ಭಾರತ ತಂಡವು ಮೊದಲ ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಪ್ರಶಸ್ತಿ ವಂಚಿತವಾಯಿತು.
ಇದೀಗ ರೋಹಿತ್ ಶರ್ಮಾ ನಾಯಕತ್ವದ ಭಾರತ ಟೆಸ್ಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡ ನಂತರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಹೊಸ ಚಕ್ರದ ಪ್ರಸ್ತುತ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ.

ವೆಸ್ಟ್ ಇಂಡೀಸ್ ವಿರುದ್ಧ ಭಾರತ 1-0 ಅಂತರದಲ್ಲಿ ಸರಣಿಯನ್ನು ಗೆದ್ದಿದ್ದರೂ, ಎರಡನೇ ಪಂದ್ಯ ಡ್ರಾಗೊಂಡ ಕಾರಣ, ಸರಣಿಯಲ್ಲಿ ಭಾರತ ತಂಡ ಕೇವಲ 16 ಅಂಕಗಳನ್ನು ಪಡೆದಿದೆ. ಎರಡು ಗೆಲುವುಗಳು ಬಂದಿದ್ದರೆ 24 ಅಂಕಗಳನ್ನು ಪಡೆಯುತ್ತಿತ್ತು.
ಎರಡು ಪಂದ್ಯಗಳ ನಂತರ ಭಾರತ ತಂಡದ ಗೆಲುವಿನ ಶೇಕಡಾವಾರು 66.67ರಷ್ಟು ಇದ್ದರೆ, ಪಾಕಿಸ್ತಾನದ ಶೇಕಡಾವಾರು 100ರಷ್ಟಿದೆ. ಪಾಕಿಸ್ತಾನ ಅಗ್ರಸ್ಥಾನದಲ್ಲಿ ಮುಂದುವರೆಯಬೇಕಾದರೆ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಿದೆ.
ಇನ್ನು ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ 2-0 ಅಂತರದಲ್ಲಿ ಸ್ವೀಪ್ ಮಾಡುವ ಮೂಲಕ ಪಾಕಿಸ್ತಾನ ತಂಡವು ಅಗ್ರಸ್ಥಾನದಲ್ಲಿ ತಮ್ಮ ಮುನ್ನಡೆಯನ್ನು ಗಟ್ಟಿಗೊಳಿಸುವ ಅವಕಾಶವನ್ನು ಹೊಂದಿದೆ.

ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ನಾಲ್ಕು ವಿಕೆಟ್‌ಗಳಿಂದ ಗೆದ್ದಿರುವ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು, ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಸೋಮವಾರದ ಮೊದಲ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ 2 ವಿಕೆಟ್‌ಗೆ 145 ರನ್ ಗಳಿಸಿದ್ದು, ಇದು ಆತಿಥೇಯ ಶ್ರೀಲಂಕಾಗಿಂತ ಕೇವಲ 21 ರನ್‌ಗಳಷ್ಟು ಹಿಂದಿದೆ.
ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ 2023ರ ಆಶಸ್ ಸರಣಿಯಲ್ಲಿ ಎರಡು ಪಂದ್ಯ ಗೆಲುವು, ಒಂದು ಸೋಲು ಮತ್ತು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡು 26 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡ ನಂತರ, ಆಶಸ್ ಸರಣಿಯನ್ನು ಮರಳಿ ಗೆಲ್ಲಲು ವಿಫಲವಾಗಿರುವ ಇಂಗ್ಲೆಂಡ್ ತಂಡ ಇದುವರೆಗೆ 4 ಟೆಸ್ಟ್ ಪಂದ್ಯಗಳಿಂದ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.
ಇದೀಗ ಭಾರತ ತಂಡ ಗುರುವಾರದಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯತ್ತ ತನ್ನ ಗಮನ ಹರಿಸಲಿದೆ. ಭಾರತ ಈ ವರ್ಷ ಮುಂದಿನ ಐದು ತಿಂಗಳವರೆಗೆ ಯಾವುದೇ ಟೆಸ್ಟ್ ಪಂದ್ಯಗಳನ್ನು ಆಡುವುದಿಲ್ಲ. ಭಾರತದ ಮುಂದಿನ ಟೆಸ್ಟ್ ಸರಣಿ ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದೆ.
ಇನ್ನು ಕೆರಿಬಿಯನ್ ನಾಡಿನಲ್ಲಿ ಭಾರತ ತಂಡ ಸತತ ಐದನೇ ಸರಣಿ ಜಯ ಸಾಧಿಸಿದೆ. ಕಳೆದ 21 ವರ್ಷಗಳಿಂದ ವೆಸ್ಟ್ ಇಂಡೀಸ್ ವಿರುದ್ಧ ಯಾವುದೇ ಟೆಸ್ಟ್ ಪಂದ್ಯ ಸೋತಿಲ್ಲ ಎಂಬುದು ಗಮನಾರ್ಹ ಸಂಗತಿ.
ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ದಿನದಾಟದಂತ್ಯಕ್ಕೆ 2 ವಿಕೆಟ್‌ಗೆ 76 ರನ್ ಗಳಿಸಿತ್ತು. ಭಾರತ ವಿರುದ್ಧ ಗೆಲ್ಲಲು ಕೊನೆಯ ದಿನ ಇನ್ನೂ 289 ರನ್‌ಗಳ ಗಳಿಸಬೇಕಿತ್ತು. ಆದರೆ, ಐದನೇ ದಿನ ಪ್ರತಿಕೂಲ ಹವಾಮಾನದಿಂದಾಗಿ ಯಾವುದೇ ಎಸೆತ ಕಾಣದೆ ಡ್ರಾನಲ್ಲಿ ಕೊನೆಗೊಂಡಿತು.