ಮತ್ತೆ ಘನತೆ ಮೆರೆದ ಸಂಭಾವಿತ ಕ್ರಿಕೆಟಿಗ ರಾಹುಲ್ ದ್ರಾವಿಡ್

Posted By:
Rahul Dravid ask BCCI to treat all eqauly

ಬೆಂಗಳೂರು, ಫೆಬ್ರವರಿ 06: ರಾಹುಲ್ ದ್ರಾವಿಡ್ ಎಂದರೆ ಎಲ್ಲರಿಗೂ ಗೌರವ, ಪ್ರೀತಿ, ಮೆಚ್ಚುಗೆ ಅದಕ್ಕೆ ಕಾರಣ ಆ ಮನುಷ್ಯನ ಸರಳತೆ, ಅಹಂಕಾರ ಇಲ್ಲದ ಅವರ ಮಾತು. ಅದಮ್ಯ ತಾಳ್ಮೆ, ನಿಷ್ಕಲ್ಮಶ ಕ್ರಿಕೆಟ್ ಪ್ರೀತಿ ರಾಹುಲ್ ಅವರನ್ನು ವಿಶ್ವಕ್ರಿಕೆಟ್ ಸಭಾವಿತ ಕ್ರಿಕೆಟಿಗನನ್ನಾಗಿ ಗುರುತಿಸುವುದು ಇದೇ ಕಾರಣಕ್ಕೆ.

ರಾಹುಲ್ ಅವರಿಗಿರುವ ಎಲ್ಲ ಉಪಮಾನ, ಉಪಮೇಯಗಳಿಗೂ ಉದಾಹರಣೆ ಒದಗಿಸುವಂತಹ ಘಟನೆ ಒಂದು ನಡೆದಿದೆ. ಕಿರಿಯರು ವಿಶ್ವಕಪ್ ಜಯಿಸಿದ ನಂತರ ಬಿಸಿಸಿಐ ಘೋಷಸಿದ ಉಡುಗೊರೆಗಳ ಕುರಿತ ರಾಹುಲ್ ಹೇಳಿಕೆ ಅವರು ಏಕೆ ಸಂಭಾವಿತ ಕ್ರಿಕೆಟಿಗ, ರಾಹುಲ್ ಮೇಲೆ ಅವರ ಅಭಿಮಾನಿಗಳಿಗೇಕೆ ಅಷ್ಟು ಪ್ರೀತಿ ಎಂಬುದು ಸಾಬೀತಾಗಿಬಿಡುತ್ತದೆ.

ಅಂಡರ್‌19 ವಿಶ್ವಕಪ್ ಗೆಲುವಿನ ಹಿಂದಿದೆ 14 ತಿಂಗಳ ಪರಿಶ್ರಮ

ಕಿರಿಯರ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಕೂಡಲೇ ಬಿಸಿಸಿಐ ಆಟಗಾರರಿಗೆ ತಲಾ 30 ಲಕ್ಷ, ಸಿಬ್ಬಂದಿಗೆ 20 ಲಕ್ಷ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ 50 ಲಕ್ಷ ಉಡುಗೊರೆ ಘೋಷಿಸಿತು.

ಬಿಸಿಸಿಐನ ಈ ನಡೆ ಬಗ್ಗೆ ಆಕ್ಷೇಪವ್ಯಕ್ತಪಡಿಸಿರುವ ರಾಹುಲ್ ದ್ರಾವಿಡ್ ಬೆಂಬಲ ಸಿಬ್ಬಂದಿಗೆ ಕಡಿಮೆ ಹಣ ನೀಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ತನಗೂ 20 ಲಕ್ಷ ಕೊಡಿ ಅಥವಾ ಅವರಿಗೂ 50 ಲಕ್ಷ ಕೊಡಿ ಎಂಬುದು ದ್ರಾವಿಡ್ ಬೇಡಿಕೆ.

ನ್ಯೂಜಿಲೆಂಡ್‌ನಿಂದ ತವರಿಗೆ ವಾಪಾಸ್ಸಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದ್ರಾವಿಡ್ 'ಗೆಲುವಿಗೆ ನಾನೊಬ್ಬನೇ ಕಾರಣನಲ್ಲ, ತಂಡದ ಎಲ್ಲ ಸಹಾಯಕ ಸಿಬ್ಬಂದಿ, ಇತರ ಕೋಚ್‌ಗಳು ಒಂದಾಗಿ ಸತತ ಪರಿಶ್ರಮ ಪಟ್ಟು ತಂಡ ವಿಶ್ವಕಪ್ ಜಯಿಸುವಂತೆ ಮಾಡಿದ್ದಾರೆ' ಎನ್ನುವ ಮೂಲಕ ಸೂಕ್ಷ್ಮವಾಗಿ ಎಲ್ಲ ಸಿಬ್ಬಂದಿಯನ್ನೂ ಒಂದೇ ರೀತಿ ಕಾಣುವಂತೆ ದ್ರಾವಿಡ್ ಸೂಚಿಸಿದ್ದಾರೆ.

ದ್ರಾವಿಡ್ ಅವರು ಈ ಕುರಿತು ನೇರವಾಗಿಯೂ ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಸಹಾಯಕ ಸಿಬ್ಬಂದಿಗಳಿಗೆ 20 ಲಕ್ಷ ಘೋಷಿಸಿರುವ ಕಾರಣ ಕಿರಿಯರ ತಂಡದ ಬೌಲಿಂಗ್ ತರಬೇತುದಾರ ಪರಾಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಅಭಯ್ ಶರ್ಮಾ, ಫಿಸಿಯೋತೆರಪಿಸ್ಟ್ ಯೋಗೇಶ್ ಪಾರ್ಮರ್, ತರಬೇತುದಾರ ಆನಂದ್ ಡಾಟೆ, ಮಾಲೀಶು ಮಾಡುವ ಮಂಜೇಶ್ ಗಾಯಕ್‌ವಾಡ್, ವಿಡಿಯೊ ವಿಶ್ಲೇಷಕ ದೇವರಾಜ್ ರೌತ್ ಇನ್ನೂ ಮುಂತಾದ ಪ್ರಮುಖರು ಕಡಿಮೆ ಹಣ ಪಡೆಯುವಂತಾಗಿದೆ.

ರಾಹುಲ್ ದ್ರಾವಿಡ್ ಅವರು ಹೆಚ್ಚು ಸಂಭಾವನೆ ಇದ್ದ ಹೆಚ್ಚು ಪ್ರಚಾರ ದೊರೆಯುತಿದ್ದ, ಹೆಚ್ಚು ಐಶಾರಾಮಿ ಆಗಿದ್ದ ಐಪಿಎಲ್ ತಂಡದ ಕೋಚ್ ಸ್ಥಾನದ ಅವಕಾಶವನ್ನು ತ್ಯಜಿಸಿ ಕಿರಿಯರ ತಂಡಕ್ಕೆ ಕೋಚ್ ಆಗಿ ಸೇರಿಕೊಂಡಿದ್ದರು. ರಾಹುಲ್ ಅವರಿಗೆ ಹಣಕ್ಕಿಂತಲೂ ಭಾರತದ ಕ್ರಿಕೆಟ್ ಭವಿಷ್ಯವನ್ನು ಬೆಳಗಿಸುವುದೇ ಬೇಕಿತ್ತು. ಹಾಗಾಗಿ ಅವರು ಇತರ ಕ್ರಿಕೆಟಿಗರಿಗಿಂತಲೂ ಭಿನ್ನ ಮತ್ತು ಹೆಚ್ಚು ಕ್ರಿಕೆಟ್ ಪ್ರಿಯರಿಗೆ ಆಪ್ತ ಕೂಡ.

ಮೊನ್ನೆ ಬೆಂಗಳೂರಿಗೆ ಬಂದ ಪ್ರಧಾನಿ ಮೋದಿ ಅವರೂ ಕೂಡ ರಾಹುಲ್ ದ್ರಾವಿಡ್ ಹೆಸರು ಬಳಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ ಎಂದರೆ ದ್ರಾವಿಡ್ ಅವರದ್ದು ಎಂತಹಾ ಚುಂಬಕ ವ್ಯಕ್ತಿತ್ವ ಎಂತಹಾ ಅಭಿಮಾನಿ ಬಳಗ ಎಂಬುದನ್ನೇ ನೀವೆ ಯೋಚಿಸಿ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, February 6, 2018, 13:34 [IST]
Other articles published on Feb 6, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