ಶ್ರೇಯಸ್ ಹೋರಾಟ ವ್ಯರ್ಥ: ರಹಾನೆ ಬಳಗಕ್ಕೆ ಒಲಿದ ದೇವಧರ್ ಟ್ರೋಫಿ
ದೆಹಲಿ, ಅಕ್ಟೋಬರ್ 27: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ನಾಯಕ ಅಜಿಂಕ್ಯ ರಹಾನೆ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಅವರ ಅಮೋಘ ಶತಕಗಳ ನೆರವಿನಿಂದ ಭಾರತ ಸಿ ತಂಡ ದೇವಧರ್ ಟ್ರೋಫಿಯನ್ನು ಗೆದ್ದುಕೊಂಡಿದೆ.
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಸಿ ತಂಡ ಭಾರತ ಬಿ ತಂಡವನ್ನು 29 ರನ್‌ಗಳಿಂದ ಸೋಲಿಸಿ ಟ್ರೋಫಿ ಎತ್ತಿಹಿಡಿಯಿತು.
ಭಾರತ ಬಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಅಬ್ಬರದ ಶತಕದ ಹೋರಾಟ, ಸಿ ತಂಡ ನೀಡಿದ ಬೃಹತ್ ಗುರಿಯನ್ನು ತಲುಪಲು ಸಾಕಾಗಲಿಲ್ಲ.
353 ರನ್‌ಗಳ ದೊಡ್ಡ ಮೊತ್ತವನ್ನು ತಲುಪುವ ಪ್ರಯತ್ನದಲ್ಲಿ ಬಿ ತಂಡ ವೇಗವಾಗಿ ರನ್ ಕಲೆಹಾಕಿತು. ಗೆಲ್ಲಲು 29 ರನ್ ಅವಶ್ಯಕತೆ ಇದ್ದಾಗ ಇನ್ನೂ 23 ಎಸೆತಗಳು ಬಾಕಿ ಇದ್ದವು. ಆದರೆ, ವಿಕೆಟ್ ಉಳಿದಿರಲಿಲ್ಲ. ಹೀಗಾಗಿ ಆಡಿದ ಮೊದಲ ಎರಡೂ ಪಂದ್ಯಗಳನ್ನು ಗೆದ್ದು ಬೀಗಿದ್ದ ಬಿ ತಂಡಕ್ಕೆ ಕೊನೆಯ ಪಂದ್ಯದಲ್ಲಿ ಗೆದ್ದು ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವ ಅದೃಷ್ಟ ಇರಲಿಲ್ಲ.

ಅಬ್ಬರಿಸಿದ ರಹಾನೆ-ಕಿಶನ್
ಟಾಸ್ ಗೆದ್ದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡರು. ಇಶಾನ್ ಕಿಶನ್ ಜತೆ ಇನ್ನಿಂಗ್ಸ್ ಆರಂಭಿಸಿದ ರಹಾನೆ ನಿಧಾನಗತಿಯ ಆಟಕ್ಕೆ ಮುಂದಾದರು. ಆದರೆ, ಈ ಜೋಡಿ ಕ್ರಮೇಣ ರನ್ ಗತಿ ಹೆಚ್ಚಿಸುತ್ತಾ ಬಂದಿತು.
ರಹಾನೆ ತಾಳ್ಮೆಯಿಂದ ರನ್ ಗಳಿಸುತ್ತಿದ್ದರೆ, ಯುವ ಆಟಗಾರ ಕಿಶನ್, ಆಕ್ರಮಣಕಾರಿ ಆಟಕ್ಕೆ ಮುಂದಾದರು. ಅರ್ಧಶತಕದ ಹೊಸ್ತಿಲಲ್ಲಿ ಇದ್ದಾಗ ನದೀಮ್ ಬೌಲಿಂಗ್‌ನಲ್ಲಿ ಕಿಶನ್ ಎಲ್‌ಬಿಡಬ್ಲ್ಯೂ ಆಗಿದ್ದರು. ಆದರೆ, ಅದು ನೋಬಾಲ್ ಆಗಿತ್ತು. ಜೀವದಾನ ಪಡೆದ ಕಿಶನ್ ಮತ್ತೆ ಹಿಂದೆ ನೋಡಲಿಲ್ಲ. ಕೇವಲ 87 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್‌ಗಳ ಸಹಿತ 114 ರನ್ ಚಚ್ಚಿದರು. ಮೊದಲ ವಿಕೆಟ್‌ಗೆ ಈ ಜೋಡಿ 210 ರನ್ ಸೇರಿಸಿತು.
ದೇವಧರ್ ಟ್ರೋಫಿ: ರಹಾನೆ ತಂಡ ಮಣಿಸಿ ಫೈನಲ್ ಪ್ರವೇಶಿಸಿದ ಶ್ರೇಯಸ್ ಬಳಗ
ರೈನಾ ಮತ್ತೆ ವೈಫಲ್ಯ
ಹಿರಿಯ ಆಟಗಾರ ಸುರೇಶ್ ರೈನಾ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳಲು ಸಿಕ್ಕ ಅವಕಾಶದಲ್ಲಿ ಮತ್ತೆ ವೈಫಲ್ಯ ಅನುಭವಿಸಿದರು. 26 ರನ್ ಗಳಿಸಿದ್ದ ಶುಭ್‌ಮನ್ ಗಿಲ್ ಔಟಾದ ಬಳಿಕ ಬಂದ ರೈನಾ, ಕೇವಲ ಎರಡು ರನ್‌ಗೆ ಮಾರ್ಕಂಡೆ ಬೌಲಿಂಗ್‌ನಲ್ಲಿ ಔಟಾದರು. ಈ ಟ್ರೋಫಿಯ ಮೂರೂ ಪಂದ್ಯಗಳಲ್ಲಿ ಅವರು ಒಮ್ಮೆಯೂ ಎರಡಂಕಿಯ ಮೊತ್ತು ದಾಖಲಿಸಲಿಲ್ಲ.
ದೇವಧರ್ ಟ್ರೋಫಿ: ದಿನೇಶ್ ಕಾರ್ತಿಕ್ ಹೋರಾಟ ವ್ಯರ್ಥ, ಭಾರತ ಬಿ ತಂಡಕ್ಕೆ ಜಯ

ಸೂರ್ಯಕುಮಾರ್ ಮಿಂಚು
ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಒಂದೆಡೆ ರಹಾನೆ ಕೂಡ ರನ್ ಗತಿ ಹೆಚ್ಚಿಸಿದರು. ಸೂರ್ಯಕುಮಾರ್ 18 ಎಸೆತಗಳಲ್ಲಿ 4 ಸಿಕ್ಸರ್ ನೆರವಿನೊಂದಿಗೆ 39 ರನ್ ಬಾರಿಸಿದರು. ರಹಾನೆ 156 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳೊಂದಿಗೆ 144 ರನ್ ಗಳಿಸಿ ಅಜೇಯರಾಗಿ ಉಳಿದರು.
ವಿಂಡೀಸ್ ವಿರುದ್ಧದ ಕೊನೆಯ ಎರಡು ಪಂದ್ಯ: ಕೇದಾರ್ ಜಾಧವ್‌ಗೆ ಬುಲಾವ್

ಮಯಾಂಕ್ ನಿರಾಶೆ
ಬೃಹತ್ ಗುರಿ ಬೆನ್ನತ್ತಿದ ಬಿ ತಂಡಕ್ಕೆ ಭರವಸೆಯ ಆಟಗಾರ ಮಯಾಂಕ್ ಅಗರವಾಲ್ ಅವರು ಆರಂಭದಲ್ಲಿಯೇ ವಿಕೆಟ್ ಒಪ್ಪಿಸಿದ್ದು ಆಘಾತ ತಂದಿತು. ಕೇವಲ 14 ರನ್ ಗಳಿಸಿ ಮಯಾಂಕ್ ಔಟಾದರು. ಬಳಿಕ ಎರಡನೆಯ ವಿಕೆಟ್‌ಗೆ ರುತುರಾಜ್ ಗಾಯಕ್ವಾಡ್ ಮತ್ತು ನಾಯಕ ಶ್ರೇಯಸ್ ಅಯ್ಯರ್ 116 ರನ್‌ಗಳ ಉತ್ತಮ ಜತೆಯಾಟ ನೀಡಿದರು. 56 ಎಸೆತಗಳಲ್ಲಿ 60 ರನ್ ಗಳಿಸಿದ್ದ ಗಾಯಕ್ವಾಡ್ ಔಟಾದ ಬಳಿಕ ತಂಡ ಕುಸಿತದ ಹಾದಿ ಕಂಡಿತು.

ಏಕಾಂಗಿಯಾದ ಶ್ರೇಯಸ್
ಹನುಮ ವಿಹಾರಿ, ಮನೋಜ್ ತಿವಾರಿ ಅಲ್ಪ ಮೊತ್ತಕ್ಕೆ ಔಟಾದರು. ನಂತರ ವಿಕೆಟ್ ಕೀಪರ್ ಅಂಕುಶ್ ಬೈಯ್ನ್ಸ್ ಅರ್ಧಶತಕದ ಜತೆಯಾಟ ನೀಡಿದರು. ಕೆ. ಗೌತಮ್, ದೀಪಕ್ ಚಾಹರ್ ಅಲ್ಪ ಕಾಣಿಕೆ ನೀಡಿದರು. ಬಹುತೇಕ ಏಕಾಂಗಿ ಹೋರಾಟ ನಡೆಸಿದ ಶ್ರೇಯಸ್, 114 ಎಸೆತಗಳಲ್ಲಿ 148 ರನ್ ಗಳಿಸಿದ್ದಾಗ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ ಎಂಟು ಸಿಕ್ಸರ್‌ಗಳು ಇದ್ದವು. ಇದರಿಂದ ಬಿ ತಂಡದ ಗೆಲುವಿನ ಕನಸು ಕಮರಿತು.
ಸಂಕ್ಷಿಪ್ತ ಸ್ಕೋರ್
ಭಾರತ ಸಿ: 352/7 (50) ಅಜಿಂಕ್ಯ ರಹಾನೆ 144*, ಇಶಾನ್ ಕಿಶನ್ 114, ಸೂರ್ಯಕುಮಾರ್ ಯಾದವ್ 39, ಜಯದೇವ್ ಉನದ್ಕತ್ 52/3, ಮಯಾಂಕ್ ಮಾರ್ಕಂಡೆ 70/2, ದೀಪಕ್ ಚಾಹರ್ 83/2
ಭಾರತ ಬಿ: 323/10 (46.1) ಶ್ರೇಯಸ್ ಅಯ್ಯರ್ 148, ರುತುರಾಜ್ ಗಾಯಕ್ವಾಡ್ 60, ಅಂಕುಶ್ ಬೈಯ್ನ್ಸ್ 37, ಪಪ್ಪು ರಾಯ್ 75/3, ನವದೀಪ್ ಸೈನಿ 47/2, ರಜನೀಶ್ ಗುರ್ಬಾನಿ 61/2
ಫಲಿತಾಂಶ: ಭಾರತ ಸಿ ತಂಡಕ್ಕೆ 29 ರನ್ ಗೆಲುವು ಮತ್ತು ದೇವಧರ್ ಟ್ರೋಫಿ
ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications