ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೇಲ್ ಸಿಕ್ಸರ್ ಮಳೆಗೆ ಮೇಲೇಳದ ಹೈದರಾಬಾದ್ 'ಸೂರ್ಯ'!

ಮೊಹಾಲಿ, ಏಪ್ರಿಲ್ 20: ಕಿಂಗ್ಸ್ ಇಲೆವೆನ್ ಪಂಜಾಬ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅಬ್ಬರದೆದುರು ಸನ್‌ ರೈಸರ್ಸ್ ಹೈದರಾಬಾದ್ ಆಟಗಾರರು ಮಂಕಾದರು. ವೆಸ್ಟ್‌ ಇಂಡೀಸ್‌ನ ದೈತ್ಯ ಗೇಲ್ ಸಿಡಿಸಿದ ಸಿಕ್ಸರ್‌ಗಳ ಸುರಿಮಳೆಯಲ್ಲಿ ಮಿಂದ ಪಂಜಾಬ್ ತಂಡದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಕಿಂಗ್ಸ್ ಇಲೆವೆನ್ ತಂಡ ಒಂದು ಹಂತದಲ್ಲಿ 200 ರನ್‌ ಗಡಿದಾಟಲಿದೆ ಎಂಬ ನಿರೀಕ್ಷೆ ಮೂಡಿಸಿತ್ತು. ಕೊನೆಯ ಕೆಲವು ಓವರ್‌ಗಳಲ್ಲಿ ಹೈದರಾಬಾದ್ ಬೌಲರ್‌ಗಳು ರನ್ ವೇಗಕ್ಕೆ ತುಸು ಕಡಿವಾಣ ಹಾಕಿದರು. ಆದರೆ, ಗೇಲ್ ಶತಕ ಅಭಿಮಾನಿಗಳನ್ನು ರಂಜಿಸಿತು. ಪಂಜಾಬ್ ಸೋತಿದ್ದು ಕೇವಲ 15 ರನ್‌ಗಳಿಂದ ಆದರೂ ಅದರ ಬ್ಯಾಟಿಂಗ್ ಅಷ್ಟೇನೂ ಥ್ರಿಲ್ ನೀಡಲಿಲ್ಲ.

ಗೇಲ್ ಜೊತೆಗೆ ಕನ್ನಡಿಗ ಕರುಣ್ ನಾಯರ್ ಕೂಡ ಕಿಂಗ್ಸ್ ಇಲೆವೆನ್ ಪರ ಮಿಂಚಿದರು. ಉತ್ತಮ ಫಾರ್ಮ್‌ನಲ್ಲಿರುವ ಕೆ.ಎಲ್. ರಾಹುಲ್, ನಿಧಾನಗತಿಯ ಆಟದ ಮೊರೆ ಹೋದರು.

ಐಪಿಎಲ್ 2018ರಲ್ಲಿ ಮೊದಲ ಶತಕ ಸಿಡಿಸಿ, ದಾಖಲೆ ಬರೆದ ಗೇಲ್ ಐಪಿಎಲ್ 2018ರಲ್ಲಿ ಮೊದಲ ಶತಕ ಸಿಡಿಸಿ, ದಾಖಲೆ ಬರೆದ ಗೇಲ್

ಸನ್‌ ರೈಸರ್ಸ್ ಪರ ಆಡುತ್ತಿರುವ ಕರ್ನಾಟಕದ ಮತ್ತೊಬ್ಬ ಆಟಗಾರ ಮನೀಶ್ ಪಾಂಡೆ ಅರ್ಧಶತಕ ಗಳಿಸಿ ಔಟಾಗದೆ ಉಳಿದರು. ಆದರೆ, ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸುವ ಹೋರಾಟ ಅವರಲ್ಲಿ ಕಂಡುಬರಲಿಲ್ಲ. ನಾಯಕ ಕೇನ್ ವಿಲಿಯಮ್ಸನ್ ಕೂಡ ಅರ್ಧಶತಕ ಗಳಿಸಿದರು. ಕೊನೆಯಲ್ಲಿ ಶಕೀಬ್ ಉಲ್ ಹಸನ್ ಎರಡು ಸಿಕ್ಸರ್ ಬಾರಿಸಿದರೂ ಆಗಲೇ ತಂಡ ಗೆಲುವಿನ ಹಾದಿಯಿಂದ ದೂರು ಸರಿದಿತ್ತು.

