Tokyo Olympics 2021 LIVE Updates, Day 17: ವರ್ಣರಂಜಿನ ಸಮಾರೋಪ ಸಮಾರಂಭ

Tokyo Olympics 2021 LIVE Updates, Day 17: Results and Highlights in Kannada

ಟೋಕಿಯೋ: 32ನೇ ಒಲಿಂಪಿಯಾಡ್ ಗೇಮ್ಸ್ ಎಂದು ಕರೆಯಲಾಗುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 23ರಿಂದ ಆರಂಭಗೊಂಡಿದೆ. ಜಪಾನ್‌ನ ಸ್ಟಾರ್ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಅವರು ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್‌ ನಡೆಯಲಿದೆ. ಒಟ್ಟು 206 ದೇಶಗಳ 11,000ಕ್ಕೂ ಅಧಿಕ ಕ್ರೀಡಾಪಟುಗಳು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಾರತದಿಂದಲೂ ದೊಡ್ಡ ಸಂಖ್ಯೆಯ ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ಗೆ ತೆರಳಿದ್ದಾರೆ. ಒಟ್ಟು 127 ಅಥ್ಲೀಟ್‌ಗಳ ತಂಡ ಜಾಗತಿಕ ಕ್ರೀಡಾಕೂಟಕ್ಕಾಗಿ ಜಪಾನ್‌ನ ಟೋಕಿಯೋಗೆ ಹೋಗಿದೆ.

 

ಟೋಕಿಯೋ ಒಲಿಂಪಿಕ್ಸ್: ವೇಳಾಪಟ್ಟಿ, ಫಲಿತಾಂಶ, ಸಂಪೂರ್ಣ ಮಾಹಿತಿ ಇಲ್ಲಿದೆ

ಈವರೆಗೆ ಭಾರತಕ್ಕೆ 7 ಪದಕಗಳು ಲಭಿಸಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು (49 ಕೆಜಿ ವಿಭಾಗ) ಭಾರತಕ್ಕೆ ಬೆಳ್ಳಿ ಮೆರಗು ತಂದಿದ್ದಾರೆ. ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಕಂಚು ಗೆದ್ದಿದ್ದಾರೆ. ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ ಬರ್ಗೊಹೈನ್ ಕಂಚಿನ ಪದಕ ಗೆದ್ದಿದ್ದಾರೆ. ಪುರುಷರ 57 ಕೆಜಿ ವಿಭಾಗದ ರಸ್ಲಿಂಗ್‌ನಲ್ಲಿ ರವಿಕುಮಾರ್ ದಾಹಿಯ ಬೆಳ್ಳಿ ಪದಕ ಬೆಳ್ಳಿ ಜಯಿಸಿದ್ದಾರೆ. ಪುರುಷರ ಹಾಕಿ ತಂಡ ಐತಿಹಾಸಿಕ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ರಸ್ಲಿಂಗ್‌ನಲ್ಲಿ ಭಜರಂಗ್ ಪೂನಿಯಾ ಕಂಚಿಗೆ ಕೊರಳೊಡ್ಡಿದ್ದಾರೆ. ಇನ್ನು ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬಂಗಾರ ಗೆದ್ದಿದ್ದಾರೆ.

 

ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಅಥ್ಲೀಟ್‌ಗಳು ಕಚ್ಚೋದ್ಯಾಕೆ ಗೊತ್ತಾ?!ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಅಥ್ಲೀಟ್‌ಗಳು ಕಚ್ಚೋದ್ಯಾಕೆ ಗೊತ್ತಾ?!

ಉಳಿದಂತೆ ಟೋಕಿಯೋ ಒಲಿಂಪಿಕ್ಸ್‌ನ ಕ್ಷಣ ಕ್ಷಣದ ಅಪ್‌ಡೇಟ್ಸ್‌ ಕೆಳಗಿವೆ.

07:51 pm

ಒಲಿಂಪಿಕ್ಸ್ ಧ್ವಜವನ್ನು ಸ್ವೀಕರಿಸಿದ ಪ್ಯಾರೀಸ್. ಮುಂದಿನ ಒಲಿಂಪಿಕ್ಸ್ ಕ್ರೀಡಾ ಕೂಟ ಆಯೋಜನೆಗೆ ಧ್ವಜ ಹಸ್ತಾಂತರ

07:02 pm

ಪದಕಪಟ್ಟಿಯಲ್ಲಿ ಚೀನಾ ಕ್ರೀಡಾಕೂಟದ ಅಂತಿಮ ದಿನ ಎರಡನೇ ಸ್ಥಾನಕ್ಕೆ ಇಳಿದಿದ್ದು 38 ಚಿನ್ನದ ಪದಕಗಳ ಸಹಿತ ಒಟ್ಟು 88 ಪದಕವನ್ನು ಗೆದ್ದಿದೆ

07:00 pm

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಯುಎಸ್‌ಎ ಅತಿಹೆಚ್ಚು ಚಿನ್ನ ಗೆದ್ದು ಪದಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟು 113 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿದ್ದು ಇದರಲ್ಲಿ 38 ಚಿನ್ನದ ಪದಕಗಳು ಕೂಡ ಸೇರಿದೆ.

05:35 pm

ಕೊರೊನಾವೈರಸ್ ಹಾವಳಿಯ ಮಧ್ಯೆಯೂ ಅದ್ಭುತವಾಗಿ ವಿಶ್ವದ ಅತ್ಯುನ್ನತ ಕ್ರೀಡಾಕೂಟ ಒಲಿಂಪಿಕ್ಸ್‌ಅನ್ನು ಯಶಸ್ವಿಯಾಗಿ ಆಯೋಜಿಸಿದ ಜಪಾನ್.

05:22 pm

ಜಪಾನ್‌ನ ಟೋಕಿಯೋದಲ್ಲಿ ವರ್ಣರಂಜಿತ ಸಮಾರೋಪ ಸಮಾರಂಭ ನಡೆಯುತ್ತಿದೆ. ನೂರಾರು ಕಲಾವಿದರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

02:22 pm

ಟೋಕಿಯೋ ಒಲಿಂಪಿಕ್ಸ್ 2021ರ ಸಮಾರೋಪ ಸಮಾರಂಭ ಆಗಸ್ಟ್ 8ರ ರಾತ್ರಿ 8 PMನಿಂದ 10 PMವರಗೆ ನಡೆಯಲಿದೆ. ಭಾರತದ ರಸ್ಲರ್ ಭಜರಂಗ್ ಪೂನಿಯಾ ದೇಶದ ಧ್ವಜ ಹಿಡಿದು ಪಥಸಂಚಲನದಲ್ಲಿ ಸಾಗಲಿದ್ದಾರೆ.

11:04 am

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕ ಗೆದ್ದಿರುವ ಅಥ್ಲೀಟ್ ನೀರಜ್ ಚೋಪ್ರಾಗೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್‌ ಭರ್ಜರಿ ಪುರಸ್ಕಾರ ಘೋಷಿಸಿದೆ. ಪುರುಷರ ಜಾವೆಲಿನ್ ಥ್ರೋನಲ್ಲಿ ದೇಶಕ್ಕೆ ಚಿನ್ನದ ಮೆರಗು ತಂದಿರುವ ಚೋಪ್ರಾಗೆ 1 ಕೋಟಿ ರೂ. ನಗದು ಪುರಸ್ಕಾರ ಮತ್ತು ಸ್ಪರ್ಧೆಯ ವೇಳೆ ಚೋಪ್ರಾ ಧರಿಸಿದ್ದ 8758 ಎದೆ ಸಂಖ್ಯೆಯ ವಿಶೇಷ ಜೆರ್ಸಿ ಬಿಡುಗಡೆ ಮಾಡಲಿದೆ.

09:35 am

ಪುರುಷರ ಜಾವೆಲಿನ್ ಥ್ರೋನಲ್ಲಿ ಬಂಗಾರದ ಪದಕ ಗೆದ್ದ ನೀರಜ್ ಚೋಪ್ರಾ ಆ ಪದಕವನ್ನು ಭಾರತದ ದಂತಕತೆ ಅಥ್ಲೀಟ್ ಮಿಲ್ಖಾ ಸಿಂಗ್‌ಗೆ ಅರ್ಪಿಸಿದ್ದರು. ಇದೇ ವರ್ಷ ಜೂನ್ 18ರಂದು ಮಿಲ್ಖಾ ಸಿಂಗ್ ಕೋವಿ-19ನಿಂದಾಗಿ ನಿಧನರಾಗಿದ್ದರು.

07:35 am

ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬಂಗಾರ ಗೆದ್ದ ಬಳಿಕ ಭಾರತ ಪದಕ ಪಟ್ಟಿಯಲ್ಲಿ 47ನೇ ಸ್ಥಾನಕ್ಕೇರಿದೆ. ಭಾರತದ ಖಾತೆಯಲ್ಲೀಗ 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳಿವೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತ ಇಷ್ಟು ಪದಕ ಗೆದ್ದಿದ್ದು ಇದೇ ಮೊದಲಬಾರಿ.

06:30 am

ಪುರಷರ ಮ್ಯಾರಥಾನ್ ಸ್ಪರ್ಧೆ ಮುಕ್ತಾಯ ಕಂಡಿದೆ. ಕೀನ್ಯಾದ ಎಲಿಯುಡ್ ಕಿಪ್ಚೋಗೆ 2:08:38 ಸೆಕೆಂಡ್ ಕಾಲಾವಧಿಯೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ದ್ವಿತೀಯ ಸ್ಥಾನ ನೆದರ್‌ಲ್ಯಾಂಡ್ಸ್‌ನ ಅಬ್ದಿ ನಗೆಯೆ (2:09:58 ಸೆ.), ತೃತೀಯ ಸ್ಥಾನ ಬೆಲ್ಜಿಯಂನ ಬಶೀರ್ ಅಬ್ದಿ (2:10:00 ಸೆ.) ಪಾಲಾಗಿದೆ.

10:41 pm

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಭಾರತದ ಕ್ರೀಡಾ ಪಟುಗಳಿಗೆ ಪ್ರತ್ಯೇಕ ನಗದು ಪುರಸ್ಕಾರವನ್ನು ಬಿಸಿಸಿಐ ಘೋಷಿಸಿದೆ

08:51 pm

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಕ್ರೀಡಾಪಟು ನೀರಜ್ ಚೋಪ್ರಾಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಮಾಡಿ ಶುಭಾಶಯವನ್ನು ಕೋರಿದ್ದಾರೆ.

08:49 pm

ಟೋಕಿಯೋ ಒಲಿಂಪಿಕ್ಸ್ ಮಹಿಳಾ ವಿಭಾಗದ 4X400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸತತ ಏಳನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಬಂಗಾರ ಗೆದ್ದಿರುವ ತಂಡದ ಓಟಗಾರ್ತಿ ಆಲಿಸನ್ ಫೆಲಿಕ್ಸ್ ಒಟ್ಟಾರೆ ಒಲಿಂಪಿಕ್ಸ್‌ನಲ್ಲಿ 11 ಪದಕಗಳನ್ನು ಗೆದ್ದ ದಾಖಲೆ ನಿರ್ಮಿಸಿದ್ದಾರೆ.

07:44 pm

ಜಾವೆಲಿನ್ ಥ್ರೋ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿರುವ ನೀರಜ್ ಚೋಪ್ರಾಗೆ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷರಾದ ಆನಂದ್ ಮಹೀಂದ್ರ ಅವರು ಎಕ್ಸ್‌ಯುವಿ 700 ವಾಹನವನ್ನು ಉಡುಗೊರೆಯಾಗಿ ನೀಡಲು ನಿರ್ಧಾರ ಮಾಡಿದ್ದಾರೆ.

06:43 pm

ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾಗೆ ಹರಿಯಾಣ ಸರ್ಕಾರ 6 ಕೋಟಿ ನಗದು ಬಹುಮಾನ ಮತ್ತು ಸರ್ಕಾರಿ ಹುದ್ದೆಯನ್ನು ಘೋಷಿಸಿದೆ

06:43 pm

ಟೋಕಿಯೋ ಒಲಿಂಪಿಕ್ಸ್‌ನಲ್ಲಿ 2008ರ ಬಳಿಕ ಇದೇ ಚೊಚ್ಚಲ ಬಾರಿಗೆ ರಾಷ್ಟ್ರ ಗೀತೆ ಮೊಳಗಿದೆ. 23ರ ಹರೆಯದ ಜಾವೆಲಿನ್ ಥ್ರೋವರ್ ಈ ಸಾಧನೆ ಮಾಡಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಬಂಗಾರದ ಪದಕ ಗೆದ್ದಿದ್ದರು. ಅದಾಗಿ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂಗಾರದ ಪದಕ ಸಿಗುತ್ತಿದೆ.

06:29 pm

ಟೋಕಿಯೋ ಒಲಿಂಪಿಕ್ಸ್‌ ಜಾವೆಲಿನ್‌ನಲ್ಲಿ ಭಾರತಕ್ಕೆ ಬಂಗಾರ ಗೆದ್ದಿರುವ ನೀರಜ್ ಚೋಪ್ರಾಗೆ ಶುಭಾಶಯಗಳ ಸುರಿಮಳೆಯೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಚೋಪ್ರಾಗೆ ಶುಭಾಶಯ ಕೋರಿದ್ದಾರೆ.

05:44 pm

ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಬಂಗಾರದ ಪದಕ ಬಂದಿರಲಿಲ್ಲ. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ದೇಶಕ್ಕೆ ಚೊಚ್ಚಲ ಬಂಗಾರ ಗೆದ್ದಿದ್ದಾರೆ. ಶನಿವಾರ (ಆಗಸ್ಟ್ 7) ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

05:28 pm

ಪುರುಷರ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಮೊದಲ ಸ್ಥಾನದಲ್ಲಿದ್ದಾರೆ. ಮೂರೂ ಪ್ರಯತ್ನಗಳ ಬಳಿಕ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಝೆಕ್ ರಿಪಬ್ಲಿಕ್‌ನ ವೆಸೆಲಿ ವಿಟೆಜ್ಸ್ಲಾವ್ 85.44 ಮೀಟರ್ ಸಾಧನೆಯೊಂದಿಗೆ ದ್ವಿತೀಯ ಸ್ಥಾನ, ಜರ್ಮನಿಯ ಜೂಲಿಯನ್ ಜೂಲಿಯನ್ ವೆಬ್ಬರ್ (85.30 ಮೀಟರ್) ತೃತೀಯ ಸ್ಥಾನದಲ್ಲಿದ್ದಾರೆ.

05:10 pm

ಪುರುಷರ ಜಾವೆಲಿನ್ ವಿಭಾಗದ ಫೈನಲ್ ಸ್ಪರ್ಧೆ ನಡೆಯುತ್ತಿದೆ. 87.58 ಮೀಟರ್ ಸಾಧನೆಯೊಂದಿಗೆ ಚೋಪ್ರಾ ಸದ್ಯ ಮೊದಲ ಸ್ಥಾನದಲ್ಲಿದ್ದಾರೆ.

04:34 pm

ಪುರುಷರ 65 ಕೆಜಿ ರಸ್ಲಿಂಗ್ ವಿಭಾಗದ ಕಂಚಿನ ಪದಕದ ಸುತ್ತಿನಲ್ಲಿ ಭಾರತದ ಬಜರಂಗ್ ಪೂನಿಯಾ ಕಜಕಿಸ್ತಾನದ ಕುಸ್ತಿಪಟುವನ್ನು 8-0 ಅಂತರದಲ್ಲಿ ಮಣಿಸುವುದರ ಮೂಲಕ ಕಂಚಿನ ಪದಕವನ್ನು ಗೆದ್ದಿದ್ದಾರೆ.

03:51 pm

ಇಂದು 3.55 PMಗೆ ಪುರುಷರ 65 ಕೆಜಿ ಫ್ರೀ-ಸ್ಟೈಲ್ ರಸ್ಲಿಂಗ್‌ನಲ್ಲಿ ಭಾರತದ ಭಜರಂಗ್ ಪೂನಿಯಾ ಕಂಚಿನದ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಸಂಜೆ 4.30 PMಗೆ ಭಾರತದ ಜಾವೆಲಿನ್ ಥ್ರೋವರ್‌ ನೀರಜ್ ಚೋಪ್ರಾ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

02:27 pm

ಮಹಿಳಾ ಬಾಕ್ಸಿಂಗ್ ವೆಲ್ಟರ್‌ವೇಟ್ ವಿಭಾಗದಲ್ಲಿ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ಬಂಗಾರ ಗೆದ್ದಿದ್ದಾರೆ. ಫೈನಲ್‌ನಲ್ಲಿ ಚೀನಾದ ಗು ಹೋಂಗ್ ವಿರುದ್ಧ ಸುರ್ಮೆನೆಲಿ ವಿಜಯ ದಾಖಲಿಸಿದ್ದಾರೆ. ಈ ವಿಭಾಗದಲ್ಲಿ ಭಾರತದ ಲವ್ಲಿನ ಬೊರ್ಗೊಹೈನ್ ಕಂಚಿನ ಪದಕ ಜಯಿಸಿದ್ದರು.

01:59 pm

ಮಹಿಳಾ ಗಾಲ್ಫ್ ಇಂಡಿವಿಜುವಲ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಭಾರತದ ಅದಿತಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ಯುನೈಟೆಡ್ ಸ್ಟೇಟ್ಸ್‌ ಅಮೆರಿಕಾದ ನೆಲ್ಲಿ ಕೊರ್ಡಾ ಪ್ರಥಮ, ಜಪಾನ್‌ನ ಮೋನ್ ದ್ವಿತೀಯ ಮತ್ತು ನ್ಯೂಜಿಲೆಂಡ್‌ನ ಲಿಡಿಯಾ ಕೊ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

12:49 pm

ಮಹಿಳಾ ಗಾಲ್ಫ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 200ನೇ ಶ್ರೇಯಾಂಕದಲ್ಲಿದ್ದ ಅದಿತಿ ಅಶೋಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದುಕೊಂಡಿರುವುದು ಉತ್ತಮ ಸಾಧನೆಯೆನಿಸಿದೆ.

11:05 am

ಅದಿತಿ ಅಶೋಕ್‌ಗೆ ಗಾಲ್ಫ್‌ನಲ್ಲಿ ಪದಕ ಸಿಕ್ಕಿದ್ದರೆ ಅದು ಐತಿಹಾಸಿಕ ದಾಖಲೆಯಾಗುತ್ತಿತ್ತು. ಆದರೆ ಅದಿತಿ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿ ನಿರಾಸೆ ಅನುಭವಿಸಿದ್ದಾರೆ.

10:25 am

ಭಾರತದ ಮಹಿಳಾ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಕಳೆದುಕೊಂಡಿದ್ದಾರೆ. ಕೆಲವೇ ಕೆಲವು ಅಂತರದಿಂದ ಪದಕ ಕೈ ಚೆಲ್ಲಿರುವ ಅದಿತಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

09:36 am

ಭಾರತದ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್ 3ನೇ ಸ್ಥಾನದಲ್ಲಿದ್ದಾರೆ. ಕೊನೆಯ ಹಂತದಲ್ಲಿ ಸ್ಪರ್ಧೆಯಿದ್ದು, ಸದ್ಯ ಮಳೆಯ ಕಾರಣ ಸ್ಪರ್ಧೆ ನಿಲುಗಡೆಯಾಗಿದೆ.

09:07 am

ಭಾರತದ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್ 3ನೇ ಸ್ಥಾನದಲ್ಲಿದ್ದಾರೆ. ಇನ್ನೂ ಎರಡು ಹೋಲ್‌ಗಳು ಆಡಲು ಬಾಕಿಯಿದೆ.

08:38 am

ಆಗಸ್ಟ್ 7ರ ಇಂದು ಭಾರತದ ಅಥ್ಲೀಟ್ (ಜಾವೆಲಿನ್ ಥ್ರೋ) ನೀರಜ್ ಚೋಪ್ರಾಗೆ ಫೈನಲ್ ಸ್ಪರ್ಧೆ ನಡೆಯಲಿದೆ. ಸಂಜೆ 4.30 PMಗೆ ಈ ಸ್ಪರ್ಧೆ ನಡೆಯುವುದರಲ್ಲಿದೆ.

08:14 am

ಮಹಿಳಾ ಗಾಲ್ಫ್‌ನಲ್ಲಿ ಭಾರತದ ಅದಿತಿ ಅಶೋಕ್ ಸ್ಪರ್ಧೆ ಮುಂದುವರೆದಿದೆ. ಈಗಲೂ ಅದಿತಿ ಪದಕದ ಆಸೆ ಉಳಿಸಿಕೊಂಡಿದ್ದಾರೆ.

06:49 am

ಮಹಿಳಾ ಗಾಲ್ಫ್‌ನಲ್ಲಿ ಭಾರತದ ಅದಿತಿ ಅಶೋಕ್, ಯುಎಸ್‌ಎಯ ನೆಲ್ಲಿ ಕೊರ್ಡಾ ಮತ್ತು ನ್ಯೂಜಿಲೆಂಡ್‌ನ ಲಿಡಿಯಾ ಕೋ ಪ್ರಥಮ ಸ್ಥಾನದಲ್ಲಿ ಸಮಬಲ ಸಾಧಿಸಿದ್ದಾರೆ. ನಾಲ್ಕನೇ ಮತ್ತು ಕೊನೇ ಸುತ್ತು ಚಾಲ್ತಿಯಲ್ಲಿದೆ.

06:35 am

ಮಹಿಳಾ ಗಾಲ್ಫ್‌ನಲ್ಲಿ ಅದಿತಿ ಅಶೋಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪದಕದ ನಿರೀಕ್ಷೆಯಿದೆ.

10:50 pm

ಮಹಿಳಾ ಫುಟ್‌ಬಾಲ್‌ ವಿಭಾಗದ ಫೈನಲ್ ಪಂದ್ಯದಲ್ಲಿ ಕೆನಡಾ ಫುಟ್ಬಾಲ್ ಮಹಿಳಾ ತಂಡ ಸ್ವೀಡನ್ ಮಹಿಳಾ ತಂಡವನ್ನು 3-2 ಅಂತರದಲ್ಲಿ ಸೋಲಿಸುವುದರ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

09:20 pm

ಭಾರತದ ಪುರುಷರ ರಿಲೇ ತಂಡ 4x400 ಮೀಟರ್‌ನ ಹೀಟ್ 2 ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನಿಯಾಗಿ ಸ್ಪರ್ಧೆಯನ್ನು ಮುಗಿಸಿದೆ. ಹೀಗಾಗಿ ಭಾರತ ಫೈನಲ್ ಸುತ್ತಿಗೆ ಪ್ರವೇಶ ಪಡೆಯಲು ವಿಫಲವಾಗಿದೆ. ಆದರೆ 3:00:25 ನಿಮಿಷಗಳಲ್ಲಿ ಗುರಿಯನ್ನು ತಲುಪುವ ಮೂಲಕ ಏಷ್ಯಾದ ಹೊಸ ದಾಖಲೆ ಬರೆದಿದೆ.

08:00 pm

ಕರಾಟೆ 75 ಕೆಜಿ ಪುರುಷರ ವಿಭಾಗದಲ್ಲಿ ಇಟಲಿಯ ಲ್ಯುಗಿ ಬುಸಾ ಚಿನ್ನದ ಪದಕವನ್ನು ಗೆದ್ದಿದ್ದಾರೆ

07:58 pm

ಭಾರತಕ್ಕೆ ಪದಕದ ನಿರೀಕ್ಷೆ ಮೂಡಿಸಿರುವ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರ ಶನಿವಾರ 4:30ಕ್ಕೆ ಫೈನಲ್ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅರ್ಹತಾ ಸುತ್ತಿನಲ್ಲಿ 86.65 ಮೀಟರ್ ದೂರಕ್ಕೆ ಎಸೆಯುವ ಮೂಲಕ ಛೋಪ್ರ ಫೈನಲ್‌ಗೆ ನೇರ ಅರ್ಹತೆಯನ್ನು ಸಂಪಾದಿಸಿದರು.

03:18 pm

ಭಾರತದ ರೆಸ್ಲರ್ ಭಜರಂಗ್ ಪುನಿಯಾ ಅವರಿಗೆ ಕಂಚಿನ ಪದಕ ಗೆಲ್ಲುವ ಅವಕಾಶ ಇನ್ನೂ ಇದೆ. ಭಜರಂಗ್ ರಿಪಿಚೇಜ್ ವಿನ್ನರ್ ವಿರುದ್ಧ ಕಂಚಿನ ಪದಕಕ್ಕಾಗಿ ಸೆಣೆಸಾಡಲಿದ್ದಾರೆ. ಈ ಪಂದ್ಯ ನಾಳೆ (ಆಗಸ್ಟ್ 7) ನಡೆಯಲಿದೆ.

03:15 pm

ಚಿನ್ನದ ಪದಕದ ನಿರೀಕ್ಷೆ ಮೂಡಿಸಿದ್ದ ಭಾರತದ ರೆಸ್ಲರ್ ಭಜರಂಗ್ ಪುನಿಯಾ ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದಾರೆ. ಹೀಗಾಗಿ ಭಾರತ ಮತ್ತೊಂದು ಚಿನ್ನದ ಪದಕದ ಅವಕಾಶವನ್ನು ಕಳೆದುಕೊಂಡಿದೆ.

01:23 pm

ರೇಸ್‌ವಾಕ್: ಮಹಿಳೆಯರ 20 ಕಿ.ಮೀ ರೇಸ್‌ವಾಕ್ ಸ್ಪರ್ಧೆ ನಡೆಯುತ್ತಿದೆ. ಭಾರತದ ಇನ್ನು ಅಥ್ಲೀಟ್‌ಗಳಾದ ಭಾವ್ನಾ ಜಾಟ್ ಹಾಗೂ ಪ್ರಿಯಾಂಕಾ ಗೋಸ್ವಾಮಿ ಈ ಸ್ಪರ್ಧೆಯಲ್ಲಿದ್ದಾರೆ

01:11 pm

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪರುಷರ ಹಾಕಿ ತಂಡ ಐತಿಹಾಸಿಕ ಕಂಚಿನ ಪದಕ ಜಯಿಸಿತ್ತು. ಸುಮಾರು 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡಕ್ಕೆ ಒಲಿಂಪಿಕ್ಸ್‌ನಲ್ಲಿ ಸಿಗುತ್ತಿರುವ ಚೊಚ್ಚಲ ಪದಕವಿದು. ಈ ಪದಕ ಸಿಕ್ಕ ಬೆನ್ನಲ್ಲೇ ರಾಷ್ಟ್ರೀಯ ಪುರಸ್ಕಾರ ರಾಜೀವ್ ಗಾಂಧಿ ಖೇಲ್ ರತ್ನದ ಹೆಸರನ್ನು 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ' ಎಂದು ಬದಲಾಯಿಸಲಾಗಿದೆ. ಧ್ಯಾನ್ ಚಂದ್ ಮುಂದಾಳತ್ವದಲ್ಲಿ ಭಾರತ ಹಾಕಿ ತಂಡ 1928, 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿತ್ತು.

11:38 am

ಭಾರತದ ಗಾಲ್ಫರ್ ಅದಿತಿ ಅಶೋಕ್ Rd 3 ಸೋಲೋ ಸುತ್ತಿನಲ್ಲಿ ದ್ವಿತೀಯ ಮತ್ತು ಮೂರೂ ಸುತ್ತಿನಲ್ಲಿ ಟಾಪ್ 3ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ನಾಳೆ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಗಾಲ್ಫ್‌ನಲ್ಲಿ ಅದಿಗೆ ಕದಕ ಸಿಗುವ ನಿರೀಕ್ಷೆಯಿದೆ.

10:41 am

ಗಾಲ್ಫ್‌ನಲ್ಲಿ ಭಾರತದ ಮಹಿಳಾ ಗಾಲ್ಫರ್ ಅದಿತಿ ಅಶೋಕ್ ಸದ್ಯ ಬೆಳ್ಳಿ ಪದಕದ ಸ್ಥಾನದಲ್ಲಿದ್ದಾರೆ.

10:10 am

ಪುರುಷರ 65 ಕೆಜಿ ಫ್ರೀ-ಸ್ಟೈಲ್ ರಸ್ಲಿಂಗ್‌ನಲ್ಲಿ ಭಾರತದ ಭಜರಂಗ್ ಪೂನಿಯಾ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಇರಾನ್‌ನ ಮೊರ್ಟೆಜಾ ಘಿಯಾಸಿ ಚೆಕಾ ಅವರನ್ನು ಭಜರಂಗ್ ಸೋಲಿಸಿದ್ದಾರೆ.

09:07 am

ಮಹಿಳಾ ಹಾಕಿ ಕಂಚಿನ ಪದಕದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 4-3ರಿಂದ ಸೋತಿರುವ ಭಾರತೀಯ ತಂಡಕ್ಕೆ ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಸಾಂತ್ವನಿಸಿ ಟ್ವೀಟ್ ಮಾಡಿದ್ದಾರೆ.

08:49 am

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 4-3ರ ಸೋಲು ಕಂಡಿದೆ. ಇದರೊಂದಿಗೆ ಮಹಿಳಾ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಲಿದ್ದ ಚೊಚ್ಚಲ ಒಲಿಂಪಿಕ್ ಪದಕ ಕೈತಪ್ಪಿದೆ.

08:19 am

ಮಹಿಳಾ ಹಾಕಿ ಕಂಚಿನ ಪದಕಕ್ಕಾಗಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಮತ್ತು ಗ್ರೇಟ್ ಬ್ರಿಟನ್ ತಂಡಗಳು 3-3ರ ಸಮಬಲ ಸಾಧಿಸಿವೆ. ನಾಲ್ಕನೇ ಕ್ವಾರ್ಟರ್ ಫಲಿತಾಂಶ ನಿರ್ಧರಿಸಲಿದೆ.

07:44 am

ಮಹಿಳಾ ಹಾಕಿ ಕಂಚಿನ ಪದಕಕ್ಕಾಗಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಗ್ರೇಟ್ ಬ್ರಿಟನ್ ವಿರುದ್ಧ 3-2ರ ಮುನ್ನಡೆಯಲ್ಲಿದೆ.

07:30 am

ಮಹಿಳಾ ಹಾಕಿ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಭಾರತ vs ಗ್ರೇಟ್ ಬ್ರಿಟನ್ ತಂಡಗಳು ಸೆಣಸಾಡುತ್ತಿವೆ. ದ್ವಿತೀಯ ಕ್ವಾರ್ಟರ್‌ನಲ್ಲಿ ಗ್ರೇಟ್ ಬ್ರಿಟನ್ ಗೋಲ್ ಬಾರಿಸಿದೆ. ಭಾರತ 1-0ಯ ಹಿನ್ನಡೆಯಲ್ಲಿದೆ.

07:20 am

ಮಹಿಳಾ ಹಾಕಿ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಭಾರತ vs ಗ್ರೇಟ್ ಬ್ರಿಟನ್ ತಂಡಗಳು ಕಾದಾಡುತ್ತಿವೆ. ಮೊದಲ ಕ್ವಾರ್ಟರ್‌ನಲ್ಲಿ ಇತ್ತಂಡಗಳಿಂದ ಗೋಲ್ ದಾಖಲಾಗಿಲ್ಲ.

07:11 am

ಮೊದಲ ಕ್ವಾರ್ಟರ್ ಆರಂಭವಾಗಿದೆ. ಕೊನೇ 5 ನಿಮಿಷ ಬಾಕಿಯಿರುವಾಗ ಇತ್ತಂಡಗಳಿಂದ ಗೋಲ್ ದಾಖಲಾಗಿರಲಿಲ್ಲ.

06:54 am

ಮಹಿಳಾ ಹಾಕಿ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 2-1ರಿಂದ ಸೋತು ಭಾರತ ನಿರಾಸೆ ಅನುಭವಿಸಿತ್ತು. ಆಗಸ್ಟ್ 4ರಂದು ಈ ಪಂದ್ಯ ನಡೆದಿತ್ತು.

06:42 am

ಮಹಿಳಾ ಹಾಕಿ ಕಂಚಿನ ಪದಕಕ್ಕಾಗಿ ಇಂದು ಭಾರತ ಮತ್ತು ಗ್ರೇಟ್ ಬ್ರಿಟನ್ ಮಧ್ಯೆ ಪಂದ್ಯ ನಡೆಯಲಿದೆ. 7 AMಗೆ ಪಂದ್ಯ ಶುರುವಾಗಲಿದೆ.

