ವಿರಾಟ್ ಕೊಹ್ಲಿಗೆ ಅದೃಷ್ಟ ತಂದುಕೊಟ್ಟ 2022 : ಸೃಷ್ಟಿಸಿದ ದಾಖಲೆಗಳು, ಗಳಿಸಿದ ರನ್‌ಗಳ ವಿವರ

2022ರ ವರ್ಷ ಮುಕ್ತಾಯವಾಗುತ್ತಾ ಬಂದಿದೆ, ಭಾರತ ತಂಡಕ್ಕೆ 2022 ಹೇಳಿಕೊಳ್ಳುವಂತ ಉತ್ತಮ ವರ್ಷವೇನೂ ಅಲ್ಲ. ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಗೆಲ್ಲಲು ವಿಫಲವಾಗಿದ್ದು ಈ ವರ್ಷದ ದೊಡ್ಡ ಕೊರಗು. ಜೊತೆಯಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿಯನ್ನು ಸೋತಿದ್ದು ಮತ್ತೊಂದು ದೊಡ್ಡ ಆಘಾತ.
ಇದೆಲ್ಲದರ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಸಮಾಧಾನದ ವಿಚಾರ ಎಂದರೆ 2022ರಲ್ಲಿ ಹಲವು ಏಳು ಬೀಳುಗಳನ್ನು ಕಂಡರೂ ಕೂಡ, ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಕಂಡುಕೊಂಡಿದ್ದು.
ವರ್ಷದ ಆರಂಭದಲ್ಲಿ ಫಾರ್ಮ್‌ಗೆ ಮರಳಲು ಸಾಕಷ್ಟು ಕಷ್ಟ ಪಟ್ಟರು. ಟೀಕೆಗಳು ಕೊಹ್ಲಿಯನ್ನು ಬಿಡಲಿಲ್ಲ, ಅವರು ಕ್ರಿಕೆಟ್‌ನಿಂದ ನಿವೃತ್ತಿಯಾಗಬೇಕು ಎನ್ನುವ ಮಾತುಗಳು ಬಂದವು. 2022ರ ಏಕದಿನ ವಿಶ್ವಕಪ್‌ಗೆ ಕೊಹ್ಲಿ ಬದಲಿಗೆ ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಹಲವರು ಹೇಳಿದರು.
ಸತತ ಮೂರು ವರ್ಷಗಳಿಂದ ಶತಕ ಗಳಿಸಲು ಅವರು ವಿಫಲರಾಗಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿಫಲರಾದ ಬಳಿಕ ಅವರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದರು. ಆ ವಿಶ್ರಾಂತಿಯ ನಂತರ ಕೊಹ್ಲಿ ತಮ್ಮ ಲಯವನ್ನು ಕಂಡುಕೊಂಡರು. ತಮ್ಮ ಬ್ಯಾಟಿಂಗ್ ಮೂಲಕವೇ ಎಲ್ಲರ ಟೀಕೆಗಳಿಗೆ ಉತ್ತರ ನೀಡಿದರು.

ಮೂರು ವರ್ಷದ ನಂತರ ಮೊದಲ ಶತಕ
ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ 34 ಎಸೆತಗಳಲ್ಲಿ 35 ರನ್ ಗಳಿಸುವ ಮೂಲಕ ಅವರ ಏಷ್ಯಾಕಪ್ ಅಭಿಯಾನ ಆರಂಭವಾಯಿತು. ನಂತರ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ 44 ಎಸೆತಗಳಲ್ಲಿ 59 ರನ್ ಗಳಿಸಿ ಅರ್ಧಶತಕ ಪೂರೈಸಿದರು. ನಂತರ ಪಾಕಿಸ್ತಾನದ ವಿರುದ್ಧದ ಎರಡನೇ ಪಂದ್ಯದಲ್ಲಿ 44 ಎಸೆತಗಳಲ್ಲಿ 60 ರನ್ ಗಳಿಸಿ ಸ್ಥಿರತೆ ಉಳಿಸಿಕೊಂಡರು.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದ ವಿರಾಟ್ ಕೊಹ್ಲಿ, ನಂತರ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಬಾರಿಸುವ ಮೂಲಕ 3 ವರ್ಷಗಳ ಶತಕದ ಬರವನ್ನು ನೀಗಿಸಿಕೊಂಡರು. 61 ಎಸೆತಗಳಲ್ಲಿ 12 ಬೌಂಡರಿ, 6 ಭರ್ಜರಿ ಸಿಕ್ಸರ್ ನೆರವಿನಿಂದ 122 ರನ್ ಗಳಿಸಿ ಟೀಕಾಕಾರರಿಗೆ ಉತ್ತರ ನೀಡಿದರು.
ENG vs PAK 2nd Test: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ಆಟಗಾರ ಜೋ ರೂಟ್