ಮೊಹಾಲಿಯ ಅಂಗಳದಲ್ಲಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಗೆಲುವಿಗೆ ಮತ್ತು ಪ್ರಬಲ ಬೌಲಿಂಗ್ ಪಡೆ ಹೊಂದಿದ್ದರೂ ಗೇಲ್ ಆರ್ಭಟಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾದ ಸನ್‌ ರೈಸರ್ಸ್ ಹೈದರಾಬಾದ್ ತಂಡದ ಸೋಲಿಗೆ ಕೆಲವು ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.

ಅಶ್ವಿನ್‌ಗೆ ನೆರವಾದ ಟಾಸ್

ಅಶ್ವಿನ್‌ಗೆ ನೆರವಾದ ಟಾಸ್

ಕಿಂಗ್ಸ್ ಇಲೆವೆನ್ ತಂಡ ಟಾಸ್ ಗೆದ್ದಿದ್ದು ವರದಾನವಾಗಿ ಪರಿಣಮಿಸಿತು. ನಾಯಕ ಅಶ್ವಿನ್ ಬ್ಯಾಟಿಂಗ್ ಆಯ್ದುಕೊಂಡು ಸೂಕ್ತ ನಿರ್ಧಾರ ತೆಗೆದುಕೊಂಡರು. ಐಪಿಎಲ್ ತಂಡಗಳಲ್ಲೇ ಅತ್ಯಂತ ಬಲಿಷ್ಠ ಬೌಲಿಂಗ್ ಪಡೆ ಎನಿಸಿಕೊಂಡಿರುವ ಸನ್‌ ರೈಸರ್ಸ್‌ ಎದುರು ರನ್ ಚೇಸ್ ಮಾಡುವುದು ಸುಲಭವಲ್ಲ. ಅಲ್ಲದೆ, ಸನ್‌ರೈಸರ್ಸ್ ತಂಡದ ಬ್ಯಾಟಿಂಗ್ ಅಷ್ಟೇನೂ ಸಮರ್ಥವಾಗಿಲ್ಲ. ಹೀಗಾಗಿ ಸವಾಲಿನ ಮೊತ್ತ ಪೇರಿಸಿದರೆ ಅವರ ಮೇಲೆ ಒತ್ತಡ ಹೇರಬಹುದು ಎಂಬ ಅಶ್ವಿನ್ ಲೆಕ್ಕಾಚಾರ ತಪ್ಪಾಗಲಿಲ್ಲ. ಅದಕ್ಕೆ ತಕ್ಕನೆಯ ಆರಂಭವೂ ದೊರಕಿತು.

ಗೇಲ್ ಸ್ಫೋಟಕ ಬ್ಯಾಟಿಂಗ್

ಗೇಲ್ ಸ್ಫೋಟಕ ಬ್ಯಾಟಿಂಗ್

ಪಿಎಸ್‌ಎಲ್ ಮತ್ತು ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕ್ರಿಸ್ ಗೇಲ್ ಆಟ ಮಂಕಾಗಿತ್ತು. ರನ್ ಹೊಳೆ ಹರಿಸುತ್ತಿದ್ದ ಗೇಲ್, ಆಟದ ಮೊನಚು ಕಣ್ಮರೆಯಾದಂತೆ ಕಾಣಿಸುತ್ತಿತ್ತು. ಈ ಕಾರಣಕ್ಕಾಗಿಯೇ ಐಪಿಎಲ್ ಹರಾಜಿನಲ್ಲಿ ಅವರನ್ನು ಆರಂಭದಲ್ಲಿ ಯಾವ ತಂಡವೂ ಖರೀದಿಸಲು ಮುಂದಾಗಿರಲಿಲ್ಲ.

ಆದರೆ, ಎರಡೇ ಪಂದ್ಯದಲ್ಲಿ ಗೇಲ್ ತಮ್ಮ ಆಟವಿನ್ನೂ ಮುಗಿದಿಲ್ಲ ಎಂದು ಮತ್ತೆ ಸಾಬೀತುಪಡಿಸಿದ್ದಾರೆ. ಸನ್‌ರೈಸರ್ಸ್ ಬೌಲರ್‌ಗಳನ್ನು ಎದುರಿಸಲು ಆರಂಭದಲ್ಲಿ ಕೆಲಕಾಲ ತಿಣುಕಾಡಿದ ಗೇಲ್, ನಂತರ ಲಯ ಕಂಡುಕೊಂಡರು. ಡಾಟ್‌ ಬಾಲ್‌ಗಳನ್ನು ಮಾಡಿದರೂ, ಸಿಕ್ಸರ್‌ಗಳನ್ನು ಸಿಡಿಸಿ ಸರಿದೂಗಿಸಿದರು. ಬೌಂಡರಿಗಿಂತಲೂ ಅವರಿಗೆ ಸಿಕ್ಸರ್ ಬಾರಿಸುವುದು ಸಲೀಸಾಗಿತ್ತು. ಗಳಿಸಿದ 104 ರನ್‌ಗಳಲ್ಲಿ 11 ಸಿಕ್ಸರ್ ಖಾತೆಯಲ್ಲಿ ದಾಖಲಾಗಿದ್ದರೆ, ಕೇವಲ 1 ಬೌಂಡರಿ ಇದ್ದದ್ದು ಇದಕ್ಕೆ ಉದಾಹರಣೆ.

ಉತ್ತಮ ಸಾಥ್ ನೀಡಿದ ಕರುಣ್ ನಾಯರ್

ಉತ್ತಮ ಸಾಥ್ ನೀಡಿದ ಕರುಣ್ ನಾಯರ್

ಒಂದೆಡೆ ಕ್ರಿಸ್ ಗೇಲ್ ಚೆಂಡನ್ನು ಮೈದಾನದಾಚೆ ಅಟ್ಟುತ್ತಾ, ನಡುವೆ ಒಂಟಿ ರನ್‌ಗಳನ್ನು ಗಳಿಸುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕದ ಕರುಣ್ ನಾಯರ್ ಅವರಿಗೆ ಉತ್ತಮ ಸಾಥ್ ನೀಡಿದರು. ಇಬ್ಬರೂ ಮೂರನೇ ವಿಕೆಟ್‌ಗೆ 75 ರನ್ ಸೇರಿಸಿದರು.

21 ಎಸೆತಗಳಲ್ಲಿ 31 ರನ್ ಗಳಿಸಿದ ಕರುಣ್, ರನ್ ಗತಿ ಚುರುಕುಗೊಳಿಸುವಲ್ಲಿ ನೆರವಾದರಲ್ಲದೆ, ವಿಕೆಟ್ ಕಾಯ್ದುಕೊಂಡು ಉತ್ತಮ ಜತೆಯಾಟ ನೀಡಿದರು. ಕೊನೆಯಲ್ಲಿ ಆರೋನ್ ಫಿಂಚ್ ಅಲ್ಪ ಕಾಣಿಕೆ ನೀಡಿದರು. ಇದರಿಂದ ಬೌಲಿಂಗ್‌ಗೆ ನೆರವಾಗುತ್ತಿದ್ದ ಪಿಚ್‌ನಲ್ಲಿಯೂ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಚುರುಕಿನ ಬೌಲಿಂಗ್ ನಿರ್ವಹಣೆ

