DRS ಉಳಿಸಿಕೊಳ್ಳಲು ತನ್ನದೇ ದಾರಿ ಕಂಡುಕೊಂಡ ರಿಜ್ವಾನ್: ವರ್ಕೌಟ್ ಆಯ್ತು ಪಾಕ್ ವಿಕೆಟ್ ಕೀಪರ್ ಪ್ಲ್ಯಾನ್!!
ಡಿಸಿಶನ್ ರಿವ್ಯೂ ಸಿಸ್ಟಮ್(DRS) ಮೊರೆ ಹೋಗಲು ಯಾವುದೇ ತಂಡದ ನಾಯಕ ವಿಕೆಟ್ ಕೀಪರ್ ಮೊರೆ ಹೋಗುವುದು ಸಾಮಾನ್ಯ. ವಿಕೆಟ್ ಹಿಂದೆ ಕ್ಯಾಚ್ ಆಗಿರಬಹುದು ಅಥವಾ ಎಲ್‌ಬಿಡಬ್ಲ್ಯು ಆಗಿರಬಹುದು ವಿಕೆಟ್ ಕೀಪರ್ ಅಭಿಪ್ರಾಯ ಮುಖ್ಯವಾಗಿರುತ್ತದೆ. ಎಂಎಸ್ ಧೋನಿಯಂಥಾ ವಿಕೆಟ್ ಕೀಪರ್‌ಗಳು ಇದನ್ನು ಅದ್ಭುತವಾಗಿ ಬಳಸಿಕೊಂಡರೆ ಇನ್ನೂ ಕೆಲವರು ನಾಯಕನ ಗೊಂದಲವನ್ನು ಹೆಚ್ಚಿಸಿದ್ದೂ ಇದೆ.
ಆದರೆ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ಮುಖಾಮುಖಿಯಲ್ಲಿ ಪಾಕ್ ತಂಡದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಡಿಆರ್‌ಎಸ್ ವಿಚಾರವಾಗಿ ಸುದ್ದಿಯಾಗಿದ್ದಾರೆ. ಡಿಆರ್‌ಎಸ್ ಮೊರೆಹೋಗಬೇಕಾದ ಸಂದರ್ಭದಲ್ಲಿ ನಾಯಕ ಬಾಬರ್ ಅಜಂ ಕೀಪರ್ ರಿಜ್ವಾನ್ ಅಭಿಪ್ರಾಯ ಕೇಳಿದರೆ ರಿಜ್ವಾನ್ ಎದುರಾಳಿ ತಂಡದ ಬ್ಯಾಟರ್ ಬಳಿಯೇ ಅಭಿಪ್ರಾಯವನ್ನು ಕೇಳಿ ಅಚ್ಚರಿ ಮೂಡಿಸಿದ್ದಾರೆ.

ಬಾಂಗ್ಲಾದೇಶ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗಿನ 43ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಬ್ಯಾಟಿಂಗ್ ನಡೆಸುತ್ತಿದ್ದ ಕೆಳ ಕ್ರಮಾಂಕದ ಆಟಗಾರ ಟಸ್ಕಿನ್ ಅಹ್ಮದ್‌ಗೆ ಶಾಹೀನ್ ಅಫ್ರಿದಿ ಯಾರ್ಕರ್ ಎಸೆದಿದ್ದರು. ಲೆಗ್‌ಸೈಡ್‌ನತ್ತ ತೆರಳಿದ ಚೆಂಡು ಪ್ಯಾಡ್‌ಗೆ ಸವರಿ ವಿಕೆಟ್ ಕೀಪರ್ ಕೈ ಸೇರಿತ್ತು. ಈ ಸಂದರ್ಭದಲ್ಲಿ ಬೌಲರ್ ಶಾಹೀನ್ ಅಫ್ರಿದಿ ಕ್ಯಾಚ್‌ಗಾಗಿ ಅಂಪೈರ್ ಬಳಿ ಮನವಿ ಸಲ್ಲಿಸಿದರು. ಆದರೆ ಅದನ್ನು ಅಂಪೈರ್ ನಿರಾಕರಿಸಿದರು.
ಈ ಸಂದರ್ಭದಲ್ಲಿ ಬೌಲರ್ ಶಾಹೀನ್ ಅಫ್ರಿದಿ ಡಿಆರ್‌ಎಸ್‌ಗಾಗಿ ನಾಯಕ ಬಾಬರ್ ಅಜಂ ಅವರ ಮುಖ ನೋಡಿದರು. 30 ಯಾರ್ಡ್ ಸರ್ಕಲ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ಬಾಬರ್ ಅಜಂ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅಭಿಪ್ರಾಯ ಕೇಳಿದರು. ಈ ಸಂದರ್ಭದಲ್ಲಿ ರಿಜ್ವಾನ್ ಚೆಂಡು ಬ್ಯಾಟ್‌ಗೆ ತಗುಲಿದೆಯಾ ಅಥವಾ ಪ್ಯಾಡ್‌ಗಾ ಎನ್ನುವ ಗೊಂದಲದಲ್ಲಿ ಇದ್ದರು.
ಆದರೆ ರಿಜ್ವಾನ್ ಸ್ವಲ್ಪವೂ ತಲೆಕಡಿಸಿಕೊಳ್ಳದೆ ನೇರವಾಗಿ ಬ್ಯಾಟರ್ ಟಸ್ಕಿನ್ ಅವರಲ್ಲಿಯೇ ಚೆಂಡು ಬ್ಯಾಟ್‌ಗೆ ತಾಗಿದೆಯಾ ಎಂದು ಕೇಳಿ ಎಲ್ಲರನ್ನೂ ಅಚ್ಚರಿಗೆ ತಳ್ಳಿದರು. ಈ ಸಂದರ್ಭದಲ್ಲಿ ಇದಕ್ಕೆ ಬ್ಯಾಟಿಂಗ್ ಮಾಡುತ್ತಿದ್ದ ಟಸ್ಕಿನ್ ಕೂಡ ಉತ್ತರವನ್ನು ನೀಡಿದ್ದು ಚೆಂಡು ಪ್ಯಾಡ್‌ಗೆ ಬಡಿದಿದೆ ಎಂದು ಉತ್ತರಿಸಿದರು. ರಿಜ್ವಾನ್ ಅವರ ಈ ನಡೆ ಕಾಮೆಂಟರ್‌ಗಳಾದ ರವಿ ಶಾಸ್ತ್ರಿ ಹಾಗೂ ವಾಕರ್ ಯೂನಿಸ್ ಅವರನ್ನು ಕುಡ ನಗೆಗಡಲಲ್ಲಿ ತೇಲಿಸುವಂತೆ ಮಾಡಿತ್ತು. ಗಮನಾರ್ಹ ಅಂಶವೆಂದರೆ ಬಳಿಕ ಪಾಕಿಸ್ತಾನ ಇದಕ್ಕೆ ಡಿಆರ್‌ಎಸ್ ಮೊರೆ ಹೋಗದಿರಲು ನಿರ್ಧರಿಸಿತು. ಈ ಮೂಲಕ ರಿಜ್ವಾನ್ ಪ್ಲ್ಯಾನ್ ವರ್ಕೌಟ್ ಆದಂತಾಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 204 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿತ್ತು. ಈ ಮೊತ್ತವನ್ನು ಪಾಕಿಸ್ತಾನ ಭರ್ಜರಿಯಾಗಿ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದು 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಸತತ ನಾಲ್ಕು ಸೋಲಿನ ಬಳಿಕ ಗೆಲುವಿನ ರುಚಿ ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications