ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಹಾಗೂ ಶ್ರೇಯಸ್ ಐಯ್ಯರ್ ಭರ್ಜರಿ ಶತಕ ಸಿಡಿಸುವ ಅವಕಾಶ ಕಳೆದುಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಮಿಂಚಲು ವಿಫಲವಾಗಿದ್ದ ಪಂತ್ ಎರಡನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. 105 ಎಸೆತಗಳನ್ನು ಎದುರಿಸಿದ ಪಂತ್ 93 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.
ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್‌ಗೆ ಇಳಿದ ರಿಷಭ್ ಪಂತ್ ಶ್ರೇಯಸ್ ಐಯ್ಯರ್ ಜೊತೆ ಸೇರಿಕೊಂಡು ಅದ್ಭುತ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಈ ಜೊತೆಯಾಟದಿಂದಾಗಿ ಭಾರತ ತಂಡ ಈಗಾಗಲೇ ಪಂದ್ಯದಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಪಂದ್ಯದಲ್ಲಿನ ಬಿಗಿ ಹಿಡಿತವನ್ನು ಮುಂದುವರಿಸಿದೆ.
ಈ ಪಂದ್ಯದಲ್ಲಿ ರಿಷಭ್ ಪಂತ್ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿ ಮಿಂಚಿದರು. 90ಕ್ಕಿಂತಲೂ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿಯೇ ಬಹುತೇಕ ಅವಧಿಯಲ್ಲಿ ಬ್ಯಾಟ್ ಬೀಸಿರುವ ಪಂತ್ ಈ ಇನ್ನಿಂಗ್ಸ್‌ನಲ್ಲಿ ಭರ್ಜರಿ ಐದು ಸಿಕ್ಸರ್ ಸಿಡಿಸಿದರು. ಆದರೆ ಶತಕದ ಅಂಚಿನಲ್ಲಿ ಎಡವಿದ ರಿಷಬ್ ಪಂತ್ 93 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.
ಇನ್ನು ರಿಷಭ್ ಪಂತ್‌ಗೆ ಅದ್ಭುತವಾದ್ ಸಾಥ್ ನೀಡಿದ ಶ್ರೇಯಸ್ ಐಯ್ಯರ್ ಕೂಡ ಶತಕಗಳಿಸಲು ವಿಫಲವಾದರು. ಶ್ರೇಯಸ್ ಐಯ್ಯರ್ ಈ ಪಂದ್ಯದಲ್ಲಿ 87 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ಈ ಜೋಡಿ ಬೇರ್ಪಟ್ಟ ಬಳಿಕ ಟೀಮ್ ಇಂಡಿಯಾ ಮತ್ತೊಮ್ಮೆ ಕುಸಿತ ಕಂಡಿದ್ದು 314 ರನ್‌ಗಳಿಗೆ ಮೊದಲ ಇನ್ನಿಂಗ್ಸ್‌ನ ಆಟವನ್ನು ಮುಗಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 87 ರನ್‌ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.
ಅಗ್ರ ಕ್ರಮಾಂಕದ ಆಟಗಾರರಿಂದ ನೀರಸ ಪ್ರದರ್ಶನ: ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಆಟಗಾರರಿಂದ ನೀರಸ ಪ್ರದರ್ಶನ ವ್ಯಕ್ತವಾಯಿತು. ನಾಯಕ ರಾಹುಲ್ 10 ರನ್‌ಗಳಿಸಿ ವಿಕೆಟ್ ಕಳೆದುಕೊಂಡರ ಶುಬ್ಮನ್ ಗಿಲ್ 20 ರನ್‌ಗೆ ಔಟಾದರು. ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ತಲಾ 24 ರನ್‌ಗಳಿಸಲಷ್ಟೇ ಶಕ್ತವಾದರು
ಇತ್ತಂಡಗಳ ಆಡುವ ಬಳಗ
ಟೀಮ್ ಇಂಡಿಯಾ: ಕೆಎಲ್ ರಾಹುಲ್(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟ್ಟನ್ ದಾಸ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್(ನಾಯಕ), ನೂರುಲ್ ಹಸನ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ತಸ್ಕಿನ್ ಅಹ್ಮದ್