ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ತಂದುಕೊಟ್ಟ ಕನ್ನಡಿಗರು ಇವರು

ಬೆಂಗಳೂರು, ಸೆಪ್ಟೆಂಬರ್ 3: ಇಂಡೋನೇಷ್ಯಾದಲ್ಲಿ ಭಾನುವಾರ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿಯೇ ಭಾರತ ಮೊದಲ ಬಾರಿಗೆ 69 ಪದಕಗಳನ್ನು ಗೆದ್ದಿದೆ.

ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದ ಭಾರತ, 15 ಚಿನ್ನ, 24 ಬೆಳ್ಳಿ ಮತ್ತು 30 ಕಂಚಿನ ಪದಕಗಳನ್ನು ಗೆದ್ದಿದೆ.

ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಭಾರತ ದಾಖಲೆಯ ಪದಕ ಬೇಟೆ!ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಭಾರತ ದಾಖಲೆಯ ಪದಕ ಬೇಟೆ!

ಈ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಕ್ರೀಡಾಪಟುಗಳು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಮಿಶ್ರ ಸ್ಪರ್ಧೆಗಳಲ್ಲಿ ಪದಕ ಗೆದ್ದವರಲ್ಲದೆ ವೈಯಕ್ತಿಕವಾಗಿ ಸಾಧನೆ ಮಾಡಿದ ಕ್ರೀಡಾಪಟುಗಳು ಮಹತ್ವದ ಮೈಲುಗಲ್ಲು ಕ್ರಮಿಸಿದ್ದಾರೆ. ಈ ಬಾರಿಯ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕರ್ನಾಟಕದ ಆಟಗಾರರ ವಿವರ ಇಲ್ಲಿದೆ.

ಮಲಪ್ರಭಾ ಜಾಧವ್

ಮಲಪ್ರಭಾ ಜಾಧವ್

ಭಾರತದಲ್ಲಿ ಅಷ್ಟಾಗಿ ಜನಪ್ರಿಯವಲ್ಲದ ಕುರಷ್ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದ ಕುಂದಾ ನಗರಿಯ ಮಲಪ್ರಭಾ ಯಲ್ಲಪ್ಪ ಜಾಧವ್ ಸಾಧನೆ ಅಮೋಘವಾದುದು. ಬೆಳಗಾವಿಯ ತುರಮುರಿಯವರಾದ ಮಲಪ್ರಭಾ, ರೈತಾಪಿ ಕುಟುಂಬದಿಂದ ಬಂದವರು.

ಸಾಮಾನ್ಯವಾಗಿ ಕ್ರೀಡೆಗಳ ತರಬೇತಿ, ಸೌಲಭ್ಯಗಳಿಗೆ ಬೆಂಗಳೂರಿನಲ್ಲಿಯೇ ನೆಲೆಯೂರುವುದು ಅನಿವಾರ್ಯ. ಆದರೆ, ಮಲಪ್ರಭಾ ತಮ್ಮೂರಿನಲ್ಲಿದ್ದುಕೊಂಡೇ ಸೆಮಿಫೈಲ್‌ವರೆಗೂ ನಡೆದಿದ್ದಾರೆ. ಉಜ್ಬೇಕಿಸ್ತಾನ ಮೂಲದ ಈ ಕ್ರೀಡೆಯ ತರಬೇತಿಗಾಗಿ ಅವರು ಉಜ್ಬೇಕಿಸ್ತಾನದ ಕೋಚ್‌ಗಳ ನೆರವು ಪಡೆದುಕೊಂಡಿದ್ದಾರೆ. 19 ವರ್ಷ ಮಲಪ್ರಭಾ, ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಿದ್ದರು.

ಅಥ್ಲೀಟ್ ಸ್ವಪ್ನಾಳ ಚಿನ್ನದ ಕನಸು ನನಸಾಗಲು ದ್ರಾವಿಡ್ ಕೂಡಾ ಕಾರಣ

ಫವಾದ್ ಮಿರ್ಜಾ

ಫವಾದ್ ಮಿರ್ಜಾ

ಈಕ್ವೆಸ್ಟ್ರಿಯನ್ (ಅಶ್ವಾರೋಹಣ) ಸ್ಪರ್ಧೆಯಲ್ಲಿ 36 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ ಪದಕ ತಂದುಕೊಟ್ಟ ಫವಾದ್ ಮಿರ್ಜಾ ಬೆಂಗಳೂರಿನವರು. ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಮಿರ್ಜಾ, ತಂಡದ ವಿಭಾಗದಲ್ಲಿಯೂ ಪದಕ ಗೆಲ್ಲುವಲ್ಲಿ ಕಾಣಿಕೆ ನೀಡಿದ್ದಾರೆ.

ಫವಾದ್ ತಂದೆ ಪಶು ವೈದ್ಯ. ತಾಯಿ ಶಾಲಾ ಶಿಕ್ಷಕಿ. ಐದನೇ ವಯಸ್ಸಿನಿಂದಲೇ ಅಶ್ವಾರೋಹಣ ಅಭ್ಯಾಸ ಆರಂಭಿಸಿದ ಫವಾದ್, ಎಂಟನೆ ವಯಸ್ಸಿನಲ್ಲಿ ಸ್ಥಳೀಯ ಸ್ಪರ್ಧೆಯೊಂದರಲ್ಲಿ ಸ್ಪರ್ಧಿಸಿದ್ದರು. 2014ರಲ್ಲಿ ದಕ್ಷಿಣ ಕೊರಿಯಾದ ಇಂಚೆನ್ ಏಷ್ಯನ್ ಗೇಮ್ಸ್‌ನಲ್ಲಿ ಫವಾದ್ ಹತ್ತನೇ ಸ್ಥಾನ ಗೆದ್ದಿದ್ದರು. 2016ರ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಅವರು ವಿಫಲರಾಗಿದ್ದರು. ಜರ್ಮನಿಯಲ್ಲಿ ತರಬೇತಿ ಪಡೆದ ಅವರು ಪದಕಕ್ಕೆ ಕೊರಳೊಡ್ಡಿದ್ದಾರೆ. ಮುಂದಿನ 2020ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಗುರಿ ಅವರದು.

ಏಷ್ಯನ್ ಗೇಮ್ಸ್ ಗೆ ವರ್ಣರಂಜಿತ ತೆರೆ: ದೇಸಿ ತಂಡಕ್ಕೆ ರಾಣಿ ಮುಂದಾಳತ್ವ

ಜೋಶ್ನಾ ಚಿನ್ನಪ್ಪ

ಜೋಶ್ನಾ ಚಿನ್ನಪ್ಪ

ಕೊಡಗಿನ ಮೂಲದ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಏಷ್ಯನ್ ಕ್ರೀಡಾಕೂಟದ ಸ್ಕ್ವಾಷ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಕುಟ್ಟಂಡ ಜೋಶ್ನಾ ಚಿನ್ನಪ್ಪ, ಚೆನ್ನೈನಲ್ಲಿ ನೆಲೆಸಿದ್ದಾರೆ. ಜೋಶ್ನಾ ಅವರ ತಂದೆ ಅರ್ಜುನ್ ಚಿನ್ನಪ್ಪ ಸ್ಕ್ವಾಷ್‌ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದವರು. ಮದ್ರಾಸ್ ಕ್ರಿಕೆಟ್ ಕ್ಲಬ್‌ನಲ್ಲಿ ಸ್ಕ್ವಾಷ್‌ ಆಡಲು ಆರಂಭಿಸಿದ ಜೋಶ್ನಾ, ಬ್ರಿಟಿಷ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ ಗೆದ್ದ ಭಾರತದ ಮೊದಲ ಆಟಗಾರ್ತಿ.

2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ದೀಪಿಕಾ ಪಲ್ಲಿಕಲ್ ಜತೆ ಜತೆಗೂಡಿ ಮಹಿಳಾ ಡಬಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಜೋಶ್ನಾ, ಏಷ್ಯನ್‌ ಗೇಮ್ಸ್‌ನಲ್ಲಿ ವಿಶ್ವದ ನಂಬರ್ ಒನ್ ಶ್ರೇಯಾಂಕಿತೆ ಮಲೇಷ್ಯಾದ ನಿಕೋಲ್ ಡೇವಿಡ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಆಘಾತ ನೀಡಿದ್ದರು.

ಎಂ.ಆರ್. ಪೂವಮ್ಮ

ಎಂ.ಆರ್. ಪೂವಮ್ಮ

ಕೊಡಗಿನ ಗೋಣಿಕೊಪ್ಪಲಿನಲ್ಲಿ ಜನಿಸಿದ ಎಂ.ಆರ್. ಪೂವಮ್ಮ, ಬೆಳೆದಿದ್ದು ಮಂಗಳೂರಿನಲ್ಲಿ. ಅವರ ತಂದೆ ರಾಜು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಪೂವಮ್ಮ, ಮಹಿಳೆಯರ 4*400 ಮೀಟರ್ಸ್‌ ರಿಲೆನಲ್ಲಿ ಚಿನ್ನ ಮತ್ತು ಮಿಶ್ರ ರಿಲೆನಲ್ಲಿ ಬೆಳ್ಳಿ ಪದಕ ಗೆದ್ದ ತಂಡದ ಭಾಗವಾಗಿದ್ದಾರೆ.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. 2012ರಲ್ಲಿನ ಲಂಡನ್ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ. 2014ರ ಇಂಚೆನ್ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ರಿಲೆಯಲ್ಲಿ ಚಿನ್ನ ಗೆದ್ದಿದ್ದ ಅವರು, ಗಾಯದ ಸಮಸ್ಯೆಗಳ ನಡುವೆಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.

ರೋಹನ್ ಬೋಪಣ್ಣ

ರೋಹನ್ ಬೋಪಣ್ಣ

ಕೊಡಗಿನ ಮೂಲದವರಾದ ರೋಹನ್ ಬೋಪಣ್ಣ ಹೆಸರು ಭಾರತದ ಕ್ರೀಡಾ ಜಗತ್ತಿನಲ್ಲಿ ಜನಪ್ರಿಯ. ಅವರ ತಂದೆ ಎಂ.ಜಿ. ಬೋಪಣ್ಣ ಕಾಫಿ ಬೆಳೆಗಾರರು. ಈ ಬಾರಿಯ ಟೆನ್ನಿಸ್‌ ಡಬಲ್ಸ್‌ನಲ್ಲಿ ದಿವಿಜ್ ಶರಣ್ ಅವರ ಜತೆಗೂಡಿ ರೋಹನ್ ಬೆಳ್ಳಿ ಪದಕ ಗೆದ್ದಿದ್ದಾರೆ.

11ನೇ ವಯಸ್ಸಿನಿಂದ ಟೆನ್ನಿಸ್ ಆಡಲು ಆರಂಭಿಸಿದ ಅವರು, ಡಬಲ್ಸ್‌ ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

2013ರಲ್ಲಿ ಡಬಲ್ಸ್‌ನಲ್ಲಿ ವಿಶ್ವದ ಮೂರನೇ ಶ್ರೇಯಾಂಕಕ್ಕೆ ತಲುಪಿದ್ದು ಅವರ ವೃತ್ತಿ ಜೀವನದ ಗರಿಷ್ಠ ಸಾಧನೆ. ಇದು ದೇಶದಲ್ಲಿಯೇ ಆಟಗಾರನ ಅತ್ಯುತ್ತಮ ಸಾಧನೆಯೂ ಹೌದು.

ಉಷಾರಾಣಿ

ಉಷಾರಾಣಿ

ಬೆಂಗಳೂರಿನ ಯಶವಂತಪುರದವರಾದ ಉಷಾರಾಣಿ ವೃತ್ತಿಯಲ್ಲಿ ಪೊಲೀಸ್. ಆದರೆ, ಕಬಡ್ಡಿ ಅವರ ಉಸಿರು. ಅವರ ಕುಟುಂಬದ ಅನೇಕರು ಕೂಡ ಕಬಡ್ಡಿಯಲ್ಲಿ ಮಿಂಚಿದವರೇ. ಏಷ್ಯನ್ ಗೇಮ್ಸ್‌ನಲ್ಲಿ ಕಬಡ್ಡಿ ತಂಡಕ್ಕೆ ಆಯ್ಕೆಯಾದ ಏಕೈಕ ಕನ್ನಡತಿ ಉಷಾ. ಪಿಯುಸಿ ಓದುವ ವೇಳೆ ಕಬಡ್ಡಿಯತ್ತ ಆಸಕ್ತಿ ಬೆಳೆಸಿಕೊಂಡ ಅವರು, ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಕಬಡ್ಡಿ ತಂಡದ ಸದಸ್ಯೆ.

