ಬೆಂಗಳೂರು, ಜ.28: ಹಾಲಿ ವಿಶ್ವ ಚಾಂಪಿಯನ್ ಟೀಂ ಇಂಡಿಯ ಐಸಿಸಿ ವಿಶ್ವಕಪ್ 2015 ಕಪ್ ಗೆಲ್ಲಲಿ, ಬಿಡಲಿ, ಧೋನಿ ಅಭಿಮಾನಿಗಳಂತೂ ಟೂರ್ನಿ ಅಂತ್ಯಕ್ಕೆ ಭಾರಿ ಆಘಾತಕಾರಿ ಸುದ್ದಿಯನ್ನಂತೂ ಅರಗಿಸಿಕೊಳ್ಳಲು ತಯಾರಾದರೆ ಒಳ್ಳೆಯದು. ಕಾರಣ.. ಧೋನಿಗೆ ಇದೇ ಕೊನೆ ವಿಶ್ವಕಪ್. ಮುಂದಿನ ವಿಶ್ವಕಪ್ ಆಡಿದರೆ ಅವರಂಥ ಅದೃಷ್ಟವಂತ ಮತ್ತೊಬ್ಬರಿಲ್ಲ ಎನ್ನಬಹುದು.
ಈಗಾಗಲೇ ಎಂಎಸ್ ಧೋನಿ ತಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸಿಕೊಂಡಿದ್ದಾರೆ. ಈ ಬಗ್ಗೆ ಅನೇಕ ಬಾರಿ ಸುಳಿವು ನೀಡಿದ್ದರೂ ಎಲ್ಲಕ್ಕಿಂತ ಮೊದಲು ಕಳೆದ ಬಾರಿ ಅವರ ಹುಟ್ಟುಹಬ್ಬದಂದು ನಿವೃತ್ತಿಯ ಸುಳಿವು ನೀಡಿದ್ದರು. [ಧೋನಿ ನಿವೃತ್ತಿ ಘೋಷಣೆ ಅಸಲಿ ಕಾರಣ?]
ಟೆಸ್ಟ್ ಕ್ರಿಕೆಟ್ ನಿಂದ ಅತುರಾತುರವಾಗಿ ನಿವೃತ್ತಿ ಹೊಂದಿರುವ ಧೋನಿ ಅವರು ಏಕದಿನ ಕ್ರಿಕೆಟ್ ನಲ್ಲಾದರೂ ವಿಜಯೋತ್ಸವದ ಸಂಭ್ರಮದ ನಡುವೆ ರಿಟೈರ್ ಆಗಲಿ ಎಂಬುದು ಅಭಿಮಾನಿಗಳ ಆಸೆ. ಧೋನಿ ಮನಸ್ಸಿನಲ್ಲಿ ಏನಿದೆಯೋ ಅವರಿಗೆ ಮಾತ್ರ ಗೊತ್ತು. [ವಿಶ್ವಕಪ್ 2015: ಎಲ್ಲಾ ತಂಡಗಳ ಪಟ್ಟಿ]

ಸದ್ಯಕ್ಕಂತೂ ಈ ವಿಶ್ವಕಪ್ ನಂತರ ಧೋನಿ ಅವರು ಒಂದು ವೇಳೆ ಏಕದಿನ ಕ್ರಿಕೆಟ್, ಟಿ20 ಟೂರ್ನಿಗಳಲ್ಲಿ ಆಡಿದರೂ ಮುಂದಿನ ವಿಶ್ವಕಪ್ ನಲ್ಲಿ ತಂಡದ ನಾಯಕನಾಗಿ ಅಥವಾ ಆಟಗಾರನಾಗಿ ಆಡಲು ಕಷ್ಟಸಾಧ್ಯ. 33 ವರ್ಷ ವಯಸ್ಸಿನ ಧೋನಿ ಈಗಲೇ ನಿವೃತ್ತಿಯ ದಿನಗಳನ್ನು ಎಣಿಸುವಂತೆ ಕಾಣಿಸುತ್ತಿದ್ದಾರೆ.
ಧೋನಿ ಅನುಭವಿ ಕ್ರಿಕೆಟರ್: ಈ ಬಾರಿ ಟೂರ್ನಿಯಲ್ಲಿ ಸೆಣಸುತ್ತಿರುವ 15 ಜನ ಸದಸ್ಯರ ಪೈಕಿ ಧೋನಿ ಮಾತ್ರ ಎರಡು ವಿಶ್ವಕಪ್(2007, 2011) ಆಡಿದ ಅನುಭವ ಹೊಂದಿದ್ದಾರೆ. 2011ರಲ್ಲಿ ಭಾರತಕ್ಕೆ ಮತ್ತೆ ವಿಶ್ವ ಚಾಂಪಿಯನ್ ಪಟ್ಟ ದೊರಕಿಸಿಕೊಟ್ಟ ನಾಯಕ ಎನಿಸಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ಸಿಕ್ಸ್ ಎತ್ತುವ ಮೂಲಕ ಟೀಂ ಇಂಡಿಯಾದ ಕೀರ್ತಿಯನ್ನು ಎತ್ತರಕ್ಕೆ ಏರಿಸಿದ್ದು ಇದೇ ಧೋನಿ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