04:38 pm

ಭಾರತಕ್ಕೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತ ರೆಸ್ಲರ್ ರವಿ ಕುಮಾರ್ ದಾಹಿಯಾ

04:38 pm

ಜೌರ್ ಉಗುವ್ ವಿರುದ್ಧ ಫೈನಲ್‌ನಲ್ಲಿ ಸೋತ ಭಾರತ ರವಿಕುಮಾರ್ ದಾಹಿಯಾ

04:32 pm

2-4 ಅಂಕಗಳ ಅಂತರದಿಂದ ರವಿ ಕುಮಾರ್‌ಗೆ ಹಿನ್ನಡೆ

04:29 pm

ರೆಸ್ಲಿಂಗ್: ರವಿಕುಮಾರ್ ದಾಹಿಯಾ ಅವರು 57 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ರಷ್ಯಾದ ಜೌರ್ ಉಗುವ್ ವಿರುದ್ಧ ಚಿನ್ನದ ಪದಕ್ಕಾಗಿ ಸೆಣೆಸಾಟವನ್ನು ಆರಂಭಿಸಿದ್ದಾರೆ

04:22 pm

ಹಾಕಿ: ಆಸ್ಟ್ರೇಲಿಯಾ ಹಾಗೂ ಬೆಲ್ಜಿಯಂ ವಿರುದ್ಧದ ಪುರುಷರ ಹಾಕಿ ಫೈನಲ್ ಪಂದ್ಯ ನಡೆಯುತ್ತಿದ್ದು ಫೈನಲ್‌ನಲ್ಲಿ ಬೆಲ್ಜಿಯಂ 1-0 ಅಂತರದಿಂದ ಮೇಲುಗೈ ಸಾಧಿಸಿದೆ. ಸದ್ಯ ಮೂರನೇ ಕ್ವಾರ್ಟರ್ ಅವಧಿಯಲ್ಲಿ ಪಂದ್ಯ ಸಾಗುತ್ತಿದೆ

04:21 pm

ರೆಸ್ಲಿಂಗ್: ಭಾರತ ರವಿಕುಮಾರ್ ದಾಹಿಯಾ ಅವರ ಫೈನಲ್ ಪಂದ್ಯ ಆರಂಭವಾಗಲಿದೆ. ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನವನ್ನು ಗೆಲ್ಲುವ ಅವಕಾಶ ಭಾರತಕ್ಕಿದೆ.

03:00 pm

ಪುರುಷರ 20 ಕಿ.ಮೀ ರೇಸ್‌ವಾಕ್ ಸ್ಪರ್ಧೆಯಲ್ಲಿ ಭಾರತದ ಸಂದೀಪ್ ಕುಮಾರ್ 23ನೇ ಸ್ಥಾನಿಯಾಗಿ ಸ್ಪರ್ಧೆಯನ್ನು ಮುಗಿಸಿದ್ದಾರೆ. ಇನ್ನಿಬ್ಬರು ಸ್ಪರ್ಧಿಗಳಾದ ರಾಹುಲ್ 47ನೇ ಸ್ಥಾನ ಹಾಗೂ ಕೆಟಿ ಇರ್ಫಾನ್ 51ನೇ ಸ್ಥಾನ ಪಡೆದುಕೊಂಡಿದ್ದಾರೆ.

01:31 pm

ಅಥ್ಲೆಟಿಕ್ಸ್: ರೇಸ್ ವಾಕರ್ ಸಂದೀಪ್ ಕುಮಾರ್ ಸದ್ಯ ಎರಡನೇ ಸ್ಥಾನದಲ್ಲಿದ್ದು ಕಠಿಣ ಸ್ಪರ್ಧೆಯನ್ನು ಒಡ್ಡುತ್ತಿದ್ದಾರೆ. ಮೊದಲ ಸ್ಥಾನದಲ್ಲಿ ಚೀನಾದ ವಾಂಗ್ ಕೈಹುವಾ ಇದ್ದಾರೆ.

11:48 am

ಆಗಸ್ಟ್ 5ರ ಇಂದು ಸಂಜೆ 4.20 PMಗೆ ಭಾರತದ ರಸ್ಲರ್ ರವಿಕುಮಾರ್ ದಾಹಿಯ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

10:47 am

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಭಾರತೀಯ ಹಾಕಿ ಪುರುಷರಿಗೆ ಶುಭಾಶಯಗಳ ಸುರಿಮಳೆಯೇ ಬರುತ್ತಿವೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡ ಜರ್ಮನಿ ವಿರುದ್ಧ 5-4ರ ಜಯ ಗಳಿಸಿತ್ತು.

10:08 am

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ.

09:22 am

ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡಕ್ಕೆ ಸುದೀರ್ಘ ವರ್ಷಗಳ ಬಳಿಕ ಲಭಿಸುತ್ತಿರುವ ಪದಕವಿದು. ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಕಂಚು ಕೊರಳಿಗೇರಿಸಿಕೊಂಡಿದೆ. 1980ರ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದ ಬಳಿಕ ಇದೇ ಮೊದಲಬಾರಿಗೆ ಭಾರತಕ್ಕೆ ಪದಕ ಲಭಿಸಿದೆ.

09:06 am

ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡಕ್ಕೆ ಸುದೀರ್ಘ ವರ್ಷಗಳ ಬಳಿಕ ಲಭಿಸುತ್ತಿರುವ ಪದಕವಿದು. ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಕಂಚು ಕೊರಳಿಗೇರಿಸಿಕೊಂಡಿದೆ!

08:49 am

ಭಾರತೀಯ ಹಾಕಿ ಪುರುಷರ ತಂಡ ಇತಿಹಾಸ ನಿರ್ಮಿಸಿದೆ. ಭಾರತೀಯ ಸಾಂಪ್ರದಾಯಿಕ ಕ್ರೀಡೆ ಹಾಕಿಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತೀಯ ಪುರುಷರು 5-4 ಯಿಂದ ಜರ್ಮನಿ ತಂಡವನ್ನು ಸೋಲಿಸಿದ್ದಾರೆ.

08:42 am

ಕಂಚಿನ ಪದಕಕ್ಕಾಗಿ ಭಾರತ vs ಜರ್ಮನಿ ಮಧ್ಯೆ ಪುರುಷರ ಹಾಕಿ ಪಂದ್ಯ ನಡೆಯುತ್ತಿದೆ. ನಾಲ್ಕನೇ ಕ್ವಾರ್ಟರ್ ಕೊನೇ ಹಂತದಲ್ಲೂ ಭಾರತ 5-4ರ ಮುನ್ನಡೆಯಲ್ಲಿದೆ.

08:29 am

ಕಂಚಿನ ಪದಕಕ್ಕಾಗಿ ಭಾರತ vs ಜರ್ಮನಿ ಮಧ್ಯೆ ಪುರುಷರ ಹಾಕಿ ಪಂದ್ಯ ನಡೆಯುತ್ತಿದೆ. ನಾಲ್ಕನೇ ಕ್ವಾರ್ಟರ್ ಆರಂಭದಲ್ಲಿ ಜರ್ಮನಿ ಗೋಲ್ ಬಾರಿಸಿದೆ. ಭಾರತ ಇನ್ನೂ 5-4ರ ಮುನ್ನಡೆಯಲ್ಲಿದೆ.

08:20 am

ಕಂಚಿನ ಪದಕಕ್ಕಾಗಿ ಭಾರತ vs ಜರ್ಮನಿ ಮಧ್ಯೆ ಪುರುಷರ ಹಾಕಿ ಪಂದ್ಯ ನಡೆಯುತ್ತಿದೆ. ತೃತೀಯ ಕ್ವಾರ್ಟರ್ ಮುಕ್ತಾಯವಾಗಿದ್ದು ಭಾರತೀಯ ತಂಡ 5-3ರ ಮುನ್ನಡೆ ಉಳಿಸಿಕೊಂಡಿದೆ.

08:04 am

ಕಂಚಿನ ಪದಕ್ಕಾಗಿ ಭಾರತ vs ಜರ್ಮನಿ ಪುರುಷರ ಹಾಕಿ ಪಂದ್ಯ, ತೃತೀಯ ಕ್ವಾರ್ಟರ್ ಆರಂಭದಲ್ಲೇ ಭಾರತ 5-3ರ ಮುನ್ನಡೆ.

07:48 am

ಕಂಚಿನ ಪದಕ್ಕಾಗಿ ಭಾರತ vs ಜರ್ಮನಿ ಪುರುಷರ ಹಾಕಿ ಪಂದ್ಯ, ದ್ವಿತೀಯ ಕ್ವಾರ್ಟರ್ ಕೊನೇ ಕ್ಷಣದಲ್ಲಿ ಭಾರತ ಕಮ್‌ಬ್ಯಾಕ್, ನಾಯಕ ಹರ್ಮನ್‌ಪ್ರೀತ್‌ ಸಿಂಗ್ ಗೋಲ್. ಅಂಕ 3-3ರಿಂದ ಸಮಬಲ.

07:43 am

ಕಂಚಿನ ಪದಕ್ಕಾಗಿ ಭಾರತ vs ಜರ್ಮನಿ ಪುರುಷರ ಹಾಕಿ ಪಂದ್ಯ, ದ್ವಿತೀಯ ಕ್ವಾರ್ಟರ್ ಆರಂಭದಲ್ಲೇ ಜರ್ಮನಿ 3-1ರ ಭರ್ಜರಿ ಮುನ್ನಡೆ.

07:23 am

ಕಂಚಿನ ಪದಕಕ್ಕಾಗಿ ನಡೆಯುತ್ತಿರುವ ಭಾರತ-ಜರ್ಮನಿ ನಡುವಿನ ಪುರುಷರ ಹಾಕಿ ಸ್ಪರ್ಧೆಯ ಮೊದಲ ಕ್ವಾರ್ಟರ್ ಮುಕ್ತಾಯವಾಗಿದೆ. ಜರ್ಮನಿ 1-0ಯ ಮುನ್ನಡೆಯಲ್ಲಿದೆ.

07:06 am

ಕಂಚಿನ ಪದಕಕ್ಕಾಗಿ ಭಾರತ ಮತ್ತು ಜರ್ಮನಿ ಮಧ್ಯೆ ಪುರುಷರ ಹಾಕಿ ಪಂದ್ಯ ನಡೆಯುತ್ತಿದೆ. ಮೊದಲ ಕ್ವಾರ್ಟರ್‌ನಲ್ಲಿ ಜರ್ಮನಿ 1-0ಯ ಮುನ್ನಡೆಯಲ್ಲಿದೆ.

06:23 am

ಕಂಚಿನ ಪದಕಕ್ಕಾಗಿ ಭಾರತ ಮತ್ತು ಜರ್ಮನಿ ಹಾಕಿ ಪುರುಷರ ಮಧ್ಯೆ ಇಂದು ಪಂದ್ಯ ನಡೆಯಲಿದೆ. ಗೆಲ್ಲುವ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. 7 AMಗೆ ಪಂದ್ಯ ಶುರುವಾಗಲಿದೆ.

05:08 pm

ಭಾರತ ಮಹಿಳಾ ತಂಡ ಕಂಚಿನ ಪದಕಕ್ಕಾಗಿ ಹೋರಾಟವನ್ನು ನಡೆಸಲಿದೆ.

05:07 pm

ಅರ್ಜೆಂಟಿನಾ ತಂಡ ಭಾರತ ಮಹಿಳಾ ತಂಡೆ ವಿರುದ್ಧ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದಿದೆ

05:06 pm

ಮಹಿಳಾ ಹಾಕಿ ಸೆಮಿ ಫೈನಲ್‌ನಲ್ಲಿ ಭಾರತ ಮಹಿಳೆಯರ ತಂಡ ಬಲಿಷ್ಠ ಅರ್ಜೆಂಟಿನಾ ವಿರುದ್ಧ ಸೋಲು ಕಂಡಿದೆ.

04:45 pm

ಮೂರನೇ ಕ್ವಾರ್ಟರ್‌ಕೂಡ ಈಗ ಅಂತ್ಯವಾಗಿದೆ. ಭಾರತ 1-2 ಗೋಲುಗಳ ಅಂತರದಿಂದ ಹಿನ್ನಡೆಯನ್ನು ಅನುಭವಿಸುತ್ತಿದೆ.

04:44 pm

ಅರ್ಜೆಂಟಿನಾ ತಂಡ ಮೂರನೇ ಕ್ವಾರ್ಟರ್‌ನಲ್ಲಿ ಮತ್ತೊಂದು ಗೋಲು ಗಳಿಸಲು ಯಶಸ್ವಿಯಾಗಿದೆ. ಈ ಮೂಲಕ ಅರ್ಜೆಂಟಿನಾ 2-1 ಗೋಲುಗಳಿಂದ ಮುನ್ನಡೆ ಸಾಧಿಸಿದೆ

04:15 pm

ಎರಡನೇ ಕ್ವಾರ್ಟರ್‌ನ ಅವಧಿ ಅಂತ್ಯ. ಈ ಅವಧಿಯಲ್ಲಿ ಗೋಲು ಗಳಿಸಲು ಭಾರತ ವಿಫಲ. 1-1 ಗೋಲುಗಳಿಂದ ಎರಡನೇ ಕ್ವಾರ್ಟರ್ ಅಂತ್ಯ

03:56 pm

ಫೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಲು ಯಶಸ್ವಿಯಾದ ಅರ್ಜೆಂಟಿನಾ. 1-1 ಅಂತರದಿಂದ ಭಾರತದ ವಿರುದ್ಧ ಸಮಬಲ ಸಾಧನೆ

03:50 pm

ಹಾಕಿ: ಭಾರತ ಹಾಗೂ ಅರ್ಜೆಂಟಿನಾ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದ ಮೊದಲ ಕ್ವಾರ್ಟರ್ ಅಂತ್ಯವಾಗಿದೆ. ಒಂದು ಗೋಲು ಗಳಿಸುವ ಮೂಲಕ ಭಾರತ ಮೊದಲ ಕ್ವಾರ್ಟರ್‌ನಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.

03:37 pm

ಭಾರತ ಮಹಿಳೆಯರ ತಂಡ ಆರಂಭದಲ್ಲಿಯೇ ಗೋಲು ಗಳಿಸುವ ಮೂಲಕ ಅರ್ಜೆಂಟಿನ ವಿರುದ್ಧ ಶುಭಾರಂಭವನ್ನು ಮಾಡುವಲ್ಲಿ ಯಶಸ್ವಿಯಾಗಿದೆ

03:37 pm

ಭಾರತ ಮತ್ತು ಅರ್ಜೆಂಟಿನಾ ಮಹಿಳಾ ಹಾಕಿ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಆರಂಭವಾಗಿದೆ.

03:26 pm

ಭಾರತೀಯ ರಸ್ಲರ್ ರವಿ ಕುಮಾರ್ ದಾಹಿಯ ಭಾರತಕ್ಕೆ ಬೆಳ್ಳಿ ಪದಕ ಖಾತರಿಪಡಿಸಿದ್ದಾರೆ. 57 ಕೆಜಿ ವಿಭಾಗ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಿದ್ದ ರವಿ ಕುಮಾರ್, ಕಝಕೀಸ್ತಾನದ ನುರಿಸ್ಲಾಮ್ ಸನಾಯೆವ್ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಬೆಳ್ಳಿ ಪದಕವಂತೂ ಖಾತರಿಯಾಗಿದೆ.

03:09 pm

ಭಾರತದ ವ್ರೆಸ್ಲರ್ ರವಿ ಕುಮಾರ್ ದಹಿಯಾ 57 ಕೆಜಿ ಕೆಟಗರಿಯ ಬಾಕ್ಸಿಂಗ್ ಸುತ್ತಿನ ಸೆಮಿಫೈನಲ್‌ನಲ್ಲಿ ಕಜಕಿಸ್ತಾನದ ನೂರ್ ಇಸ್ಲಾಮ್ ಸನಯೆವ್ ವಿರುದ್ಧ ಜಯ ಸಾಧಿಸುವುದರ ಮೂಲಕ ಫೈನಲ್ ಪ್ರವೇಶಿಸಿದ್ದು ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ

02:33 pm

ಭಾರತದ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕಂಚು ಗೆದ್ದಿದ್ದಕ್ಕಾಗಿ ಮತ್ತು ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಗ್ರೂಪ್‌ ಹಂತದಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಕ್ಕಾಗಿ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

01:06 pm

ಮಧ್ಯಾಹ್ನ 3:30ಕ್ಕೆ ಮಹಿಳಾ ಹಾಕಿ ಸೆಮಿಫೈನಲ್ ಪಂದ್ಯ ಆರಂಭವಾಗಲಿದೆ. ಭಾರತ ಮಹಿಳಾ ತಂಡಕ್ಕೆ ಅರ್ಜೆಂಟಿನಾ ಸೆಮಿಫೈನಲ್‌ನಲ್ಲಿ ಎದುರಾಳಿಯಾಗಿದೆ

01:05 pm

ಹಾಕಿ: ಭಾರತದ ಮಹಿಳಾ ಹಾಕಿ ತಂಡ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿ ಇತಿಹಾಸ ಬರೆದಿದೆ. ಇಂದು ಸೆಮಿಫೈನಲ್ ಪಂದ್ಯ ನಡೆಯಲಿದ್ದು ಪಂದ್ಯದ ಆರಂಭಕ್ಕೇ ಕೆಲವೇ ಗಂಟೆ ಬಾಕಿಯಿದೆ.

