ಲಯಕ್ಕೆ ಮರಳಿದ ದ.ಆಫ್ರಿಕಾ, ಭಾರತಕ್ಕೆ ಸೋಲು

Posted By:
South Africa won the t20 match against India

ಸೆಂಚೂರಿಯನ್, ಫೆಬ್ರವರಿ 22: ಭಾರತದ ವಿರುದ್ಧ ಸೆಂಚೂರಿಯನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ದ.ಆಫ್ರಿಕಾ ತಂಡ 6 ವಿಕೆಟ್‌ಗಳ ಜಯ ಕಂಡಿದೆ.

ಟೆಸ್ಟ್‌ ಹಾಗೂ ಏಕದಿನ ಸರಣಿಯಲ್ಲಿ ಭಾರತದ ಬೌಲರ್‌ಗಳ ಎದುರು ಪರದಾಡಿದ್ದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಎರಡನೇ ಟಿ20 ಪಂದ್ಯದಲ್ಲಿ ಲಯಕ್ಕೆ ಮರಳಿದಂತೆ ಆಡಿದರು ಭಾರತ ನೀಡಿದ್ದ 188 ರನ್‌ಗಳ ಗುರಿಯನ್ನು ಇನ್ನೂ 6 ವಿಕೆಟ್ ಮತ್ತು 8 ಬಾಲ್ ಇರುವಂತೆಯೇ ಚೇಸ್ ಮಾಡಿ ಗೆದ್ದು ಬೀಗಿದರು.

ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಚೆಂಡಿನಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಧವನ್ ಬಿರುಸಿನ ಆಟ ಆಡಿ 14 ಎಸೆತದಲ್ಲಿ 24 ರನ್ ಭಾರಿಸಿದರು. ಟಿ20 ಸರಣಿಗೆ ಸ್ಥಾನ ಪಡೆದಿರುವ ಸುರೇಶ್ ರೈನಾ 24 ಎಸೆತಗಳಲ್ಲಿ 30 ರನ್ ಭಾರಿಸಿದರು. ಆದರೆ ಕೊಹ್ಲಿ ಕೇವಲ 1 ರನ್ ಗಳಿಸಿ ಔಟಾದರು.

ರಾಜ್ಯದ ಮನೀಶ್ ಪಾಂಡೆ ಅತ್ಯುತ್ತಮ ಆಟವಾಡಿ 48 ಎಸೆತದಲ್ಲಿ 79 ರನ್ ಭಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ ಭಾರಿಸಿ ಮಿಂಚಿದರು. ಅವರಿಗೆ ಅತ್ಯುತ್ತಮ ಸಾಥ್ ನೀಡಿದ ಧೋನಿ ಬಿರುಸಿನ ಆಟವಾಡಿ 28 ಎಸೆತದಲ್ಲಿ 4 ಬೌಂಡರಿ 3 ಸಿಕ್ಸರ್‌ ಸಹಿತ 52 ರನ್ ಗಳಿಸಿ ನಾಟೌಟ್‌ ಆಗಿ ಉಳಿದರು.

ಮನೀಶ್ ಪಾಂಡೆ ಮತ್ತು ಧೋನಿ ಅವರ ಬಿರುಸಿನ ಆಟದಿಂದಾಗಿ ಭಾರತ 188 ರನ್ ಪೇರಿಸಿತು. ದ.ಆಫ್ರಿಕಾದ ಜೆಪಿ ಡುಮಿನಿ ಮತ್ತು ಕ್ಲಾಸೀನ್ ಅವರುಗಳು ಅಬ್ಬರದ ಬ್ಯಾಟಿಂಗ್ ಮಾಡಿ ಭಾರತದ ಗೆಲುವಿನ ಆಸೆಗೆ ತಣ್ಣೀರು ಸುರಿದರು.

7 ಸಿಕ್ಸರ್ ಭಾರಿಸಿದ ಕ್ಲಾಸೇನ್ ಕೇವಲ 30 ಎಸೆತದಲ್ಲಿ 69 ರನ್ ಗಳಿಸಿದರು. ಡುಮಿನಿ 40 ಎಸೆತದಲ್ಲಿ 64 ರನ್ ಗಳಿಸಿದರು. ದ.ಆಫ್ರಿಕಾ ಪ್ರವಾಸದಲ್ಲಿ ಯಶಸ್ವಿ ಬೌಲರ್‌ ಎನಿಸಿಕೊಂಡಿದ್ದ ಭಾರತದ ಯಜುವೇಂದರ್ ಚಾಹಲ್ ಈ ಪಂದ್ಯದಲ್ಲಿ ಅತಿ ದುಬಾರಿ ಎನಿಸಿಕೊಂಡರು. ಅವರು 4 ಓವರ್‌ನಲ್ಲಿ 64 ರನ್‌ಗಳನ್ನು ಚಚ್ಚಿಸಿಕೊಂಡರು.

ಅತ್ಯುತ್ತಮ ಬ್ಯಾಟಿಂಗ್‌ಗಾಗಿ ಕ್ಲಾಸೇನ್‌ಗೆ ಪಂದ್ಯ ಪುರುಷೋತ್ತಮ ಗೌರವ ನೀಡಲಾಯಿತು. ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು, ಅದನ್ನು ಗೆದ್ದವರು ಸರಣಿ ವಿಜೇತರೆಸಿಕೊಳ್ಳಲಿದ್ದಾರೆ.

Story first published: Thursday, February 22, 2018, 13:19 [IST]
Other articles published on Feb 22, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