ಮುಂಬೈ, ಮಾ.10: ರಣಜಿ ಇತಿಹಾಸದಲ್ಲೇ ಫೈನಲ್ ನಲ್ಲಿ ತ್ರಿಶತಕ ದಾಖಲಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಕರ್ನಾಟಕದ ಕರುಣ್ ನಾಯರ್ ಪಾತ್ರರಾಗಿದ್ದಾರೆ. ಅದರಲ್ಲೂ ದೇಶಕ್ಕೆ ಸ್ವಾತಂತ್ಯ ಬಂದ ನಂತರ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯದಲ್ಲಿ ಆಟಗಾರನೊಬ್ಬ ತ್ರಿಶತಕ ಸಿಡಿಸಿದ ದಾಖಲೆ 23ವರ್ಷ ವಯಸ್ಸಿನ ಕರುಣ್ ಕಲಾಧರನ್ ನಾಯರ್ ಪಾಲಾಗಿದೆ.
ರಣಜಿ ಫೈನಲ್ ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ದಾಖಲೆ ಇಂದಿನ ತನಕ ದಿಗ್ಗಜ ಗುಂಡಪ್ಪ ವಿಶ್ವನಾಥ್ ಅವರ ಹೆಸರಿನಲ್ಲಿತ್ತು. ವಿಶ್ವನಾಥ್ ಅವರು 1977-78ರಲ್ಲಿ ಉತ್ತರಪ್ರದೇಶ ವಿರುದ್ಧ 247 ರನ್ ಬಾರಿಸಿದ್ದರು. ಈ ದಾಖಲೆಯನ್ನು ಕರುಣ್ ಮುರಿದಿದ್ದು ಸೊಗಸಾದ ತ್ರಿಶತಕ ಬಾರಿಸಿದ್ದಾರೆ.[ಕರುಣ್ ನಾಯರ್ ದಾಖಲೆ ತ್ರಿಶತಕ, ತಮಿಳರಿಗೆ ಪುಕ ಪುಕ]
ತಮಿಳುನಾಡು ವಿರುದ್ಧ ಕರ್ನಾಟಕದ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದು, ಹಲವು ದಾಖಲೆಗಳನ್ನು ಮೆಟ್ಟಿ ನಿಂತಿದ್ದಾರೆ. ಮೂರನೇ ದಿನದ ಅಂತ್ಯಕ್ಕೆ ಕರ್ನಾಟಕ 189 ಓವರ್ ಗಳಲ್ಲಿ 618/7 ಸ್ಕೋರ್ ಮಾಡಿದ್ದು, 484ರನ್ ಮುನ್ನಡೆ ಪಡೆದುಕೊಂಡಿದೆ. [ಕರುಣ್, ವಿನಯ್ ದಾಖಲೆ, ಕರ್ನಾಟಕಕ್ಕೆ ಜಯದ ನಿರೀಕ್ಷೆ]

ಕರುಣ್ ಸಾಧನೆಯ ಮುಖ್ಯಾಂಶ ಇಲ್ಲಿದೆ:
* ರಣಜಿ ಫೈನಲ್ ನಲ್ಲಿ ಕರ್ನಾಟಕದ ಪರ ಅತಿಹೆಚ್ಚು ವೈಯಕ್ತಿಕ ರನ್ ಗಳಿಕೆ ಕರುಣ್ ನಾಯರ್ ಅಜೇಯ 328 ರನ್ (560ಎ, 46x4,1x6)ಗಳಿಸಿದ್ದಾರೆ.
* 6ನೇ ವಿಕೆಟ್ ಗೆ ಕೆಎಲ್ ರಾಹುಲ್ 188ರನ್ (320ಎ, 17X4, 3X6) ಜೊತೆ ಸೇರಿ 386ರನ್ ದಾಖಲೆಯ ಜೊತೆಯಾಟ.
* 8ನೇ ವಿಕೆಟ್ ಗೆ ನಾಯಕ ವಿನಯ್ ಕುಮಾರ್ (41ರನ್ ಅಜೇಯ) ಜೊತೆ 117ರನ್ ಕಲೆ ಹಾಕಿದ್ದಾರೆ.