01:05 pm

ಹಾಕಿ: ಭಾರತದ ಮಹಿಳಾ ಹಾಕಿ ತಂಡ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸೆಮಿಫಯನಲ್‌ಗೆ ಪ್ರವೇಶಿಸಿ ಇತಿಹಾಸ ಬರೆದಿದೆ. ಇಂದು ಸೆಮಿಫೈನಲ್ ಪಂದ್ಯ ನಡೆಯಲಿದ್ದು ಪಂದ್ಯದ ಆರಂಬಕ್ಕೇ ಕೆಲವೇ ಗಂಟೆ ಬಾಕಿಯಿದೆ.

12:08 pm

ಭಾರತಕ್ಕೆ ಒಲಿಂಪಿಕ್ಸ್‌ ಬಾಕ್ಸಿಂಗ್‌ನಲ್ಲಿ ಈವರೆಗೆ ಒಟ್ಟು ಮೂರು ಪದಕಗಳು ಲಭಿಸಿದಂತಾಗಿದೆ. ಅವೆಂದರೆ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ವಿಜೇಂದರ್ ಸಿಂಗ್‌ ಗೆದ್ದಿದ್ದ ಕಂಚಿನ ಪದಕ, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಜಯಿಸಿದ್ದ ಕಂಚಿನ ಪದಕ ಮತ್ತು ಈಗ ಲವ್ಲಿನಾ ಬೊರ್ಗೊಹೈನ್ ಗೆದ್ದಿರುವ ಕಂಚು.

11:23 am

ಮಹಿಳಾ 69 ಕೆಜಿ ವಿಭಾಗದ ಬಾಕ್ಸಿಂಗ್ ಸೆಮಿಫೈನಲ್ ಸ್ಪರ್ಧೆಯಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್‌ಗೆ ಸೋಲಾಗಿದೆ. ಟರ್ಕಿಯ ಬಾಕ್ಸರ್ ಬುಸೆನಾಜ್ ಸರ್ಮೆನೆಲಿ ಎದುರು ಲವ್ಲಿನಾ ಸೋತಿದ್ದಾರೆ. ಆದರೆ ಈ ಸೋಲಿನೊಂದಿಗೆ ಲವ್ಲಿನಾ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಇದು ಭಾರತಕ್ಕೆ ಲಭಿಸುತ್ತಿರುವ ಮೂರನೇ ಪದಕ.

11:19 am

ಭಾರತದ ಬಾಕ್ಸರ್ (69 ಕೆಜಿ ವಿಭಾಗ) ಲವ್ಲಿನಾ ಬೊರ್ಗೊಹೈನ್‌ ಮತ್ತು ಟರ್ಕಿಯ ಬುಸೆನಾಜ್ ಸರ್ಮೆನೆಲಿ ಮಧ್ಯೆ ಮಹಿಳಾ ವೆಲ್ಟರ್‌ವೇಟ್ ಸೆಮಿಫೈನಲ್ ಬಾಕ್ಸಿಂಗ್ ಸ್ಪರ್ಧೆ ನಡೆಯುತ್ತಿದೆ. ಲವ್ಲಿನಾ ಪದಕ ನಿರೀಕ್ಷೆ ಮೂಡಿಸಿದ್ದಾರೆ. ಎದುರಾಳಿ ಬುಸೆನಾಜ್ ಸರ್ಮೆನೆಲಿ ವಿರುದ್ಧ ಬೊರ್ಗೊಹೈನ್‌ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

11:11 am

ಭಾರತದ ಬಾಕ್ಸರ್ (69 ಕೆಜಿ ವಿಭಾಗ) ಲವ್ಲಿನಾ ಬೊರ್ಗೊಹೈನ್‌ ಮತ್ತು ಟರ್ಕಿಯ ಬುಸೆನಾಜ್ ಸರ್ಮೆನೆಲಿ ಮಧ್ಯೆ ಮಹಿಳಾ ವೆಲ್ಟರ್‌ವೇಟ್ ಸೆಮಿಫೈನಲ್ ಬಾಕ್ಸಿಂಗ್ ಸ್ಪರ್ಧೆ ನಡೆಯುತ್ತಿದೆ.

10:39 am

ಆಗಸ್ಟ್ 4ರ ಬುಧವಾರ ಭಾರತದ ಬಾಕ್ಸರ್ (69 ಕೆಜಿ ವಿಭಾಗ) ಲವ್ಲಿನಾ ಲವ್ಲಿನಾ ಬೊರ್ಗೊಹೈನ್‌ಗೆ ಸೆಮಿಫೈನಲ್ ಪಂದ್ಯವಿದೆ. ಸೆಮಿಫೈನಲ್-1ರಲ್ಲಿ ಲವ್ಲಿನಾ ಅವರು ಟರ್ಕಿಯ ಬುಸೆನಾಜ್ ಸರ್ಮೆನೆಲಿ ಸವಾಲು ಸ್ವೀಕರಿಸಲಿದ್ದಾರೆ.

10:16 am

ಪುರಷರ 86 ಕೆಜಿ ಫ್ರೀ-ಸ್ಟೈಲ್ ರಸ್ಲಿಂಗ್‌ನಲ್ಲಿ ದೀಪಕ್ ಪೂನಿಯಾ ಅವರು ಯುಎಸ್‌ಎಯ ಡೇವಿಡ್ ಮೋರಿಸ್ ಅವರನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ.

09:46 am

ಪುರುಷರ ಕ್ವಾರ್ಟರ್ ಫೈನಲ್ ಫ್ರೀ-ಸ್ಟೈಲ್ ರಸ್ಲಿಂಗ್‌ನ 75 ಕೆಜಿ ವಿಭಾಗದಲ್ಲಿ ಭಾರತದ ರವಿ ದಾಹಿಯ ಬಲ್ಗೇರಿಯಾದ ಜಾರ್ಜಿ ವ್ಯಾಲೆಂಟಿನೋವ್ ವಾಂಗೆಲೋವ್ ಅವರನ್ನು ಸೋಲಿಸಿ 14-4ರ ಅಂತರದಿಂದ ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

09:12 am

ಟೋಕಿಯೋ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾ (ಯುಎಸ್‌ಎ)ಯ ಸಿಡ್ನಿ ಮೆಕ್ಲಾಫ್ಲಿನ್ (51.46 ಸೆಕೆಂಡ್) ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಹಿಳಾ ವಿಭಾಗದ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಮೆಕ್ಲಾಫ್ಲಿನ್ ತನ್ನದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಸುಧಾರಿಸಿ ಬಂಗಾರದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

08:41 am

ಪುರುಷ 57 ಕೆಜಿ ವಿಭಾಗದ ಫ್ರೀ-ಸ್ಟೈಲ್ ರಸ್ಲಿಂಗ್‌ನಲ್ಲಿ ರವಿ ದಾಹಿಯ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ರವಿ, ಕೊಲಂಬಿಯಾದ ಆಸ್ಕರ್ ಎಡ್ವರ್ಡೊ ಟಿಗ್ರೆರೋಸ್ ಅವರನ್ನು 13-2ರ ಅಂತರದಲ್ಲಿ ಸೋಲಿಸಿದ್ದಾರೆ.

07:22 am

ಭಾರತದ ಜಾವೆಲಿನ್ ಥ್ರೋವರ್‌ ಶಿವಪಾಲ್‌ ಸಿಂಗ್ ಪುರುಷರ ಗ್ರೂಪ್ 'ಬಿ'ಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೊದಲ ಪ್ರಯತ್ನದಲ್ಲಿ ಸಿಂಗ್ 76.40 ಮೀಟರ್ ದೂರ ಈಟಿ ಎಸೆದಿದ್ದಾರೆ.

06:21 am

ಪುರುಷರ ಜಾವೆಲಿನ್ ಥ್ರೋನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಗ್ರೂಪ್‌ 'ಎ'ಯಲ್ಲಿದ್ದು, ಮೊದಲ ಪ್ರಯತ್ನದಲ್ಲಿ 86.65 ಮೀಟರ್ ದೂರದ ಸಾಧನೆಯೊಂದಿಗೆ ಫೈನಲ್ ಹಂತಕ್ಕೆ ನೇರ ಪ್ರವೇಶ ಪಡೆದುಕೊಂಡಿದ್ದಾರೆ. ಆಗಸ್ಟ್‌ 7ಕ್ಕೆ ಫೈನಲ್ ನಡೆಯಲಿದೆ.

06:07 am

ಪುರುಷರ ಜಾವೆಲಿನ್ ಥ್ರೋನಲ್ಲಿ ಭರವಸೆಯ ಅಥ್ಲೀಟ್ ನೀರಜ್ ಚೋಪ್ರಾ ಸ್ಪರ್ಧಿಸುತ್ತಿದ್ದಾರೆ. ಗ್ರೂಪ್ 'ಎ'ಯಲ್ಲಿರುವ ಚೋಪ್ರಾ ಮೊದಲ ಪ್ರಯತ್ನದಲ್ಲಿ 86.65 ಮೀಟರ್ ದೂರದ ಸಾಧನೆ ತೋರಿದ್ದಾರೆ. ಈ ವಿಭಾಗದಲ್ಲಿ ವಿಶ್ವ ನಂ.1 ಜರ್ಮನಿಯ ಜೋಹಾನ್ಸ್ ವೆಟರ್ 82.04 ಮೀಟರ್ ಸಾಧನೆ ತೋರಿದ್ದಾರೆ.

06:01 am

ಪುರುಷರ ಜಾವೆಲಿನ್ ಥ್ರೋನಲ್ಲಿ ಭರವಸೆಯ ಅಥ್ಲೀಟ್ ನೀರಜ್ ಚೋಪ್ರಾ ಸ್ಪರ್ಧಿಸುತ್ತಿದ್ದಾರೆ.

05:35 pm

ಒಲಿಂಪಿಕ್ಸ್ ಮಹಿಳಾ ಜಿಮ್ನ್ಯಾಸ್ಟಿಕ್‌ನಿಂದ ಹಿಂದೆ ಸರಿದು ಸುದ್ದಿಯಾಗಿದ್ದ ಯುನೈಟೆಡ್ ಸ್ಟೇಟ್ಸ್‌ನ ಚಾಂಪಿಯನ್‌ ಸಿಮೋನ್ ಬೈಲ್ಸ್‌ಗೆ ಕಡೆಗೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಲಭಿಸಿದೆ. ಮಹಿಳಾ ಜಿಮ್ನ್ಯಾಸ್ಟಿಬ್ ಬೀಮ್ ಫೈನಲ್‌ ಸ್ಪರ್ಧೆಯಲ್ಲಿ ಸಿಮೋನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಈ ವಿಭಾಗದಲ್ಲಿ ಚಿನ್ನದ ಪದಕ ಚೀನೀ ಜಿಮ್ನ್ಯಾಸ್ಟ್ ಗ್ವಾನ್ ಚೆಂಚೆನ್ ಪಾಲಾಗಿದೆ.

04:55 pm

ಭಾರತದ ಶಾಟ್‌ಪುಟ್ ಎಸೆತದ ಸ್ಪರ್ಧಿ ತೇಜಿಂದರ್ ಸಿಂಗ್ ತೋರ್ ಮುಂದಿನ ಸುತ್ತಿಗೇರುವಲ್ಲಿ ವಿಫಲವಾಗಿದ್ದಾರೆ. ಅರ್ಹತಾ ಸುತ್ತಿನಲ್ಲಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.

04:54 pm

ತೇಜಿಂದರ್ ಸಿಂಗ್ ಮತ್ತೊಮದು ಫೌಲ್ ಎಸೆತವನ್ನು ಮಾಡುವ ಮೂಲಕ 13ನೇ ಸ್ಥಾನಕ್ಕೆ ಇಳಿದಿದ್ದಾರೆ

04:52 pm

ಎರಡನೇ ಸುತ್ತಿನ ಎಸೆತದ ಬಳಿ ತೇಜಿಂದರ್ ಸಿಂಗ್ 12ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎರಡನೇ ಅವಕಾಶವನ್ನು ಫೌಲ್ ಮಾಡುವ ಮೂಲಕ ಎಡವಿದರು.

04:30 pm

ಪುರುಷರ ಶಾಟ್‌ಪುಟ್‌ನಲ್ಲಿ ತೇಜೀಂದರ್‌ಪಾಲ್ ಸಿಂಗ್ ತೂರ್ ಸ್ಪರ್ಧಿಸುತ್ತಿದ್ದಾರೆ. ಸದ್ಯ ಸಿಂಗ್ 19.99 ಮೀ. ದೂರ ಸಾಧನೆಯೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ಬ್ರೆಝಿಲ್‌ನ ಡಾರ್ಲಾನ್ ರೋಮಾನಿ 21.00 ಮೀಟರ್ ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

04:29 pm

ನೇರ ಅರ್ಹತೆಯನ್ನು ಪಡೆಯಲು 21.20 ಮೀಟರ್‌ಗಳ ಗುರಿಯನ್ನು ತಲುಪಬೇಕಿದೆ. ಮೊದಲ ಪ್ರಯತ್ನದಲ್ಲಿ ತೇಜಿಂದರ್ 19.99 ಮೀಟರ್ ದೂರಕ್ಕೆ ಎಸೆದಿದ್ದಾರೆ. ಆರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

04:27 pm

ಶಾಟ್‌ಪುಟ್ ಎಸೆತದ ಸ್ಪರ್ಧೆಯಲ್ಲಿ ಅಥ್ಲಿಟ್ ತೇಜಿಂದರ್ ಸಿಂಗ್ ತೋರ್ ಭಾರತದ ಪರವಾಗಿ ಕಣಕ್ಕಿಳಿದಿದ್ದಾರೆ.

01:26 pm

69 ಕೆಜಿ (ವೆಲ್ಟರ್‌ವೇಟ್) ವಿಭಾಗದ ಮಹಿಳಾ ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿರುವ ಭಾರತದ ಲವ್ಲಿನಾ ಬೊರ್ಗೊಹೈನ್ ಆಗಸ್ಟ್ 4ರ ಬುಧವಾರ ಟರ್ಕಿಯ ಬುಸೆನಾಜ್ ಸರ್ಮೆನೆಲಿ ಸವಾಲು ಸ್ವೀಕರಿಸಲಿದ್ದಾರೆ. 11 AMಗೆ ಈ ಪಂದ್ಯ ನಡೆಯಲಿದೆ. ಈ ಪಂದ್ಯ ಗೆದ್ದರೆ ಲವ್ಲಿನಾ ಇತಿಹಾಸ ನಿರ್ಮಿಸಿದಂತಾಗುತ್ತದೆ.

11:56 am

ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ಎದುರು ಸೋತ ಭಾರತೀಯ ಪುರುಷರ ಹಾಕಿ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸ್ಫೂರ್ತಿ ತುಂಬಿದ್ದಾರೆ. ಸೋಲು-ಗೆಲುವು ಬದುಕಿನ ಭಾಗ. ನಮ್ಮ ಆಟಗಾರರು ದಿಟ್ಟ ಹೋರಾಟ ನೀಡಿದ್ದಾರೆ. ಅದೇ ಆಟದಲ್ಲಿ ಪ್ರಮುಖವಾಗುತ್ತದೆ ಎಂದು ಮೋದಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಪುರುಷರ ಹಾಕಿ ತಂಡ ಬೆಲ್ಜಿಯಂ ಎದುರು 2-5ರ ಸೋಲು ಕಂಡಿತ್ತು.

10:21 am

ಮಹಿಳೆಯರ 62 ಕೆ.ಜಿ. ಫ್ರೀ-ಸ್ಟೈಲ್‌ನಲ್ಲಿ ರಸ್ಲಿಂಗ್‌ನಲ್ಲಿ ಭಾರತದ ಸೋನಂ ಮಲಿಕ್ ಆರಂಭಿಕ ಸುತ್ತಿನಲ್ಲೇ ಸೋತಿದ್ದಾರೆ. ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಖು ಎದುರು ಸೋನಂ 2-2ಯ ಸೋಲನುಭವಿಸಿದ್ದಾರೆ.

