ಶ್ರೀಲಂಕಾ ಅಭಿಮಾನಿ ವಿರುದ್ಧ ಬಾಂಗ್ಲಾ ಆಟಗಾರನ ಅನುಚಿತ ವರ್ತನೆ

Posted By:
Bangladesh cricket player misbehave with Sri Lanka fan

ಕೊಲಂಬೊ, ಮಾರ್ಚ್ 20: ದಿನೇಶ್ ಕಾರ್ತಿಕ್ ಭರ್ಜರಿ ಆಟದಿಂದ ನಿದಹಾಸ್ ಟ್ರೋಫಿ ಭಾರತದ ಪಾಲಾಗಿ ಎರಡು ದಿನ ಕಳೆದಿದೆ, ಆದರೆ ಆ ಪಂದ್ಯದಲ್ಲಿ ಸೋಲುಂಡ ಬಾಂಗ್ಲಾದೇಶ ತಂಡದ ಆಟಗಾರ ಸೌಮ್ಯ ಸರ್ಕಾರ್ ಶ್ರೀಲಂಕಾ ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಭಾರತದ ವಿರುದ್ಧ ಪಂದ್ಯದಲ್ಲಿ ಸೌಮ್ಯಾ ಸರ್ಕಾರ್ ಔಟಾಗಿ ಪೆವಿಲಿಯನ್‌ಗೆ ಬರುವಾಗ ಶ್ರೀಲಂಕಾ ಅಭಿಮಾನಿಗಳು ಕೇಕೆ ಹಾಕಿದ್ದಾರೆ, ಇದರಿಂದ ಸಿಟ್ಟಾದ ಸೌಮ್ಯಾ ಸರ್ಕಾರ್ ಅಭಿಮಾನಿಗಳ ಕಡೆಗೆ ಒದೆಯುವಂತೆ ಮಾಡಿ ಅಲ್ಲಿನ ಗೇಟ್‌ಗೆ ಒದ್ದು ಒಳಗೆ ಹೋಗಿದ್ದಾರೆ, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೊಲಂಬೊದಲ್ಲಿ ನಡೆದ ನಿದಹಾಸ್ ಟ್ರೋಫಿಯ ಫೈನಲ್‌ ನಲ್ಲಿ ಭಾರತವು ಶ್ರೀಲಂಕಾವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಆ ಪಂದ್ಯಕ್ಕೂ ಮುನ್ನಾ ಶ್ರೀಲಂಕಾ ಮತ್ತು ಬಾಂಗ್ಲಾ ನಡುವೆ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದಿತ್ತು, ಆದರೆ ಆ ಪಂದ್ಯದಲ್ಲಿ ಬಾಂಗ್ಲಾ ಆಟಗಾರರು ವರ್ತಿಸಿದ ರೀತಿ ಲಂಕಾ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿತ್ತು ಹಾಗಾಗಿ ಅವರು ಫೈನಲ್‌ ಪಂದ್ಯದಲ್ಲಿ ಭಾರತಕ್ಕೆ ಬೆಂಬಲ ನೀಡಿದರು.

ಫೈನಲ್‌ ಪಂದ್ಯದಲ್ಲಿ ಬಾಂಗ್ಲಾದ ವಿಕೆಟ್ ಬಿದ್ದಾಗಲೆಲ್ಲಾ ಶ್ರೀಲಂಕಾ ಅಭಿಮಾನಿಗಳು ಸಂಭ್ರಮಿಸಿ ಕೇಕೆ ಹಾಕಿ ಕುಣಿದಾಡಿದರು. ಪಂದ್ಯ ಮುಗಿದ ನಂತರ ಶಕೀಬ್ ಉಲ್ ಹಸನ್ ಮಾತನಾಡಬೇಕಾದರೆ ಕೂಡ ಕೂಗಿ ಕಿರುಚಿ (ಬೂಯಿಂಗ್) ತಮ್ಮ ಅಸಹನೆ ವ್ಯಕ್ತಪಡಿಸಿದರು.

ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಗೆದ್ದಿದ್ದ ಬಾಂಗ್ಲಾ ಅಂದು ಕ್ರೀಡಾಂಗಣದಲ್ಲಿ ಲಂಕಾ ತಂಡದ ಆಟಗಾರರನ್ನು ಅಣುಕಿಸುವಂತೆ ನಾಗಿನ್ ನೃತ್ಯ ಮಾಡಿತ್ತು, ಪಂದ್ಯದ ನಂತರ ಪ್ರವೇಮದಾಸಾ ಸ್ಟೇಡಿಯಮ್‌ನ ಡ್ರೆಸ್ಸಿಂಗ್ ಕೋಣೆಯ ಬಾಗಿಲು ಕಿಟಕಿ ಗಾಜುಗಳನ್ನು ಒಡೆದು ದಾಂದಲೆ ಸಹ ಮಾಡಿತ್ತು. ಇದರಿಂದ ಶ್ರೀಲಂಕಾ ಅಭಿಮಾನಿಗಳು ಬೇಸರಗೊಂಡಿದ್ದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, March 20, 2018, 12:28 [IST]
Other articles published on Mar 20, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