ಈ ಬಾರಿ ತಂಡದಲ್ಲಿರುವ 15 ಜನರಲ್ಲಿ 11 ಜನಕ್ಕೆ ವಿಶ್ವಕಪ್ ಟೂರ್ನಿ ಹೊಸತು. ವಿರಾಟ್ ಕೊಹ್ಲಿ, ಸುರೇಶ್ ರೈನಾ, ಆರ್ ಅಶ್ವಿನ್ ಹಾಗೂ ಇನ್ನು ಮೂವರು 2011ರ ಚಾಂಪಿಯನ್ ತಂಡದಲ್ಲಿದ್ದರು. ಅನುಭವ, ನಾಯಕತ್ವದ ವಿಷಯಕ್ಕೆ ಬಂದರೆ ಧೋನಿ ಅವರು 2019ರ ವಿಶ್ವಕಪ್ ನಲ್ಲಿ ಆಡದಿದ್ದರೂ ತಂಡದ ಜೊತೆ ಇರುವುದು ಟೀಂ ಇಂಡಿಯಾ ಪಾಲಿಗೆ ಅಗತ್ಯವಾಗಿದೆ. [ಸಚಿನ್, ರಿಕಿ ದಾಖಲೆ ಧೂಳಿಪಟ ಸಾಧ್ಯವೇ?]
ಏಕದಿನ ಕ್ರಿಕೆಟ್ ಗೂ ನಿವೃತ್ತಿ?: ಸುಮಾರು 9 ವರ್ಷಗಳ ಕಾಲ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಅಲ್ಲದೆ ಐಪಿಎಲ್ ನಲ್ಲೂ ಧೋನಿ ಸೈ ಎನಿಸಿಕೊಂಡಿದ್ದಾರೆ. ಧೋನಿ ಬಯಸಿದರೆ ಇನ್ನು ಕೆಲವು ವರ್ಷ ಏಕದಿನ ಕ್ರಿಕೆಟ್ ನಲ್ಲಿ ಮುಂದುವರೆಯಬಹುದು. [32 ಟೆಸ್ಟ್ ನಾಯಕರಲ್ಲಿ ಧೋನಿಯೇ ಶ್ರೇಷ್ಠ]

ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಉಳಿಸಿಕೊಂಡರೆ ಧೋನಿ ಏಕದಿನ ಕ್ರಿಕೆಟ್ ನಲ್ಲಿ ಹೆಚ್ಚು ಕಾಲ ಮುಂದುವರೆಯಬಹುದು ಅಥವಾ ತಕ್ಷಣವೇ ನಿವೃತ್ತಿ ಘೋಷಿಸಬಹುದು. ಅದರೆ, ಮುಂದಿನ ವಿಶ್ವಕಪ್ ನಲ್ಲಿ ಆಡುವುದಂತೂ ಅನುಮಾನ.ಕಳೆದ ಬಾರಿ ವಿಶ್ವಕಪ್ ಎತ್ತಿ ಹಿಡಿದು ಸಚಿನ್ ನಿವೃತ್ತಿ ಘೋಷಿಸಿದಂತೆ ಧೋನಿ ಕೂಡಾ ಅವರ ಹಾದಿಯಲ್ಲೇ ಸಾಗಬಹುದು.