09:38 am

ಟೋಕಿಯೋ ಒಲಿಂಪಿಕ್ಸ್ 2021ರ ಅಥ್ಲೆಟಿಕ್ಸ್ ವಿಭಾಗದ ಮಹಿಳಾ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಜಾವೆಲಿನ್ ಥ್ರೋವರ್ ಅನ್ನು ರಾಣಿ ಪದಕದಾಸೆ ಕೈ ಚೆಲ್ಲಿದ್ದಾರೆ. ಮಂಗಳವಾರ (ಆಗಸ್ಟ್ 3) ನಡೆದ ಗ್ರೂಪ್ ಹಂತದ ಸ್ಪರ್ಧೇಯಲ್ಲಿ ರಾಣಿ ಫೈನಲ್‌ಗೂ ಅರ್ಹತೆ ಗಿಟ್ಟಿಸಿಕೊಳ್ಳದೆ ಸ್ಪರ್ಧೆ ಮುಗಿಸಿದ್ದಾರೆ. ನೀರಸ ಪ್ರದರ್ಶನದೊಂದಿಗೆ ರಾಣಿ 14ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ.

08:50 am

ಟೋಕಿಯೋ ಒಲಿಂಪಿಕ್ಸ್ ಪುರುಷರ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. 41 ವರ್ಷಗಳ ಸುದೀರ್ಘ ಸಮಯದ ಬಳಿಕ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಪುರುಷರ ಹಾಕಿ ತಂಡ ಉತ್ತಮ ಪೈಪೋಟಿಯೊಂದಿಗೆ ಬೆಲ್ಜಿಯಂ ವಿರುದ್ಧ 2-5ರ ಅಂತರದಿಂದ ಸೋಲನುಭವಿಸಿದೆ. ಆದರೆ ಭಾರತಕ್ಕೆ ಇನ್ನೂ ಪದಕದ ನಿರೀಕ್ಷೆಯಿದೆ. ಸೆಮಿಫೈನಲ್‌ನಲ್ಲಿ ಸೋತ ಹಾಕಿ ತಂಡಕ್ಕೆ ಕಂಚಿನ ಪದಕಕ್ಕಾಗಿ ಸ್ಪರ್ಧೆ ನಡೆಯಲಿದೆ.

07:19 am

ಭಾರತ ಮತ್ತು ಬೆಲ್ಜಿಯಂ ಮಧ್ಯೆ ಹಾಕಿ ಪುರುಷರ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. 7.18 AM ವೇಳೆಗೆ ಭಾರತ 2-1ರ ಮುನ್ನಡೆಯಲ್ಲಿತ್ತು.

06:46 pm

ಡಿಸ್ಕಸ್‌ ಎಸೆತದಲ್ಲಿ ಫೈನಲ್ ಹಂತಕ್ಕೇರಿದ್ದ ಕಮಲ್‌ಪ್ರೀತ್ ಕೌರ್ 6ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಭಾರತ ಪದಕ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ ಕಮಲ್‌ಪ್ರೀತ್ ಫೈನಲ್‌ನಲ್ಲಿ ನೀಡಿದ ಪ್ರದರ್ಶನ ಭಾರತೀಯ ಕ್ರೀಡಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

05:56 pm

ಮಹಿಳೆಯರ ಡಿಸ್ಕಸ್‌ ಥ್ರೋ ಫೈನಲ್: ಮಳೆಯ ಕಾರಣದಿಂದಾಗಿ ಡಿಸ್ಕಸ್ ಎಸೆತದ ಫೈನಲ್ ಹಂತದ ಸ್ಪರ್ಧೆಗಳನ್ನು ಕೆಲ ಕಾಲ ಮುಂದೂಡಲಾಗಿತ್ತು. ಸ್ಪರ್ಧಿಗಳೆಲ್ಲರೂ ಮೊದಲ ಪ್ರಯತ್ನವನ್ನು ನಡೆಸಿದ ಬಳಿಕ ಎರಡನೇ ಪ್ರಯತ್ನವನ್ನು ನಡೆಸುತ್ತಿದ್ದಂತೆಯೇ ಮಳೆ ಸುರಿಯಲು ಆರಂಭವಾಯಿತು. ಈಗ ಮತ್ತೆ ಮುಂದುವರಿಯಲು ಮಳೆ ಅವಕಾಶ ಮಾಡಿಕೊಟ್ಟಿದೆ

04:27 pm

ಮಹಿಳೆಯರ ಡಿಸ್ಕಸ್‌ ಎಸೆತದಲ್ಲಿ ಭಾರತದ ಅಥ್ಲೀಟ್ ಕಮಲ್‌ಪ್ರೀತ್ ಕೌರ್ ಫೈನಲ್ ಪ್ರವೇಶಿಸಿದ್ದು ಕೆಲವೇ ಕ್ಷಣಗಳಲ್ಲಿ ಫೈನಲ್ ಹಂತದ ಸ್ಪರ್ಧೆ ಆರಂಭವಾಗಲಿದೆ. 4:30ಕ್ಕೆ ಈ ಫೈನಲ್ ಸ್ಪರ್ಧೆ ಆರಂಬವಾಗಲಿದ್ದು ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆಯನ್ನು ಮೂಡಿಸಿದ್ದಾರೆ ಕಮಲ್‌ಪ್ರೀತ್ ಕೌರ್

02:07 pm

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬ್ರಿಟನ್ ವನಿತೆಯರು ಗ್ರೂಪ್ ಪರ್ಸ್ಯೂಟ್ ಸ್ಪರ್ಧೆಯಲ್ಲಿ 4.10 ನಿಮಿಷಗಳಲ್ಲಿ ಗುರಿಯನ್ನು ಮುಟ್ಟಿದ್ದರು. ಈ ದಾಖಲೆಯನ್ನು ಇದೀಗ ಟೋಕಿಯೋ ಒಲಿಂಪಿಕ್ಸ್‌ 2020ರ ಸೈಕ್ಲಿಂಗ್‍ನಲ್ಲಿ ಜರ್ಮನ್ ಯುವತಿಯರು 4.07 ನಿಮಿಷಗಳಿಗೆ ಗುರಿಯನ್ನು ಮುಟ್ಟುವ ಮೂಲಕ ಅಳಿಸಿ ಹಾಕಿದ್ದಾರೆ

11:20 am

ಭಾರತದ ಶೂಟಿಂಗ್ ಸ್ಪರ್ಧಿಗಳಾದ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ ಮತ್ತು ಸಂಜೀವ್ ರಜಪೂತ್ 50 ಮೀ ಶೂಟಿಂಗ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶ ಪಡೆದುಕೊಳ್ಳುವಲ್ಲಿ ಹೀನಾಯವಾಗಿ ಸೋತಿದ್ದಾರೆ.

10:24 am

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಭಾರತೀಯ ವನಿತೆಯರ ಹಾಕಿ ತಂಡ 1-0 ಅಂತರದಿಂದ ಜಯ ಸಾಧಿಸುವುದರ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ

09:29 am

ಮಹಿಳಾ ಹಾಕಿ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ಹಾಕಿ ತಂಡ ಹಾಫ್ ಟೈಮ್‌ಗೆ 1-0 ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

07:39 am

ಅಥ್ಲೆಟಿಕ್ ಮಹಿಳೆಯರ 200 ಮೀ ಮೊದಲನೇ ಸುತ್ತಿನಲ್ಲೇ ಭಾರತದ ದ್ಯುತಿ ಚಾಂದ್ ಕೊನೆಯ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಳ್ಳದೇ ಸೋಲನುಭವಿಸಿದ್ದಾರೆ.

07:43 pm

ಹಾಕಿ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತೀಯ ಪುರುಷರ ತಂಡ ಗ್ರೇಟ್ ಬ್ರಿಟನ್ ವಿರುದ್ಧ 3-1 ಅಂತರದಿಂದ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಭಾರತೀಯ ಹಾಕಿ ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಕಳೆದು ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಭಾರತ ಹಾಕಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

06:38 pm

ಹಾಕಿ, ಕ್ವಾರ್ಟರ್‌ಫೈನಲ್: ಭಾರತದ ವಿರುದ್ಧ ಮೊದಲ ಗೋಲು ಗಳಿಸಿದ ಗ್ರೇಟ್ ಬ್ರಿಟನ್. ಸದ್ಯ ಭಾರತ 2-1 ಅಂತರದಿಂದ ಮುನ್ನಡೆಯಲ್ಲಿ

06:09 pm

ಹಾಕಿ, ಕ್ವಾರ್ಟರ್‌ಫೈನಲ್: ಎರಡನೇ ಕ್ವಾರ್ಟರ್ ಮುಕ್ತಾಯದಲ್ಲಿ ಭಾರತ ಗ್ರೇಟ್ ಬ್ರಿಟನ್ ವಿರುದ್ಧ ಉತ್ತಮ ಮುನ್ನಡೆಯನ್ನು ಸಾಧಿಸಿದೆ. ಭಾರತ 2 ಗೋಲು ಗಳಿಸಿದ್ದರೆ ಗ್ರೇಟ್ ಬ್ರಿಟನ್ ಇನ್ನೂ ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಗಿದೆ

06:03 pm

ಬ್ಯಾಡ್ಮಿಂಟನ್‌ನಲ್ಲಿ ಭಾರತದ ಟೆನಿಸ್ ತಾರೆ ಪಿವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ. ಚೀನಾದ ಹಿ ಬಿಂಗ್ಜಿಯಾವೊ ವಿರುದ್ಧದ ಪಂದ್ಯದಲ್ಲಿ 21-13 21-15 ಅಂತರದಿಂದ ಗೆದ್ದು ಪದಕ ಕೊರಳಿಗೇರಿಸಿಕೊಂಡ ಪಿವಿ ಸಿಂಧು. ಈ ಮೂಲಕ ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕವನ್ನು ಗೆದ್ದಂತಾಗಿದೆ.

05:58 pm

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಭಾರತಕ್ಕೆ ಎರಡನೇ ಪದಕ ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಚೀನಾ ಆಟಗಾರ್ತಿ ಬಿಂಗ್ ಜಿಯಾವೋ ವಿರುದ್ಧ ಸಿಂಧು 21-13, 21-15ರ ಅಂತರದಿಂದ ನೇರ ಸೆಟ್ ಗೆಲುವನ್ನಾಚರಿಸಿದ್ದಾರೆ.

05:41 pm

ಮೊದಲ ಕ್ವಾರ್ಟರ್‌ನಲ್ಲಿ ಮೊದಲ ಗೋಲು ಗಳಿಸಿದ ಭಾರತ, ಗ್ರೇಟ್ ಬ್ರಿಟನ್ ವಿರುದ್ಧ ಆರಂಭಿಕ ಮುನ್ನಡೆ ಗಳಿಸಿದ ಮನ್‌ಪ್ರೀತ್ ಪಡೆ

05:30 pm

ಭಾರತ ಹಾಗೂ ಗ್ರೇಟ್ ಬ್ರಿಟನ್ ನಡುವಿನ ಕ್ವಾರ್ಟರ್‌ಫೈನಲ್ ಹಂತದ ಪುರುಷರ ಹಾಕಿ ಪಂದ್ಯ ಇದೀಗ ಆರಂಭವಾಗಿದೆ. ಈ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶ ಪಡೆಯಲು ಎರಡು ತಂಡಗಳು ಪೈಪೋಟಿ ನಡೆಸುತ್ತಿವೆ.

04:32 pm

ಟೋಕಿಯೋ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್ ಟೆನಿಸ್ ಸ್ಪರ್ಧೆಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. ಭಾನುವಾರ (ಆಗಸ್ಟ್ 1) ನಡೆದ ಫೈನಲ್ ಪಂದ್ಯದಲ್ಲಿ ರಷ್ಯಾದ ಕರೆನ್ ಖಚಾನೋವ್ ಸೋಲಿಸಿರುವ ಜ್ವೆರೆವ್ ಬಂಗಾರದ ಪದಕ ಜಯಿಸಿದ್ದಾರೆ.

03:55 pm

ಟೋಕಿಯೋ ಒಲಿಂಪಿಕ್ಸ್ ಮಹಿಳಾ ವಿಭಾಗ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಜಮೈಕಾ ಓಟಗಾರ್ತಿ ಜಮೈಕಾದ ಎಲೈನ್ ಥಾಂಪ್ಸನ್-ಹೆರಾ (10.61 ಸೆಕೆಂಡ್) ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಜಮೈಕಾದವರೇ ಆದ ಶೆಲ್ಲಿ-ಆನ್ ಫ್ರೇಸರ್-ಪ್ರೈಸ್ (10.74 ಸೆಕೆಂಡ್), ಶೆರಿಕಾ ಜಾಕ್ಸನ್ (10.76 ಸೆಕೆಂಡ್) ಬೆಳ್ಳಿ, ಕಂಚಿನ ಪದಕ ಪಡೆದುಕೊಂಡಿದ್ದಾರೆ.

01:55 pm

ಭಾನುವಾರ (ಆಗಸ್ಟ್ 1) ಸಂಜೆ 5 PM ವೇಳೆ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧುಗೆ ಕಂಚಿನ ಪದಕಕ್ಕಾಗಿ ಪಂದ್ಯ ನಡೆಯಲಿದೆ. ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸೋತಿರುವ ಸಿಂಧು ಕಂಚಿನ ಪದಕಕ್ಕಾಗಿ ಚೀನಾದ ಹಿ ಬಿಂಗ್ಜಿಯಾವೊ ವಿರುದ್ಧ ಕಾದಾಡಲಿದ್ದಾರೆ.

01:02 pm

ಯುನೈಟೆಡ್ ಸ್ಟೇಟ್ಸ್ ಈಜುಗಾರ ಕೈಲೆಬ್ ಡ್ರೆಸೆಲ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಒಟ್ಟು ಐದು ಚಿನ್ನದ ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಇದರಲ್ಲಿ ಮೂರು ಚಿನ್ನದ ಪದಕಗಳು ಕೈಲೆಬ್‌ಗೆ ವೈಯಕ್ತಿಕ ವಿಭಾಗದಲ್ಲಿ ಲಭಿಸಿದ್ದು, ಇನ್ನುಳಿದವು ತಂಡ ಸ್ಪರ್ಧೆಗಳಲ್ಲಿ ಲಭಿಸಿದ್ದು. 4x100 ಮೀ. ಮಿಡ್ಲೆ ರಿಲೇ, 50 ಮೀ. ಫ್ರೀಸ್ಟೈಲ್, 100 ಮೀ. ಫ್ರೀ ಸ್ಟೈಲ್, 100 ಮೀ. ಬಟರ್‌ಫ್ಲೈ, 4x100 ಮೀ. ಫ್ರೀಸ್ಟೈಲ್ ರಿಲೇ ಸ್ಪರ್ಧೆಗಳಲ್ಲಿ ಕೈಲೆಬ್ ಬಂಗಾರದ ಪದಕ ಜಯಿಸಿದ್ದಾರೆ.

10:34 am

ಭಾರತದ ಬಾಕ್ಸರ್ ಸತೀಶ್ ಕುಮಾರ್ ಪುರುಷರ ಹೆವಿವೇಟ್ (91+ ಕೆಜಿ) ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತಿದ್ದಾರೆ. ಉಜ್ಬೇಕಿಸ್ತಾನದ ಬಖೋಡಿರ್ ಜಲೋವ್ ಎದುರು ಸೋತು ಕುಮಾರ್ ಟೋಕಿಯೋ ಒಲಿಂಪಿಕ್ಸ್‌ನಿಂದ ಹೊರ ನಡೆದಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ಸತೀಶ್‌ಗೆ ಮುಖಕ್ಕೆ ತೀವ್ರ ಗಾಯವಾಗಿತ್ತು. ಗಾಯಕ್ಕೆ ಹೊಲಿಗೆ ಹಾಕಲಾಗಿತ್ತು.

09:19 am

ಭಾರತದ ಬಾಕ್ಸರ್ ಸತೀಶ್ ಕುಮಾರ್‌ಗೆ ಕಣ್ಣಿನ ಸಮೀಪ ಗಾಯವಾಗಿದೆ. ಗಾಯಕ್ಕೆ ಹೊಲಿಗೆ ಹಾಕಲಾಗಿದೆ. ಹೀಗಾಗಿ ಭಾನುವಾರ (ಆಗಸ್ಟ್ 1) ಸತೀಶ್ ಸ್ಪರ್ಧಿಸೋದು ಅನುಮಾನವೆನಿಸಿದೆ. ಸತೀಶ್‌ಗೆ ಭಾನುವಾರ ಉಜ್ಬೇಕಿಸ್ತಾನ್‌ನ ಬಖೋಡಿರ್ ಜಲೋವ್ ವಿರುದ್ಧ ಕ್ವಾರ್ಟರ್ ಫೈನಲ್ ಸೂಪರ್ ಹೆವಿವೇಟ್ ಸ್ಪರ್ಧೆಯಿದೆ.

