
ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ಆತಿಥ್ಯ ವಹಿಸಲಿರುವ ಏಕದಿನ ವಿಶ್ವಕಪ್‌ಗೆ ಎಲ್ಲಾ ಪ್ರಮುಖ ರಾಷ್ಟ್ರಗಳು ತಮ್ಮ ಸಿದ್ಧತೆಯನ್ನು ಈಗಿನಿಂದಲೇ ಪ್ರಾರಂಭಿಸಿವೆ.
ಇತ್ತೀಚಿನ ದಿನಗಳಲ್ಲಿ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಎಲ್ಲಾ ತಂಡಗಳು ಉತ್ತಮ ಪ್ರದರ್ಶನ ನೀಡಿವೆ. ಹೀಗಾಗಿ ಫೈನಲ್ ತಲುಪುವ ಪಂದ್ಯಗಳನ್ನು ಊಹಿಸುವುದು ಖಂಡಿತವಾಗಿಯೂ ಈ ಸಮಯದಲ್ಲಿ ಕಷ್ಟಕರವಾದ ಕೆಲಸವಾಗಿದೆ.
ಇದೇ ವೇಳೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರತಿಷ್ಠಿತ ವಿಶ್ವಕಪ್ ಫೈನಲ್ ಹಂತಕ್ಕೆ ಪ್ರವೇಶಿಸಲಿವೆ ಎಂದು ಅಂದಾಜಿಸಿದ್ದಾರೆ.
1983ರಲ್ಲಿ ಲೆಜೆಂಡ್ ಕ್ರಿಕೆಟಿಗ ಕಪಿಲ್ ದೇವ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿಶ್ವಕಪ್ ಗೆದ್ದ ನಂತರ, ಎಂಎಸ್ ಧೋನಿ ಭಾರತ ತಂಡವನ್ನು 2011ರಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ತಮ್ಮ ಎರಡನೇ ಏಕದಿನ ವಿಶ್ವಕಪ್ ಗೆಲುವಿಗೆ ಕಾರಣರಾದರು.

ಮತ್ತೊಂದೆಡೆ, ಇಮ್ರಾನ್ ಖಾನ್ ನಾಯಕತ್ವದಲ್ಲಿ 1992ರಲ್ಲಿ ಪಾಕಿಸ್ತಾನ ತಂಡ ಒಮ್ಮೆ ಮಾತ್ರ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ. 1996ರಲ್ಲಿ ಫೈನಲ್ ತಲುಪಿದ್ದರೂ ಶ್ರೀಲಂಕಾ ವಿರುದ್ಧ ಸೋಲು ಕಂಡಿತ್ತು.
ಇನ್ನು 2011ರ ವಿಶ್ವಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಗೆಲ್ಲುವ ಮೊದಲು ಭಾರತ ತಂಡವು ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಅಂತಿಮ ಹಣಾಹಣಿಗೆ ಪ್ರವೇಶ ಮಾಡಿತ್ತು.
2023ರ ವಿಶ್ವಕಪ್ ಫೈನಲ್ ಪಂದ್ಯವನ್ನು ಮುಂಬೈ ಅಥವಾ ಅಹಮದಾಬಾದ್‌ನಲ್ಲಿ ಆಡುತ್ತಿರಲಿ, ನನಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಾಡುವುದನ್ನು ಎದುರು ನೋಡುತ್ತೇನೆ.
2011ರ ವಿಶ್ವಕಪ್ ಸೆಮಿಫೈನಲ್‌ನ ಸೋಲಿಗೆ ಭಾರತ ತಂಡದ ವಿರುದ್ಧ ಪಾಕಿಸ್ತಾನ ಸೇಡು ತೀರಿಸಿಕೊಳ್ಳುವುದನ್ನು ಬಯಸುತ್ತೇನೆ ಎಂದು ಶೋಯೆಬ್ ಅಖ್ತರ್ ಸ್ಪೋರ್ಟ್ಸ್ ಟಾಕ್‌ಗೆ ತಿಳಿಸಿದರು.

ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ತೆರಳಲು ಭಾರತ ಸರ್ಕಾರ ಅನುಮತಿ ನೀಡಬೇಕು
ಏಕದಿನ ವಿಶ್ವಕಪ್‌ಗೂ ಮುನ್ನ ನಡೆಯುವ 2023ರ ಏಷ್ಯಾ ಕಪ್ ವಿವಾದದ ಬಗ್ಗೆಯೂ ಶೋಯೆಬ್ ಅಖ್ತರ್ ಅವರನ್ನು ಪ್ರಶ್ನಿಸಲಾಯಿತು. ಏಕೆಂದರೆ ಪಿಸಿಬಿ ಮತ್ತು ಬಿಸಿಸಿಐ ಪರಸ್ಪರ ಭಿನ್ನಾಭಿಪ್ರಾಯದಿಂದಾಗಿ ಏಷ್ಯಾ ಕಪ್ ಆಯೋಜನೆ ಕುರಿತ ಇನ್ನೂ ಯಾವುದೆ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.
2023ರ ಏಷ್ಯಾ ಕಪ್ ಪಂದ್ಯಾವಳಿಯನ್ನು ತವರಿನಲ್ಲಿಯೇ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧಾರ ಅಚಲವಾಗಿದೆ. ಆದರೆ, ಭದ್ರತೆಯ ಕಾರಣ ಏಷ್ಯಾಕಪ್‌ಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಹಿಂದೇಟು ಹಾಕುತ್ತಿದೆ.
"ಎರಡು ರಾಷ್ಟ್ರಗಳ ಸರ್ಕಾರಗಳು ಮಾತ್ರ ಉಭಯ ತಂಡಗಳು ಕ್ರಿಕೆಟ್ ಆಡಬೇಕೆ, ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿರುವುದರಿಂದ, ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ," ಎಂದು ಶೋಯೆಬ್ ಅಖ್ತರ್ ಅಭಿಪ್ರಾಯಿಸಿದ್ದಾರೆ.
"ಈ ವಿಚಾರದಲ್ಲಿ ಬಿಸಿಸಿಐ ಅಥವಾ ಪಿಸಿಬಿ ಏನೂ ಮಾಡಲು ಸಾಧ್ಯವಿಲ್ಲ. ಭಾರತ ಸರ್ಕಾರವನ್ನು ಕೇಳದೆ ಬಿಸಿಸಿಐ ಏನನ್ನೂ ಮಾಡಲು ಸಾಧ್ಯವಿಲ್ಲ. ನಮ್ಮ ಆಡಳಿತ ಮಂಡಳಿಯೂ ಪಾಕಿಸ್ತಾನ ಸರ್ಕಾರದ ಸಲಹೆ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಸುಮ್ಮನೇ ಭಾರತ-ಪಾಕಿಸ್ತಾನ ನಡುವಿನ ಸಂಬಂಧದ ವಿಚಾರದಲ್ಲಿ ಎಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ".
"ನಾನು ಎರಡೂ ಕಡೆಯ ಎಲ್ಲಾ ಮಾಜಿ ಆಟಗಾರರಿಗೆ ವಿನಂತಿ ಮಾಡಲು ಬಯಸುತ್ತೇನೆ. ದಯವಿಟ್ಟು ಅನಗತ್ಯ ಹೇಳಿಕೆ ನೀಡುವುದರಿಂದ ದೂರವಿರಿ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದರೆ, ಪಾಕಿಸ್ತಾನಕ್ಕೆ ಪ್ರಯಾಣಿಸುವ ಬಗ್ಗೆ ಬಿಸಿಸಿಐ ನಿರ್ಧರಿಸುತ್ತದೆ," ಎಂದು ಶೋಯೆಬ್ ಅಖ್ತರ್ ತಿಳಿಸಿದರು.