
ಮ್ಯಾಚ್ ವಿನ್ನರ್ ಆಗಿದ್ದರೂ 2ನೇ ಪಂದ್ಯಕ್ಕಿಲ್ಲ ಅವಕಾಶ
ಕುಲ್ದೀಪ್ ಯಾದವ್ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಐದು ವಿಕೆಟ್‌ಗಳ ಗೊಂಚಲಿನ ಸಹಿತ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 8 ವಿಕೆಟ್ ಸಂಪಾದಿಸಿದ್ದ ಕುಲ್ದೀಪ್ ಯಾದವ್ ಬ್ಯಾಟಿಂಗ್‌ನಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಎರಡನೇ ಪಂದ್ಯದ ಆಡುವ ಬಳಗದಲ್ಲಿ ಕುಲ್ದೀಪ್ ಯಾದವ್‌ಗೆ ಅವಕಾಶ ದೊರೆಯದಿರುವುದು ಬಹುತೇಕ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೂ ಅಚ್ಚರಿ ಮೂಡಿಸಿತ್ತು.

ಟೀಕೆಗೆ ಗುರಿಯಾಗಿದ್ದ ನಿರ್ಧಾರ
ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಹೊರತಾಗಿಯೂ ಆಡುವ ಬಳಗದಲ್ಲಿ ಸ್ಥಾನ ದೊರೆಯದ ಕಾರಣದಿಂದಾಗಿ ಟೀಮ್ ಇಂಡಿಯಾ ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿತ್ತು. ಸುನಿಲ್ ಗವಾಸ್ಕರ್, ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದರು. ಈ ರೀತಿಯ ನಿರ್ಧಾರಗಳಿಗೆ ಅರ್ಥವೇ ಇಲ್ಲ ಎಂದಿದ್ದರು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್. ನಂತರ ಭಾರತ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಈ ಬಗ್ಗೆ ಮಾತನಾಡುತ್ತಾ ಇದು ಒಟ್ಟು ತಂಡದ ನಿರ್ಧಾರವಾಗಿತ್ತು ಹಾಗೂ ಮ್ಯಾನೇಜ್‌ಮೆಂಟ್ ಈ ನಿರ್ಧಾರವನ್ನು ತೆಗೆದುಕೊಂಡಿತ್ತು ಎಂದಿದ್ದರು.

ಪಶ್ಚಾತ್ತಾಪ ಇಲ್ಲ ಎಂದ ರಾಹುಲ್
ಇನ್ನು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಎರಡನೇ ಪಂದ್ಯದ ಆಡುವ ಬಳಗದಿಂದ ಹೊರಗಿಟ್ಟ ನಿರ್ಧಾರದ ಬಗ್ಗೆ ಹಂಗಾಮಿ ನಾಯಕ ಕೆಎಲ್ ರಾಹುಲ್ ಸಮರ್ಥನೆ ನೀಡಿದ್ದಾರೆ. ಅಲ್ಲದೆ ಈ ನಿರ್ಧಾರದ ಬಗ್ಗೆ ಯಾವುದೇ ಬೇಸರವಿಲ್ಲ ಎಂದಿದ್ದಾರೆ ಕೆಎಲ್ ರಾಹುಲ್. "ನನಗೆ ಆ ನಿರ್ಧಾರದ ಬಗ್ಗೆ ಬೇಸರವಿಲ್ಲ. ಅದು ಸೂಕ್ತವಾದ ನಿರ್ಧಾರವಾಗಿತ್ತು. ಈ ಪಿಚ್ ಗಮನಿಸಿದದರೆ ನಮ್ಮ ವೇಗದ ಬೌಲರ್‌ಗಳು ಕೂಡ ಸಾಕಷ್ಟು ವಿಕೆಟ್ ಪಡೆದುಕೊಂಡಿದ್ದರು. ಅವರಿಗೆ ಈ ಪಿಚ್ ಸಾಕಷ್ಟು ಉತ್ತಮವಾಗಿ ನೆರವು ನೀಡಿದೆ. ಇಲ್ಲಿ ಅಸ್ಥಿರವಾಗಿ ಬೌಲ್ಸ್ ಪಡೆಯುತ್ತಿತ್ತು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಕೆಎಲ್ ರಾಹುಲ್.

ಬಹಳ ಕಠಿಣ ನಿರ್ಧಾರವಾಗಿತ್ತು
ಮುಂದುವರಿದು ಮಾತನಾಡಿದ ನಾಯಕ ಕೆಎಲ್ ರಾಹುಲ್ ಎರಡನೇ ಪಂದ್ಯದಲ್ಲಿ ಆಡುವ ಬಳಗದಿಂದ ಕುಲ್ದೀಪ್ ಯಾದವ್ ಅವರನ್ನು ಹೊರಗಿಡುವ ನಿರ್ಧಾರ ಬಹಳ ಕಠಿಣವಾದ ನಿರ್ಧಾರವಾಗಿತ್ತು ಎಂದಿದ್ದಾರೆ. "ಮೊದಲ ಪಂದ್ಯದಲ್ಲಿ ಅವರು ಪಂದ್ಯ ಗೆಲ್ಲಿಸಿಕೊಟ್ಟಿದ್ದ ಕಾರಣ ಅವರನ್ನು ಆಡುವ ಬಳಗದಿಂದ ಹೊರಗಿಡುವುದು ಬಹಳ ಕಠಿಣವಾದ ನಿರ್ಧಾರವಾಗಿತ್ತು. ಆದರೆ ಪಂದ್ಯಕ್ಕೂ ಹಿಂದಿನ ದಿನ ಪಿಚ್ ಗಮನಿಸಿದಾಗ ಇಲ್ಲಿ ವೇಗಿಗಳಿಗೆ ಹಾಗೂ ಸೀಮರ್‌ಗಳಿಗೆ ಹೆಚ್ಚು ನೆರವು ದೊರೆಯುವ ನಿರೀಕ್ಷೆ ಹೊಂದಿದ್ದೆವು. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಂದಾಣಿಕೆಯ ಆಡುವ ಬಳಗದೊಂದಿಗೆ ನಾವು ಕಣಕ್ಕಿಳಿಯಬೇಕಾಗಿತ್ತು"ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್.