ಮಹಿಳಾ ಕ್ರಿಕೆಟ್: ಭಾರತ ವಿರುದ್ಧ ಆಸ್ಟ್ರೇಲಿಯಾಕ್ಕೆ 8 ವಿಕೆಟ್‌ಗಳ ಗೆಲುವು

Posted By:
Australia beats Indian women cricket team by 8 wickets

ವಡೋದರಾ, ಮಾರ್ಚ್ 12: ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಹೀನಾಯ ಸೋಲು ಕಂಡಿದೆ. ಎಲ್ಲಾ ವಿಭಾಗದಲ್ಲೂ ಭಾರತವನ್ನು ಮೆಟ್ಟಿನಿಂತ ಆಸ್ಟ್ರೇಲಿಯಾ ಭಾರತವನ್ನು 8 ವಿಕೆಟ್‌ಗಳಿಂದ ಮಣಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತದ ಮಹಿಳೆಯರು ಸಾಧಾರಣ ಆರಂಭ ಕಂಡರು. ಪೂನಂ ರೌತ್ 37 ರನ್ ಗಳಿಸಿ ಭರವಸೆ ಮೂಡಿಸಿದ್ದರಾದರೂ ಎಲ್‌ಬಿಡಬ್ಲು ಆಗಿ ಪೆವಿಲಿಯನ್ ಸೇರಿದರು. ದ.ಆಫ್ರಿಕಾ ಸರಣಿಯಲ್ಲಿ ಅತ್ಯುತ್ತಮ ಆಟವಾಡಿದ್ದ ಸ್ಮೃತಿ ಮಂದಾನಾ ಅವರು ಕೇವಲ 12 ರನ್‌ಗೆ ಗಾರ್ಡನರ್‌ಗೆ ವಿಕೆಟ್ ಒಪ್ಪಿಸಿದರು.

ರಾಡ್ರಿಗೋಸ್ (1), ಹರ್ಮನ್‌ಪ್ರೀತ್ ಕೌರ್ (9) ಅವರು ಬೇಗ ಪೆವಿಲಿಯನ್ ಸೇರಿದರು, ಆ ನಂತರ ಬಂದ ಕರ್ನಾಟಕದ ವೇದಾ ಕೃಷ್ಣಮೂರ್ತಿ (16) ರನ್ ಗಳಿಸಿ ಔಟಾದರು. ಅಲ್ಪ ಪ್ರತಿರೋಧ ತೋರಿದ ಸುಷ್ಮಾ ವರ್ಮಾ 41 ರನ್ ಗಳಿಸಿದರು. 113 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಮುಳುಗುವ ಹಾದಿಯಲ್ಲಿದ್ದ ತಂಡವನ್ನು 200 ರ ಗಡಿ ದಾಟಿಸಿದ್ದು ಪೂಜಾ ವಸ್ತ್ರಾಕರ್ ಅವರು. ಏಕಾಂಗಿ ಹೊರಾಟ ನಡೆಸಿದ ಅವರು 51 ರನ್ ಗಳಿಸಿ ಮಿಂಚಿದರು.

ಭಾರತದ ಮಹಿಳೆಯರು 50 ಓವರ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡು ಬರೋಬ್ಬರಿ 200 ರನ್ ಗಳಿಸಿದರು. ಆಸ್ಟ್ರೇಲಿಯಾ ಮಹಿಳೆಯರು ಈ ಮೊತ್ತವನ್ನು ಎರಡು ವಿಕೆಟ್ ಕಳೆದುಕೊಂಡು ಕೇವಲ 32.2 ಓವರ್‌ಗಳಲ್ಲಿ ದಾಟಿದರು.

ಆಸ್ಟ್ರೇಲಿಯಾ ಪರ ಬಿರುಸಿನ ಆಟವಾಡಿದ ಆರಂಭಿಕ ಆಟಗಾರ್ತಿ ಬೋಲ್ಟನ್ 101 ಎಸೆತಕ್ಕೆ 100 ರನ್ ಗಳಿಸಿ ಅಜೇಯರಾಗುಳಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳಿದ್ದವು. ಅಲ್ಯಾಸಾ ಹೇಲಿ (38), ಲಾನಿಂಗ್ (33), ಇ ಪೆರ್ರಿ (25) ಗಳಿಸಿ ಬೋಲ್ಟನ್ ಅವರಿಗೆ ಬೆಂಬಲ ನೀಡಿದರು.

ಭಾರತದ ಎಲ್ಲಾ ಬೌಲರ್‌ಗಳಿಗೂ ಅವರು ದಂಡಿಸಿದರು. ಭಾರತದ ಬೌಲರ್‌ಗಳ ಪೈಕಿ ಶಿಖಾ ಪಂಡೆ ಮಾತ್ರ 1 ವಿಕೆಟ್ ಗಳಿಸಿದರು.

Story first published: Monday, March 12, 2018, 17:44 [IST]
Other articles published on Mar 12, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