ಮತ್ತೆ ಶುರುವಾಯ್ತು ಬಜ್ಜಿ-ಸೈಮಂಡ್ಸ್ ಸಮರ: ಕ್ಷಮೆ ಕೋರಿದ್ದು ಸುಳ್ಳೆಂದ ಹರ್ಭಜನ್
ನವದೆಹಲಿ, ಡಿಸೆಂಬರ್ 17: ಹನ್ನೊಂದು ವರ್ಷದ ಹಿಂದೆ ನಡೆದ 'ಮಂಕಿ ಗೇಟ್' ಪ್ರಕರಣ ಇನ್ನೂ ತಣ್ಣಗಾಗುವ ಸೂಚನೆ ಇಲ್ಲ. ಭಾರತದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರೂ ಸೈಮಂಡ್ಸ್ ನಡುವೆ ಮತ್ತೆ ಮಾತಿನ ಸಮರ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿವೆ.
2008ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದ ವೇಳೆ ಹರ್ಭಜನ್ ಸಿಂಗ್ ತಮ್ಮನ್ನು 'ಮಂಗ' ಎಂದು ಕರೆದಿದ್ದಾಗಿ ಆಂಡ್ರೂ ಸೈಮಂಡ್ಸ್ ಆರೋಪಿಸಿದ್ದರು. ಇದು ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಹರ್ಭಜನ್ ತಾವು ಹಾಗೆ ಹೇಳಿಲ್ಲ ಎಂದು ವಾದಿಸಿದ್ದರು.
ಈ ಘಟನೆ ತಮ್ಮ ಕ್ರಿಕೆಟ್ ವೃತ್ತಿ ಬದುಕನ್ನೇ ಹಾಳುಗೆಡವಿತು. ಈ ಘಟನೆ ಬಳಿಕ ಮಾನಸಿಕವಾಗಿ ಕುಗ್ಗಿದ್ದೆ. ಕುಡಿತದ ಅಭ್ಯಾಸ ಹೆಚ್ಚಾಯಿತು. ಆಟದ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಮ್ಯಾಥ್ಯೂ ಹೇಡನ್, ಆಡಂ ಗಿಲ್ ಕ್ರಿಸ್ಟ್, ರಿಕ್ಕಿ ಪಾಂಟಿಂಗ್ ಮತ್ತು ಮೈಕಲ್ ಕ್ಲಾರ್ಕ್ ಅವರಂತಹ ಘಟಾನುಘಟಿಗಳ ಬೆಂಬಲವಿದ್ದರೂ ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮನ್ನು ತಂಡದಿಂದ ಕೈಬಿಡುವಂತಾಗಿತ್ತು ಎಂದು ಸೈಮಂಡ್ಸ್ ಆರೋಪಿಸಿದ್ದರು.
ಈ ಘಟನೆ ಬಗ್ಗೆ ಮೂರು ವರ್ಷದ ಬಳಿಕ ಹರ್ಭಜನ್ ತಮ್ಮ ಬಳಿ ಕ್ಷಮೆ ಕೋರಿ ಜೋರಾಗಿ ಅತ್ತಿದ್ದರು ಎಂದು ಸೈಮಂಡ್ಸ್ ಹೇಳಿದ್ದಾರೆ. ಆದರೆ, ಈ ರೀತಿ ನಡೆದೇ ಇಲ್ಲ. ಸೈಮಂಡ್ಸ್ ಕಥೆ ಕಟ್ಟುತ್ತಿದ್ದಾರೆ. ನಾನು ಕ್ಷಮೆಯನ್ನೇ ಕೋರಿಲ್ಲ ಎಂದು ಹರ್ಭಜನ್ ಹೇಳಿದ್ದಾರೆ.

ಕ್ಷಮೆ ಕೋರಿದ್ದರಂತೆ ಬಜ್ಜಿ
ಭಾನುವಾರ ಫಾಕ್ಸ್ ಸ್ಪೋರ್ಟ್‌ಗೆ ನೀಡಿದ ಸಂದರ್ಶನದಲ್ಲಿ ಸೈಮಂಡ್ಸ್, 2011ರಲ್ಲಿ ಹರ್ಭಜನ್ ತಮ್ಮ ಬಳಿ ಬಂದು ಕ್ಷಮೆ ಕೋರಿದ್ದರು. 'ಸಿಡ್ನಿಯಲ್ಲಿ ನಿಮಗೆ ನಾನು ಮಾಡಿದ ತಪ್ಪಿಗೆ ಕ್ಷಮೆ ಕೋರುತ್ತೇನೆ. ನನ್ನಿಂದ ನಿಮಗೆ, ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತುಂಬಾ ನೋವುಂಟು ಮಾಡಿಲ್ಲ ಎಂದು ಭಾವಿಸುತ್ತೇನೆ. ನಾಣು ಹೇಳಿದ್ದಕ್ಕೆ ನಿಜಕ್ಕೂ ಕ್ಷಮೆ ಕೋರುತ್ತೇನೆ. ಹಾಗೆ ಹೇಳಬಾರದಿತ್ತು' ಎಂದು ಹರ್ಭಜನ್ ಕ್ಷಮೆ ಕೋರಿದ್ದಾಗಿ ಸೈಮಂಡ್ಸ್ ಹೇಳಿದ್ದರು.
'ಮಂಕಿ' ಎಂದು ಹರ್ಭಜನ್ ಹೀಯಾಳಿಸಿದ್ದಕ್ಕೆ ಮಹಾ ಕುಡುಕರಾದರಂತೆ ಸೈಮಂಡ್ಸ್

ಬಿಕ್ಕಿ ಬಿಕ್ಕಿ ಅತ್ತಿದ್ದರು
ಅಲ್ಲದೆ, 'ಅವರು ವಾಸ್ತವವಾಗಿ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದರು. ಹಾಗೆ ಅಳುವುದರಿಂದ ತಮ್ಮ ಹೆಗಲ ಮೇಲಿನ ಭಾರವನ್ನು ಅವರು ಇಳಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಾನು ಕಂಡಿದ್ದೆ. ಬಳಿಕ ನಾವು ಕೈಕುಲುಕಿ ಅಪ್ಪಿಕೊಂಡೆವು. ಎಲ್ಲವೂ ಒಳಿತಾಗಿದೆ ಎಂದು ಹೇಳಿಕೊಂಡೆವು' ಎಂದು ಸೈಮಂಡ್ಸ್ ವಿವರಿಸಿದ್ದರು.

ಶುದ್ಧ ಸುಳ್ಳು ಎಂದ ಟರ್ಬೋನೇಟರ್
ಆದರೆ, ಇದೆಲ್ಲ ಶುದ್ಧ ಸುಳ್ಳು ಎಂದು ಹರ್ಭಜನ್ ಹೇಳಿದ್ದಾರೆ. ಹಾಗೆ ಕ್ಷಮೆ ಕೋರುವ ಸನ್ನಿವೇಶವೇ ನಡೆದಿರಲಿಲ್ಲ ಎಂದಿದ್ದಾರೆ.
'ಅದು ಯಾವಾಗ ನಡೆಯಿತು? ಬಿಕ್ಕಿ ಅತ್ತಿದ್ದೇ? ಯಾವುದಕ್ಕೆ?' ಎಂದು ಹರ್ಭಜನ್ ಟ್ವೀಟ್ ಮಾಡಿದ್ದಾರೆ.
ಪತ್ರಿಕೆಯೊಂದರ ಜೊತೆ ಮಾತನಾಡಿದ ಹರ್ಭಜನ್, ಇಂತಹ ಯಾವುದೇ ಘಟನೆ ನಡೆದಿರುವುದು ತಮಗೆ ನೆನಪಿಲ್ಲ ಎಂದು ಹೇಳಿದ್ದಾರೆ.