07:03 am

ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ಸಿಂಗಲ್ಸ್ ಟೆನಿಸ್ ಸ್ಪರ್ಧೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಬೆಲಿಂಡಾ ಬೆನ್ಸಿಕ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಝೆಕ್ ಆಟಗಾರ್ತಿ ಮಾರ್ಕೆಟಾ ವೊಂಡ್ರೊಸೊವಾ ಎದುರು ಬೆನ್ಸಿಕ್ 7-5, 2-6, 6-3ರ ಅಂತರದಿಂದ ಗೆದ್ದಿದ್ದಾರೆ.

09:04 pm

ಭಾರತ ವನಿತೆಯರ ಹಾಕಿ ತಂಡ ಆಗಸ್ಟ್ 2ರಂದು ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಆಸ್ಟ್ರೇಲಿಯಾ ವನಿತೆಯರ ಹಾಕಿ ತಂಡದ ವಿರುದ್ಧ ಸೆಣಸಾಡಲಿದೆ

07:17 pm

ಇಂದು ಸೌತ್ ಆಫ್ರಿಕಾ ವಿರುದ್ಧ 4-3 ಅಂತರದಲ್ಲಿ ಜಯ ಸಾಧಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ.

06:19 pm

ಪುರುಷರ ಲಾಂಗ್ ಜಂಪ್ ಗ್ರೂಪ್ ಬಿ ಸುತ್ತಿನಲ್ಲಿ 13ನೇ ಸ್ಥಾನ ಪಡೆದುಕೊಳ್ಳುವುದರ ಮೂಲಕ ಭಾರತದ ಕ್ರೀಡಾಪಟು ಶ್ರೀಶಂಕರ್ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ

04:55 pm

ಟೆನಿಸ್ ಆಟಗಾರ, ಸರ್ಬಿಯಾದ ನೊವಾಕ್ ಜೊಕೋವಿಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಕೈ ಚೆಲ್ಲಿದ್ದಾರೆ. ಶನಿವಾರ (ಜುಲೈ 31) ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಎದುರು ಜೊಕೋವಿಕ್ 6-4, 6-7 (6/8), 6-3ರ ಸೋಲು ಕಂಡಿದ್ದಾರೆ.

04:47 pm

ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಅವರು ಚೀನೀಸ್ ತೈಪೆಯ ತೈ ತ್ಸು ಯಿಂಗ್ ವಿರುದ್ಧ 18-21, 11-21 ಸೆಟ್‌ಗಳ ಅಂತರದಲ್ಲಿ ಸೋಲುಂಡಿದ್ದಾರೆ. ಕಂಚಿನ ಪದಕಕ್ಕಾಗಿ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ಸಿಂಧು ಚೀನಾದ ಹೀ ಬಿಂಗ್ ಜಿಯಾವೋ ಸವಾಲು ಸ್ವೀಕರಿಸಲಿದ್ದಾರೆ.

04:36 pm

ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪಂದ್ಯ ಆಡುತ್ತಿರುವ ಪಿವಿ ಸಿಂಧು ತೈ ತ್ಸು ಯಿಂಗ್ ವಿರುದ್ಧ 18-21 ಅಂತರದಲ್ಲಿ ಸೋಲನುಭವಿಸಿದ್ದಾರೆ.

02:46 pm

ಮಹಿಳಾ 50 ಮೀ. ರೈಫಲ್ 3 ಪೊಸಿಶನ್ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳಾದ ಅಂಜುಮ್ ಮೌಡ್ಗಿಲ್‌ ಮತ್ತು ತೇಜಸ್ವಿನಿ ಸಾವಂತ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಎಡವಿದ್ದಾರೆ. ಈ ವಿಭಾಗದಲ್ಲಿ ಅಂಜುಮ್ 18ನೇ ಸ್ಥಾನದಲ್ಲಿ ಮತ್ತು ತೇಜಸ್ವಿನಿ 33ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ.

11:00 am

ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ಫೀಲ್ಡ್ ಹಾಕಿ ಸ್ಪರ್ಧೆಯಲ್ಲಿ ಭಾರತದ ವನಿತಾ ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶದ ಸಾಧ್ಯತೆ ಗಟ್ಟಿಯಾಗಿಸಿಕೊಂಡಿದೆ. ಶನಿವಾರ (ಜುಲೈ 31) ನಡೆದ ಗ್ರೂಪ್‌ 'ಎ' ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು 4-3ರ ಅಂತರದಿಂದ ಸೋಲಿಸಿರುವ ಭಾರತೀಯ ತಂಡ ಪದಕದಾಸೆ ಜೀವಂತವಾಗಿರಿಸಿಕೊಂಡಿದೆ.

09:03 am

ಮಹಿಳಾ ವಿಭಾಗದ ಡಿಸ್ಕಸ್ ಥ್ರೋನಲ್ಲಿ ಭಾರತದ ಅಥ್ಲೀಟ್ ಕಮಲ್‌ಪ್ರೀತ್‌ ಕೌರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಗ್ರೂಪ್‌ 'ಎ'ಯಲ್ಲಿರುವ ಕಮಲ್‌ ಪ್ರೀತ್‌ 64 ಮೀ. ದೂರದೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದರೆ, ಗ್ರೂಪ್‌ ಬಿ ಯಲ್ಲಿ ಕ್ರೊವೇಶಿಯಾದ ಸಾಂಡ್ರಾ ಪೆರ್ಕೊವಿಕ್ 63.75 ಮೀ. ಸಾಧನೆಯೊಂದಿಗೆ ಅಂತಿಮ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

08:28 am

ಟೊಕಿಯೋ ಒಲಿಂಪಿಕ್ಸ್ 9ನೇ ದಿನವಾದ ಶನಿವಾರ (ಜುಲೈ 31) ಭಾರತದ ಬಾಕ್ಸರ್ ಅಮಿತ್ ಪಂಘಲ್ (ಫ್ಲೈವೇಟ್ ವಿಭಾಗ) ಮತ್ತು ಅತನು ದಾಸ್‌ಗೆ ನಿರಾಸೆಯಾಗಿದೆ. ಪುರುಷರ ಬಾಕ್ಸಿಂಗ್‌ನಲ್ಲಿ ಅಮಿತ್ ಪಂಘಲ್ ಕೊಲಂಬಿಯಾದ ಹರ್ನಿ ಮಾರ್ಟಿನೆಜ್ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ 1-4ರ ಸೋಲನುಭವಿಸಿದ್ದರೆ, ಆರ್ಚರ್ ಅತನು ದಾಸ್ ಪುರುಷರ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಫುಕುಕವ ಎದುರು 6-4ರ ಅಂತರದಿಂದ ಪರಾಭವಗೊಂಡಿದ್ದಾರೆ.

06:33 am

ಭಾರತದ ಅಥ್ಲೀಟ್ ಸೀಮಾ ಪೂನಿಯಾ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ದ್ವಿತೀಯ ಪ್ರಯತ್ನದಲ್ಲಿ ಪೂನಿಯಾ 60.57 ಮೀ. ದೂರದ ಸಾಧನೆ ತೋರಿದ್ದಾರೆ. ಗ್ರೂಪ್‌ 'ಎ'ಯಲ್ಲಿದ್ದ 15 ಅಥ್ಲೀಟ್‌ಗಳಲ್ಲಿ 60 ಮೀ.ಗೂ ಅಧಿಕ ದೂರ ಎಸೆತದ ಸಾಧನೆ ತೋರಿದ ಮೂವರಲ್ಲಿ ಒಬ್ಬರಾಗಿ ಪೂನಿಯಾ ಗುರುತಿಸಿಕೊಂಡಿದ್ದಾರೆ.

05:38 pm

ಭಾರತೀಯ ಪುರುಷರ ಹಾಕಿ ತಂಡ ಪ್ರಿ ಕ್ವಾರ್ಟರ್ ಪೈನಲ್‌ ಪಂದ್ಯದಲ್ಲಿ ಜಪಾನ್ ತಂಡವನ್ನು 5-3ರ ಅಂತರದಿಂದ ಸೋಲಿಸಿದೆ. ಇದರೊಂದಿಗೆ ಭಾರತೀಯ ಪುರುಷರ ಹಾಕಿ ತಂಡ ಫೀಲ್ಡ್ ಹಾಕಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆಯಲ್ಲದೆ ಗ್ರೂಪ್‌ 'ಎ'ಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

04:03 pm

ವಿಶ್ವದ ನಂಬರ್ 1 ಆಟಗಾರ ನೊವಾಕ್ ಜೊಕೋವಿಕ್ ಟೋಕಿಯೋ ಒಲಿಂಪಿಕ್ಸ್ ಹೋರಾಟ ಅಂತ್ಯವಾಗಿದೆ. ಸೆಮಿಫೈನಲ್‌ನಲ್ಲಿ ಆಘಾತಕರ ರೀತಿಯಲ್ಲಿ ಜೊಕೋವಿಕ್ ಸೋಲನ್ನು ಕಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಪದಕ ಮಾತ್ರವಲ್ಲದೆ ಈವರೆಗೂ ಯಾವುದೇ ಪುರುಷ ಟೆನಿಸ್ ಆಟಗಾರನಿಂದ ಸಾಧ್ಯವಾಗದ ಗೋಲ್ಡನ್ ಸ್ಲ್ಯಾಮ್ ನೊವಾಕ್ ಜೊಕೋವಿಕ್ ಪಾಲಿಗೆ ಕೂಡ ಕನಸಾಗಿಯೇ ಉಳಿದುಕೊಂಡಿದೆ.

03:17 pm

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅವರು ಜಪಾನ್‌ ಬಲಿಷ್ಠೆ ಅಕೇನೆ ಯಮಗುಚಿ ವಿರುದ್ಧ 21-13, 22-20ರ ಗೆಲುವು ದಾಖಲಿಸಿದ್ದಾರೆ.

02:38 pm

ವಿಶ್ವ ನಂ.1 ಬಿಲ್ಲುಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತ ಆರ್ಚರ್ ದೀಪಿಕಾ ಕುಮಾರಿಗೆ ಸೋಲಾಗಿದೆ. ಶುಕ್ರವಾರ (ಜುಲೈ 30) ನಡೆದ ಮಹಿಳಾ ಆರ್ಚರಿ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ಅವರು ದಕ್ಷಿಣ ಕೊರಿಯಾದ ಅನ್ ಸನ್ ವಿರುದ್ಧ ಸೋಲು ಕಂಡಿದ್ದಾರೆ.

11:26 am

ಐರ್ಲೆಂಡ್ ವಿರುದ್ಧ 1-0 ಗಳ ಅಂತರದಿಂದ ಜಯ ಸಾಧಿಸುವುದರ ಮೂಲಕ ಭಾರತೀಯ ಮಹಿಳಾ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿದೆ.

10:29 am

100 ಮೀ. ಮಹಿಳೆಯರ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದುಕೊಳ್ಳುವುದರ ಮೂಲಕ ಭಾರತದ ದುಟಿ ಚಾಂದ್ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ

09:58 am

ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಲವ್ಲಿನಾ ಬರ್ಗಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದೆ.

07:55 am

3000 ಮೀ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಭಾರತದ ಅವಿನಾಶ್ ಸಬ್ಲೆ 7ನೇ ಸ್ಥಾನ ಪಡೆದುಕೊಂಡು ಮುಂದಿನ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.

06:45 am

ಮಹಿಳಾ ಸಿಂಗಲ್ಸ್ ಆರ್ಚರಿ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ರಷಿಯನ್ ಒಲಿಂಪಿಕ್ಸ್ ಕಮಿಟಿಯ ಕ್ಸೆನಿಯಾ ವಿರುದ್ಧ 6-5 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ

07:45 pm

ಟೋಕಿಯೋ ಒಲಿಂಪಿಕ್ಸ್ ಮಹಿಳಾ ಸಿಂಗಲ್ಸ್‌ನಲ್ಲಿ ಸ್ವಿಟ್ಜರ್ಲ್ಯಾಂಡ್‌ನ ಬೆಲಿಂಡಾ ಬೆನ್ಸಿಕ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಗುರುವಾರ (ಜುಲೈ 29) ನಡೆದ ಸೆಮಿಫೈನಲ್‌ನಲ್ಲಿ ಬೆನ್ಸಿಕ್ ಅವರು ಕಝಕೀಸ್ತಾನ ಆಟಗಾರ್ತಿ ಎಲೆನಾ ರೈಬಕಿನಾ ಅವರನ್ನು 7-6 (7/2), 4-6, 6-3ರ ಅಂತರದಿಂದ ಸೋಲಿಸಿದ್ದಾರೆ.

06:34 pm

ಭಾರತದ ಸ್ವಿಮ್ಮರ್ ಸಜನ್ ಪ್ರಕಾಶ್ ಗುರುವಾರ ನಡೆದ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದ್ದಾರೆ. 100 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ ಸಜನ್ ಪ್ರಕಾಶ್ ಸ್ಪರ್ಧಿಸಿದ್ದರು. ಹೀಟ್ 2ನಲ್ಲಿ ಸಜನ್ ಪ್ರಕಾಶ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

05:41 pm

ಟೋಕಿಯೋ ಒಲಿಂಪಿಕ್ಸ್ ಪುರುಷರ ಟೆನಿಸ್‌ನಲ್ಲಿ ಸರ್ಬಿಯಾದ ಸ್ಟಾರ್ ಆಟಗಾರ ನೊವಾಕ್ ಜೊಕೋವಿಕ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಜಪಾನ್‌ನ ಕೀ ನಿಶಿಕೋರಿ ಸೋಲಿಸಿರುವ ಜೊಕೋವಿಕ್ ಸುಲಭ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.

04:07 pm

ಭಾರತದ ಬಾಕ್ಸರ್ ಮೇರಿ ಕೋಮ್ (51 ಕೆಜಿ) ಮಹಿಳಾ ಬಾಕ್ಸಿಂಗ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದಾರೆ. ಕೊಲಂಬಿಯಾದ ಇಂಗ್ರಿಟ್ ಲೊರೆನಾ ವೇಲೆನ್ಸಿಯಾ ವಿಕ್ಟೋರಿಯಾ ವಿರುದ್ಧ ಕೋಮ್ 3-2ರ ಅಂತರದಲ್ಲಿ ಪರಾಭವಗೊಂಡಿದ್ದಾರೆ.

03:27 pm

ಜುಲೈ 29ರ ಇಂದು 3.36 PMಗೆ ಭಾರತದ ಬಾಕ್ಸರ್ ಮೇರಿ ಕೋಮ್ (51 ಕೆಜಿ) ಮತ್ತು ಕೊಲಂಬಿಯಾದ ವೆಲೆನ್ಸಿಯಾ ವಿಕ್ಟೋರಿಯಾ ಮಧ್ಯೆ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ.

12:42 pm

ಟೋಕಿಯೋ ಒಲಿಂಪಿಕ್ಸ್‌ನ ಆರಂಭಿಕ ಸ್ಪರ್ಧೆಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಭಾರತದ ಯುವ ಶೂಟರ್ ಮನು ಭಾಕರ್ ಮಹಿಳಾ ವಿಭಾಗದ 25 ಮೀಟರ್ ಪಿಸ್ತೂಲ್ ಕ್ವಾಲಿಫಿಕೇಶನ್ ಸುತ್ತಿನಲ್ಲಿ 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ.

11:37 am

ಟೋಕಿಯೋ ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ 24 ಹೊಸ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿರುವುದಾಗಿ ಗುರುವಾರ (ಜುಲೈ 29) ಆಯೋಜಕರು ತಿಳಿಸಿದ್ದಾರೆ. ಸೋಂಕಿತರಲ್ಲಿ ಮೂವರು ಅಥ್ಲೀಟ್‌ಗಳು ಎನ್ನಲಾಗಿದೆ. ಗೇಮ್ಸ್‌ನಲ್ಲಿ ಈವರೆಗೆ ಒಟ್ಟು 193 ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಂತಾಗಿದೆ.

10:14 am

ಭಾರತದ ಬಾಕ್ಸರ್ ಸತೀಶ್ ಕುಮಾರ್ ಟೊಕಿಯೊ ಒಲಿಂಪಿಕ್ಸ್ 91 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ

08:59 am

ಪುರುಷರ ಆರ್ಚರಿ 32ರ ಸುತ್ತಿನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಬಿಲ್ಲುಗಾರ ಅತನು ದಾಸ್ ದಕ್ಷಿಣ ಕೊರಿಯಾದ ಸ್ಪರ್ಧಿಯ ವಿರುದ್ಧ 6-5 ಅಂತರದಿಂದ ಗೆಲುವು ಸಾಧಿಸುವುದರ ಮೂಲಕ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ

08:06 am

ಭಾರತ ಪುರುಷರ ಹಾಕಿ ತಂಡ ಅರ್ಜೆಂಟೀನಾ ವಿರುದ್ಧ 3-1 ಅಂತರದಲ್ಲಿ ಗೆಲುವು ಸಾಧಿಸುವುದರ ಮೂಲಕ ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ

07:17 am

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ 16ರ ಸುತ್ತಿನಲ್ಲಿ ಡೆನ್ಮಾರ್ಕ್ ತಂಡದ ಮಿಯಾ ವಿರುದ್ಧ 21-15, 21-13 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ

06:49 am

ಒಲಿಂಪಿಕ್ಸ್ ಇತಿಹಾಸದಲ್ಲಿಯೇ ರೋಯಿಂಗ್ ವಿಭಾಗದಲ್ಲಿ ಅತ್ಯುತ್ತಮ ಮಟ್ಟವನ್ನು ಅರವಿಂದ್ ಮತ್ತು ಅರ್ಜುನ್ ತಲುಪಿದ್ದರು. ಈ ಇಬ್ಬರು ಪುರುಷರ ಡಬಲ್ಸ್ ಸ್ಕಲ್ಸ್ ಫೈನಲ್ ಬಿ ವಿಭಾಗದಲ್ಲಿ 11ನೇ ಸ್ಥಾನ ಪಡೆದುಕೊಂಡಿದ್ದಾರೆ.

07:07 pm

ಟೋಕಿಯೋ ಒಲಿಂಪಿಕ್ಸ್ ಪುರುಷರ ವಿಭಾಗದ ಗ್ರೂ ಪ್‌ ಡಿ ದ್ವಿತೀಯ ಪಂದ್ಯದಲ್ಲಿ ಭಾರತದ ಶಟ್ಲರ್ ಸಾಯ್ ಪ್ರಣೀತ್ ಅವರು ನೆದರ್ಲ್ಯಾಂಡ್ಸ್‌ನ ಮಾರ್ಕ್ ಕ್ಯಾಲ್ಜೌವ್‌ ಎದುರು ಶರಣಾಗಿದ್ದಾರೆ. ಸಾಯ್ ಪ್ರಣೀತ್ ಅವರನ್ನು ಮಾರ್ಕ್ ಕ್ಯಾಲ್ಜೌವ್‌ ಅವರು 21-14, 21-14ರ ನೇರಸೆಟ್‌ನಿಂದ ಸೋಲಿಸಿದ್ದಾರೆ.

05:29 pm

ಪ್ರಥಮ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದಿರುವ ಭಾರತದ ಬಾಕ್ಸರ್ ಪೂಜಾ ರಾಣಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಎರಡು ಬಾರಿಯ ಏಷ್ಯನ್ ಚಾಂಪಿಯನ್ 75 ಕೆಜಿ ವಿಭಾಗದಲ್ಲಿ ಅಲ್ಜೋರಿಯಾದ ಸ್ಪರ್ಧಿ ಇಚ್ರಾಕ್ ಚೈಬ್ ವಿರುದ್ದ ಗೆದ್ದು ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.

04:22 pm

ಭಾರತದ ಆರ್ಚರ್ ದೀಪಿಕಾ ಕುಮಾರಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಯುಎಸ್‌ಎಯ ಜೆನ್ನಿಫರ್ ಮುಸಿನೊ ಫರ್ನಾಂಡೀಸ್ ವಿರುದ್ಧ ಜಯ ಸಾಧಿಸಿದ್ದಾರೆ. ತೀವ್ರ ಪೈಪೋಟಿಯ ಸೆಣೆಸಾಟದಲ್ಲಿ ದೀಪಿಕಾ ಕುಮಾರಿ 6-4 ಅಂತರದಿಂದ ಗೆದ್ದು ಬೀಗಿದ್ದಾರೆ.

02:26 pm

ಪುರಷರ ರಿಕರ್ವ್ ವೈಯಕ್ತಿಕ ವಿಭಾಗದ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಜಾಧವ್ ಸ್ಪರ್ಧೆ ಕೊನೆಗೊಂಡಿದೆ. ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ವಿಶ್ವ ನಂ.1 ಆರ್ಚರ್ ಯುನೈಟೆಡ್ ಸ್ಟೇಟ್ಸ್‌ನ ಬ್ರಾಡಿ ಎಲಿಸನ್ ಎದುರು ಪ್ರವೀಣ್ ಶರಣಾಗಿದ್ದಾರೆ.

02:05 pm

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವಿಭಾಗದ 1500 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಅಮೆರಿಕಾದ ಕೇಟೀ ಲೆಡೆಕ್ಕಿ ಬಂಗಾರದ ಪದಕ ಬಾಚಿಕೊಂಡಿದ್ದಾರೆ. ಬುಧವಾರ (ಜುಲೈ 28) ನಡೆದ ಫೈನಲ್‌ ಸ್ಪರ್ಧೆಯಲ್ಲಿ ಕೇಟೀ ಅದ್ಭುತ ಪ್ರದರ್ಶನದೊಂದಿಗೆ (15 ನಿಮಿಷ 37.34 ಸೆಕೆಂಡ್) ಒಲಿಂಪಿಕ್ಸ್‌ನಲ್ಲಿ ತನ್ನ ಚೊಚ್ಚಲ ಪದಕ ಜಯಿಸಿದ್ದಾರೆ.

12:44 pm

ಒಲಿಂಪಿಕ್ಸ್‌ ಹಾಲಿ ಚಾಂಪಿಯನ್ ಜಿಮ್ನ್ಯಾಸ್ಟ್, ಅಮೆರಿಕಾದ ಸಿಮೋನ್ ಬೈಲ್ಸ್ ಆಲ್ ರೌಂಡ್ ಜಿಮ್ನ್ಯಾಸ್ಟಿಕ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ತಾನು ಈ ನಿರ್ಧಾರ ತಾಳಿರುವುದಾಗಿ ಅವರು ತಿಳಿಸಿದ್ದಾರೆ. ಯುಎಸ್‌ಎ ಜಿಮ್ನ್ಯಾಸ್ಟಿಕ್ಸ್ ಈ ವಿಚಾರವನ್ನು ಖಾತರಿಪಡಿಸಿದೆ.

11:13 am

ರೋಯಿಂಗ್ ನ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಸುತ್ತಿನಲ್ಲಿ ಭಾರತದ ಕ್ರೀಡಾಪಟುಗಳಾದ ಅರವಿಂದ್ ಮತ್ತು ಅರ್ಜುನ್ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದರ ಮೂಲಕ ಫೈನಲ್ ಆಡುವ ಅವಕಾಶವನ್ನು ಕೈ ತಪ್ಪಿಸಿಕೊಂಡಿದ್ದಾರೆ.

09:44 am

ಬುಧವಾರ ನಡೆದ ಆರ್ಚರಿ ಪುರುಷ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಭಾರತದ ಬಿಲ್ಲುಗಾರ ತರುಣ್ ದೀಪ್ ಸಿಂಗ್ ಇಟಲಿಯ ಶ್ಯಾನಿ ವಿರುದ್ಧ 4-6 ಅಂತರದಿಂದ ಸೋತಿದ್ದಾರೆ

08:51 am

ಟೋಕಿಯೋ ಒಲಿಂಪಿಕ್ಸ್‌ ಮಹಿಳಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಪಿ ವಿ ಸಿಂಧು ಹಾಂಗ್‌ಕಾಂಗ್ ವಿರುದ್ಧ 21-9, 21-16 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸುವುದರ ಮೂಲಕ 16ರ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

08:34 am

ಗ್ರೇಟ್ ಬ್ರಿಟನ್ ಮಹಿಳಾ ಹಾಕಿ ತಂಡದ ವಿರುದ್ಧ ಭಾರತ ಮಹಿಳಾ ಹಾಕಿ ತಂಡ 1-4 ಅಂತರದಲ್ಲಿ ಸೋಲುಂಡಿದೆ.

06:58 am

ಭಾರತ ಮತ್ತು ಗ್ರೇಟ್ ಬ್ರಿಟನ್ ಮಹಿಳಾ ಹಾಕಿ ತಂಡಗಳ ನಡುವಿನ ಗ್ರೂಪ್ ಎ ಪಂದ್ಯದ ಮೊದಲ ಕ್ವಾರ್ಟರ್ ಮುಗಿದಿದ್ದು ಗ್ರೇಟ್ ಬ್ರಿಟನ್ ಮೇಲುಗೈ ಸಾಧಿಸಿದೆ. ಗ್ರೇಟ್ ಬ್ರಿಟನ್ ಮಹಿಳಾ ತಂಡ ಭಾರತೀಯ ಮಹಿಳಾ ತಂಡದ ವಿರುದ್ಧ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

11:55 pm

ಜಪಾನ್ ಐದನೇ ದಿನ ಕೂಡ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. 10 ಚಿನ್ನ ಆತಿಥೇಯ ಜಪಾನ್ ಪಾಲಾಗಿದ್ದರೆ 9 ಚಿನ್ನ ಎರಡನೇ ಸ್ಥಾನದಲ್ಲಿರುವ ಅಮೆರಿಕಾ ಪಾಲಾಗಿದೆ. ಮೂರನೇ ಸ್ಥಾನದಲ್ಲಿ ಚೀನಾ ಇದ್ದು ಅದು ಕೂಡ 9 ಚಿನ್ನದ ಪದಕಗಳನ್ನು ಹೊಂದಿದೆ. ಭಾರತ ಒಂದು ಬೆಳ್ಳಿಯ ಪದಕದೊಂದಿಗೆ 39ನೇ ಸ್ಥಾನದಲ್ಲಿದೆ.

06:57 pm

ಮಹಿಳಾ ಜಿಮ್ನ್ಯಾಸ್ಟಿಕ್ ತಂಡ ಸ್ಪರ್ಧೆಯಲ್ಲಿ ರಷ್ಯಾ ಒಲಿಂಪಿಕ್ ಕಮಿಟಿ ಬಂಗಾರ ಗೆದ್ದಿದೆ. ಯುನೈಟೆಡ್ ಸ್ಟೇಟ್ಸ್‌ ಬೆಳ್ಳಿ ಜಯಿಸಿದ್ದರೆ, ಬ್ರಿಟನ್ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.

03:52 pm

10 ಮೀಟರ್ ಏರ್ ಪಿಸ್ತೂಲ್ ಮಿಕ್ಸ್ಡ್ ಟೀಮ್ ಸ್ಪರ್ಧೆಯಲ್ಲೂ ಭಾರತದ ಶೂಟರ್‌ಗಳಾದ ಮನು ಭಾಕರ್, ಸೌರಭ್ ಚೌಧರಿ ಸೋತಿದ್ದಾರೆ. ಪದಕದ ನಿರೀಕ್ಷೆಯಲ್ಲಿದ್ದ ಶೂಟಿಂಗ್ ವಿಭಾಗದಿಂದ ಭಾರತಕ್ಕೆ ತೀವ್ರ ನಿರಾಸೆಯಾಗಿದೆ.

01:27 pm

ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಪದಕ ಖಾತರಿಪಡಿಸಲು ಇನ್ನೊಂದೇ ಹೆಜ್ಜೆ ಬಾಕಿಯಿದೆ. ಮಹಿಳಾ ವಿಭಾಗದ 69 ಕೆಜಿ ವೆಲ್ಟರ್‌ವೇಟ್ ನಲ್ಲಿ ಸ್ಪರ್ಧಿಸಿದ್ದ ಲವ್ಲಿನಾ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ನಾಡಿನ್ ಅಪೆಟ್ಜ್ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

11:29 am

ಜಪಾನ್‌ನ ಬಲಿಷ್ಠ ಆಟಗಾರ್ತಿ ನವೋಮಿ ಒಸಾಕ ಮಹಿಳಾ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಝೆಕ್ ರಿಪಬ್ಲಿಕ್ ಆಟಗಾರ್ತಿ ಮಾರ್ಕೆಟಾ ವೊಂಡ್ರೊಸೊವಾ ವಿರುದ್ಧ 1-6, 4-6ರ ಸೋಲನುಭವಿಸಿದ್ದಾರೆ.

11:22 am

ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಚೀನಾದ ಎಂ ಎ ಲಾಂಗ್ ವಿರುದ್ಧ 1-4 ಅಂತರದಲ್ಲಿ ಸೋಲನುಭವಿಸಿದ್ದಾರೆ

09:49 am

ಟೋಕಿಯೋ ಕ್ರೀಡಾಗ್ರಾಮದಲ್ಲಿ ನಾಲ್ವರಿಗೆ ತಗುಲಿದ ಕೊರೊನಾ ಸೋಂಕು. ಈ 4 ಹೊಸ ಪ್ರಕರಣಗಳ ಪೈಕಿ ಇಬ್ಬರು ಕ್ರೀಡಾ ಸಿಬ್ಬಂದಿಗಳು ಸಹ ಸೇರಿದ್ದಾರೆ ಎಂದು ಟೋಕಿಯೋ ಒಲಿಂಪಿಕ್ಸ್ ಆಯೋಜಕರು ತಿಳಿಸಿದ್ದಾರೆ.

09:47 am

ಟೋಕಿಯೋ ಒಲಿಂಪಿಕ್ಸ್‌ ಹಾಕಿ ಪಂದ್ಯಾವಳಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ಸ್ಪೇನ್ ತಂಡವನ್ನು ಸದೆಬಡಿದಿದೆ

06:47 am

10 ಮೀ. ಏರ್ ಪಿಸ್ತೂಲ್ ಪುರುಷ ಮತ್ತು ಮಹಿಳಾ ಮಿಶ್ರಿತ ಗುಂಪಿನ ಅರ್ಹತಾ ಸುತ್ತಿನ ಮೊದಲನೇ ಪಂದ್ಯದಲ್ಲಿ ಅಗ್ರ ಸ್ಥಾನ ಪಡೆದುಕೊಂಡು ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದ ಮನು ಭಾಕೆರ್ ಮತ್ತು ಸೌರಭ್ ಚೌಧರಿ ಎರಡನೇ ಸುತ್ತಿನಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಪದಕದ ಆಸೆಯನ್ನು ಕೈ ಚೆಲ್ಲಿದ್ದಾರೆ.

06:12 am

ಟೋಕಿಯೋ ಒಲಿಂಪಿಕ್ಸ್‌ನ 10 ಮೀ ಏರ್ ಪಿಸ್ತೂಲ್‌ನಲ್ಲಿ ಭಾರತದ ಮನು ಭಾಕೆರ್ ಮತ್ತು ಸೌರಭ್ ಚೌಧರಿ ಮೊದಲನೇ ಹಂತದಲ್ಲಿ 582 ಪಾಯಿಂಟ್ಸ್ ಗಳಿಸುವುದರ ಮೂಲಕ ಅಗ್ರ ಸ್ಥಾನ ಪಡೆದುಕೊಂಡು ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

11:05 pm

ನಾಲ್ಕನೇ ದಿನದ ಬಳಿಕ ಒಲಿಂಪಿಕ್ಸ್ ಪದಕಪಟ್ಟಿಯಲ್ಲಿ ಆತಿಥೇಯ ಜಪಾನ್ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. 8 ಚಿನ್ನವನ್ನು ಜಪಾನ್ ಪಡೆದುಕೊಂಡಿದ್ದರೆ ಎರಡನೇ ಸ್ಥಾನದಲ್ಲಿ ಅಮೆರಿಕಾ ಇದ್ದು 7 ಚಿನ್ನದ ಪದಕವನ್ನು ಹೊಂದಿದೆ. ಚೀನಾ 6 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾರತ ಒಂದು ಬೆಳ್ಳಿ ಪದಕದೊಂದಿಗೆ 33ನೇ ಸ್ಥಾನದಲ್ಲಿದೆ

07:32 pm

ಭಾರತ ಮತ್ತು ಜರ್ಮನಿ ನಡುವಿನ ಮಹಿಳಾ ಫೀಲ್ಡ್ ಹಾಕಿ ಪಂದ್ಯದಲ್ಲಿ ಜರ್ಮನಿ 2-0ಯಿಂದ ಗೆದ್ದಿದೆ. ಫೆಬ್ರವರಿ 2015ರ ಬಳಿಕ ಭಾರತದ ಮಹಿಳಾ ತಂಡ ಇದೇ ಮೊದಲ ಬಾರಿಗೆ ಜರ್ಮನಿ ವಿರುದ್ಧ ಹಾಕಿ ಪಂದ್ಯ ಆಡಿತ್ತು. ಹಿಂದಿನ ಮುಖಾಮುಖಿಯಲ್ಲಿ ಭಾರತ 2-1ರಿಂದ ಗೆದ್ದಿತ್ತು.