* ಕರುಣ್ ನಾಯರ್ ಎರಡು ದಿನ ಪೂರ್ತಿ 815 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿ ತ್ರಿಶತಕ ದಾಖಲಿಸಿದ್ದಾರೆ. ರಂಗರಾಜನ್ ಬೌಲಿಂಗ್ ನಲ್ಲಿ ರಿವರ್ಸ್ ಸ್ವೀಪ್ ಬಾರಿಸಿ 300ರನ್ ಗಡಿ ದಾಟಿದ್ದು ವಿಶೇಷ. [ಪ್ರಥಮ ದರ್ಜೆ ಕ್ರಿಕೆಟ್ ಟಾಪ್ 10 ಪಟ್ಟಿಯಲ್ಲಿ ರಾಹುಲ್]
* ಸ್ವಾತಂತ್ರ್ಯ ಬಂದ ನಂತರ ರಣಜಿ ಫೈನಲ್ ನಲ್ಲಿ ದಾಖಲಾದ ಮೊಟ್ಟ ಮೊದಲ ತ್ರಿಶತಕ ಹೊಡೆದ ಆಟಗಾರ ಕರುಣ್ ನಾಯರ್.
* ಸ್ವಾತಂತ್ರ್ಯ ಪೂರ್ವದಲ್ಲಿ 1946-47ರಲ್ಲಿ ಬರೋಡಾದ ಗುಲ್ ಮಹಮ್ಮದ್ ಅವರು 319ರನ್ vs ಹೋಲ್ಕರ್ ಪ್ರಾಂತ್ಯ.
* ರಣಜಿ ಫೈನಲ್ ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್(328) ಗಳಿಸಿದ ಆಟಗಾರ ಎಂದು 23 ವರ್ಷ ವಯಸ್ಸಿನ ಕರುಣ್ ನಾಯರ್ ಹೆಸರು ದಾಖಲಾಗಿದೆ.
* ಕರ್ನಾಟಕದ ಪರ ತ್ರಿಶತಕ ಬಾರಿಸಿದ ಎರಡನೇ ಆಟಗಾರ ಕರುಣ್ ನಾಯರ್. ಮೊದಲ ತ್ರಿಶತಕ ಕೆಎಲ್ ರಾಹುಲ್ ಬಾರಿಸಿದ್ದರು.
* ಕಳೆದ 80 ವರ್ಷ ರಣಜಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಋತುವಿನಲ್ಲಿ ಕರ್ನಾಟಕ ಪರ ಎರಡು ತ್ರಿಶತಕ ದಾಖಲಾಗಿದೆ.
* ಕರುಣ್ ನಾಯರ್ ಪ್ರಸಕ್ತ ರಣಜಿ ಋತುವಿನಲ್ಲಿ ಈ ಪಂದ್ಯಕ್ಕೂ ಮುನ್ನ 9 ಪಂದ್ಯದಲ್ಲಿ 381ರನ್, 63 ಗರಿಷ್ಠ ಮೊತ್ತ ಮಾತ್ರ ದಾಖಲಿಸಿದ್ದರು. ರಣಜಿ ಫೈನಲ್ ವಾರ್ ನಲ್ಲಿ ಭರ್ಜರಿಯಾಗಿ ಪ್ರದರ್ಶನ ನೀಡಿದ್ದಾರೆ. [ತ್ರಿಶತಕ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್]
ಕರ್ನಾಟಕದ ಪರ ಅತಿ ಹೆಚ್ಚು ರನ್(250+) ಗಳಿಸಿದ ಆಟಗಾರರು:
* 337- ಕೆಎಲ್ ರಾಹುಲ್
* 328-ಕರುಣ್ ನಾಯರ್ (ಮಾ.11,2015)
* 283- ಬ್ಯಾರಿಂಗ್ಟನ್ ರೋಲ್ಯಾಂಡ್
* 267- ವಿ ಅರುಣ್ ರಾಜ
* 264*- ಸಿಎಂ ಗೌತಮ್
* 259*- ಕೆ ಜೆಸ್ವಂತ್
ಒನ್ ಇಂಡಿಯಾ ಸುದ್ದಿ