ಲಾಸ್ಟ್ ಬಾಲ್ ಥ್ರಿಲ್ಲರ್ ಗೆದ್ದ ಆರ್‌ಸಿಬಿ: ಡೆಲ್ಲಿ ಆವೇಶ ಇಳಿಸಿದ ಭರತ್, ಮ್ಯಾಕ್ಸ್‌ವೆಲ್

ಐಪಿಎಲ್ 14ನೇ ಆವೃತ್ತಿಯ ಅಂತಿಮ ಪಂದ್ಯದ ಅಂತಿಮ ಎಸೆತದಲ್ಲಿ ಆರ್‌ಸಿಬಿ ರೋಚಕ ಗೆಲುವು ಸಾಧಿಸಿದೆ. ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ಗೆಲ್ಲು ಐದು ರನ್‌ಗಳ ಅಗತ್ಯವಿದ್ದಾಗ ಶ್ರೀಕರ್ ಭರತ್ ಸಿಕ್ಸರ್ ಸಿಡಿಸಿ ಆರ್‌ಸಿಬಿ ಗೆಲುವಿಗೆ ಕಾರಣರಾದರು. ಈ ಮೂಲಕ ವಿರಾಟ್ ಕೊಹ್ಲಿ ಪಡೆ ಗೆಲುವಿನೊಂದಿಗೆ ಪ್ಲೇಆಫ್‌ಗೆ ಪ್ರವೇಶಿಸಿದೆ.

ಅಂತಿಮ ಪಂದ್ಯದಲ್ಲಿ ಆರ್‌ಸಿಬಿ ತಂಡದ ಗೆಲುವಿಗೆ 15 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ಎಸೆಯಲು ಯುವ ವೇಗಿ ಆವೇಶ್ ಖಾನ್ ಕಣಕ್ಕಿಳಿದಿದ್ದರು. ಮೊದಲ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಮ್ಯಾಕ್ಸ್‌ವೆಲ್ ಅಂತರವನ್ನು ಕಡಿಮೆಗೊಳಿಸಿದರು. ನಂತರದ ನಾಲ್ಕು ಎಸೆತಗಳಲ್ಲಿ ಆವೇಶ್ ಖಾನ್ ಅದ್ಭುತ ಬೌಲಿಂಗ್ ಮೂಲಕ ನಿಯಂತ್ರಣ ಸಾಧಿಸಿದರು. ಈ ನಾಲ್ಕು ಎಸೆತಗಳಲ್ಲಿ ಅವರು ನಿಡಿದ್ದು ಕೇವಲ 5 ರನ್ ಮಾತ್ರ. ಹೀಗಾಗಿ ಅಂತಿಮ ಎಸೆತದಲ್ಲಿ ಆರ್‌ಸಿಬಿಗೆ ಆರು ರನ್‌ಗಳ ಅಗತ್ಯವಿತ್ತು. ಕೊನೆಯ ಎಸೆತ ಎದುರಿಸಲು ಸ್ಟ್ರೈಕ್‌ನಲ್ಲಿ ಶ್ರೀಕರ್ ಭರತ್ ಇದ್ದರು. ಈ ಸಂದರ್ಭದಲ್ಲಿ ಆವೇಶ್ ಖಾನ್ ವೈಡ್ ಎಸೆದು ತಮ್ಮ ಮೇಲೆ ಒತ್ತಡ ಹೇರಿಕೊಂಡರು. ಅಂತಿಮ ಎಸೆತದಲ್ಲಿ ಆರ್‌ಸಿಬಿ ಗೆಲುವಿಗೆ ಈಗ ಐದು ರನ್‌ಗಳು ಬೇಕಿತ್ತು. ಈ ಎಸೆತವನ್ನು ಶ್ರೀಕರ್ ಭರತ್ ಭರ್ಜರಿ ಸಿಕ್ಸರ್‌ಗೆ ಅಟ್ಟುವ ಮೂಲಕ ಅಮೋಘ ಗೆಲುವನ್ನು ಸಾರಿದರು.

ಆರಂಭಿಕ ಕುಸಿತ ಕಂಡ ಆರ್‌ಸಿಬಿ: ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ್ದ 165 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಆರಂಭದಲ್ಲಿಯೇ ಆಘಾತವನ್ನು ಅನುಭವಿಸಿತು. ತಂಡದ ಮೊತ್ತ 6 ರನ್‌ಗಳಾಗಿದ್ದಾಗ ಆರ್‌ಸಿಬಿ ತಂಡದ ಇಬ್ಬರು ಆರಂಭಿಕರು ಕೂಡ ವಿಕೆಟ್ ಕಳೆದುಕೊಂಡಿದ್ದರು. ಯುವ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಗೋಲ್ಡನ್ ಡಕ್ ಆಗುವ ಮೂಲಕ ನಿರಾಸೆ ಮೂಡಿಸಿದರೆ ನಾಯಕ ವಿರಾಟ್ ಕೊಹ್ಲಿ 8 ಎಸೆತಗಳಲ್ಲಿ ನಾಲ್ಕು ರನ್‌ಗಳಿಸಿ ಅನ್ರಿಚ್ ನಾರ್ಕಿಯಾಗೆ ಬಲಿಯಾದರು. ಈ ಮೂಲಕ ಡೆಲ್ಲಿ ಆರಂಭದಲ್ಲಿಯೇ ಯಶಸ್ಸು ಸಾಧಿಸಿತು. ಈ ಪಂದ್ಯದಲ್ಲಿ ಶ್ರೀಕರ್ ಭರತ್‌ಗೆ ಮತ್ತೆ ಮೂರನೇ ಕ್ರಮಾಂಕದಲ್ಲಿ ಅವಕಾಶ ನೀಡಿತ್ತು ಆರ್‌ಸಿಬಿ. ನಾಲ್ಕನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಕಣಕ್ಕಿಳಿದಿದ್ದರು. ಈ ಜೊಡಿ ಕುಸಿತವನ್ನು ತಡೆಯುವ ಪ್ರಯತ್ನ ನಡೆಸಿ ಅದರಲ್ಲಿ ಒಮದು ಹಂತದ ಯಶಸ್ಸು ಸಾಧಿಸಿತು. ಮೂರನೇ ವಿಕೆಟ್‌ಗೆ 49 ರನ್‌ಗಳ ಮಹತ್ವದ ಜೊತೆಯಾಟ ಆರ್‌ಸಿಬಿಗೆ ಲಭ್ಯವಾಗಿತ್ತು.

ಭರತ್, ಮ್ಯಾಕ್ಸ್‌ವೆಲ್ ಸಮಯೋಚಿತ ಆಟ: ಅನುಭವಿ ಎಬಿ ಡಿವಿಲಿಯರ್ಸ್ ಮೂರನೇ ವಿಕೆಟ್ ರೂಪದಲ್ಲಿ ಫೆವಿಲಿಯನ್ ಸೇರಿಕೊಂಡಾಗ ಆರ್‌ಸಿಬಿ 9.3 ಓವರ್‌ಗಳಲ್ಲಿ 55 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ನಲ್ಲಿದ್ದ ಶ್ರೀಕರ್ ಭರತ್‌ಗೆ ಜೊತೆಯಾಗಿದ್ದು ಗ್ಲೆನ್ ಮ್ಯಾಕ್ಸ್‌ವೆಲ್. ಈ ಜೋಡಿ ಸಮಯೋಚಿತ ಆಟವನ್ನು ಪ್ರದರ್ಶಿಸುವ ಮೂಲಕ ಡೆಲ್ಲಿ ಬೌಲರ್‌ಗಳ ವಿರುದ್ಧ ಮೇಲುಗೈ ಸಾಧಿಸುತ್ತಾ ಸಾಗಿದರು. ಡೆಲ್ಲಿ ಫೀಲ್ಡರ್‌ಗಳು ಮಾಡಿದ ತಪ್ಪುಗಳನ್ನು ಅದ್ಭುತವಾಗಿ ಬಳಸಿಕೊಂಡ ಈ ಆಟಗಾರರು ಪಂದ್ಯವನ್ನು ಗೆಲುವಿನ ಸನಿಹಕ್ಕೆ ತಂದರು.

19ನೇ ಓವರ್‌ನಲ್ಲಿ ನಾರ್ಕಿಯಾ ಆಘಾತ: ಅಂತಿಮ 12 ಎಸೆತಗಳಲ್ಲಿ ಆರ್‌ಸಿಬಿ ತಂಡಕ್ಕೆ 19 ರನ್‌ಗಳ ಅವಶ್ಯಕತೆಯಿತ್ತು. ಕ್ರೀಸ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಕೂಡ ನೆಲೆಯೂರಿದ್ದ ಕಾರಣ ಪಂದ್ಯ ಆರ್‌ಸಿಬಿ ಪರವಾಗಿಯೇ ಇತ್ತು. ಆದರೆ ಅಂತಿಮ ಓವರ್‌ನಲ್ಲಿ ನಾರ್ಕಿಯಾ ಆರ್‌ಸಿಬಿಗೆ ಆಘಾಯ ನೀಡಿದರು. ಭರತ್ ಹಾಗೂ ಮ್ಯಾಕ್ಸ್‌ವೆಲ್ ಈ ಓವರ್‌ನಲ್ಲಿ ಗಳಿಸಿದ್ದು ಕೇವಲ 4 ರನ್‌ಗಳನ್ನು ಮಾತ್ರ. ಈ ಮೂಲಕ ಪಂದ್ಯದಲ್ಲಿ ಡೆಲ್ಲಿ ಕೈಮೇಲಾಗುವ ಲಕ್ಷಣಗಳು ಕಂಡು ಬಂದಿತ್ತು.

ಲಾಸ್ಟ್ ಓವರ್ ಥ್ರಿಲ್ಲರ್!! ಆವೇಶ್ ಖಾನ್ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ನೀಡಿದರೂ ಬಳಿಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಎಸೆರನೇ ಎಸೆತದಲ್ಲಿ 2 ರನ್ ಮಾತ್ರ ಪೊಡೆಯಲು ಮ್ಯಾಕ್ಸ್‌ವೆಕ್ ಯಶಸ್ವಿಯಾದರು. ಮೂರನೇ ಎಸೆತದಲ್ಲಿ ಭಯಾನಕ ಯಾರ್ಕ್ ಎಸೆಯುವ ಮೂಲಕ ಮ್ಯಾಕ್ಸ್‌ವೆಲ್‌ಗೆ ಆಘಾತ ನೀಡಿದರು. ಇದರಲ್ಲಿ ಒಂಟಿ ರನ್ ಕದಿಯುವಲ್ಲಿ ಆರ್‌ಸಿಬಿ ಯಶಸ್ವಿಯಾಯಿತು. ನಾಲ್ಕನೇ ಎಸೆತದಲ್ಲಿ ಮತ್ತೊಂದು ಅದ್ಭುತ ಬೌಲಿಂಗ್ ದಾಳಿ ನಡೆಸಿದರು ಆವೇಶ್. ಕ್ರೀಸ್‌ನಲ್ಲಿದ್ದ ಶ್ರೀಕರ್ ಭರತ್ ಚೆಂಡು ಅಟ್ಟುವಲ್ಲಿ ವಿಫಲವಾದರು. ಕೊನೆಯ ಎರಡು ಎಸೆತಗಳಲ್ಲಿ 8 ರನ್‌ಗಳಿಸುವ ಒತ್ತಡ ಆರ್‌ಸಿಬಿ ಮೇಲಿತ್ತು. ಐದನೇ ಎಸೆತದಲ್ಲಿ ಶ್ರೀಕರ್ ಭರತ್ ಎರಡು ರನ್‌ ಗಳಿಸುವಲ್ಲಿ ಯಶಸ್ವಿಯಾದರು.

ಅಂತಿಮ ಎಸೆತದ ರೋಚಕತೆ: ಕೊನೆಯ ಎಸೆತದಲ್ಲಿ ಆರ್‌ಸಿಬಿ ಗೆಲುವಿಗೆ 6 ರನ್‌ಗಳ ಅವಶ್ಯಕತೆಯಿತ್ತು. ಸ್ಟ್ರೈಕ್‌ನಲ್ಲಿ ಶ್ರೀಕರ್ ಭರತ್ ಬ್ಯಾಟ್ ಹಿಡಿದು ಸಿದ್ಧವಾಗಿದ್ದರು. ಈ ಎಸೆತವನ್ನು ಆವೇಶ್ ಖಾನ್ ಯಾರ್ಕರ್ ಎಸೆಯುವ ವಿಫಲ ಪ್ರಯತ್ನ ನಡೆಸಿದರು. ಇದು ಡೆಲ್ಲಿಗೆ ದುಬಾರಿಯಾಯ್ತು. ಆವೇಶ್ ಖಾನ್ ಗುರಿ ತಪ್ಪಿತ್ತು. ಚೆಂಡು ವಿಕೆಟ್‌ನ ಹಿಂಬದಿಯಿಂದ ನೇರವಾಗಿ ವಿಕೆಟ್ ಕೀಪರ್ ಕೈಗೆ ಸೇರಿತ್ತು. ವೈಡ್ ಬಾಲ್ ಎಸೆದಿದ್ದರು ಆವೇಶ್ ಖಾನ್. ಕೊನೆಯ ಎಸೆತದಲ್ಲಿ ಈಗ ಆರ್‌ಸಿಬಿಗೆ ಐದು ರನ್‌ಗಳ ಅವಶ್ಯಕತೆಯಿತ್ತು. ಈಗ ಆರ್‌ಸಿಬಿ ಬೌಂಡರಿ ಗಳಿಸಿದರೂ ಪಂದ್ಯವನ್ನು ಟೈ ಮಾಡಿಕೊಳ್ಳುವ ಅವಕಾಶವಿತ್ತು. ಕೊನೆಯ ಎಸೆತದಲ್ಲಿ ಆವೇಶ್ ಖಾನ್ ಮತ್ತೊಂದು ಫುಲ್‌ಟಾಸ್ ಎಸೆತ ಹಾಕಿದರು. ಶ್ರೀಕರ್ ಭರತ್ ಈ ಚೆಂಡನ್ನು ಅದ್ಭುತವಾಗಿ ಬಾರಿಸಿ ಸಿಕ್ಸರ್ ರೇಖೆಯಾಚೆ ದಾಟಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಆರ್‌ಸಿಬಿ ರೋಚಕವಾಗಿ ಪಂದ್ಯವನ್ನು ಗೆದ್ದುಕೊಂಡಿದೆ.

ಆರ್‌ಸಿಬಿ ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್
ಬೆಂಚ್: ದುಷ್ಮಂತ ಚಮೀರಾ, ಸಚಿನ್ ಬೇಬಿ, ಕೈಲ್ ಜೇಮೀಸನ್, ಟಿಮ್ ಡೇವಿಡ್, ವಾನಿಂದು ಹಸರಂಗ, ನವದೀಪ್ ಸೈನಿ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಪವನ್ ದೇಶಪಾಂಡೆ

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ರಿಪಾಲ್ ಪಟೇಲ್, ಶಿಮ್ರಾನ್ ಹೆಟ್ಮೀರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಕಿಯಾ
ಬೆಂಚ್: ಇಶಾಂತ್ ಶರ್ಮಾ, ಸ್ಟೀವನ್ ಸ್ಮಿತ್, ಉಮೇಶ್ ಯಾದವ್, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕಸ್ ಸ್ಟೋಯಿನಿಸ್, ಟಾಮ್ ಕುರ್ರನ್, ಬೆನ್ ದ್ವಾರಶೂಯಿಸ್, ಲಲಿತ್ ಯಾದವ್, ಕುಲ್ವಂತ್ ಖೆಜ್ರೋಲಿಯಾ, ವಿಷ್ಣು ವಿನೋದ್, ಪ್ರವೀಣ್ ದುಬೆ, ಲುಕ್ಮಾನ್ ಮೇರಿವಾಲಾ

For Quick Alerts
ALLOW NOTIFICATIONS
For Daily Alerts
Story first published: Friday, October 8, 2021, 23:27 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X