ಚುರುಕಿನ ಬೌಲಿಂಗ್ ನಿರ್ವಹಣೆ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲರ್‌ಗಳು ಕೂಡ ಆರಂಭದಲ್ಲಿ ಚುರುಕಿನ ಬೌಲಿಂಗ್ ದಾಳಿ ನಡೆಸಿದರು. ಮೊದಲ ಓವರ್‌ನಲ್ಲಿಯೇ ಶಿಖರ್ ಧವನ್ ಗಾಯಗೊಂಡರು. ನಂತರ ಕೂಡ ಎದುರಾಳಿಗಳಿಗೆ ತ್ವರಿತವಾಗಿ ರನ್ ಗಳಿಸಲು ಅವಕಾಶ ನೀಡಲಿಲ್ಲ. ಮೊದಲಿನಿಂದಲೂ ಕಟ್ಟುನಿಟ್ಟಾದ ಬೌಲಿಂಗ್ ನಡೆಸಿದ್ದು ಪಂಜಾಬ್ ಗೆಲುವಿಗೆ ಕಾರಣವಾಯಿತು. ನಾಯಕ ಅಶ್ವಿನ್ ಮತ್ತು ವೇಗದ ಬೌಲರ್ ಮೋಹಿತ್ ಶರ್ಮಾ ಅಧಿಕ ರನ್ ಕೊಟ್ಟರೂ, ಅದರಿಂದ ನಷ್ಟವಾಗಲಿಲ್ಲ.

ತವರಿನ ಅಂಗಳದ ಲಾಭ

ತವರಿನ ಅಂಗಳದ ಲಾಭ

ಹಿಂದಿನ ಪಂದ್ಯಗಳಲ್ಲಿ ಸನ್‌ರೈಸರ್ಸ್ ತಂಡದ ಎದುರು ಪಂಜಾಬ್ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಸತತ ನಾಲ್ಕು ಸೋಲುಗಳನ್ನು ಅನುಭವಿಸಿತ್ತು. ಮೊಹಾಲಿಯ ತವರಿನ ಅಂಗಳದಲ್ಲಿಯೂ ಪಂಜಾಬ್ ಸೋತು ಸುಣ್ಣವಾಗಿತ್ತು. ಆದರೆ, ಈ ಬಾರಿ ತಂಡ ಬದಲಾಗಿದೆ. ಬ್ಯಾಟಿಂಗ್ ಮತ್ತಷ್ಟು ಬಲಗೊಂಡಿದೆ. ಹೀಗಾಗಿ ತವರಿನ ಅಂಗಳದಲ್ಲಿ ಅಭಿಮಾನಿಗಳ ಪ್ರೋತ್ಸಾಹ ಕಿಂಗ್ಸ್ ಇಲೆವೆನ್‌ಗೆ ಮತ್ತಷ್ಟು ಹುರುಪು ನೀಡಿತು.

ಆರಂಭದಲ್ಲೇ ಧವನ್ ಹೊರಹೋಗಿದ್ದು

ಆರಂಭದಲ್ಲೇ ಧವನ್ ಹೊರಹೋಗಿದ್ದು

ಸನ್‌ರೈಸರ್ಸ್ ತಂಡದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್, ಬರಿಂದರ್ ಸ್ರಾನ್ ಎಸೆತ ಮೊದಲ ಎಸೆತದಲ್ಲೇ ಕೈಗೆ ಪೆಟ್ಟು ಮಾಡಿಕೊಂಡರು. ಮಣಿಕಟ್ಟಿನ ಬಳಿ ಚೆಂಡು ಅಪ್ಪಳಿಸಿದ್ದರಿಂದ ಧವನ್ ಮತ್ತೆ ಬ್ಯಾಟ್ ಹಿಡಿಯುವ ಸ್ಥಿತಿಯಲ್ಲಿ ಇರಲಿಲ್ಲ. ಹಿಂದಿನ ಪಂದ್ಯಗಳಲ್ಲಿ ಉತ್ತಮ ಆರಂಬ ನೀಡುತ್ತಿದ್ದ ಧವನ್, ಗಾಯಗೊಂಡು ನಿವೃತ್ತರಾಗಬೇಕಾಗಿದ್ದು ಸನ್‌ರೈಸರ್ಸ್ ತಂಡಕ್ಕೆ ತೀವ್ರ ಹಿನ್ನಡೆ ಉಂಟುಮಾಡಿತು.

