
ಮುಂಬೈ, ಅಕ್ಟೋಬರ್ 23: ಮುಂಬೈಯ ಅನುಭವಿ ಆಲ್ ರೌಂಡರ್ ಆಟಗಾರ ಅಭಿಷೇಕ್ ನಾಯರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ 3 ಪಂದ್ಯಗಳಲ್ಲಿ ನಾಯರ್ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಅಭಿಷೇಕ್ ಗಮನಾರ್ಹ ಸಾಧನೆ ಮಾಡಿದ್ದರು.
'ನಾನು ನಿಜಕ್ಕೂ ತೃಪ್ತನಾಗಿದ್ದೇನೆ. ನಾನು ಇಂದು ಇರುವ ಸ್ಥಾನದಲ್ಲಿರಲು ಬಯಸುವ ಅನೇಕ ಕ್ರಿಕೆಟಿಗರು ಇದ್ದಾರೆ. ಇಷ್ಟು ದೀರ್ಘ ಕಾಲ ಆಡುವ ಅವಕಾಶ ಲಭಿಸಿದ್ದಕ್ಕಾಗಿ ನನಗೆ ಹೆಮ್ಮೆ ಅನಿಸಿದೆ, ನಾನಿದಕ್ಕೆ ಅಭಾರಿಯೂ ಕೂಡ. ಈ ಬಗ್ಗೆ ಯಾವುದೇ ಬೇಸರವಿಲ್ಲ. ನಾನು ಖುಷಿಯಾಗಿದ್ದೇನೆ,' ಎಂದು ನಾಯರ್ ಬುಧವಾರ (ಅಕ್ಟೋಬರ್ 23) ಪ್ರತಿಕ್ರಿಯಿಸಿದರು.
36ರ ಹರೆಯದ ಅಭಿಷೇಕ್ ಮುಂಬೈ ತಂಡದ ಪರ ಒಟ್ಟು 103 ಪ್ರಥಮದರ್ಜೆ ಪಂದ್ಯಗಳಲ್ಲಿ 5749 ರನ್ ಮತ್ತು 173 ವಿಕೆಟ್ ಸಾಧನೆ ಹೊಂದಿದ್ದಾರೆ. ನಾಯರ್ ತಂಡದಲ್ಲಿದ್ದಾಗ ಮುಂಬೈ ತಂಡ ಅನೇಕ ದೇಸಿ ಪಂದ್ಯಗಳನ್ನು ಗೆದ್ದು ಮಿನುಗಿತ್ತು.
ಮುಂಬೈ ತಂಡದ ಶಕ್ತಿಯಾಗಿದ್ದ ನಾಯರ್ ಅನಂತರ ತನಗೆ ತಾನೆ ಕೋಚ್ ಆಗಿ ಕೂಡ ಗುರುತಿಸಿಕೊಂಡಿದ್ದರು. ನಾಯರ್ ಮಾರ್ಗದರ್ಶನದಡಿಯಲ್ಲಿ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಕ್ಕೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಎಂಟ್ರಿ ಕೊಟ್ಟಿದ್ದರು.