ವಿಶ್ವಕಪ್‌ನಲ್ಲಿ ಅಬ್ಬರಿಸಿದ ಕೊಹ್ಲಿ
ಏಷ್ಯಾಕಪ್ ನಂತರ ವಿರಾಟ್ ಕೊಹ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಮಿಂಚಿದರು. ಅದಾದ ನಂತರ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಕ್ಕೆ ತೆರಳಿದರು.
ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನ ಶ್ರೇಷ್ಠ ಇನ್ನಿಂಗ್ಸ್ ಆಡಿದರು. ಸೋಲುವ ಹಂತದಲ್ಲಿದ್ದ ಪಂದ್ಯವನ್ನು, ಗೆಲ್ಲಿಸಿದ್ದು ವಿರಾಟ್ ಕೊಹ್ಲಿ, 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಐತಿಹಾಸಿಕ ಜಯ ಸಾಧಿಸಲು ಕಾರಣವಾದರು. ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಹೊಡೆದ ಸಿಕ್ಸ್ ಅನ್ನು ಟಿ20 ಕ್ರಿಕೆಟ್‌ನ ಶ್ರೇಷ್ಠ ಸಿಕ್ಸರ್ ಎಂದು ಐಸಿಸಿ ಘೋಷಿಸಿದೆ. ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ 6 ಇನ್ನಿಂಗ್ಸ್‌ನಲ್ಲಿ 98.67 ಸರಾಸರಿಯಲ್ಲಿ 136.41 ಸ್ಟ್ರೈಕ್‌ರೇಟ್‌ನಲ್ಲಿ 296 ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

72ನೇ ಶತಕ ಸಿಡಿಸಿದ ಕಿಂಗ್ ಕೊಹ್ಲಿ
ಟಿ20 ವಿಶ್ವಕಪ್ ನಂತರ ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾದರು. ಆದರೆ, ಮೂರನೇ ಏಕದಿನ ಪಂದ್ಯದಲ್ಲಿ ಅವರು ಅಮೋಘ ಶತಕ ದಾಖಲಿಸುವ ಮೂಲಕ ರಿಕಿ ಪಾಂಟಿಂಗ್ ದಾಖಲೆಯನ್ನು ಮುರಿದರು.
91 ಎಸೆತಗಳಲ್ಲಿ 11 ಬೌಂಡರಿ 2 ಸಿಕ್ಸರ್ ನೆರವಿನಿಂದ 113 ರನ್ ಗಳಿಸಿ ಮಿಂಚಿದರು. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 72 ಶತಕ ಗಳಿಸಿದರು. ರಿಕಿ ಪಾಂಟಿಂಗ್ 71 ಶತಕ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ 100 ಶತಕ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

ಮೂರು ಮಾದರಿಯಲ್ಲಿ ಕೊಹ್ಲಿ ಅಂಕಿಅಂಶ
2022ರಲ್ಲಿ ವಿರಾಟ್ ಕೊಹ್ಲಿ 20 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 20 ಇನ್ನಿಂಗ್ಸ್‌ಗಳಿಂದ 55.78 ಸರಾಸರಿಯಲ್ಲಿ 138.23 ಸ್ಟ್ರೈಕ್ ರೇಟ್‌ನಲ್ಲಿ 781 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಶತಕ, 8 ಅರ್ಧಶತಕ ಗಳಿಸಿದ್ದಾರೆ.
ಆದರೆ ಏಕದಿನ ಮಾದರಿಯಲ್ಲಿ ಕೊಹ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ, ಅವರು ಕ್ರಿಕೆಟ್ ಆರಂಭಿಸಿದ ವರ್ಷದಿಂದ ಈವರೆಗೆ 2022ರಲ್ಲಿ ಅತ್ಯಂತ ಕಡಿಮೆ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 2022ರಲ್ಲಿ 11 ಏಕದಿನ ಪಂದ್ಯಗಳನ್ನಾಡಿರುವ ಕೊಹ್ಲಿ 27.45 ಸರಾಸರಿಯಲ್ಲಿ 302 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕ ಸೇರಿದೆ.
2022ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ 7 ಇನ್ನಿಂಗ್ಸ್‌ನಲ್ಲಿ 31.43 ಸರಾಸರಿಯಲ್ಲಿ 220 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ವರ್ಷ ಕೊಹ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications