ಐಪಿಎಲ್ 11: ಈ 11 ದಾಖಲೆ ಮುರಿಯಲು ಸಾಧ್ಯವೇ?
ಮುಂಬೈ, ಏಪ್ರಿಲ್ 7: ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಲೀಗ್ ಐಪಿಎಲ್ 2018 ಭರ್ಜರಿಯಾಗಿ ಆರಂಭ ಪಡೆದುಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ಉದ್ಘಾಟನಾ ಪಂದ್ಯ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಸೆಣಸಾಟಕ್ಕೆ ಸಾಕ್ಷಿಯಾಗಿದೆ. ಈ ಐಪಿಎಲ್ 11ರಲ್ಲಿ ಮುರಿಯಬಹುದಾದ 11 ದಾಖಲೆಗಳತ್ತ ಒಂದು ನೋಟ ಇಲ್ಲಿದೆ...
ಕಳೆದ 10 ಆವೃತ್ತಿಗಳ ಪ್ರಮುಖ ದಾಖಲೆಗಳತ್ತ ಒಮ್ಮೆ ಕಣ್ಣುಹಾಯಿಸುತ್ತಾ, ಯಾವೆಲ್ಲ ದಾಖಲೆಗಳು ಧೂಳಿಪಟವಾಗಬಹುದು ಎಂಬುದರ ನಿರೀಕ್ಷೆ ಇರಿಸಿಕೊಳ್ಳೋಣ. ಅತಿ ಹೆಚ್ಚು ರನ್ ಗಳಿಕೆ, ವಿಕೆಟ್ ಗಳಿಕೆ, ಅತಿ ಹೆಚ್ಚು ರನ್ ಗಳಿಸಿದ ತಂಡ, ಜೊತೆಯಾಟ, ಅತಿ ಹೆಚ್ಚು ಸಿಕ್ಸರ್, ಬೌಂಡರಿ.. ಹೀಗೆ ವಿವಿಧ ದಾಖಲೆಗಳಿವೆ.
ಐಪಿಎಲ್ ವಿಶೇಷ ಪುಟ | ಪೂರ್ಣವೇಳಾಪಟ್ಟಿ | ಆರ್ ಸಿಬಿ ವೇಳಾಪಟ್ಟಿ
ಈ ಬಾರಿ ಕಿಂಗ್ಸ್ ಎಲೆವನ್ ಪಂಜಾಬ್ ಪಾಲಾಗಿರುವ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೆಚ್ಚು ದಾಖಲೆ ಹೊಂದಿರುವ ವೀರರೆನಿಸಿಕೊಂಡಿದ್ದಾರೆ. ಕೆಲ ದಾಖಲೆಗಳು ಉದ್ಘಾಟನಾ ಸೀಸನ್ ನಿಂದ ಇಲ್ಲಿ ತನಕ ಇನ್ನೂ ಮುರಿಯಲಾಗಿಲ್ಲ ಎಂಬುದು ವಿಶೇಷ.

ರೈನಾ ಅತಿ ರನ್ ಗಳಿಕೆ
ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಕೆ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ. ದಾಖಲೆಯ ಸತತ ಎಂಟು ಸೀಸನ್ ಆಡಿರುವ ರೈನಾ ಅವರು ಕಳೆದ ಬಾರಿ ಗುಜರಾತ್ ಲಯನ್ಸ್ ಪರ ಆಡಿದ್ದರು. ಈಗ ಮತ್ತೊಮ್ಮೆ ಚೆನ್ನೈ ಪರ ಬ್ಯಾಟ್ ಬೀಸಲಿದ್ದಾರೆ. ಎಡಗೈ ಬ್ಯಾಟ್ಸ್ ಮನ್ ರೈನಾ ಅವರು 139.05 ಸ್ಟೈಕ್ ರೇಟ್ ನಂತೆ 161 ಪಂದ್ಯಗಳಲ್ಲಿ 4,540ರನ್ ಗಳಿಸಿ ದಾಖಲೆ ಬರೆದಿದ್ದಾರೆ.

ಗರಿಷ್ಠ ರನ್ ದಾಖಲೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವನ್ನು ಪ್ರತಿನಿಧಿಸಿದ್ದ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ 2013, ಏಪ್ರಿಲ್ 23 ರಂದು ಪುಣೆ ವಾರಿಯರ್ಸ್ ವಿರುದ್ಧ ಅಜೇಯ 175 ರನ್ ಗಳಿಸುವ ಮೂಲಕ 2008 ರ ಬ್ರೆಂಡನ್ ಮೆಕಲಂ (158* ರನ್) ದಾಖಲೆಯನ್ನು ಮುರಿದಿದ್ದರು. ಇದು ಆಟಗಾರನೊಬ್ಬನ ಇದುವರೆಗಿನ ವೈಯಕ್ತಿಕ ಗರಿಷ್ಠ ಮೊತ್ತವಾಗಿದ್ದು, ಈ ಬಾರಿಯ ಐಪಿಎಲ್ ನಲ್ಲಿ ಗೇಲ್ ದಾಖಲೆಯನ್ನು ಯಾರಾದರೂ ಮುರಿಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಹದಿನೇಳು ಸಿಕ್ಸ್ ಗಳ ಒಡೆಯ
ಐಪಿಎಲ್ ಇತಿಹಾಸದಲ್ಲಿ ಪಂದ್ಯವೊಂದರ ಇನ್ನಿಂಗ್ಸ್ ಒಂದರಲ್ಲಿ 17 ಸಿಕ್ಸ್ ಗಳಿಸಿದ ದಾಖಲೆಯೂ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅಜೇಯ 175 ರನ್ ಗಳಿಸಿದ ಪಂದ್ಯ(2013)ದಲ್ಲೇ ಗೇಲ್ ಗರಿಷ್ಠ ಸಿಕ್ಸ್ ದಾಖಲೆ ಬರೆದಿದ್ದರು. ಜತೆಗೆ ಐಪಿಎಲ್ ನಲ್ಲಿ ಇಲ್ಲಿ ತನಕ ಹೆಚ್ಚು ಸಿಕ್ಸರ್ (265) ಬಾರಿಸಿದ ದಾಖಲೆಯೂ ಗೇಲ್ ಹೊಂದಿದ್ದಾರೆ.

ತಂಡವೊಂದರ ಗರಿಷ್ಠ ಮೊತ್ತ
2013ರಲ್ಲಿ ಇದೇ ಪಂದ್ಯದಲ್ಲೇ ಗೇಲ್ ಅವರ ಅಜೇಯ ಶತಕದ ನೆರವಿನಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) 5 ವಿಕೆಟ್ ಗೆ 263 ರನ್ ಗಳಿಸಿತ್ತು. ಇನ್ನಿಂಗ್ಸ್ ವೊಂದರಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಮೊತ್ತದ ದಾಖಲೆ ಬರೆಯಿತು. ಇಂದಿಗೂ ಈ ದಾಖಲೆಯನ್ನು ಮುರಿಯಲು ಯಾವ ತಂಡಕ್ಕೂ ಸಾಧ್ಯವಾಗಿಲ್ಲ.

ಕೊಹ್ಲಿ ಹೆಸರಲ್ಲೂ ಅನೇಕ ದಾಖಲೆ
2016ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಯ ನಾಯಕ ವಿರಾಟ್ ಕೊಹ್ಲಿ ಗಳಿಸಿದ ಒಟ್ಟು ಮೊತ್ತ 973 ರನ್. ಇದು ಐಪಿಎಲ್ ಆವೃತ್ತಿಯೊಂದರಲ್ಲಿ ಆಟಗಾರನೊಬ್ಬ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತ. ಒಟ್ಟು 16 ಇನ್ನಿಂಗ್ಸ್ ಗಳಲ್ಲಿ 4 ಶತಕ ಮತ್ತು 7 ಅರ್ಧಶತಕಗಳನ್ನು ಬಾರಿಸಿರುವ ಕೋಹ್ಲಿ ಈ ಸಾಧನೆ ಮಾಡಿದ್ದಾರೆ.

ಶತಕಗಳ ಸರದಾರ ಕೋಹ್ಲಿ
ಐಪಿಎಲ್ ನ ಆವೃತ್ತಿಯೊಂದರಲ್ಲಿ 4 ಶತಕಗಳನ್ನು ಬಾರಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೂ ಕೋಹ್ಲಿ ಪಾತ್ರರಾಗಿದ್ದಾರೆ. 2016ರ ಆವೃತ್ತಿಯಲ್ಲಿ ಆರ್ ಸಿಬಿ ಪರ ಕೋಹ್ಲಿ ಈ ಸಾಧನೆ ಮಾಡಿದ್ದರು. ಹೆಚ್ಚು ಶತಕಗಳು ಗೇಲ್ ಪಾಲಾಗಿದ್ದು, 5 ಶತಕ ಬಾರಿಸಿದ್ದಾರೆ.

