ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಶಿವಂ ಮಾವಿ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಪದಾರ್ಪಣಾ ಪಂದ್ಯದಲ್ಲಿಯೇ ಮಾವಿ ನಾಲ್ಕು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರಹಿಸಿದ್ದಾರೆ. ಈ ಮೂಲಕ ಸ್ಮರಣಿಯ ಆರಂಭ ಪಡೆದುಕೊಂಡಿದ್ದಾರೆ. ಈ ಭರ್ಜರಿ ಪ್ರದರ್ಶನದ ಬಳಿಕ ಮಾತನಾಡಿದ ಯುವ ವೇಗಿ ಸಂತಸ ಹಂಚಿಕೊಂಡಿದ್ದಾರೆ.
ಭಾರತ ತಂಡದಲ್ಲಿ ಆಡುವ ಕನಸು ಇಂದು ನನಸಾಯಿತು ಎಂದಿರುವ ಮಾವಿ ಅಂಡರ್ 19 ವಿಶ್ವಕಪ್‌ನಲ್ಲಿ ಆಡಿದ 6 ವರ್ಷಗಳ ಬಳಿಕ ಈ ಅವಕಾಶ ದೊರೆತಿದೆ ಎಂದು ತಮ್ಮ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. "ಅಂಡರ್ 19 ವಿಶ್ವಕಪ್‌ನಲ್ಲಿ ಆಡಿದ ಬಳಿಕ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯಲು ಕಳೆದ 6 ವರ್ಷಗಳಿಂದ ಕಾಯುತ್ತಿದ್ದೆ. ಈ ಅವಧಿಯಲ್ಲಿ ಕೆಲ ಗಾಯಕ್ಕೂ ತುತ್ತಾಗಿದ್ದೆ. ಹೀಗಾಗಿ ಕೆಲ ಸಂದರ್ಭಗಳಲ್ಲಿ ನನ್ನ ಕನಸು ಕನಸಾಗಿಯೇ ಉಳಿದುಕೊಳ್ಳುವ ಆತಂಕವೂ ಎದುರಾಗಿತ್ತು. ಆದರೆ ನನ್ನ ಪ್ರಯತ್ನವನ್ನು ಮುಂದುವರಿಸಿದ್ದೆ" ಎಂದು ಶಿವಂ ಮಾವಿ ಪ್ರತಿಕ್ರಿಯಿಸಿದರು.
ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಈ ಆಲ್ರೌಂಡರ್ ಫಿಟ್ ಆಗುತ್ತಾರೆ ಎಂದ ಆಸ್ಟ್ರೇಲಿಯಾ ಕೋಚ್
ಮುಂದುವರಿದು ಮಾತನಾಡಿದ ಮಾವಿ ಐಪಿಎಲ್‌ನಲ್ಲಿ ಆಡಿದ ಅನುಭವ ತನಗೆ ನೆವಾಯಿತು ಎಂದಿದ್ದಾರೆ. "ಐಪಿಎಲ್‌ನಲ್ಲಿ ಆಡಿದ ಅನುಭವ ಇದ್ದ ಕಾರಣ ಅಳುಕು ಸ್ವಲ್ಪ ಕಡಿಮೆಯಾಗಿತ್ತು. ಪವರ್‌ಪ್ಲೇನಲ್ಲಿ ಆಕ್ರಮಣಕಾರಿಯಾಗಿ ದಾಳಿ ನಡೆಸಿ ವಿಕೆಟ್ ಪಡೆಯುವುದು ನನ್ನ ಗುರಿಯಾಗಿತ್ತು. ಬೌಲ್ಡ್ ಮೂಲಕ ಮೊದಲ ವಿಕೆಟ್ ಪಡೆದಿದ್ದು ನನ್ನ ನೆಚ್ಚಿನ ವಿಕೆಟ್ ಆಗಿದೆ" ಎಂದಿದ್ದಾರೆ ಟೀಮ್ ಇಂಡಿಯಾದ ಯುವ ವೇಗಿ ಶಿವಂ ಮಾವಿ.
ತಾವು ಎಸೆದ ಮೊದಲ ಓವರ್‌ನ ಐದನೇ ಎಸೆತದಲ್ಲಿ ಫಾತುಮ್ ನಿಸ್ಸಂಕ ವಿಕೆಟ್ ಪಡೆದು ಭಾರತಕ್ಕೆ ಆರಂಭಿಕ ಯಶಸ್ಸು ನೀಡಿದ ಮಾವಿ ತಮ್ಮ ಎರಡೇ ಓವರ್‌ನ ಐದನೇ ಎಸೆತದಲ್ಲಿಯೂ ವಿಕೆಟ್ ಕಿತ್ತರು. ಈ ಮೂಲಕ ಶ್ರೀಲಂಕಾ ತಂಡಕ್ಕೆ ಹಿನ್ನಡೆಯುಂಟು ಮಾಡಿದರು. ಬಳಿಕ ತಮ್ಮ ಎರಡನೇ ಸ್ಪೆಲ್‌ನಲ್ಲಿಯೂ ಎರಡು ವಿಕೆಟ್ ಪಡೆದ ಮಾವಿ ಚೊಚ್ಚಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಯುವ ವೇಗಿ ಶಿವಂ ಮಾವಿ ಚೊಚ್ಚಲ ಪಂದ್ಯದಲ್ಲಿಯೇ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದು ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಬ್ಯಾಟಿಂಗ್‌ನಲ್ಲಿ ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ ಮಹತ್ವದ ಕೊಡುಗೆ ನೀಡಿ ಮಿಂಚಿದರು.
ಇತ್ತಂಡಗಳ ಆಡುವ ಬಳಗ
ಶ್ರೀಲಂಕಾ ಪ್ಲೇಯಿಂಗ್ XI: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ
ಬೆಂಚ್: ಲಹಿರು ಕುಮಾರ, ಅವಿಷ್ಕ ಫೆರ್ನಾಂಡೋ, ಅಶೇನ್ ಬಂಡಾರ, ಪ್ರಮೋದ್ ಮದುಶನ್, ದುನಿತ್ ವೆಳ್ಳಾಲಗೆ, ನುವಾನ್ ತುಷಾರ, ಸದೀರ ಸಮರವಿಕ್ರಮ
ಭಾರತ ಆಡುವ XI: ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್
ಬೆಂಚ್: ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಾಹುಲ್ ತ್ರಿಪಾಠಿ, ಮುಖೇಶ್ ಕುಮಾರ್