ಬೌಲಿಂಗ್‌ನಲ್ಲಿ ಪ್ರಭಾವ ಬೀರದ ಸನ್‌ರೈಸರ್ಸ್

ಬೌಲಿಂಗ್‌ನಲ್ಲಿ ಪ್ರಭಾವ ಬೀರದ ಸನ್‌ರೈಸರ್ಸ್

ಸನ್‌ ರೈಸರ್ಸ್ ತಂಡದ ಶಕ್ತಿಯೇ ಬೌಲಿಂಗ್. ಎದುರಾಳಿಗಳನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವ ಅತ್ಯುತ್ತಮ ಬೌಲರ್‌ಗಳು ತಂಡದಲ್ಲಿದ್ದಾರೆ. ಆದರೆ, ಮೊಹಾಲಿಯಲ್ಲಿ ಪಂಜಾಬ್ ತಂಡದ ಬೌಲರ್‌ಗಳ ಆಟ ಕ್ರಿಸ್ ಗೇಲ್ ಎದುರು ನಡೆಯಲಿಲ್ಲ. ಪಿಚ್ ಬೌಲಿಂಗ್‌ಗೆ ನೆರವಾಗುತ್ತಿದ್ದರೂ, ಪಂಜಾಬ್ ಬ್ಯಾಟ್ಸ್‌ಮನ್‌ಗಳು ಸರಾಗವಾಗಿ ರನ್ ಗಳಿಸಿದರು. ಆರಂಭದಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿರಲಿಲ್ಲ. ಕೆ.ಎಲ್. ರಾಹುಲ್ ರನ್ ಗಳಿಸಲು ಪರದಾಡುತ್ತಿದ್ದರು. ಈ ಅವಕಾಶವನ್ನು ಸನ್‌ರೈಸರ್ಸ್ ಬೌಲರ್‌ಗಳು ಬಳಸಿಕೊಳ್ಳಲಿಲ್ಲ.

ದುಬಾರಿಯಾದ ರಶೀದ್, ಶಕೀಬ್

ದುಬಾರಿಯಾದ ರಶೀದ್, ಶಕೀಬ್

ಸನ್ ರೈಸರ್ಸ್ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಮಾತ್ರ ಪರಿಣಾಮಕಾರಿ ದಾಳಿ ನಡೆಸಿದರು. ಭರವಸೆಯ ಸ್ಪಿನ್ನರ್ ರಶೀದ್ ಖಾನ್ ಅವರ ಒಂದೇ ಓವರ್‌ನಲ್ಲಿ ಕ್ರಿಸ್ ಗೇಲ್ ಸತತ ನಾಲ್ಕು ಸಿಕ್ಸರ್ ಸಿಡಿಸಿದರು. ಎಡಗೈ ಸ್ಪಿನ್ನರ್ ಶಕೀಬ್ ಉಲ್ ಹಸನ್ ಕೂಡ ದುಬಾರಿಯಾದರು. ಸಿದ್ದಾರ್ಥ ಕೌಲ್‌ ಮತ್ತು ಕ್ರಿಸ್ ಜೋರ್ಡಾನ್ ಮೊದಲ ಕೆಲವು ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿದರೂ, ಬಳಿಕ ರನ್ ಬಿಟ್ಟುಕೊಟ್ಟರು. ಮತ್ತೊಬ್ಬ ವೇಗದ ಬೌಲರ್ ಕೊರತೆ ತಂಡವನ್ನು ಕಾಡಿತು.

