕ ಎರಡೂ ಸರಣಿಗಳಲ್ಲಿಯೂ ಬಾಂಗ್ಲಾದೇಶಕ್ಕೆ ವೈಟ್ ವಾಷ್ ಬಳಿದಿತ್ತು.
ಹೀಗೆ ಬಾಂಗ್ಲಾದೇಶದ ವಿರುದ್ಧ ಟಿ ಟ್ವೆಂಟಿ ಮತ್ತು ಟೆಸ್ಟ್ ಎರಡೂ ಸರಣಿಗಳಲ್ಲಿ ಎಲ್ಲಾ ಪಂದ್ಯಗಳನ್ನು ಜಯಗಳಿಸುವುದರ ಮೂಲಕ ವೈಟ್ ವಾಷ್ ಬಳಿದಿದ್ದ ಪಾಕಿಸ್ತಾನ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ನಡೆದಿರುವ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲ 3 ಪಂದ್ಯಗಳನ್ನು ಗೆಲ್ಲುವುದರ ಮೂಲಕ ಮತ್ತೊಮ್ಮೆ ವೈಟ್ ವಾಷ್ ಬಳಿದು ಸಾಧನೆ ಮಾಡಿದೆ. ಈ ಮೂಲಕ ಪಾಕಿಸ್ತಾನ ತನ್ನ ಕಳೆದ 3 ಸರಣಿಗಳಲ್ಲಿ ವೈಟ್ ವಾಶ್ ಸಾಧನೆ ಮಾಡಿದಂತಾಗಿದೆ.
ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಅಂತಿಮ ಪಂದ್ಯ ಇಂದು ಕರಾಚಿಯ ನ್ಯಾಶನಲ್ ಸ್ಟೇಡಿಯಂ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕಳೆದೆರಡು ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಮಂಕಾಗಿದ್ದ ವೆಸ್ಟ್ ಇಂಡೀಸ್ ಈ ಪಂದ್ಯದಲ್ಲಿ ಅಬ್ಬರಿಸಿತು. 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 207 ರನ್ ಗಳಿಸಿದ ವೆಸ್ಟ್ ಇಂಡೀಸ್ ಎದುರಾಳಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 208 ರನ್‌ಗಳ ಬೃಹತ್ ಗುರಿಯನ್ನು ನೀಡಿತು.
ವೆಸ್ಟ್ ಇಂಡೀಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಬ್ರೆಂಡನ್ ಕಿಂಗ್ 43 ಮತ್ತು ಶಾಮ್ರಾ ಬ್ರೂಕ್ಸ್ 49 ರನ್ ಗಳಿಸುವುದರ ಮೂಲಕ ಉತ್ತಮ ಆರಂಭವನ್ನೇ ಕಟ್ಟಿಕೊಟ್ಟರು. ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ನಿಕೋಲಸ್ ಪೂರನ್ 37 ಎಸೆತಗಳಲ್ಲಿ 64 ರನ್ ಬಾರಿಸುವುದರ ಮೂಲಕ ಕೊನೆಗೂ ಟಿ ಟ್ವೆಂಟಿ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಹಾಗೂ ಇನ್ನುಳಿದಂತೆ ಡಾರೆನ್ ಬ್ರಾವೊ ಅಜೇಯ 34 ಮತ್ತು ರಾವ್ ಮನ್ ಪೊವೆಲ್ ಅಜೇಯ 6 ರನ್ ಗಳಿಸಿದರು.
ಹೀಗೆ ಪಾಕಿಸ್ತಾನ ತಂಡಕ್ಕೆ ಬೃಹತ್ ರನ್‌ಗಳ ಗುರಿಯನ್ನು ನೀಡಿದ ವೆಸ್ಟ್ ಇಂಡೀಸ್ ಈ ಪಂದ್ಯದಲ್ಲಿ ಜಯ ಸಾಧಿಸಿ ವೈಟ್ ವಾಷ್ ತಪ್ಪಿಸಿಕೊಳ್ಳಲಿದೆ ಎಂದೇ ಎಲ್ಲರೂ ಊಹಿಸಿದ್ದರು. ಆದರೆ ಈ ಊಹೆಗಳಿಗೆಲ್ಲ ಪಾಕಿಸ್ತಾನದ ಆರಂಭಿಕ ಆಟಗಾರರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ತಣ್ಣೀರೆರಚಿದರು. 158 ರನ್‌ಗಳ ಜತೆಯಾಟವಾಡಿದ ಈ ಜೋಡಿ ಪಾಕಿಸ್ತಾನಕ್ಕೆ ಅತ್ಯದ್ಭುತ ಆರಂಭವನ್ನು ಕಟ್ಟಿಕೊಟ್ಟಿತು. ಮೊಹಮ್ಮದ್ ರಿಜ್ವಾನ್ 86 ರನ್ ಗಳಿಸಿದರೆ ನಾಯಕ ಬಾಬರ್ ಅಜಮ್ 79 ರನ್ ಕಲೆ ಹಾಕಿದರು. ಇನ್ನುಳಿದಂತೆ ಫಾಕರ್ ಜಮಾನ್ 12 ರನ್, ಆಸಿಫ್ ಅಲಿ ಅಜೇಯ 21 ರನ್ ಮತ್ತು ಇಫ್ತಿಕರ್ ಅಹ್ಮದ್ ಅಜೇಯ 1 ರನ್ ಕಲೆ ಹಾಕಿದರು. ಈ ಮೂಲಕ ಪಾಕಿಸ್ತಾನ 18.5 ಓವರ್‌ಗಳಲ್ಲಿಯೇ 3 ವಿಕೆಟ್ ನಷ್ಟಕ್ಕೆ 208 ರನ್ ಗಳಿಸುವುದರ ಮೂಲಕ ವೆಸ್ಟ್ ಇಂಡೀಸ್ ತಂಡ ನೀಡಿದ ಬೃಹತ್ ಮೊತ್ತವನ್ನು 1 ಓವರ್ ಬಾಕಿ ಇರುವಾಗಲೇ ಮುಟ್ಟಿ ಭರ್ಜರಿ ಜಯ ಸಾಧಿಸಿತು. ಇನ್ನು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ರಿಜ್ವಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವುದರ ಜೊತೆಗೆ ಸರಣಿಯಲ್ಲಿ ತಾವು ನೀಡಿದ ಅತ್ಯುತ್ತಮ ಪ್ರದರ್ಶನಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿಗೂ ಸಹ ಭಾಜನರಾದರು.