2017ರಲ್ಲಿ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿ ಅವರು ಆಡಿದ್ದರು. 2014ರ ಏಷ್ಯಾಡ್ ಸಂಭಾವ್ಯ ತಂಡದಲ್ಲಿದ್ದರೂ ಅಂತಿಮ ತಂಡದಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ. ಈ ಬಾರಿಯ ಕ್ರೀಡಾಟದಲ್ಲಿ ರಾಜ್ಯಕ್ಕೆ ಕೀರ್ತಿ ತಂಡ ಹೆಮ್ಮೆ ಅವರದು.

ಎಸ್‌.ವಿ. ಸುನಿಲ್

ಎಸ್‌.ವಿ. ಸುನಿಲ್

ಏಷ್ಯನ್ ಗೇಮ್ಸ್‌ನ ಲೀಗ್ ಪಂದ್ಯದಲ್ಲಿ ಭಾರತದ ಪುರುಷರ ಆಟವನ್ನು ಕಂಡವರು ಈ ಬಾರಿ ಚಿನ್ನ ಖಚಿತ ಎಂದೇ ಭಾವಿಸಿದ್ದರು. ಲೀಗ್ ಹಂತದಲ್ಲಿ ಭಾರತ ಬಾರಿಸಿದ್ದು ಬರೋಬ್ಬರಿ 76 ಗೋಲುಗಳನ್ನು. ಅಷ್ಟು ಸಲೀಸಾಗಿ ಆಡಿದ್ದ ಭಾರತ, ಸೆಮಿಫೈನಲ್ಸ್‌ನಲ್ಲಿ ಮಲೇಷ್ಯಾ ವಿರುದ್ಧ ಮುಗ್ಗರಿಸಿತು. ಕೊನೆಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.

ಭಾರತ ತಂಡದ ಸ್ಟಾರ್ ಆಟಗಾರರ ಪೈಕಿ ಕೊಡಗಿನ ಎಸ್‌ವಿ ಸುನಿಲ್ ಕೂಡ ಒಬ್ಬರು. ಕೊಡಗಿನವರಾದ ಸುನಿಲ್, ಬಾಲ್ಯದಲ್ಲಿ ಬಿದಿರಿನ ದಂಡು ಹಿಡಿದು ಹಾಕಿ ಅಭ್ಯಾಸ ನಡೆಸಿದ್ದರು. 2007ರ ಏಷ್ಯಾಕಪ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಪಾದಾರ್ಪಣೆ ಮಾಡಿದರು.

ರಿಶಾಂಕ್ ದೇವಾಡಿಗ

ರಿಶಾಂಕ್ ದೇವಾಡಿಗ

ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಪಡೆದ ಭಾರತದ ಕಬಡ್ಡಿ ತಂಡದ ಸದಸ್ಯ ರಿಶಾಂಕ್ ದೇವಾಡಿಗ ಕುಂದಾಪುರ ಮೂಲದವರು. ಮುಂಬೈನಲ್ಲಿ ಹುಟ್ಟಿ ಬೆಳೆದ ಅವರು, ದೇಶಿ ಕಬಡ್ಡಿ ಪ್ರೋ-ಕಬಡ್ಡಿ ಲೀಗ್‌ನಲ್ಲಿ ಯು-ಮುಂಬಾ ತಂಡದ ಸ್ಟಾರ್ ರೈಡರ್. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ರಿಶಾಂಕ್ ಅವರನ್ನು ಬೆಳೆಸಿದ್ದ ತಾಯಿ ಪಾರ್ವತಿ.

ಪ್ರೋ ಕಬಡ್ಡಿಯಲ್ಲಿ ಡು ಆರ್ ಡೈ ಪರಿಣತ ಎಂದೇ ಅವರನ್ನು ಕರೆಯಲಾಗುತ್ತದೆ. ಆರಂಭದಿಂದಲೂ ಯು-ಮುಂಬಾ ತಂಡವನ್ನು ಪ್ರತಿನಿಧಿಸಿದ್ದ ಅವರನ್ನು 20170ರಲ್ಲಿ ಯುಪಿ ಯೋಧಾ ತಂಡ ಖರೀದಿಸಿತ್ತು. ಏಷ್ಯನ್‌ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಭಾರತ, ಸೆಮಿಫೈನಲ್‌ನಲ್ಲಿ ಆಘಾತಕಾರಿ ಸೋಲು ಅನುಭವಿಸಿತ್ತು.

Story first published: Monday, September 3, 2018, 17:09 [IST]
Other articles published on Sep 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X