ಅವಕಾಶ ಸಿಕ್ಕರೂ ಉಪಯೋಗಿಸಿಕೊಳ್ಳಲಿಲ್ಲ

ಅವಕಾಶ ಸಿಕ್ಕರೂ ಉಪಯೋಗಿಸಿಕೊಳ್ಳಲಿಲ್ಲ

ಸನ್‌ರೈಸರ್ಸ್ ನಾಯಕ ಕೇನ್ ವಿಲಿಯಮ್ಸನ್ ನೀಡಿದ ಸುಲಭದ ಕ್ಯಾಚ್‌ಅನ್ನು ಯುವರಾಜ್ ಸಿಂಗ್ ಕೈಚೆಲ್ಲಿದ್ದರು. ಯೂಸುಫ್ ಪಠಾಣ್ ಬ್ಯಾಟ್‌ನಿಂದ ಚಿಮ್ಮಿದ ಚೆಂಡನ್ನು ಹಿಡಿತಕ್ಕೆ ಪಡೆದುಕೊಳ್ಳುವಲ್ಲಿ ನಾಯಕ ಆರ್. ಅಶ್ವಿನ್ ವಿಫಲರಾದರು. ಆದರೂ, ಸನ್‌ರೈಸರ್ಸ್ ತಂಡದ ಆಟಗಾರರು ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಿಲ್ಲ. ವಿಲಿಯಮ್ಸನ್ ಅರ್ಧ ಶತಕಗಳಿಸಿದರೂ, ಎದುರಿಗಿದ್ದ ಮೊತ್ತಕ್ಕೆ ಅವರ ರನ್ ಗಳಿಕೆ ವೇಗ ಸಾಲದಾಯಿತು.

ನಿಧಾನಗತಿ ಆಟವಾಡಿದ ಬ್ಯಾಟ್ಸ್‌ಮನ್‌ಗಳು

ನಿಧಾನಗತಿ ಆಟವಾಡಿದ ಬ್ಯಾಟ್ಸ್‌ಮನ್‌ಗಳು

ಓಪನರ್ ವೃದ್ಧಿಮಾನ್ ಸಹಾ ನಿರೀಕ್ಷೆಯಂತೆ ಬ್ಯಾಟ್ ಬೀಸಲಿಲ್ಲ. ಮನೀಶ್ ಪಾಂಡೆ ಕ್ರೀಸ್‌ಗೆ ಬಂದ ಶುರುವಿನಲ್ಲಿ ರನ್ ಗಳಿಸಲು ಪರದಾಡಿದರು. ವಿಲಿಯಮ್ಸನ್ ವೇಗದ ಆಟಕ್ಕೆ ಪ್ರಯತ್ನಿಸಿದಾಗಲೂ ಮನೀಶ್‌ ಪಾಂಡೆ ದೊಡ್ಡ ಹೊಡೆತಕ್ಕೆ ಕೈಹಾಕಲಿಲ್ಲ. ಕ್ರಿಸ್ ಗೇಲ್ ಒಬ್ಬರೇ 11 ಸಿಕ್ಸರ್ ಬಾರಿಸಿದ್ದರೆ, ಸನ್‌ರೈಸರ್ಸ್ ತಂಡದ ಇನ್ನಿಂಗ್ಸ್‌ನಲ್ಲಿ ಒಟ್ಟು ದಾಖಲಾದದ್ದು 5 ಸಿಕ್ಸರ್‌ಗಳು ಮಾತ್ರ. ಅದರಲ್ಲೂ ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಶಕೀಬ್‌ ಉಲ್ ಹಸನ್ ಸಿಡಿಸುವಾಗ ಪಂದ್ಯದ ತಂಡದ ಕೈತಪ್ಪಿತ್ತು.

Story first published: Friday, April 20, 2018, 10:31 [IST]
Other articles published on Apr 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X