ಸೊಹೈಲ್ ದಾಖಲೆ ಮುರಿದವರಿಲ್ಲ
ಐಪಿಎಲ್ ನ ಮೊದಲ ಆವೃತ್ತಿ (2008) ಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ ಪಾಕಿಸ್ತಾನಿ ಬೌಲರ್ ಸೊಹೈಲ್ ತನ್ವಿರ್ 14 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಇದು ಬೌಲರ್ ಒಬ್ಬರ ವೈಯಕ್ತಿಕ ಶ್ರೇಷ್ಠ ಸಾಧನೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅವರು ಈ ಸಾಧನೆ ಮಾಡಿದ್ದರು.

ಜೊತೆಯಾಟದ ಸಾಧನೆ
2016ರ ಆವೃತ್ತಿಯಲ್ಲಿ ಆರ್ ಸಿಬಿ ಪರ ವಿರಾಟ್ ಕೋಹ್ಲಿ ಮತ್ತು ಎ ಬಿ ಡಿವಿಲಿಯರ್ಸ್ ಗುಜರಾತ್ ಲಯನ್ಸ್ ವಿರುದ್ಧ ಎರಡನೇ ವಿಕೆಟ್ ಗೆ 229 ರನ್ ಜೊತೆಯಾಟದ ಸಾಧನೆ ಮಾಡಿದ್ದು ಇದುವರೆಗಿನ ದಾಖಲೆಯಾಗಿದೆ. ಈ ಪಂದ್ಯದಲ್ಲಿ ಕೋಹ್ಲಿ(109) ಮತ್ತು ಡಿವಿಲಿಯರ್ಸ್(129*) ಇಬ್ಬರೂ ಶತಕದ ಸಾಧನೆ ಮಾಡಿದ್ದರು.

ಗರಿಷ್ಠ ವಿಕೆಟ್ ಸಾಧನೆ
2013ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ವೆಸ್ಟ್ ಇಂಡೀಸ್ ನ ಡ್ವಾಯ್ನೆ ಬ್ರಾವೋ ಆವೃತ್ತಿಯೊಂದರಲ್ಲಿ ಗಳಿಸಿದ 32 ವಿಕೆಟ್, ಬೌಲರ್ ವೊಬ್ಬರು ಗಳಿಸಿದ ಗರಿಷ್ಠ ವಿಕೆಟ್ ಸಾಧನೆಯಾಗಿದೆ.

ಬೌಂಡರಿಗಳ ಒಡೆಯರು ಇಬ್ಬರು
ಆರ್ ಸಿಬಿ ಆಟಗಾರ ಡಿವಿಲಿಯರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 2015 ರಲ್ಲಿ ಪಂದ್ಯವೊಂದರಲ್ಲಿ ಗಳಿಸಿದ 19 ಬೌಂಡರಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಪೌಲ್ ವಾಲ್ತಟಿ 2011 ರಲ್ಲಿ ಸಿ ಎಸ್ ಕೆ ತಂಡದ ವಿರುದ್ಧ ಗಳಿಸಿದ 19 ಬೌಂಡರಿ ಇದುವರೆಗೆ ಪಂದ್ಯವೊಂದರಲ್ಲಿ ಆಟಗಾರರು ಗಳಿಸಿದ ಗರಿಷ್ಠ ಬೌಂಡರಿಯ ಸಾಧನೆಯಾಗಿದೆ.

ಅತಿವೇಗದ ಶತಕ
2013 ರ ಆವೃತ್ತಿಯಲ್ಲಿ ಕ್ರಿಸ್ ಗೇಲ್ ಅವರು 30 ಎಸೆತ ಎದುರಿಸಿ ಶತಕ ಪೂರೈಸಿದ್ದು, ಇದುವರೆಗಿನ ವೇಗದ ಶತಕ ಗಳಿಕೆಯ ದಾಖಲೆಯಾಗಿದೆ. ಈ ಪಂದ್ಯದಲ್ಲಿ 66 ಎಸೆತಗಳನ್ನು ಎದುರಿಸಿದ ಗೇಯ್ಲ್ ಅಜೇಯ 175 ರನ್ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications