ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗುತ್ತಿವೆ.
ಹೆಬ್ಬೆರಳಿನ ಗಾಯದಿಂದಾಗಿ ಭಾರತದ ಕಾಯಂ ನಾಯಕ ರೋಹಿತ್ ಶರ್ಮಾ ಮೊದಲ ಪಂದ್ಯದಿಂದ ಹೊರಗುಳಿದಿದ್ದು, ಅವರ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ಕೆಎಲ್ ರಾಹುಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ಹೀಗಾಗಿ ಶಕಿಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ ಮೊದಲು ಬೌಲಿಂಗ್ ನಡೆಸಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿ ಉಳಿಯಲು ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳು ಮತ್ತು ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಿದೆ.
ಕಳೆದ ವಾರ ಬಾಂಗ್ಲಾದೇಶದ ವಿರುದ್ಧ ಅನುಭವಿಸಿದ 2-1 ಅಂತರದ ಏಕದಿನ ಸರಣಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಗಾಯದಿಂದ ಬಳಲುತ್ತಿರುವ ಭಾರತೀಯ ತಂಡವು ಯುವ ಪಡೆಯನ್ನು ಕಣಕ್ಕಿಳಿಸಲಿದೆ.
ಟಾಸ್ ಗೆದ್ದ ನಂತರ ಮಾತನಾಡಿದ ಭಾರತೀಯ ನಾಯಕ ಕೆಎಲ್ ರಾಹುಲ್, ನಾವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತೇವೆ. ವಿಕೆಟ್ ಚೆನ್ನಾಗಿದೆ, ಸ್ಕೋರ್ ಬೋರ್ಡ್‌ನಲ್ಲಿ ದೊಡ್ಡ ರನ್ ಗಳಿಸಲು ಪ್ರಯತ್ನಿಸುತ್ತೇವೆ. ನಮ್ಮ ತಂಡದಲ್ಲಿ ಕೆಲವರು ಗಾಯಾಳುಗಳಾಗಿದ್ದು, ಯುವ ಆಟಗಾರರಿಗೆ ಅವಕಾಶ ನೀಡಲಿದ್ದೇವೆ. ಕುಲದೀಪ್ ಯಾದವ್ ಸೇರಿದಂತೆ ಮೂವರು ಸ್ಪಿನ್ನರ್‌ಗಳು ಮತ್ತು ಇಬ್ಬರು ವೇಗಿಗಳು ತಂಡದಲ್ಲಿದ್ದಾರೆ ಎಂದರು.
ಭಾರತ ಮತ್ತು ಬಾಂಗ್ಲಾದೇಶ ತಂಡಗಳ ಆಡುವ 11ರ ಬಳಗ
ಭಾರತ: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ: ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್, ಶಕಿಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್(ವಿಕೆಟ್ ಕೀಪರ್), ಯಾಸಿರ್ ಅಲಿ, ನೂರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಎಬಾಡೋಟ್ ಹೊಸೈನ್