06:30 pm

ಭಾರತ vs ಜರ್ಮನಿ ಮಹಿಳಾ ಫೀಲ್ಡ್ ಹಾಕಿ ಪಂದ್ಯದಲ್ಲಿ 1-0ಯ ಮುನ್ನಡೆ ಸಾಧಿಸಿದ ಜರ್ಮನಿ.

05:55 pm

ಭಾರತದ ಮಹಿಳೆಯರು ಮತ್ತು ಜರ್ಮನಿ ಮಧ್ಯೆ ಹಾಕಿ ಪಂದ್ಯ ಆರಂಭವಾಗಿದೆ. ಫೆಬ್ರವರಿ 2015ರ ಬಳಿಕ ಭಾರತದ ಮಹಿಳಾ ತಂಡ ಇದೇ ಮೊದಲ ಬಾರಿಗೆ ಜರ್ಮನಿ ವಿರುದ್ಧ ಹಾಕಿ ಪಂದ್ಯ ಆಡುತ್ತಿದೆ. ಹಿಂದಿನ ಮುಖಾಮುಖಿಯಲ್ಲಿ ಭಾರತ 2-1ರಿಂದ ಗೆದ್ದಿತ್ತು.

01:45 pm

ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಮಹಿಳಾ ಸಿಂಗಲ್ಸ್‌ನಲ್ಲಿ ಸೋತಿದ್ದಾರೆ. 0-4 (8-11, 2-11, 5-11, 7-11)ರ ಅಂತರದಿಂದ ಬಾತ್ರಾ ಅವರು ಆಸ್ಟ್ರಿಯಾದ ಸೋಫಿಯಾ ಪೋಲ್ಕನೋವಾ ಎದುರು ಸೋಲು ಕಂಡಿದ್ದಾರೆ.

12:48 pm

ಪುರುಷರ ಟೆನಿಸ್ ಸಿಂಗಲ್ಸ್ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಭಾರತದ ಸುಮಿತ್ ನಗಾಲ್ ಪರಾಭವಗೊಂಡಿದ್ದಾರೆ. ವಿಶ್ವ ನಂ.2ನೇ ಶ್ರೇಯಾಂಕಿತ ರಷ್ಯಾದ ಡೇನಿಲ್ ಮೆಡ್ವೆಡೆವ್ ವಿರುದ್ಧ ನಗಾಲ್ 6-2, 6-1ರ ಸೋಲು ಕಂಡಿದ್ದಾರೆ.

11:59 am

ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಎರಡನೇ ಪಂದ್ಯದಲ್ಲಿ ಭಾರತೀಯ ಜೋಡಿ ಸಾತ್ವಿಕ್‌ಸಾಯ್‌ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೋತಿದ್ದಾರೆ. ವಿಶ್ವ ನಂ.1 ಇಂಡೋನೇಶಿಯನ್ ಜೋಡಿ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸುಕಮುಲ್ಜೊ ಎದುರು ಭಾರತೀಯ ಜೋಡಿ 13-21, 12-21ರ ನೇರ ಸೆಟ್ ಸೋಲನುಭವಿಸಿದೆ.

11:27 am

ಟೋಕಿಯೊ ಒಲಿಂಪಿಕ್ಸ್ ಆರ್ಚರಿ ವಿಭಾಗದಲ್ಲಿ ಭಾರತದ ಬಿಲ್ಲುಗಾರರಾದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಕೊರಿಯಾದ ವಿರುದ್ಧ ಸೋಲನ್ನುಂಡಿದ್ದಾರೆ.

09:38 am

ಟೋಕಿಯೋ ಒಲಿಂಪಿಕ್ಸ್‌ನ ಟಿ ಮಹಿಳಾ ಎರಡನೇ ಸುತ್ತಿನ ಟೇಬಲ್ ಟೆನಿಸ್ ಪಂದ್ಯದಲ್ಲಿ ಪೋರ್ಚುಗಲ್‌ನ ಫು ಯು ವಿರುದ್ಧ ಭಾರತದ ಸುತೀರ್ಥಾ ಮುಖರ್ಜಿ 0-4 ಅಂತರದಲ್ಲಿ ಸೋಲನುಭವಿಸಿದ್ದಾರೆ.

08:40 am

ಭಾರತದ ಭವಾನಿ ದೇವಿ ಸೇಬರ್ ಫೆನ್ಸಿಂಗ್‍ನ 32ನೇ ಸುತ್ತಿನಲ್ಲಿ ವಿಶ್ವದ ನಂ. 3 ಆಟಗಾರ್ತಿ ಮ್ಯಾನೊನ್ ಬ್ರುನೆಟ್ ವಿರುದ್ಧ 7-15 ಅಂತರದಲ್ಲಿ ಸೋಲನ್ನಪ್ಪಿದ್ದಾರೆ.

07:52 am

ಪೋರ್ಚುಗಲ್ ದೇಶದ ಥಿಯಾಗೊ ಅಪೊಲೊನಿಯಾ ವಿರುದ್ಧ ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ 4-2 ಅಂತರದಲ್ಲಿ ಜಯವನ್ನು ಸಾಧಿಸಿ ಟೇಬಲ್ ಟೆನ್ನಿಸ್ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

06:53 am

ಭಾರತದ ಬಿಲ್ಲುಗಾರ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ಕಜಕಿಸ್ತಾನದ ಸ್ಪರ್ಧಿಗಳನ್ನು 6-2 ಅಂತರದಿಂದ ಸೋಲಿಸುವುದರ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

06:12 am

ಭಾರತದ ಕ್ರೀಡಾಪಟು ಭವಾನಿದೇವಿ ಸೇಬರ್ ಫೆನ್ಸಿಂಗ್‍ನಲ್ಲಿ ತುನಿಶಿಯಾ ದೇಶದ ನಡಿಯ ಅಝೀಝಿ ಅವರನ್ನು 15-3 ಅಂತರದಿಂದ ಸೋಲಿಸುವುದರ ಮೂಲಕ ಶುಭಾರಂಭ ಮಾಡಿದ್ದಾರೆ.

05:45 pm

ಭಾರತದ ಬಾಕ್ಸರ್ ಮನೀಶ್ ಕೌಶಿಕ್ (57-63 ಕೆಜಿ) ಟೋಕಿಯೋ ಒಲಿಂಪಿಕ್ಸ್ ಪುರುಷರ ಬಾಕ್ಸಿಂಗ್‌ನ ಆರಂಭಿಕ ಸುತ್ತಿನಲ್ಲಿ ಹೊರ ಬಿದ್ದಿದ್ದಾರೆ. ಗ್ರೇಟ್‌ ಬ್ರಿಟನ್‌ನ ಲ್ಯೂಕ್ ಮೆಕ್‌ಕಾರ್ಮಾಕ್ ಎದುರು ಕೌಶಿಕ್ 1-4ರ ಸೋಲನುಭವಿಸಿದ್ದಾರೆ.

05:08 pm

ಭಾರತದ ಭರವಸೆಯ ಬಾಕ್ಸರ್ ಎಂಸಿ ಮೇರಿ ಕೋಮ್ (51 ಕೆಜಿ) ಅವರು ಟೋಕಿಯೋ ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್‌ನ ಆರಂಭಿಕ ಸುತ್ತಿನಲ್ಲಿ ಡೊಮೆನಿಕನ್ ರಿಪಬ್ಲಿಕ್‌ನ ಮಿಗುಯೆಲಿನ ಹೆರ್ನಾಂಡೆಜ್ ಗಾರ್ಸಿಯಾ ಸೋಲಿಸಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.

04:47 pm

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಹಾಕಿ ಪಂದ್ಯದಲ್ಲಿ ಭಾರತ ತಂಡ ಭಾರೀ ಅಂತರದಿಂದ ಸೋಲು ಕಂಡಿದೆ. ಭರ್ಜರಿ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ 7-1 ಅಂತರದಿಂದ ಗೆದ್ದು ಬೀಗಿದೆ

04:08 pm

ಹಾಕಿ: ಭಾರತದ ವಿರುದ್ಧ ಮತ್ತೊಂದು ಗೋಲು ದಾಖಲಿಸಿದ ಆಸ್ಟ್ರೇಲಿಯಾ. 5-1 ಅಂತರದ ಮುನ್ನಡೆಯನ್ನು ಸಾಧಿಸಿದ ಆಸಿಸ್ ಬಳಗ

03:57 pm

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದ್ವಿತಿಯಾರ್ಧದಲ್ಲಿ ಮೊದಲ ಗೋಲು ಗಳಿಸಿದ ಭಾರತ.

03:42 pm

ಹಾಕಿ: ಭಾರತದ ವಿರುದ್ಧ ಮೊದಲಾರ್ಧದಲ್ಲಿ ಭರ್ಜರಿ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ, ಭಾರತ ತಂಡಕ್ಕೆ 0-4 ಅಂತರದಿಂದ ಭಾರೀ ಹಿನ್ನಡೆ

01:58 pm

ಭಾರತದ ಲೆಜೆಂಡರಿ ಬಾಕ್ಸರ್ ಮೇರಿ ಕೋಮ್ ಮೊದಲ ಸುತ್ತಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಎದುರಾಳಿ ಹೆರ್ನಾಂಡೆಜ್ ಗಾರ್ಸಿಯಾ ವಿರುದ್ಧ ಗೆಲ್ಲುವ ಮೂಲಕ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ

12:32 pm

ಭಾರತಕ್ಕೆ ಇಂದು ಮತ್ತೊಂದು ನಿರಾಶಾದಾಯಕ ಫಲಿತಾಂಶ ದೊರೆತಿದೆ. ಟೇಬಲ್ ಟೆನಿಸ್ ಪುರುಷರ ವಿಭಾಗದಲ್ಲಿ ಜಿ ಸಥಿಯಾನ್ ಸೋಲು ಕಂಡಿದ್ದಾರೆ. ಹಾಂಕಾಂಗ್‌ನ ಲಾಮ್ ಸಿಯು ಹಾಂಗ್ ವಿರುದ್ಧ ಏಳು ಸುತ್ತುಗಳಲ್ಲಿ 3-4 ಅಂತರದಿಂದ ಶರಣಾಗಿದ್ದಾರೆ.

12:16 pm

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತೆಯನ್ನು ಗಿಟ್ಟಿಸಿರುವ ಭಾರತದ ಏಕೈಕ ಜಿಮ್ನಾಸ್ಟಿಕ್ ಪಟು ಪ್ರಣತಿ ನಾಯಕ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ. ಪಶ್ಚಿಮ ಬಂಗಾಳ ಮೂಲದ 26ರ ಹರೆಯದ ಪ್ರಣತಿ ನಾಯಕ್ ಫ್ಲೋರ್ ಎಕ್ಸಸೈಸ್, ವಾಲ್ಟ್, ಅನ್‌ಇವನ್ ಬಾರ್ಸ್ ಹಾಗೂ ಬ್ಯಾಲೆನ್ಸ್ ಬೀಮ್ ಈ ನಾಲ್ಕು ವಿಭಾಗಗಳಲ್ಲಿ 42.565 ಅಂಕಗಳನ್ನು ಗಳಿಸಿದರು. ಏರಿಕಾಯೆ ಜಿಮ್ನಾಸ್ಟಿಕ್ ಸೆಂಟರ್‌ನಲ್ಲಿ ಈ ಸ್ಪರ್ಧೆ ನಡೆಯಿತು.

11:04 am

10 ಮೀ. ಏರ್ ರೈಫಲ್ ಸ್ಪರ್ಧೆಯ ಫೈನಲ್ ಪ್ರವೇಶಿಸುವಲ್ಲಿ ಭಾರತದ ದೀಪಕ್ ಕುಮಾರ್ ಮತ್ತು ದಿವ್ಯಾನ್ಷ್ ಸಿಂಗ್ ಪನ್ವಾರ್ ವಿಫಲರಾಗಿದ್ದಾರೆ

09:43 am

ಟೋಕಿಯೋ ಒಲಿಂಪಿಕ್ಸ್: ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಮಹಿಳಾ ಟನಿಸ್ ಡಬಲ್ಸ್ ವಿಭಾಗದಲ್ಲಿ ಕಿಚೆನೊಕ್ ಸಹೋದರಿಯರ ವಿರುದ್ಧ 6-0, 6-7, 8-10 ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.

08:22 am

ಟೋಕಿಯೋ ಒಲಿಂಪಿಕ್ಸ್‌: ರೋಯಿಂಗ್‍ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಅರ್ಜುನ್ ಮತ್ತು ಅರವಿಂದ್

07:49 am

ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಮೊದಲನೇ ಪಂದ್ಯದಲ್ಲಿ ಇಸ್ರೇಲ್‌ನ ಆಟಗಾರ್ತಿ ಪೊಲಿಕರ್ಪೊವಾ ವಿರುದ್ಧ 21-7, 21-10 ಅಂತರದಿಂದ ಜಯ ಗಳಿಸಿದ್ದಾರೆ

07:03 am

10 ಮೀ. ಮಹಿಳಾ ಪಿಸ್ತೂಲ್‌ ಅರ್ಹತಾ ಸುತ್ತಿನಲ್ಲಿ ಭಾರತದ ವನಿತೆಯರಾದ ಯಶಸ್ವಿನಿ ಸಿಂಗ್ ದೇಸ್ವಾಲ್ ಮತ್ತು ಮನು ಭಾಕೆರ್ ವಿಫಲರಾಗಿದ್ದಾರೆ. ಅರ್ಹತಾ ಸುತ್ತಿನಲ್ಲಿ ಮನು ಭಾಕೆರ್ 12ನೇ ಸ್ಥಾನ ಪಡೆದುಕೊಂಡರೆ ಯಶಸ್ವಿನಿ ಸಿಂಗ್ ದೆಸ್ವಾಲ್ 13ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅರ್ಹತಾ ಸುತ್ತಿನಲ್ಲಿ ಟಾಪ್ 8 ಸ್ಥಾನ ಪಡೆದ ಸ್ಪರ್ಧಿಗಳನ್ನು ಫೈನಲ್ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಅರ್ಹತಾ ಸುತ್ತಿನಲ್ಲಿ ಭಾರತೀಯ ವನಿತೆಯರಾದ ಯಶಸ್ವಿನಿ ಮತ್ತು ಮನು ವಿಫಲರಾಗಿದ್ದಾರೆ.

06:23 am

10 ಮೀ. ಮಹಿಳಾ ಪಿಸ್ತೂಲ್‌ ಅರ್ಹತಾ ಸುತ್ತಿನಲ್ಲಿ ಭಾರತದ ವನಿತೆಯರಾದ ಯಶಸ್ವಿನಿ ಸಿಂಗ್ ದೇಸ್ವಾಲ್ ಮತ್ತು ಮನು ಭಾಕೆರ್ ಭಾಗವಹಿಸಿದ್ದಾರೆ. ಈ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ ಅರ್ಹತೆ ಗಳಿಸಿದರೆ ಈ ಇಬ್ಬರೂ ಸಹ 7.45ಕ್ಕೆ ಫೈನಲ್ ಆಡಲಿದ್ದಾರೆ. ಫೈನಲ್ ಪ್ರವೇಶಿಸಲು 1 ಗಂಟೆ 15 ನಿಮಿಷಗಳ ಅವಧಿಯಲ್ಲಿ 60 ಶಾಟ್ಸ್ ಹೊಡೆಯುವ ಅಗತ್ಯವಿದ್ದು, ಟಾಪ್ 8 ಕ್ರೀಡಾಪಟುಗಳನ್ನು ಫೈನಲ್‌ಗೆ ಆಯ್ಕೆ ಮಾಡಲಾಗುತ್ತದೆ.

07:55 pm

ಭಾರತದ ಮಹಿಳಾ ಹಾಕಿ ತಂಡ ನೆದರ್ಲ್ಯಾಂಡ್ಸ್ ವನಿತೆಯರ ವಿರುದ್ಧ 1-5ರ ಸೋಲನುಭವಿಸಿದೆ.

05:02 pm

ಭಾರತದ ಬಾಕ್ಸರ್ ವಿಕಾಸ್ ಕ್ರಿಶನ್ ಪುರುಷರ 69 ಕೆಜಿ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಜಪಾನ್‌ನ ಮೆನ್ಸಾ ಒಕಾಜಾವಾ ಎದುರು ಸೋತು ಆಘಾತ ಅನುಭವಿಸಿದ್ದಾರೆ.

12:23 pm

ಭಾರತ ಒಲಿಂಪಿಕ್ಸ್‌ನಲ್ಲಿ ಮೊದಲ ಪದಕವನ್ನು ಗೆದ್ದುಕೊಂಡಿದೆ. ಭಾರತದ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿಯ ಪದಕವನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.