ಕ್ಷಮೆಯನ್ನೇ ಕೋರಿಲ್ಲ, ಅತ್ತೂ ಇಲ್ಲ
'ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ದೇವರಿಗೇ ಗೊತ್ತು. ನಿಜ. ನಾವು ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ನಲ್ಲಿ ಆಡುವಾಗ ಈ ವಿವಾದದ ಬಗ್ಗೆ ಚರ್ಚಿಸಿದ್ದೆವು. ಒಂದೇ ತಂಡದಲ್ಲಿ ಆಡಬೇಕಿದ್ದರಿಂದ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಂದುವರಿಯಲು ನಿರ್ಧರಿಸಿದ್ದೆವು. ಈ ವಿವಾದವನ್ನು ಮರೆತುಬಿಡಲು ನಿರ್ಧಾರ ಮಾಡಿದ್ದೆವು. ನಾನು ಕ್ಷಮೆಯನ್ನೂ ಕೋರಿಲ್ಲ, ಅವರ ಮುಂದೆ ಅತ್ತೂ ಇಲ್ಲ' ಎಂದು ಹರ್ಭಜನ್ ತಿಳಿಸಿದ್ದಾರೆ.
ಪೃಥ್ವಿ ಶಾ ಸರಣಿಯಿಂದ ಹೊರಕ್ಕೆ: ಪಾಂಡ್ಯ, ಮಯಾಂಕ್ ಮರಳಿ ತಂಡಕ್ಕೆ

ಇನ್ನೂ 2008ರಲ್ಲೇ ಇದ್ದಾರೆ
'ಈ ಘಟನೆ ನಡೆದೇ ಇಲ್ಲ. ಅದು ಅವರ ಕಲ್ಪನೆಯ ಕಥೆ. ಈ ವಿವಾದದ ಬಗ್ಗೆ ಆಸ್ಟ್ರೇಲಿಯನ್ನರು ಹೊಸ ವಿಷಯಗಳನ್ನು ಏಕೆ ಹುಟ್ಟುಹಾಕುತ್ತಲೇ ಇದ್ದಾರೆ ಎನ್ನುವುದು ನನಗೆ ತಿಳಿಯುತ್ತಿಲ್ಲ. ಜಗತ್ತು ಈಗ ಚಂದ್ರನಡೆಗೆ ಹೋಗಿದೆ ಎನ್ನುವುದನ್ನು ಆಸ್ಟ್ರೇಲಿಯನ್ನರಿಗೆ ಯಾರಾದರೂ ಹೇಳಬೇಕಿದೆ. ಅವರಿನ್ನೂ 2008ರ ಸಿಡ್ನಿ ಟೆಸ್ಟ್‌ನಲ್ಲಿಯೇ ಸಿಲುಕಿದ್ದಾರೆ. ಅದನ್ನೆಲ್ಲಾ ಮರೆತುಬಿಡಿ' ಎಂದಿದ್ದಾರೆ.

ನಾನೇನು ನಿಮ್ಮ ಪ್ರೇಯಸಿಯೇ?
ಸೈಮಂಡ್ಸ್ ತಮ್ಮ ಜೀವನದ ಸಮಸ್ಯೆಗಳನ್ನು ನನ್ನನ್ನು ದೂರುವುದನ್ನು ನಿಲ್ಲಿಸುವುದು ಒಳಿತು ಎಂದು ಬಜ್ಜಿ ಸಲಹೆ ನೀಡಿದ್ದಾರೆ.
'ತಮ್ಮನ್ನು ತಂಡದಿಂದ ಕಾರಣ ಹರ್ಭಜನ್ ಎಂದು ಕೆಲವೊಮ್ಮೆ ಆರೋಪಿಸುತ್ತಾರೆ. ಕೆಲವೊಮ್ಮೆ ನನ್ನಿಂದಾಗಿ ಕುಡಿತದ ವ್ಯಸನಕ್ಕೆ ಬಿದ್ದೆ ಎನ್ನುತ್ತಾರೆ. ಆದರೆ, ಹರ್ಭಜನ್ ನಿಮಗೆ ಏಕೆ ಅಷ್ಟೊಂದು ಮುಖ್ಯವಾಗುತ್ತಾನೆ? ನಾನು ನಿಮ್ಮನ್ನು ಬಿಟ್ಟು ಹೋಗಿ ನೀವು ಮದ್ಯದ ದಾಸನಂತಾಗಿ ಮಾಡಲು ನಾನೇನು ನಿಮ್ಮ ಪ್ರೇಯಸಿಯೇ? ನಿಮಗೆ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನಿಮ್ಮ ಸ್ನೇಹಿತರೊಂದಿಗೆ ಸಮಸ್ಯೆಗಳಿದ್ದರೆ ಅವರ ಜೊತೆ ಮಾತನಾಡಿಕೊಳ್ಳಿ' ಎಂದು ಹರ್ಭಜನ್ ಖಾರವಾಗಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications