ಇಂದು (ಭಾನುವಾರ, ಜನವರಿ 15) ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ ಬೃಹತ್ ರನ್ ಗಳಿಸಿದೆ.
ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗೆ 46ನೇ ಶತಕ ಬಾರಿಸಿದರೆ, ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 74ನೇ ಶತಕ ಗಳಿಸಿದರು. ವಿರಾಟ್ ಕೊಹ್ಲಿ 110 ಎಸೆತಗಳಲ್ಲಿ 166 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 8 ಸಿಕ್ಸರ್‌ಗಳು ಸೇರಿದ್ದವು.
ಇದೇ ವೇಳೆ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕೂಡ 97 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 117 ರನ್ ಗಳಿಸಿ ಮಿಂಚಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ 2ನೇ ಶತಕವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಶತಕಗಳು ಮತ್ತು ರೋಹಿತ್ ಶರ್ಮಾ (42), ಶ್ರೇಯಸ್ ಅಯ್ಯರ್ (38) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 390 ರನ್ ಗಳಿಸಿ, ಪ್ರವಾಸಿ ಶ್ರೀಲಂಕಾ ತಂಡಕ್ಕೆ 391 ರನ್‌ಗಳ ಗುರಿ ನೀಡಿದೆ.
ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ- ಶುಭಮನ್ ಗಿಲ್ ಜೋಡಿ 95 ರನ್‌ಗಳ ಜೊತೆಯಾಟ, ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಜೋಡಿ 131 ರನ್‌ಗಳ ಜೊತೆಯಾಟ ಹಾಗೂ ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಜೋಡಿ 108 ರನ್‌ಗಳ ಜೊತೆಯಾಟ ನೆರವಿನಿಂದ ಭಾರತ ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಯಿತು.
ಶ್ರೀಲಂಕಾ ಪರ ಬೌಲಿಂಗ್‌ನಲ್ಲಿ ಲಹಿರು ಕುಮಾರ ಮತ್ತು ಕಸುನ್ ರಜಿತಾ ತಲಾ ಎರಡು ವಿಕೆಟ್ ಪಡೆದರೆ, ಚಮಿಕಾ ಕರುಣಾರತ್ನೆ ಒಂದು ವಿಕೆಟ್ ಪಡೆದರು.
ಗುವಾಹಟಿ ಮತ್ತು ಕೋಲ್ಕತ್ತಾದಲ್ಲಿ ನಡೆದ ಮೊದಲೆರಡು ಏಕದಿನ ಪಂದ್ಯಗಳನ್ನು ಕ್ರಮವಾಗಿ 67 ರನ್ ಮತ್ತು 4 ವಿಕೆಟ್‌ಗಳ ಅಂತರದಲ್ಲಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಭಾರತ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದ್ದು, ಮೂರನೇ ಪಂದ್ಯವನ್ನು ಗೆದ್ದು ವೈಟ್‌ವಾಶ್ ಮಾಡಲು ಎದುರು ನೋಡುತ್ತಿದೆ.